ಸೇತುವೆ ಕುಸಿತಕ್ಕೆ ವರ್ಷಗಳೇ ಕಳೆದರೂ ಶಾಶ್ವತ ಪರಿಹಾರವಿಲ್ಲ: ಗಂಗಾವಳಿ ನದಿಗೆ ಸ್ವಂತ ಖರ್ಚಿನಲ್ಲಿ ತಾತ್ಕಾಲಿಕ ಸೇತುವೆ ನಿರ್ಮಿಸಿಕೊಂಡ ಗ್ರಾಮಸ್ಥರು!
ಆಪ್ತ ನ್ಯೂಸ್ ಗುಳ್ಳಾಪುರ:
ಕೆಲವು ವರ್ಷಗಳ ಹಿಂದೆ ಮಳೆಗಾಲದಲ್ಲಿ ಗಂಗಾವಳಿ ನದಿಯ ಪ್ರವಾಹಕ್ಕೆ ಕೊಚ್ಚಿಹೋದ ಸೇತುವೆಯಿಂದಾಗಿ ಸಂಪರ್ಕ ಸಮಸ್ಯೆ ಎದುರಿಸುತ್ತಿರುವ ಗ್ರಾಮಸ್ಥರು, ಅನಿವಾರ್ಯವಾಗಿ ಪ್ರತಿವರ್ಷ ತಮ್ಮ ಸ್ವಂತ ಖರ್ಚಿನಲ್ಲಿ ತಾತ್ಕಾಲಿಕ ಮಣ್ಣಿನ ರಸ್ತೆ ನಿರ್ಮಿಸಿಕೊಳ್ಳುತ್ತಿದ್ದಾರೆ. ಯಲ್ಲಾಪುರ ತಾಲೂಕಿನ ಇಡಗುಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಳ್ಳಾಪುರದಿಂದ ಡೋಂಗ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಾರ ಭಾಗಕ್ಕೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಸ್ಥಳೀಯರು ಗಂಗಾವಳಿ ನದಿಗೆ ಅಡ್ಡಲಾಗಿ ಸ್ವಂತ ಖರ್ಚಿನಲ್ಲಿ ತಾತ್ಕಾಲಿಕ ಸೇತುವೆ ನಿರ್ಮಿಸಿ ಸಂಚಾರ ವ್ಯವಸ್ಥೆ ಕೈಗೊಂಡಿದ್ದಾರೆ.
ಜನರೇ ಕಟ್ಟಿಕೊಳ್ಳುತ್ತಿದ್ದಾರೆ ತಾತ್ಕಾಲಿಕ ಸೇತುವೆ!
ಕೆಲವು ವರ್ಷಗಳ ಹಿಂದೆ ಸುರಿದ ಭಾರಿ ಮಳೆ ಹಾಗೂ ಉಂಟಾದ ಪ್ರವಾಹಕ್ಕೆ ಗುಳ್ಳಾಪುರದ ಸೇತುವೆ ಕೊಚ್ಚಿಹೋಗಿತ್ತು. ಇದರಿಂದಾಗಿ ನದಿಯ ಆಚೆ-ಈಚೆಯ ಗ್ರಾಮಗಳ ನಡುವಿನ ಸಂಪರ್ಕಕ್ಕೆ ತೀವ್ರ ಅಡಚಣೆ ಉಂಟಾಗಿತ್ತು. ಅಂದಿನಿಂದ ಪ್ರತಿವರ್ಷ ಬೇಸಿಗೆ ಕಾಲದಲ್ಲಿ ಸ್ಥಳೀಯರೇ ಒಗ್ಗೂಡಿ, ತಮ್ಮ ಸ್ವಂತ ಖರ್ಚಿನಲ್ಲಿ ತಾತ್ಕಾಲಿಕ ಸೇತುವೆ ನಿರ್ಮಿಸಿಕೊಳ್ಳುತ್ತಿದ್ದಾರೆ.
ಈ ತಾತ್ಕಾಲಿಕ ವ್ಯವಸ್ಥೆಯಿಂದ ಶೇವ್ಕಾರ, ಕೈಗಡಿ, ಹೆಗ್ಗಾರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಸಂಚಾರಕ್ಕೆ ಅನುಕೂಲವಾಗುತ್ತಿದೆ. ಆದರೆ, ಪ್ರತಿವರ್ಷವೂ ಗ್ರಾಮಸ್ಥರೇ ಹಣ ಮತ್ತು ಶ್ರಮ ವ್ಯಯಿಸಿ ರಸ್ತೆ ನಿರ್ಮಿಸಿಕೊಳ್ಳಬೇಕಾದ ಪರಿಸ್ಥಿತಿ ಮುಂದುವರಿದಿದೆ.
ಶಾಶ್ವತ ಸೇತುವೆ ನಿರ್ಮಾಣ ಯಾವಾಗ?
ಗುಳ್ಳಾಪುರ ಸೇತುವೆ ಕುಸಿದು ಹಲವು ವರ್ಷಗಳು ಕಳೆದಿದ್ದರೂ, ಸಂಪರ್ಕ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಬೇಕೆಂಬುದು ಸ್ಥಳೀಯರ ಪ್ರಮುಖ ಬೇಡಿಕೆಯಾಗಿದೆ. ನೂತನ ಸೇತುವೆಗೆ ಮಂಜೂರಾತಿ ದೊರೆತಿದ್ದು, ಕಾಮಗಾರಿ ಆರಂಭಕ್ಕೆ ಎದುರು ನೋಡುತ್ತಿರುವ ಗ್ರಾಮಸ್ಥರು, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಪ್ರತಿವರ್ಷ ಬೇಸಿಗೆಯಲ್ಲಿ ತಾತ್ಕಾಲಿಕ ರಸ್ತೆ ನಿರ್ಮಿಸಿಕೊಂಡು ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಳ್ಳುವ ಗ್ರಾಮಸ್ಥರಿಗೆ ಮಳೆಗಾಲದಲ್ಲಿ ಮತ್ತೆ ಸಂಪರ್ಕದ ಸಮಸ್ಯೆ ಎದುರಾಗುತ್ತದೆ. ಹೀಗಾಗಿ ಮಣ್ಣಿನ ರಸ್ತೆಯ ತಾತ್ಕಾಲಿಕ ಪರಿಹಾರಕ್ಕಿಂತ ಶಾಶ್ವತ ಸೇತುವೆ ನಿರ್ಮಾಣವೇ ಈ ಭಾಗದ ಜನರ ಬಹುದಿನಗಳ ನಿರೀಕ್ಷೆಯಾಗಿದೆ.
ಮಳೆಗಾಲಕ್ಕೂ ಮುನ್ನ ಕಾಮಗಾರಿ ಆರಂಭಿಸಲು ಆಗ್ರಹ
ಗಂಗಾವಳಿ ನದಿಗೆ ಅಡ್ಡಲಾಗಿ ಸೂಕ್ತ ಸೇತುವೆ ನಿರ್ಮಾಣವಾದರೆ ಹಲವು ಗ್ರಾಮಗಳ ಜನರಿಗೆ ಸುಗಮ ಸಂಚಾರ ಸಾಧ್ಯವಾಗಲಿದೆ. ಸ್ಥಳೀಯರ ಸಮಯ, ಹಣ ಮತ್ತು ಶ್ರಮವೂ ಉಳಿತಾಯವಾಗಲಿದೆ. ಆದ್ದರಿಂದ ನೂತನ ಸೇತುವೆ ನಿರ್ಮಾಣದ ಕಾಮಗಾರಿಯನ್ನು ಶೀಘ್ರ ಆರಂಭಿಸಿ, ವರ್ಷಗಳಿಂದ ಮುಂದುವರಿದಿರುವ ಸಂಪರ್ಕ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.
What's Your Reaction?
Like
0
Dislike
0
Love
0
Funny
0
Angry
0
Sad
1
Wow
0