ಯಾವುದೇ ಕಾರಣಕ್ಕೂ ಜಿಲ್ಲೆಯಲ್ಲಿ ಹೊಸ ಯೋಜನೆಗೆ ಅವಕಾಶವಿಲ್ಲ; ರೈತರ ಮೇಲಿನ ದೌರ್ಜನ್ಯ ಸಾಕು: ಶಾಸಕ ಭೀಮಣ್ಣ ನಾಯ್ಕ ಆಕ್ರೋಶ
ಮುಖ್ಯಾಂಶಗಳು: ರಾಜ್ಯಕ್ಕೆ ಶಕ್ತಿ ತುಂಬಲು ಜಿಲ್ಲೆಯ ಜನರು ಈಗಾಗಲೇ ಸಾಕಷ್ಟು ತ್ಯಾಗ ಮಾಡಿದ್ದಾರೆ. ಸಾವಿರಾರು ಎಕರೆ ಜಮೀನು ನಾಶವಾಗಿದ್ದು, ಜನಸಾಮಾನ್ಯರ ಬದುಕು ಅತಂತ್ರವಾಗಿದೆ. ಶಾಸಕನಾಗಿ ಮಾತ್ರವಲ್ಲದೆ, ಓರ್ವ ರೈತನಾಗಿ ಕೃಷಿಕರ ನೋವಿಗೆ ಸ್ಪಂದಿಸುತ್ತೇನೆ. ಯೋಜನೆಗೆ ಶಾಶ್ವತವಾಗಿ ಇತಿಶ್ರೀ ಹಾಡಬೇಕು, ಜಿಲ್ಲೆಗೆ ಇಂತಹ ಯೋಜನೆಗಳು ಬೇಡ.
ಆಪ್ತ ನ್ಯೂಸ್ ಶಿರಸಿ:
"ನಮ್ಮ ಜಿಲ್ಲೆ ಈಗಾಗಲೇ ರಾಜ್ಯಕ್ಕೆ ಬೆಳಕು ನೀಡಲು ಸಾಕಷ್ಟು ತ್ಯಾಗ ಮಾಡಿದೆ. ಅಣೆಕಟ್ಟು, ಕೈಗಾ ಸೇರಿದಂತೆ ಹಲವು ಯೋಜನೆಗಳು ನಮ್ಮ ಜಿಲ್ಲೆಯನ್ನು ಹೈರಾಣಾಗಿಸಿವೆ. ಇನ್ನುಮುಂದೆ ಜಿಲ್ಲೆಗೆ ಮಾರಕವಾಗುವ ಯಾವುದೇ ಹೊಸ ಯೋಜನೆಗಳನ್ನು ಬರಲು ಬಿಡುವುದಿಲ್ಲ ಮತ್ತು ಉದ್ದೇಶಿತ ಯೋಜನೆಗೆ ಶಾಶ್ವತವಾಗಿ ಇತಿಶ್ರೀ ಹಾಡಬೇಕಿದೆ" ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕರಾದ ಭೀಮಣ್ಣ ನಾಯ್ಕ ಅವರು ಕಡಕ್ ಎಚ್ಚರಿಕೆ ನೀಡಿದ್ದಾರೆ.
ಯೋಜನೆಯನ್ನು ವಿರೋಧಿಸಿ ಮಾತನಾಡಿದ ಅವರು, ಉತ್ತರ ಕನ್ನಡ ಜಿಲ್ಲೆಯು ರಾಜ್ಯಕ್ಕೆ ಅನೇಕ ರೀತಿಯಲ್ಲಿ ಶಕ್ತಿಯನ್ನು ತುಂಬಿದೆ. ವಿದ್ಯುತ್‌ಗಾಗಿ ಅಣೆಕಟ್ಟು ನಿರ್ಮಾಣ, ಕೈಗಾ ಅಣುಸ್ಥಾವರ ಸೇರಿದಂತೆ ಹತ್ತು ಹಲವು ಯೋಜನೆಗಳು ನಮ್ಮ ಜನರನ್ನು ಮತ್ತು ಪರಿಸರವನ್ನು ಕಾಡಿವೆ ಎಂದು ಬೇಸರ ವ್ಯಕ್ತಪಡಿಸಿದರು.
ರೈತರ ಬದುಕು ಬೀದಿಗೆ:
"ಜಿಲ್ಲೆಯ ಅಭಿವೃದ್ಧಿ ಹೆಸರಿನಲ್ಲಿ ಬರುವ ಯೋಜನೆಗಳಿಗಾಗಿ ರೈತರು ಸಾವಿರಾರು ಎಕರೆ ಜಮೀನನ್ನು ಕಳೆದುಕೊಂಡಿದ್ದಾರೆ. ರೈತರು ಈಗಾಗಲೇ ಹಲವು ರೀತಿಯ ತ್ಯಾಗಗಳನ್ನು ಮಾಡಿದ್ದಾರೆ. ಯೋಜನೆಗಳಿಗಾಗಿ ರೈತರ ಫಲವತ್ತಾದ ಭೂಮಿ ನಾಶವಾದರೆ, ಕೃಷಿಯನ್ನೇ ನಂಬಿ ಬದುಕು ಕಟ್ಟಿಕೊಂಡಿರುವ ಜನಸಾಮಾನ್ಯರ ಗತಿಯೇನು? ಕೇವಲ ಹೊಟ್ಟೆಪಾಡಿಗಾಗಿ ದುಡಿಯುತ್ತಿರುವ ಬಡವರ ಪಾಡೇನು?" ಎಂದು ಶಾಸಕರು ಪ್ರಶ್ನಿಸಿದರು.
ನಾನೂ ಕೂಡ ಕೃಷಿಕ:
ರೈತರ ಪರವಾಗಿ ಧ್ವನಿ ಎತ್ತಿದ ಭೀಮಣ್ಣ ನಾಯ್ಕ, "ನಿಮ್ಮಂತೆಯೇ ನಾನೂ ಒಬ್ಬ ಕೃಷಿಕ. ರೈತರು ಜಮೀನು ಕಳೆದುಕೊಂಡಾಗ ಅನುಭವಿಸುವ ನೋವು, ಕಷ್ಟಗಳು ನನಗೂ ಅರ್ಥವಾಗುತ್ತವೆ. ರೈತರ ಬದುಕಿನ ಜೊತೆ ಆಟವಾಡುವ ಈ ಯೋಜನೆ ಯಾವುದೇ ಕಾರಣಕ್ಕೂ ಜಾರಿಯಾಗಬಾರದು. ಈ ಯೋಜನೆ ಇಲ್ಲಿಗೆ ಬರಬಾರದು ಎಂಬುದೇ ನನ್ನ ಸ್ಪಷ್ಟ ನಿಲುವು" ಎಂದು ತಿಳಿಸಿದರು.
ಈ ಯೋಜನೆಗೆ ಶಾಶ್ವತವಾಗಿ ಪೂರ್ಣವಿರಾಮ ಇಡಬೇಕಾದ ಅಗತ್ಯವಿದ್ದು, ರೈತರ ಹಿತರಕ್ಷಣೆಗಾಗಿ ತಾವು ಸದಾ ಬದ್ಧ ಎಂದು ಶಾಸಕರು ಭರವಸೆ ನೀಡಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



