ಮೀನು ಚುಚ್ಚಿ ಗಾಯಗೊಂಡು ಮೀನುಗಾರ ಸಾವು
ತೊಳೆ ಕಾಂಡೆ ಮೀನು ಚುಚ್ಚಿ ತೀವ್ರವಾಗಿ ಗಾಯಗೊಂಡ ಮೀನುಗಾರನೊಬ್ಬ ಮೃತಪಟ್ಟ ಘಟನೆ ಕಾರವಾರದಲ್ಲಿ ನಡೆದಿದೆ.

ಆಪ್ತ ನ್ಯೂಸ್ ಕಾರವಾರ:
ತೊಳೆ ಕಾಂಡೆ ಮೀನು ಚುಚ್ಚಿ ತೀವ್ರವಾಗಿ ಗಾಯಗೊಂಡ ಮೀನುಗಾರನೊಬ್ಬ ಮೃತಪಟ್ಟ ಘಟನೆ ಕಾರವಾರದಲ್ಲಿ ನಡೆದಿದೆ.
ಕಾರವಾರ ತಾಲೂಕಿನ ಮಾಜಾಳಿ ದಂಡೇಭಾಗ ಪ್ರದೇಶದ ಬಳಿ ಮೀನುಗಾರಿಕೆಗೆ ತೆರಳಿದ್ದ ವೇಳೆ 24 ವರ್ಷದ ಮೀನುಗಾರ ಹಾರುವ ತೊಳೆ ಕಾಂಡೆ ಮೀನು ಚುಚ್ಚಿ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಅಕ್ಟೋಬರ್ 14, ಮಂಗಳವಾರ ಅಕ್ಷಯ ಮಾಜಾಳೀಕರ ಎಂಬವರು ದೋಣಿಯಲ್ಲಿ ಮೀನುಗಾರಿಕೆಗೆ ಹೋಗಿದ್ದರು. ಈ ವೇಳೆ ಸುಮಾರು 8 ರಿಂದ 10 ಇಂಚು ಉದ್ದದ, ಚೂಪು ಮೂತಿಯ ಮೀನು ಅಥವಾ ಹಾರುವ ತೊಳೆ ಕಾಂಡೆ ಮೀನು ನೀರಿನಿಂದ ಹಾರಿ ಅವರ ಹೊಟ್ಟೆಗೆ ಚುಚ್ಚಿದೆ. ಮೀನಿನ ಈ ಚೂಪು ಮೂತಿಯಿಂದ ಉಂಟಾದ ಗಂಭೀರ ಗಾಯದಿಂದಾಗಿ, ಕರುಳು ಸೇರಿದಂತೆ ಆಂತರಿಕ ಅಂಗಗಳಿಗೆ ತೀವ್ರ ಹಾನಿಯಾಗಿದೆ ಎಂದು ಹೇಳಲಾಗಿದೆ.
ತಕ್ಷಣವೇ ಅಕ್ಷಯ ಅವರನ್ನು ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರಿಗೆ ಎರಡು ದಿನಗಳ ಕಾಲ ಚಿಕಿತ್ಸೆ ನೀಡಲಾಯಿತು. ವೈದ್ಯರು ಗಾಯಗಳಿಗೆ ಹೊಲಿಗೆ ಹಾಕಿ ಡಿಸ್ಚಾರ್ಜ್ ಮಾಡಿದ್ದರು. ಆದರೆ, ನೋವು ಕಡಿಮೆಯಾಗದ ಕಾರಣ ಅವರು ಆಸ್ಪತ್ರೆಯಲ್ಲಿಯೇ ಉಳಿದಿದ್ದರು. ವೈದ್ಯರ ಪ್ರಯತ್ನದ ಹೊರತಾಗಿಯೂ, ಗುರುವಾರ (ಅಕ್ಟೋಬರ್ 16) ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
What's Your Reaction?






