ಆಪ್ತ ನ್ಯೂಸ್ ಯಲ್ಲಾಪುರ:
ಬೇಡ್ತಿ-ವರದಾ ಹಾಗೂ ಅಘನಾಶಿನಿ-ವೇದಾವತಿ ನದಿ ತಿರುವು ಮತ್ತು ಜೋಡಣೆ ವಿರೋಧಿಸಿ ಜನವರಿ 11 ರಂದು ಶಿರಸಿಯಲ್ಲಿ ನಡೆಯಲಿರುವ ಬ್ರಹತ್ ಜನ ಸಮಾವೇಶದ ಪೂರ್ವಭಾವಿ ಸಭೆ ಯಲ್ಲಾಪುರ ಪಟ್ಟಣದ ಟಿಎಂಎಸ್ ಸಭಾಭವನದಲ್ಲಿ ನಡೆಯಿತು.
ಸ್ವರ್ಣವಲ್ಲಿ ಮಠದ ಆಡಳಿತ ಮಂಡಳಿಯ ಸದಸ್ಯ ಎನ್.ಜಿ.ಹೆಗಡೆ ಭಟ್ರಕೇರಿ ಮಾತನಾಡಿ, ಪಶ್ಚಿಮ ಘಟ್ಟ, ಉತ್ತರ ಕನ್ನಡದ ನದಿ ಕಣಿವೆಗಳನ್ನು ಸಂರಕ್ಷಿಸಲು ಹಕ್ಕೊತ್ತಾಯ ಮಾಡುವ, ನದಿ ಜೋಡಣೆಯನ್ನು ಕೈಬಿಡುವಂತೆ ಹಾಗೂ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಸ್ಥಗಿತಗೊಳಿಸಲು ಆಗ್ರಹಿಸುವ ಸಲುವಾಗಿ ಸ್ವರ್ಣವಲ್ಲೀ ಶ್ರೀಗಳ ನೇತೃತ್ವದಲ್ಲಿ ಈ ಸಮಾವೇಶ ನಡೆಯಲಿದೆ. ಹೆಚ್ಚಿನ ಸಂಖ್ಯೆಯ ಜನ ಸೇರಿ ನಮ್ಮ ಬಲ ಪ್ರದರ್ಶಿಸಬೇಕು.ಜಾತಿ ಮತ ಬೇಧ ಮರೆತು ಜನಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಬೇಡ್ತಿ ಕೊಳ್ಳ ಸಂರಕ್ಷಣಾ ಸಮಿತಿಯ ಪ್ರಮುಖರಾದ ನಾರಾಯಣ ಹೆಗಡೆ ಗಡಿಕೈ ಮಾತನಾಡಿ, ಯೋಜನೆಯ ಆರಂಭಿಕ ಹಂತದಲ್ಲೇ ಇದನ್ನು ವಿರೋಧಿಸಿ, ಸ್ಥಗಿತಗೊಳ್ಳುವಂತೆ ಮಾಡದೇ ಹೋದರೆ ಮುಂದೊಂದು ದಿನ ಅಪಾಯ ಕಟ್ಟಿಟ್ಟ ಬುತ್ತಿ ಎಂದರು.
ಕೊಳ್ಳ ಸಮಿತಿಯ ಸಂಚಾಲಕ ನರಸಿಂಹ ಸಾತೊಡ್ಡಿ ಮಾತನಾಡಿ,ಕೊಡಸಳ್ಳಿಯ ಯೋಜನೆಯಿಂದ ನಿರಾಶ್ರೀತರಾದವರು ಪ್ರಾರಂಭದಲ್ಲಿ ಎಂತಹ ಗೋಳನ್ನು ಅನುಭವಿಸಿದ್ದಾರೆನ್ನುವ ಅನುಭವ ನಮಗಿದೆ. ತಯೊಜನೆ ಜಾರಿಗೊಳಿಸುವಾಗ ನಮ್ಮ ಮನಸ್ಸನ್ನು ಚಂಚಲಗೊಳಿಸಿ ಯೋಜನೆ ಹೇರುತ್ತಾರೆ.ನಂತರ ನಾವು ಬೀದಿಪಾಲಾಗಬೇಕಾಗುತ್ತದೆ.ಆಗ ನಮ್ಮ ನೆರವಿಗೆ ಯಾರೂ ಬರುವುದಿಲ್ಲ.ಇದನ್ನು ನಾವು ತಿಳಿದುಕೊಳ್ಳಬೇಕು.ಪ್ರಾರಂಭದಲ್ಲಿಯೇ ಇಂತಹ ಯೋಜನೆ ಚಿವುಟಿ ಹಾಕದಿದ್ದರೆ ಭವಿಷ್ಯ ಕಳವಳಕಾರಿಯಾಗುತ್ತದೆ.ಶ್ರೀಗಳಿಗೆ ನಮ್ಮ ಮೇಲಿರುವ ಕಾಳಜಿ ಅನನ್ಯವಾದುದು ಎಂದರು.
ಸಮಿತಿಯ ಪ್ರಮುಖರಾದ ಅನಂತ ಭಟ್ಟ ಹುಳಗೋಳ, ಸುರೇಶ ಹಕ್ಕಿಮನೆ, ಯಲ್ಲಾಪುರ ಸೀಮಾ ಪರಿಷತ್ ಅಧ್ಯಕ್ಷ ನಾಗೇಶ ಹೆಗಡೆ ಪಣತಗೇರಿ, ನಗರ ಸೀಮಾ ಪರಿಷತ್ ಅಧ್ಯಕ್ಷ ಸುಬ್ರಹ್ಮಣ್ಯ ವಿ ಹೆಗಡೆ, ಜನಾಂದೋಲನ ಸಮಿತಿಯ ಸಂಚಲನಾ ಸಮಿತಿಯ ಪ್ರಮುಖ ವಿಶ್ವೇಶ್ವರ ಕೋಟೆಮನೆ, ಹಿರಿಯ ಸಹಕಾರಿ ಉಮೇಶ ಭಾಗ್ವತ, ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ, ಪ್ರಮುಖರಾದ ಶಿವರಾಮ ಭಟ್ಟ ಕೋಮಡಿ, ಗಣಪತಿ ಕೊಂಬೆ, ಕೆ.ಎಸ್ ಭಟ್ಟ ಆನಗೋಡ ಶ್ರೀಧರ ಅಣಲಗಾರ, ನಾಗರಾಜ ಮದ್ಗುಣಿ ಮತ್ತಿತರರು ಪಾಲ್ಗೊಂಡಿದ್ದರು.