ಆಪ್ತ ನ್ಯೂಸ್ ಶಿರಸಿ:
ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮೀತಿ ಆಶ್ರಯದಲ್ಲಿ ಶಿರಸಿ ತಾ| ಗಣೇಶ ಪಾಲ್‌ನಲ್ಲಿ ನದೀ ಪೂಜೆ-ಗಂಗಾರತಿ ಕಾರ್ಯಕ್ರಮ ನಡೆಯಿತು. ಶಿರಸಿ ಮತ್ತು ಯಲ್ಲಾಪುರ ತಾಲೂಕುಗಳ ಸಾವಿರಾರು ವನವಾಸಿಗಳು ರೈತರು ಪಾಲ್ಗೊಳ್ಳುವ ಗಣೇಶಪಾಲ್ ವಾರ್ಷಿಕಉತ್ಸವ ಸಂದರ್ಭದಲ್ಲಿ ನದೀ ಪೂಜೆ ಕಾರ್ಯಕ್ರಮ ನಡೆಯಿತು.
ಗಂಗಾವಳಿ ಎಂದೇ ಕರೆಯುವ ಬೇಡ್ತಿ ನದೀಕಣಿವೆಯಲ್ಲಿ ನಡೆದ ಗಂಗಾರತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬೇಡ್ತಿ ಸಮೀತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರು “ನಮ್ಮ ಜಾಗೃತಿ ಅಭಿಯಾನಕ್ಕೆ ಶಕ್ತಿ ತುಂಬುವ ಕಾರ್ಯ ಇದು. ಗಣೇಶ್‌ಪಾಲ್ ಗಣಪನ ರಕ್ಷಣೆಗೆ ೧೩ ವರ್ಷ ಹಿಂದೇ ಅಹಿಂಸಾತ್ಮಕ ಯುದ್ಧ ನಡೆಸಿ ಜಯಗೊಳಿಸಿದ್ದೇವೆ. ವನವಾಸಿಗಳು ರಾತ್ರಿ ಸಂದರ್ಭದಲ್ಲೂ ಗಣೇಶ್‌ಪಾಲ್‌ಗೆ ಬಂದು ನದೀ ಗಣೇಶನ ಪೂಜೆ ಸಲ್ಲಿಸುವ ಪರಂಪರೆ ಅದ್ಭುತ ಸಂಗತಿ” ಎಂದರು.
“ಶಾಲ್ಮಲಾ ನದೀ ಸಂರಕ್ಷಿತ ಪ್ರದೇಶದಲ್ಲಿ ನದೀ ತಿರುವು ಯೋಜನೆ ಜಾರಿಗೆ ವನ್ಯ ಜೀವಿ ಕಾಯಿದೆ ಅಡ್ಡ ಬರಲಿದೆ” ಎಂದು ಪಶ್ಚಿಮ ಘಟ್ಟ ಕಾರ್ಯಪಡೆ ಅಧ್ಯಕ್ಷರಾಗಿದ್ದ ಅನಂತ ಅಶೀಸರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿದರು.
ಸ್ವರ್ಣವಲ್ಲೀ ಸ್ವಾಮೀಜಿ ಗಂಗಾರತಿಗೆ ಕರೆನೀಡಿದ ಒಂದೇ ದಿನದಲ್ಲಿ ನದೀಪೂಜೆ ಕಾರ್ಯಕ್ರಮ ಸಂಘಟಿಸಿದ ಮೆಣಸಿ ಮತ್ತು ಭರತನಳ್ಳಿ ಸೀಮಾ ಪ್ರಮುಖರನ್ನು ಶ್ಲಾಘಿಸಿದರು.
ಬೇಡ್ತಿ ಸಮೀತಿ ಸಂಚಾಲಕ ರಮಾಕಾಂತ ಮಂಡೇಮನೆ ಸ್ವಾಗತಿಸಿದರು. ಸುಮಂಗಲಾ ಸಂಗಡಿಗರು ಪರಿಸರ ಗೀತೆ ಹಾಡಿದರು. ಮೆಣಸಿ ಸೀಮಾಧ್ಯಕ್ಷ ರಾಜಾರಾಮ ಭಟ್ ಹಾಗೂ ಭರತನಳ್ಳಿ ಸೀಮೆಯ ನಾರಾಯಣ ಭಟ್ ಪೂಜೆ ನೆರವೇರಿಸಿದರು. ಸಾಮಾಜಿಕ ಕಾರ್ಯಕರ್ತ ಗಣಪತಿ ಹಿರೇಸರ ಘೋಷಣೆ ಮೊಳಗಿಸಿದರು. ಸಂಸ್ಕೃತ ಭಾರತಿಯ ರಾಷ್ಟ್ರೀಯ ಕಾರ್ಯದರ್ಶಿ ಸತ್ಯನಾರಾಯಣ್, ಮಾತೃ ಮಂಡಳಿಯವರು ಸೇರಿದಂತೆ ಸಾವಿರಾರು ಜನರು ಗಂಗಾರತಿಯಲ್ಲಿ ಪಾಲ್ಗೊಂಡರು. ಸುಬ್ಬಣ್ಣ ಇಳೇಹಳ್ಳಿ ಧನ್ಯವಾದ ನೀಡಿದರು.