‘ಬಡವರ ಮನೆ ಕೆಡವಿದರೆ ಸುಮ್ಮನಿರಲ್ಲ’ : 15 ದಿನದಲ್ಲಿ ಆದೇಶ ಹಿಂಪಡೆಯದಿದ್ದರೆ ಉಗ್ರ ಹೋರಾಟ: ಅನಂತಮೂರ್ತಿ ಹೆಗಡೆ
ಆಪ್ತ ನ್ಯೂಸ್ ಕಾನಸೂರು:
ಗೆಜೆಟ್ ಅಧಿಸೂಚನೆ ಹೊರಬಂದು ಒಂದು ವರ್ಷ ಕಳೆದರೂ ಅತಿಕ್ರಮಣ ತೆರವು ಹಾಗೂ ಮನೆಗಳ ತೆರವು ವಿಚಾರದಲ್ಲಿ ಸ್ಥಳೀಯ ಶಾಸಕರು ಹಾಗೂ ಸಚಿವರು ಮೌನ ವಹಿಸಿದ್ದಾರೆ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಆರೋಪಿಸಿದರು.
ಸಿದ್ದಾಪುರ ತಾಲೂಕಿನ ಕಾನಸೂರು ಗ್ರಾಮ ಪಂಚಾಯಿತಿ ಎದುರು ಭಾರತೀಯ ಜನತಾ ಪಕ್ಷ ಆಯೋಜಿಸಿದ್ದ ‘ನಮ್ಮ ಮನೆ ನಮ್ಮ ಹಕ್ಕು’ ಹೋರಾಟದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಡವರ ಮನೆಗಳನ್ನು ತೆರವುಗೊಳಿಸುವ ಯಾವುದೇ ಕ್ರಮವನ್ನು ಬಿಜೆಪಿ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ರಾಜ್ಯ ಸರ್ಕಾರವೇ ಮನೆ ತೆರವುಗೊಳಿಸಬಾರದು ಹಾಗೂ ತೆರಿಗೆ ಹಣ ಪಡೆಯಬಾರದು ಎಂದು ಹೇಳಿದ್ದರೆ, ಸರ್ಕಾರದ ನಿರ್ಧಾರ ತಪ್ಪಾಗಿದ್ದಲ್ಲಿ ಅದರ ಹೊಣೆಗಾರಿಕೆಯನ್ನು ಶಾಸಕರು ಹೊರಬೇಕೇ ಹೊರತು ಸಂಸದರ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದು ಅವರು ಹೇಳಿದರು.
“ಸ್ಥಳೀಯ ಶಾಸಕರು ಅಸಹಾಯಕರಂತೆ ಹೇಳಿಕೆ ನೀಡುತ್ತಿದ್ದಾರೆ. ಸರ್ಕಾರದ ತಪ್ಪು ನಿರ್ಧಾರವನ್ನು ಪ್ರಶ್ನಿಸಿ ಜನರ ಪರವಾಗಿ ನಿಲ್ಲಬೇಕಾದ ಜವಾಬ್ದಾರಿ ಶಾಸಕರ ಮೇಲಿದೆ. ಒಂದು ಬಡವನ ಮನೆಯನ್ನಾದರೂ ಕೆಡವಲು ಮುಂದಾದರೆ ಭಾರತೀಯ ಜನತಾ ಪಕ್ಷ ಸುಮ್ಮನೆ ಕುಳಿತುಕೊಳ್ಳುವುದಿಲ್ಲ” ಎಂದು ಅನಂತಮೂರ್ತಿ ಹೆಗಡೆ ಹೇಳಿದರು.
ಈಗಾಗಲೇ ಬಡವರಿಗೆ ಅನ್ಯಾಯವಾದರೆ ಪಂಚಾಯಿತಿ ಮಟ್ಟದಲ್ಲಿಯೇ ಹೋರಾಟ ನಡೆಸಬೇಕಾಗುತ್ತದೆ ಎಂದು ಸಂಸದರು ಎಚ್ಚರಿಕೆ ನೀಡಿದ್ದಾರೆ. ಬಡವರ ಮನೆಗಳಿಗೆ ಯಾವುದೇ ರೀತಿಯ ತೊಂದರೆ ಉಂಟಾದರೂ ಬಿಜೆಪಿ ಜನರ ಪರವಾಗಿ ಹೋರಾಟ ನಡೆಸಲಿದೆ ಎಂದರು.
‘15 ದಿನಗಳ ಗಡುವು’
ರಾಜ್ಯ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು 15 ದಿನಗಳೊಳಗೆ ಮನೆ ತೆರವು ಹಾಗೂ ತೆರಿಗೆಗೆ ಸಂಬಂಧಿಸಿದ ಆದೇಶಗಳನ್ನು ಹಿಂಪಡೆಯಬೇಕು. ಯಾವುದೇ ಬಡವರಿಗೂ ನೋಟಿಸ್ ನೀಡದಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
“ನಮ್ಮ ಬೇಡಿಕೆಯನ್ನು ಸರ್ಕಾರ ನಿರ್ಲಕ್ಷಿಸಿದರೆ ಹೋರಾಟದ ಸ್ವರೂಪ ತೀವ್ರಗೊಳ್ಳಲಿದೆ. ಬಿಜೆಪಿ ಕಾರ್ಯಕರ್ತರು ಹೇಡಿಗಳಲ್ಲ. ಸಂಘಟಿತ ಹೋರಾಟದಿಂದ ಮಾತ್ರ ಜನರ ಹಕ್ಕುಗಳನ್ನು ರಕ್ಷಿಸಲು ಸಾಧ್ಯ” ಎಂದು ಅನಂತಮೂರ್ತಿ ಹೆಗಡೆ ಎಚ್ಚರಿಸಿದರು.
ಕಾಂಗ್ರೆಸ್ ಸರ್ಕಾರ ಜಾತಿಯ ಹೆಸರಿನಲ್ಲಿ ಸಮಾಜವನ್ನು ವಿಭಜಿಸುತ್ತಿದೆ ಎಂದು ಆರೋಪಿಸಿದ ಅವರು, ಚುನಾವಣೆಯ ಸಂದರ್ಭದಲ್ಲಿ ಮತದಾರರು, ಚುನಾವಣೆ ಮುಗಿದ ಬಳಿಕ ಅತಿಕ್ರಮಣದಾರರು ಎಂಬ ರೀತಿಯ ಧೋರಣೆ ಅನುಸರಿಸಲಾಗುತ್ತಿದೆ ಎಂದು ಟೀಕಿಸಿದರು.
“ಎಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಜನರು ಸಂಘಟಿತರಾಗಿ ಹೋರಾಡಬೇಕು. ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಅನ್ಯಾಯವನ್ನು ಸಹಿಸಲು ಸಾಧ್ಯವಿಲ್ಲ” ಎಂದು ಅವರು ಹೇಳಿದರು.
‘ಉತ್ತರ ಕನ್ನಡವೇ ಯಾರಿಗೂ ಬೇಡವಾದ ಕೂಸು?’
ಉತ್ತರ ಕನ್ನಡ ಜಿಲ್ಲೆಗೆ ಸರ್ಕಾರದ ಯೋಜನೆಗಳು ಹಾಗೂ ನಿರ್ಧಾರಗಳ ವಿಚಾರದಲ್ಲಿ ನಿರಂತರವಾಗಿ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದ ಅವರು, “ಯಾವುದೇ ಯೋಜನೆ ಬಂದರೂ ಮೊದಲು ನೆನಪಾಗುವುದು ಉತ್ತರ ಕನ್ನಡ ಜಿಲ್ಲೆ. ಜಿಲ್ಲೆಯನ್ನು ಯಾರಿಗೂ ಬೇಡವಾದ ಕೂಸಿನಂತೆ ಕಾಣಲಾಗುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜನರ ಮನೆ, ಜಮೀನು ಹಾಗೂ ಬದುಕಿನ ಮೇಲೆ ಪರಿಣಾಮ ಬೀರುವ ಯಾವುದೇ ಕ್ರಮವನ್ನು ಬಿಜೆಪಿ ವಿರೋಧಿಸಲಿದೆ. ಸರ್ಕಾರ ತನ್ನ ಆದೇಶವನ್ನು ಹಿಂಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ಬಲರಾಮ ನಾಮಧಾರಿ, ಕೃಷ್ಣಮೂರ್ತಿ ಹೆಗಡೆ, ವಿನಾಯಕ ಹೆಗಡೆ, ಎನ್.ವಿ. ಹೆಗಡೆ, ಜಿ.ಜಿ. ದೇವಿಸರ, ನಾಗರಾಜ ಕರಮನೆ, ಗಣೇಶ ಕಾನಸೂರು, ಮನೋಜ್ ಕಾನಸೂರು, ಎನ್.ವಿ. ಹೆಗಡೆ ಮಾದನಕಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮಳೆ ಕೊರತೆ; ಒಣಗಿದ ಭತ್ತದ ಗದ್ದೆಗಳು – ‘ಸಿದ್ದಾಪುರವನ್ನು ಬರಪೀಡಿತ ತಾಲೂಕು ಎಂದು ಘೋಷಿಸಿ’
ಸಿದ್ದಾಪುರ ತಾಲೂಕಿನಲ್ಲಿ ಮಳೆಯ ಕೊರತೆಯಿಂದ ಹಲವು ಕಡೆ ಭತ್ತದ ಗದ್ದೆಗಳು ಒಣಗುತ್ತಿವೆ. ಆದರೂ ಇದುವರೆಗೆ ತಾಲೂಕನ್ನು ಬರಪೀಡಿತ ಎಂದು ಘೋಷಿಸದಿರುವುದಕ್ಕೆ ಅನಂತಮೂರ್ತಿ ಹೆಗಡೆ ಅಸಮಾಧಾನ ವ್ಯಕ್ತಪಡಿಸಿದರು.
“ಶಾಸಕರು ಯಾವ ನಿದ್ದೆಯಲ್ಲಿದ್ದಾರೆ? ಸಿದ್ದಾಪುರ ಹಾಗೂ ಶಿರಸಿ ತಾಲೂಕುಗಳನ್ನು ಇನ್ನೂ ಬರಪೀಡಿತ ತಾಲೂಕು ಎಂದು ಏಕೆ ಘೋಷಿಸಿಲ್ಲ?” ಎಂದು ಪ್ರಶ್ನಿಸಿದ ಅವರು, ರೈತರ ಸಂಕಷ್ಟಕ್ಕೆ ಸರ್ಕಾರ ತಕ್ಷಣ ಸ್ಪಂದಿಸಬೇಕು ಎಂದು ಆಗ್ರಹಿಸಿದರು.
ಬರಪೀಡಿತ ತಾಲೂಕುಗಳ ರೈತರಿಗೆ ಕೇವಲ ₹2,500 ಪರಿಹಾರ ನೀಡುವುದರಿಂದ ರೈತರ ಬದುಕು ಸಾಗುತ್ತದೆಯೇ? ಎಂದು ಪ್ರಶ್ನಿಸಿದ ಅವರು, ಕನಿಷ್ಠ ₹25 ಸಾವಿರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಮಳೆ ಕೊರತೆಯಿಂದ ಬೆಳೆ ಹಾನಿಗೊಳಗಾದ ರೈತರ ಸ್ಥಿತಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಸಿದ್ದಾಪುರ ತಾಲೂಕನ್ನು ತಕ್ಷಣ ಬರಪೀಡಿತ ತಾಲೂಕು ಎಂದು ಘೋಷಿಸಿ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.
What's Your Reaction?
Like
0
Dislike
0
Love
1
Funny
0
Angry
0
Sad
0
Wow
0