ಮುಂಡಗೋಡಿನ ಮೃತ ರೈತ ಕುಟುಂಬಕ್ಕೆ ಬಿಜೆಪಿ ಧನಸಹಾಯ; ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ

Mar 12, 2026 - 21:03
 0  25
ಮುಂಡಗೋಡಿನ ಮೃತ ರೈತ ಕುಟುಂಬಕ್ಕೆ ಬಿಜೆಪಿ ಧನಸಹಾಯ; ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ

ಆಪ್ತ ನ್ಯೂಸ್ ಮುಂಡಗೋಡು:

ಬೆಳೆ ಹಾನಿಯಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದ ಮುಂಡಗೋಡಿನ ನರಸಿಂಗ ಕಿವುಡನವರ್ ಮನೆಗೆ ಬಿಜೆಪಿ ರೈತಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ಬಿಜೆಪಿ ಪ್ರಮುಖರು ಗುರುವಾರ ಭೇಟಿ ನೀಟಿ ಮೃತನ ಕುಟುಂಬಕ್ಕೆ ಸಾಂತ್ವನ ಹೇಳಿ, ಧನ ಸಹಾಯವನ್ನು ಮಾಡಿದರು.

ಈ ವೇಳೆ ರೈತಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಸಾಂತ್ವನದ ನುಡಿಗಳನ್ನಾಡಿ, ನಮ್ಮ ಜಿಲ್ಲೆಯ ಪರಿಶ್ರಮಿ ರೈತ ಆತ್ಮಹತ್ಯೆ ಮಾಡಿಕೊಂಡಿರುವುದು ಅತ್ಯಂತ ದುಃಖಕರ ಮತ್ತು ಕಳವಳಕಾರಿ ಘಟನೆಯಾಗಿದ್ದು, ಭಾರತೀಯ ಜನತಾ ಪಕ್ಷದ ಪರವಾಗಿ ಮೃತ ರೈತನ ಕುಟುಂಬಕ್ಕೆ ಸಾಂತ್ವನ ತಿಳಿಸುತ್ತೇವೆ. ಒಂದು ರೈತ ತನ್ನ ಜೀವನವನ್ನೇ ಕೊನೆಗೊಳಿಸುವ ಸ್ಥಿತಿಗೆ ತಲುಪಿರುವುದು ರಾಜ್ಯದ ಕೃಷಿ ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತದೆ. ಇಂದು ಕರ್ನಾಟಕದಲ್ಲಿ ರೈತರು ಬದುಕಿಗಾಗಿ ಹೋರಾಡುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೃಷಿ ವೆಚ್ಚಗಳು ಭಾರೀ ಪ್ರಮಾಣದಲ್ಲಿ ಏರಿಕೆ ಆಗಿವೆ, ಬೆಳೆಗಳಿಗೆ ನ್ಯಾಯಸಮ್ಮತ ಬೆಲೆ ಸಿಗುತ್ತಿಲ್ಲ, ಸಾಲದ ಒತ್ತಡ ಹೆಚ್ಚುತ್ತಿದೆ, ಮತ್ತು ಬೆಳೆ ವಿಮೆ ಹಾಗೂ ಪರಿಹಾರ ವ್ಯವಸ್ಥೆಗಳು ರೈತರಿಗೆ ಸರಿಯಾಗಿ ತಲುಪುತ್ತಿಲ್ಲ. ಹೀಗೆ ಪ್ರತಿದಿನ ಬೆಳೆ ಬೆಳಯುವ ರೈತ ಆತ್ಮಹತ್ಯೆಗೆ ಈಡಾದರೆ, ನಾವೆಲ್ಲ ಮುಂದೆ ಮಣ್ಣು ತಿನ್ನಬೇಕಾದ ದಿನ ಬಂದರೂ ಅಚ್ಚರಿಯಿಲ್ಲ. ಈ ಎಲ್ಲ ಸಮಸ್ಯೆಗಳ ನಡುವೆ ರಾಜ್ಯ ಸರ್ಕಾರ ರೈತರ ಸಂಕಷ್ಟಗಳ ಕಡೆ ಗಮನ ಹರಿಸುವ ಬದಲು ರಾಜಕೀಯ ಭರವಸೆಗಳಲ್ಲೇ ಕಾಲ ಕಳೆಯುತ್ತಿರುವುದು ದುರದೃಷ್ಟಕರ ಸಂಗತಿ.

ಒಬ್ಬ ರೈತ ಆತ್ಮಹತ್ಯೆ ಮಾಡಿಕೊಳ್ಳುವುದು ಕೇವಲ ಒಂದು ಕುಟುಂಬದ ದುಃಖವಲ್ಲ ಅದು ಸರ್ಕಾರದ ಕೃಷಿ ನೀತಿಗಳ ವೈಫಲ್ಯದ ಗಂಭೀರ ಎಚ್ಚರಿಕೆಯ ಸಂಕೇತವಾಗಿದೆ. ರೈತರ ಸಂಕಷ್ಟವನ್ನು ನಿರ್ಲಕ್ಷ್ಯ ಮಾಡುವ ಆಡಳಿತವನ್ನು ಜನತೆ ಪ್ರಶ್ನಿಸುವ ದಿನ ದೂರವಿಲ್ಲ. ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡು ನಾಲ್ಕು ದಿನ ಕಳೆದರೂ ತಹಶಿಲ್ದಾರ ಸೇರಿದಂತೆ ಯಾವುದೇ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡದಿರುವುದು ಸಮಸ್ತ ರೈತ ಸಮೂಹಕ್ಕೆ ಎಸಗಿರುವ ದ್ರೋಹವಾಗಿದೆ. ಈ ಕೂಡಲೇ ತಹಶಿಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಸರಕಾರಕ್ಕೆ ವರದಿ ಸಲ್ಲಿಸಿ, ಮೃತರ ಕುಟುಂಬಕ್ಕೆ ಪರಿಹಾರ ದೊರಕುವಂತೆ ಮಾಡಬೇಕೆಂದು ಅವರು ಆಗ್ರಹಿಸಿದರು. ಇದರ ಜೊತೆಗೆ ಮೃತ ರೈತನ ಕುಟುಂಬಕ್ಕೆ ತಕ್ಷಣ ₹25 ಲಕ್ಷ ಪರಿಹಾರ ನೀಡಬೇಕು. ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಬೇಕು. ಮೃತ ರೈತನ ಎಲ್ಲಾ ಸಾಲಗಳನ್ನು ಸಂಪೂರ್ಣ ಮನ್ನಾ ಮಾಡಬೇಕು. ರೈತರ ಆತ್ಮಹತ್ಯೆ ಪ್ರಕರಣಗಳ ಕುರಿತು ಸ್ವತಂತ್ರ ಮತ್ತು ಪಾರದರ್ಶಕ ತನಿಖೆ ನಡೆಸಬೇಕು. ರೈತರಿಗೆ ತಕ್ಷಣ ಆರ್ಥಿಕ ನೆರವು ಮತ್ತು ಬೆಳೆಗಳಿಗೆ ನ್ಯಾಯಸಮ್ಮತ ಬೆಲೆ ಒದಗಿಸಬೇಕು. ರೈತರ ಸಮಸ್ಯೆಗಳನ್ನು ತಕ್ಷಣ ಪರಿಹರಿಸಲು ಸರ್ಕಾರ ವಿಫಲವಾದರೆ ಭಾರತೀಯ ಜನತಾ ಪಕ್ಷ ರೈತರ ಪರವಾಗಿ ರಾಜ್ಯದಾದ್ಯಂತ ಪ್ರಜಾಪ್ರಭುತ್ವದ ಮಾರ್ಗದಲ್ಲಿ ತೀವ್ರ ಹೋರಾಟ ಆರಂಭಿಸಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಈ ವೇಳೆ ಬಿಜೆಪಿ ಪ್ರಮುಖರಾದ ಎಲ್.ಟಿ.ಪಾಟೀಲ್, ಅಶೋಕ ಚೆಲುವಾದಿ, ಮಂಜುನಾಥ ಪಾಟೀಲ್, ಮಹೇಶ ಹೊಸಕೊಪ್ಪ, ರಮೇಶ ನಾಯ್ಕ ಸೇರಿದಂತೆ ಇನ್ನಿತರರು ಇದ್ದರು.

*****: 
ರೈತನ ಆತ್ಮಹತ್ಯೆ ನಡೆದು ನಾಲ್ಕು ದಿನ ಕಳೆದರೂ ಯಾವುದೇ ಅಧಿಕಾರಿ ಭೇಟಿ ನೀಡದೇ ಇರುವುದನ್ನು ನೋಡಿದರೆ, ಮುಂಡಗೋಡು ತಾಲೂಕಿನಲ್ಲಿ ಆಡಳಿತ ಯಂತ್ರ ಬದುಕಿದೆಯೋ ಇಲ್ಲಾ ಸತ್ತಿದೆಯೋ ಎಂದು ತಿಳಿಯುತ್ತಿಲ್ಲ. ಮೃತ ರೈತನ ಕುಟುಂಬಕ್ಕೆ ತಕ್ಷಣವೇ ಸರಕಾರದಿಂದ ಪರಿಹಾರ ನೀಡಬೇಕು. - ಅನಂತಮೂರ್ತಿ ಹೆಗಡೆ
ಜಿಲ್ಲಾಧ್ಯಕ್ಷ, ರೈತಮೋರ್ಚಾ, ಬಿಜೆಪಿ ಉತ್ತರ ಕನ್ನಡ

ಹಿಂದೆ ನಾವು ಪ್ರತಿಭಟನೆ ಮಾಡಿ ಬೆಂಬಲ ಬೆಲೆ ಮತ್ತು ರೈತರ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿದ್ದೆವು, ಸರ್ಕಾರ ರೈತರ ಸಮಸ್ಯೆ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ, ಈ ಸಾವಿಗೆ ಯಾರೂ ಜವಾಬ್ದಾರಿ ?
 ಮಂಜುನಾಥ ಪಾಟೀಲ್
ಅಧ್ಯಕ್ಷರು, ಬಿಜೆಪಿ ಮುಂಡಗೋಡ

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0