ಬೇಡ್ತಿ-ವರದಾ ನದಿ ಜೋಡಣೆ ಡಿಪಿಆರ್ ಲೋಪ - ಭಾಗ 2
~ಕೃಷ್ಣ ಭಟ್
~~~~~~~~~~~~~~~~~~~~~~~~~~
ಈ
ಹಿಂದಿನ ಪೋಸ್ಟ್ (ಭಾಗ 1) ರಲ್ಲಿ ಬೇಡ್ತಿ-ವರದಾ ನದಿ ಜೋಡಣೆಯ ಡಿಪಿಆರ್‌ನಲ್ಲಿ ಇರುವ ಸಮಸ್ಯೆ ಜೊತೆಗೆ ಇನ್ನೊಂದು ಮಹತ್ವದ ಅಂಶ ಆರ್ಥಿಕತೆಯದ್ದು. ಇದು ಡಿಪಿಆರ್‌ನ ಸಮಸ್ಯೆಯಲ್ಲ. ಬದಲಿಗೆ ವಾಸ್ತವ ಸಮಸ್ಯೆ. ಡಿಪಿಆರ್ ಹೊಸದಾಗಿ ಮಾಡಿದರೂ ಇದರಲ್ಲಿನ ಅಂಕಿ ಅಂಶಗಳಲ್ಲಿ ಬದಲಾವಣೆಯಾಗಬಹುದು. ಆದರೆ ಒಟ್ಟಾರೆ ಚಿತ್ರಣ ಹೀಗೆಯೇ ಇರುತ್ತದೆ.
ಈ ಪ್ರಾಜೆಕ್ಟ್‌ನ ಲಾಭ 1 ಕ್ಕೆ 2.77 ಪಟ್ಟು ಎಂದು ಹೇಳಲಾಗಿದೆ. ಅಂದರೆ, 1 ರೂ. ವೆಚ್ಚ ಮಾಡಿದರೆ, ಅದರಿಂದ 2.77 ರೂ. ಲಾಭವಾಗುತ್ತದೆ ಎಂಬುದು ಡಿಪಿಆರ್‌ನಲ್ಲಿ ಈ ಇಡೀ ಯೋಜನೆಗೆ ಆರ್ಥಿಕತೆಗೆ ಕೊಟ್ಟಿರುವ ವಿವರ. ವರ್ಷಕ್ಕೆ 500 ಕೋಟಿ ರೂ. ಖರ್ಚು ಮಾಡಿದರೆ, 1200+ ಕೋಟಿ ರೂ. ಲಾಭ ಬರುತ್ತದೆ ಎಂದು ಹೇಳುತ್ತದೆ ಈ ಡಿಪಿಆರ್.
ಆದರೆ, ಈ ಲೆಕ್ಕಾಚಾರ ಮಾಡುವುದಕ್ಕೆ ಇವರು ಮಾಡಿದ ಕಸರತ್ತು ಮಾತ್ರ ಒಂದಕ್ಕೊಂದು ತಾಳೆಯಾಗುವುದಿಲ್ಲ.
ಉದಾಹರಣೆಗೆ, ಬೇಡ್ತಿ ನದಿಯಿಂದ 650 ಅಡಿ ಮೇಲಕ್ಕೆ ನೀರನ್ನು ತೆಗೆದುಕೊಂಡು ಹೋಗಿ ಅಲ್ಲಿನ ಉದ್ಯಮಗಳಿಗೆ ನೀರು ಕೊಟ್ಟು, ಪ್ರತಿ ಕಿಲೋ ಲೀಟರ್‌ಗೆ 120 ರೂ. ದರಕ್ಕೆ ಮಾರಾಟ ಮಾಡಿ, ಅದರಿಂದ 265 ಕೋಟಿ ರೂ. ಆದಾಯ ಬರುತ್ತದೆ ಎಂದು ಅಂದಾಜು ಮಾಡಲಾಗಿದೆ. ಇದು ಎಂಥ ಮೂರ್ಖ ಯೋಜನೆ ಎಂದರೆ, ಇದೇ ನೀರನ್ನು ಇದೇ ನದಿ ಪಾತ್ರದಲ್ಲಿ ಯಾವುದೇ ವಿದ್ಯುತ್ ಬಳಸದೇ, ಪೈಪ್ ಹಾಕದೇ, ಸಹಜ ಗುರುತ್ವಾಕ್ಷಣೆಯ ಬಲದಿಂದ ಹರಿವಯು ನೀರನ್ನು ಉದ್ಯಮಗಳನ್ನು ಕೊಟ್ಟು ಕಡಿಮೆ ದರದಲ್ಲಿ ಕೊಡಬಹುದಿತ್ತಲ್ಲ! ಅದರ ಬದಲಿಗೆ, ಈ ನೀರನ್ನು ಹಾವೇರಿಗೆ ಹಾಗೂ ತುಂಗಭದ್ರಾ ನದಿ ಪಾತ್ರಕ್ಕೆ ತೆಗೆದುಕೊಂಡು ಹೋಗಿ, ಅಲ್ಲಿ ಉದ್ಯಮಗಳನ್ನು ಸ್ಥಾಪಿಸಿ ಅವುಗಳಿಗೆ ನೀರು ಕೊಡುತ್ತೇವೆ ಎಂದು ಇದು ಹೇಳುತ್ತದೆ.
ಇನ್ನೂ ತಮಾಷೆಯ ಸಂಗತಿಯೆಂದರೆ, ಈ 120 ರೂ. ದರದ ಲೆಕ್ಕಾಚಾರವನ್ನು ಪಕ್ಕದ ತಮಿಳುನಾಡು ಹಾಗೂ ಹೈದರಾಬಾದ್‌ನ ಮಾದರಿಯಲ್ಲಿ ಕೊಡಲಾಗಿದೆಯೇ ಹೊರತು, ನಮ್ಮಲ್ಲೇ ಸಮೀಪದ ಯಾವ ಮಾದರಿಯೂ ಇವರಿಗೆ ಸಿಗಲಿಲ್ಲ! ಬಹುಶಃ ಈ ಭಾಗದಲ್ಲಿ ಇಷ್ಟು ನೀರನ್ನು ಬಳಸುವ ಉದ್ಯಮವೇ ಇಲ್ಲವೇನೋ!
ಇದಕ್ಕೆ ಸ್ಥಳೀಯ ಉದ್ಯಮಗಳು ಎಷ್ಟು ಕೊಡಲು ಸಿದ್ಧವಿವೆ ಎಂದು ಯಾವ ಅಧ್ಯಯನವನ್ನೂ ಡಿಪಿಆರ್ ಮಾಡುವಾಗ ಮಾಡಲಿಲ್ಲ. ಇಷ್ಟು ದುಡ್ಡನ್ನು ನೀರಿಗೆ ಕೊಟ್ಟು ಉದ್ಯಮಗಳು ಇಲ್ಲಿಗೆ ಯಾಕಾದರೂ ಬರುತ್ತವೆ? ಅಷ್ಟಕ್ಕೂ ಈ ಭಾಗದಲ್ಲಿ ಎಷ್ಟು ಉದ್ಯಮಗಳಿವೆ? ಅದನ್ನು ಲೆಕ್ಕ ಮಾಡಲೂ ಇಲ್ಲ.
ಇನ್ನು ಈ ನೀರಿನ ಹೆಚ್ಚಿನ ಬಳಕೆಯಾಗುವುದು ಕೃಷಿಗೆ ಎಂಬುದೇನೋ ಸರಿ. ಆದರೆ, ಕೃಷಿ ಉತ್ಪನ್ನದಿಂದ ಈ ಖರ್ಚು ಕಳೆಯುವಷ್ಟಾದರೂ ಉತ್ಪನ್ನ ಸಿಗುತ್ತದೆಯೇ ಎಂಬ ವಿಷಯದಲ್ಲೂ ಉತ್ಪ್ರೇಕ್ಷಿತ ಅಂದಾಜುಗಳೇ ಇವೆ.
ನೀರು ಕೊಟ್ಟರೆ ಇಲ್ಲಿಯ ಭತ್ತದ ಉತ್ಪಾದನೆ ಹೆಕ್ಟೇರ್‌ಗೆ 3.82 ಮೆ. ಟನ್‌ನಿಂದ 8.20 ಮೆ.ಟನ್‌ಗೆ ಏರಿಕೆಯಾಗುತ್ತದೆ ಎಂದು ಡಿಪಿಆರ್ ಹೇಳುತ್ತದೆ. ಅಂದರೆ, ನೀರು ಸಿಕ್ಕ ತಕ್ಷಣ ಇಲ್ಲಿಯ ಬೆಳೆ ದುಪ್ಪಟ್ಟಿಗಿಂತಲೂ ಹೆಚ್ಚಾಗುತ್ತದೆ ಎಂದು ಅಂದಾಜು ಮಾಡಲಾಗಿದೆ. ವಾಸ್ತವದಲ್ಲಿ ಅಲ್ಲಿನ ಭೌಗೋಳಿಕ ಪರಿಸರವನ್ನು ಗಮನಿಸಿದವರಿಗೆ, ಇದು ಸಾಧ್ಯವೇ ಇಲ್ಲ ಎನಿಸುತ್ತದೆ.
ಹೇಗೆಂದರೆ, ಈ ಭಾಗದಲ್ಲಿ ಬೆಳೆಯುವ ಬಹುತೇಕ ಬೆಳೆಗಳು ಅಲ್ಲಿಯ ನೀರಿನ ಲಭ್ಯತೆಗೆ ಅನುಗುಣವಾಗಿವೆ. ಉದಾಹರಣೆಗೆ, ಈ ನದಿಯ ಅಕ್ಕ ಪಕ್ಕದ ಪ್ರದೇಶಗಳಲ್ಲಿ ಮೆಕ್ಕೆ ಜೋಳದಂತಹ ಅರೆ ಒಣ ಪ್ರದೇಶದ ಬೆಳೆಗಳನ್ನೇ ಬೆಳೆಯಲಾಗುತ್ತಿದೆ. ಇದಕ್ಕೆ ಈ ಮಟ್ಟಿಗಿನ ನೀರಾವರಿ ಅಗತ್ಯವಿಲ್ಲ. ಅಲ್ಲದೆ, ಇದರ ಆರ್ಥಿಕತೆಯೂ ಕಡಿಮೆ. ಅಂದರೆ, ಇದನ್ನು ಬೆಳೆದು ಮಾರಾಟ ಮಾಡಿ, ಖರ್ಚನ್ನು ಕಳೆದರೆ ಒಬ್ಬ ರೈತನಿಗೆ ಒಂದು ಹೆಕ್ಟೇರ್ ಭೂಮಿಯಿಂದ 30-50 ಸಾವಿರ ರೂ. ಉಳಿತಾಯವಾಗುತ್ತದೆ. ಆದರೆ, ಈ ನೀರನ್ನು ಇಲ್ಲಿಗೆ ತೆಗೆದುಕೊಂಡು ಹೋಗುವುದಕ್ಕೇ ಪ್ರತಿ ವರ್ಷ ಒಂದು ಹೆಕ್ಟೇರ್‌ಗೆ ಸುಮಾರು 75 ಸಾವಿರ ರೂ. ಖರ್ಚಾಗುತ್ತದೆ! ಇದು ಸರ್ಕಾರಕ್ಕೆ ಹೊರೆ.
ಪ್ರತಿ ವರ್ಷ ಸರ್ಕಾರ ಇಷ್ಟು ನೀರನ್ನು ಎತ್ತಿ ಮೇಲಕ್ಕೆ ಹಾಕುವುದಕ್ಕೆಂದೇ 451 ಕೋಟಿ ರೂ. ಖರ್ಚಾಗುತ್ತದೆ. ನೆನಪಿರಲಿ, ಈ 450 ಕೋಟಿ ರೂ. ಅಂದಾಜು 2020 ರದ್ದು. 2020 ರಲ್ಲಿ ಈ ಯೋಜನೆಯ ಆರಂಭಿಕ ವೆಚ್ಚವನ್ನು 2800 ಕೋಟಿ ರೂ. ಎಂದು ಅಂದಾಜು ಮಾಡಲಾಗಿತ್ತು, ಆದರೆ, ಈಗ ಈ ಯೋಜನೆಯ ಜಾರಿ ಮಾಡುವುದಕ್ಕೆ 10 ಸಾವಿರ ಕೋಟಿ ಬೇಕಾಗುತ್ತದೆ ಎಂದು ಅಂದಾಜು ಮಾಡಲಾಗಿದೆ. ಅಂದರೆ, ಈ ನಿರ್ವಹಣೆ ವೆಚ್ಚ ಎಷ್ಟಾಗಬಹುದು ಎಂದು ಲೆಕ್ಕ ಹಾಕಿಕೊಳ್ಳಬಹುದು! ಜೊತೆಗೆ, ನಿರ್ವಹಣೆ ವೆಚ್ಚ ಪ್ರತಿ ವರ್ಷ ಹೆಚ್ಚುತ್ತಲೇ ಇರುತ್ತದೆ.
ಅಲ್ಲದೆ, ಇಲ್ಲಿ ಲೆಕ್ಕ ಹಾಕಿದ ವಿದ್ಯುತ್ ವೆಚ್ಚವೂ ಪ್ರತಿ ಯುನಿಟ್‌ಗೆ 1.80 ರೂ. ಅದು ಸಬ್ಸಿಡಿ ದರದಲ್ಲಿ ಸರ್ಕಾರ ಕೊಡುವ ವಿದ್ಯುತ್. ಅಸಲಿ ವಿದ್ಯುತ್ ವೆಚ್ಚವನ್ನು ಲೆಕ್ಕ ಹಾಕಿದರೆ ಇದು ಇನ್ನೂ ಹೆಚ್ಚಾಗುತ್ತದೆ! ಈಗ ಮನೆ ಬಳಕೆಯ ವಿದ್ಯುತ್ ವೆಚ್ಚವೇ ಪ್ರತಿ ಯುನಿಟ್‌ಗೆ 3 ರೂ.ಗಿಂತ ಹೆಚ್ಚಿದ್ದು, 7 ರೂ.ವರೆಗೂ ಇದೆ. ಅಂದರೆ, ಈ ಯೋಜನೆಯ ವಾರ್ಷಿಕ ವೆಚ್ಚವೇ 1 ಸಾವಿರ ಕೋಟಿ ರೂ.ಗೂ ಹೆಚ್ಚಾಗುವ ಸಾಧ್ಯತೆ ಇದ್ದೇ ಇದೆ.
ಇಷ್ಟಾಗಿಯೂ ಇಲ್ಲಿಂದ ನೀರನ್ನು ತೆಗೆದುಕೊಂಡು ಹೋದರೆ, ಅಲ್ಲಿ ಈ ನೀರಿನಿಂದ ಎಷ್ಟು ಬೆಳೆ ಬೆಳೆಯಬಹುದು, ಅಲ್ಲಿ ಈ ನೀರನ್ನು ಬಳಸಿಕೊಂಡು ಬೆಳೆ ತೆಗೆಯಲು ಸಾಕಷ್ಟು ಮಾನವ ಸಂಪನ್ಮೂಲ ಇದೆಯೇ ಎಂಬ ಅಧ್ಯಯನವನ್ನೆಲ್ಲ ಮಾಡಿದ್ದು 2011 ರ ಜನಗಣತಿ ಅಂಕಿ ಅಂಶವನ್ನು ಆಧರಿಸಿ. ಅಂದರೆ, 15 ವರ್ಷದ ಹಿಂದೆ ಇದ್ದ ಜನಸಂಖ್ಯೆಯನ್ನು ಆಧರಿಸಿ ಈಗಿನ ಲೆಕ್ಕಾಚಾರ ಮಾಡಲಾಗಿದೆ.
ಆದರೆ, ಕಳೆದ 15 ವರ್ಷಗಳಲ್ಲಿ ಓದಿದ ಎಲ್ಲ ಯುವಜನತೆ ಪಟ್ಟಣಕ್ಕೆ ಕಾಲ್ಕಿತ್ತಿರುವುದರಿಂದ ಅಲ್ಲಿನ ಸೀಮಿತ ಮಾನವ ಸಂಪನ್ಮೂಲ ಈ ನೀರನ್ನು ಬಳಸಿಕೊಂಡು ಬೆಳೆ ತೆಗೆಯಲು ಸಾಧ್ಯವಿದೆಯೇ ಎಂಬ ಅಧ್ಯಯನ ನಡೆದಿಲ್ಲ.
ಅಲ್ಲದೆ, ಒಂದು ವೇಳೆ ನೀರು ಸಿಕ್ಕರೆ ಅಲ್ಲಿಯ ಜನರು ಮಾರುಕಟ್ಟೆಯಲ್ಲಿ ಹೆಚ್ಚು ಲಾಭ ಕೊಡುವ ಬೆಳೆ ಬೆಳೆಯಲು ಸಿದ್ಧರಿದ್ದಾರೆಯೇ ಹಾಗೂ ಅಲ್ಲಿನ ಮಣ್ಣಿನ ಗುಣಧರ್ಮಗಳು ಹೆಚ್ಚು ಲಾಭ ತರುವ ಈರುಳ್ಳಿ, ಮೆಣಸು ಹಾಗೂ ಇತರ ಹಣ್ಣಿನ ಬೆಳೆಗಳನ್ನು ಬೆಳೆಯುವುದಕ್ಕೆ ಪೂರಕವಾಗಿದೆಯೇ ಎಂಬ ಅಧ್ಯಯನ ನಡೆಸಿಲ್ಲ. ಇಡೀ ವರದಿಯಲ್ಲಿ ಈ ಯೋಜನೆ ಸುಸ್ಥಿರವಾಗುವುದಕ್ಕೆ ಏನು ಮಾಡಬಹುದು ಎಂಬ ವಿವರ ಇಲ್ಲವೇ ಇಲ್ಲ.
ಒಟ್ಟಾರೆ ಈ ಯೋಜನೆಯ ರೂಪುರೇಷೆಯೇ ಹೇಗಿದೆಯೆಂದರೆ, ಪ್ರತಿ ವರ್ಷ ಸರ್ಕಾರ ವೆಚ್ಚ ಮಾಡುವ ಈ 450 ಕೋಟಿ ರೂ. ಕೂಡಾ ಸಬ್ಸಿಡಿಯೇ ಆಗಿರಬೇಕು. ಎಂದಿಗೂ ಈ ಯೋಜನೆ ಒಂದು ಲಾಭದಾಯಕ ಯೋಜನೆ ಆಗಿರುವುದಿಲ್ಲ. ಒಂದು ವೇಳೆ ಸರ್ಕಾರ ಒಂದು ವರ್ಷ ಇದರ ನಿರ್ವಹಣೆಗೆ ನೀಡುವ ಹಣ ನಿಲ್ಲಿಸಿದರೆ ಈ ಇಡೀ ಯೋಜನೆ ನಿಷ್ಪ್ರಯೋಜಕವಾಗುತ್ತದೆ. ಒಂದೇ ಒಂದು ಹನಿ ನೀರೂ ಮೇಲೆ ಹತ್ತುವುದಿಲ್ಲ.