ಹದಗೆಟ್ಟ ಕಾಲೇಜು ಮುಖ್ಯ ರಸ್ತೆ: ಸಾರ್ವಜನಿಕರ ಆಕ್ರೋಶ
ಆಪ್ತ ನ್ಯೂಸ್ ಶಿರಸಿ:
ಶಿರಸಿಯ ಕಾಲೇಜ್ ಮುಖ್ಯ ರಸ್ತೆ, ರಾಜ್ಯ ಹೆದ್ದಾರಿ 93 ಮತ್ತು ರಾಜ್ಯ ಹೆದ್ದಾರಿ 69 ಅನ್ನು ಸಂಪರ್ಕಿಸುವ ಪ್ರಮುಖ ಮಾರ್ಗ. ಈ ರಸ್ತೆ ಕಳೆದ ವರ್ಷವೇ ಹದಗೆಟ್ಟಿದ್ದರೂ, ಸರಿಪಡಿಸದೆ ಬಿಟ್ಟ ಪರಿಣಾಮ ಈಗ ಸಂಪೂರ್ಣವಾಗಿ ಹಾಳಾಗಿದೆ. ಧೂಳು, ಹೊಂಡ, ಗುಂಡಿಗಳಿಂದ ಆವೃತ್ತವಾಗಿದೆ. ಈ ರಸ್ತೆಯಲ್ಲಿ ವಾಹನಗಳು ಓಡಿಸಲು ಮಾತ್ರವಲ್ಲ, ನಡೆದು ಹೋಗುವುದೂ ಕಷ್ಟಕರ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಾರ್ವಜನಿಕರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ರಸ್ತೆಯು ಅನೇಕ ಶಾಲಾ ಹಾಗೂ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ದೈನಂದಿನ ಸಂಚಾರಕ್ಕೆ ಬಳಸಿಕೊಂಡು ಬರುತ್ತಿದ್ದಾರೆ. ಇದೇ ರಸ್ತೆಯಲ್ಲಿ ಶಿರಸಿಯ ಪ್ರಸಿದ್ಧ TSS ಆಸ್ಪತ್ರೆಯೂ ಇರುವುದರಿಂದ ರೋಗಿಗಳು ಹಾಗೂ ಆಂಬುಲೆನ್ಸ್‌ಗಳು ಪ್ರವೇಶಿಸಲು ತೊಂದರೆ ಅನುಭವಿಸುತ್ತಿದ್ದಾರೆ. ಈ ಸ್ಥಿತಿಯಿಂದ ಬೇಸತ್ತ ಸ್ಥಳೀಯರು ಇಂದು ರಸ್ತೆ ಗೆ ಇಳಿದು ನೇರವಾಗಿ ತಮ್ಮ ಆಕ್ರೋಶ ಹೊರಹಾಕಿದರು.
ಜನರ ಪ್ರತಿಭಟನೆ ವೇಳೆ ಸ್ಥಳದಲ್ಲಿ “ರಸ್ತೆ ಸರಿಪಡಿಸಿ” ಎಂಬ ಘೋಷಣೆಗಳು ಮೊಳಗಿದವು. ನಾಗರಿಕರು ಹಲವು ತಿಂಗಳ ಹಿಂದೆಯೇ ರಸ್ತೆ ಟೇಂಡರ್ ಪ್ರಕ್ರಿಯೆ ಪೂರ್ಣಗೊಂಡಿತ್ತು ಎಂದು ಸ್ಮರಿಸಿದರು, ಆದರೆ ಇಂದಿಗೂ ಕಾರ್ಯಾರಂಭವಾಗಿಲ್ಲವೆಂದು ಪ್ರಶ್ನಿಸಿದರು.
ಆಕ್ರೋಶದ ಮಾಹಿತಿ ದೊರಕುತ್ತಿದ್ದಂತೆಯೇ ಲೋಕೋಪಯೋಗಿ ಇಲಾಖೆಯ (PWD) ಶಿರಸಿ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (AEE) ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದರು. ಅವರು “ಇದೆ ತಿಂಗಳ 17ರೊಳಗೆ ರಸ್ತೆ ದುರಸ್ತಿ ಕಾರ್ಯ ಪ್ರಾರಂಭಿಸಲಾಗುವುದು” ಎಂದು ಸ್ಥಳೀಯ ನಾಗರಿಕರಿಗೆ ಭರವಸೆ ನೀಡಿದರು.
ಅಧಿಕಾರಿಗಳ ಈ ಭರವಸೆಯ ನಂತರ ಸ್ಥಳೀಯರು ಮುಂದಿನ ವಾರದವರೆಗೆ ಶಾಂತಿಯುತವಾಗಿರಲು ನಿರ್ಧರಿಸಿದ್ದಾರೆ. ಆದರೆ ಭರವಸೆಯಂತೆ ಕೆಲಸ ಪ್ರಾರಂಭವಾಗದಿದ್ದರೆ, ಮುಂದಿನ ದಿನಗಳಲ್ಲಿ ತೀವ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಸ್ಥಳೀಯ ನಾಗರಿಕರಾದ ವಿದ್ಯಾರ್ಥಿಗಳು, ವ್ಯಾಪಾರಿಗಳು, ವಾಹನ ಚಾಲಕರು ಹಾಗೂ ಹಿರಿಯ ನಾಗರಿಕರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಎಲ್ಲರ ಒಗ್ಗಟ್ಟು ಮತ್ತು ಧ್ವನಿಯಿಂದ ಈ ಕುರಿತು ಆಡಳಿತ ಸ್ಪಂದಿಸಬೇಕೆಂದು ಸಾರ್ವಜನಿಕರು ಆಶಾಭಾವನೆ ವ್ಯಕ್ತಪಡಿಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



