ಮಕ್ಕಳಿಗೆ ಸಂಸ್ಕೃತಿ-ಪರಂಪರೆಯನ್ನು ಹಸ್ತಾಂತರಿಸಬೇಕು: ಸ್ವರ್ಣವಲ್ಲಿ ಶ್ರೀ

Oct 31, 2025 - 21:49
 0  74
ಮಕ್ಕಳಿಗೆ ಸಂಸ್ಕೃತಿ-ಪರಂಪರೆಯನ್ನು ಹಸ್ತಾಂತರಿಸಬೇಕು: ಸ್ವರ್ಣವಲ್ಲಿ ಶ್ರೀ

ಆಪ್ತ ನ್ಯೂಸ್ ಯಲ್ಲಾಪುರ:

ಸಂಸ್ಕೃತಿ ಮತ್ತು ನಮ್ಮ ಶ್ರೇಷ್ಠ ಪರಂಪರೆಯನ್ನು ಮಕ್ಕಳಿಗೆ ಹಸ್ತಾಂತರಿಸುವುದಕ್ಕೆ ಹಿರಿಯರೇ ಪ್ರಯತ್ನಿಸಬೇಕು ಎಂದು ಸೋಂದಾ ಸ್ವರ್ಣವಲ್ಲಿ ಮಠಾಧೀಶ ಶ್ರೀಮದ್ ಗಂಗಾಧರೆಂದ್ರ ಸರಸ್ವತೀ ಮಹಾಸ್ವಾಮಿಗಳವರು ನುಡಿದರು.

ಅವರು ಶುಕ್ರವಾರ ಗಾಂಧಿ ಕುಠೀರದಲ್ಲಿ ೩೯ ನೇ ವರ್ಷದ ಸಂಕಲ್ಪೋತ್ಸವಕ್ಕೆ ಚಾಲನೆ  ನೀಡಿ ಆಶೀರ್ವಚನ ನೀಡಿದರು.

ಕುಟುಂಬದ ಪರಂಪರೆಯನ್ನು ಮಕ್ಕಳಗೆ ಮೊಮ್ಮಕ್ಕಳಿಗೆ ಹಸ್ತಾಂತರಿಸದೇ ಇರುವುದೇ ಇಂದಿನ ಹಲವು ಅಧ್ವಾನಗಳಿಗೆ ಕಾರಣವಾಗುತ್ತಿದೆ ಎಂದ ಶ್ರೀಗಳು ಹಳ್ಳಿಯ ಜಮೀನುಗಳು ಯಾರದೋ ಪಾಲಾಗುತ್ತಿದೆ. ಹಳ್ಳಿ ಪಾಳು ಬೀಳುವುದಕ್ಕೆ ಕಾರಣೀಕರ್ತರಾಗುತ್ತಿದ್ದೇವೆ. ಕೃಷಿ ಜಮೀನು ನಮ್ಮವರಿಂದಲೇ ಉಪೇಕ್ಷೆಗೆ ಒಳಪಡುತ್ತಿದೆ.ಈಗ ಎಚ್ಚತ್ತುಕೊಳ್ಳದಿದ್ದರೆ ಮುಂದೆ ಕಷ್ಟ ಎದುರಿಸಬೇಕಾಗುತ್ತದೆ. ಯಕ್ಷಗಾನ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಸಂಕಲ್ಪೋತ್ಸವ ಪ್ರಾರಂಭದಿಂದಲೂ ಹೆಜ್ಜೆಯಿಟ್ಟಿದೆ ಎಂದರು.

ಎಡನೀರು ಮಠದ ಶ್ರೀ ಸಚ್ಚೀದಾನಂದ ಭಾರತೀ ಸ್ವಾಮಿಗಳವರು ಆಶೀರ್ವಚನ ನೀಡಿ ಇಂದಿನ ಯುವ ಜನಾಂಗದಲ್ಲಿ ಧರ್ಮದ ಅರಿವು ಕಡಿಮೆಯಾಗುತ್ತಿದೆ. ಇಂತಹ ಉತ್ಸವ, ಧಾರ್ಮಿಕ ಉತ್ಸವಗಳಲ್ಲಿ ಯುವಜನರ ಪಾಲ್ಗೊಳ್ಳುವಿಕೆ ಕಾಣುತ್ತಿಲ್ಲ. ಇಂದಿನ ಕಾಲಘಟ್ಟದಲ್ಲಿ ಯುವಜನಾಂಗ ವಿಮುಖರಾಗುತ್ತಿದ್ದಾರೆ. ಪಠ್ಯಪುಸ್ತಕದಲ್ಲಿ ಭಗವದ್ಗೀತೆ ಅಳವಡಿಸುವುದಕ್ಕೂ ನಮ್ಮವರದ್ದೇ ವಿರೋಧವಿರುತ್ತದೆ. ನಮ್ಮ ಶಿಕ್ಷಣವನ್ನು ಕೊಡುವಲ್ಲಿ ನಿಷ್ಫಲರಾಗುತ್ತಿದ್ದೇವೆ. ಇಂತಹ ಉತ್ಸವಗಳು ಉತ್ತಮ ಸಂದೇಶ ನೀಡಲಿ ಎಂದರು.

ಉದ್ಯಮಿ ರಿಪೋಸ್ ಮ್ಯಾಟ್ರಿಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರಾಮನಾಥ ಭಟ್ಟ ಅಡ್ಕೆಪಾಲ್ ಅವರಿಗೆ ಶ್ರೀಗಳವರು ಸಂಕಲ್ಪ ಪ್ರಶಸ್ತಿ ಪ್ರಧಾನ ಮಾಡಿದರು.

ವೇದಿಕೆಯಲ್ಲಿ ಪುಸ್ತಕಕರ್ತ  ವನರಾಗ ಶರ್ಮಾ, ಸಹಕಾರಿ ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ, ನಿವೃತ್ತ ಪ್ರಾಂಶುಪಾಲ ಬೀರಣ್ಣ ನಾಯಕ ಮೊಗಟಾ, ಧುರಿಣ ವೆಂಕಟೇಶ ಹೊಸಬಾಳೆ, ವಿಕಾಸ್ ಬ್ಯಾಂಕ್ ಅಧ್ಯಕ್ಷ ಮುರುಳಿ ಹೆಗಡೆ, ಪತ್ರಕರ್ತ  ಶಂಕರ ಭಟ್ಟ ತಾರೀಮಕ್ಕಿ, ನಗರಭಾಗೀ ಅಧ್ಯಕ್ಷ ಸುಬ್ರಹ್ಮಣ್ಯ ಹೆಗಡೆ, ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಚಿಟ್ಟಾಣಿ ಉಪಸ್ಥಿತರಿದ್ದರು.

ಪದ್ಮಾ ಪ್ರಮೋದ ಹೆಗಡೆ ಪ್ರಾರ್ಥಿಸಿದರು. ಸಿ.ಜಿ.ಹೆಗಡೆ ಸ್ವಾಗತಿಸಿದರು. ಸಂಕಲ್ಪ ಸಂಸ್ಥೆ ಸಂಚಾಲಕ ಪ್ರಸಾದ ಹೆಗಡೆ ಪ್ರಾಸ್ತಾವಿಕಗೈದರು. ಚಂದ್ರಕಲಾ ಭಟ್ಟ ಇಡಗುಂದಿ ಕಾರ್ಯಕ್ರಮ ನಿರ್ವಹಿಸಿದರು. ರಾಮಚಂದ್ರ ಚಿಕ್ಯಾನಮನೆ ವಂದಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0