ಉಮ್ಮಚ್ಗಿಯಲ್ಲಿ ಸೀತಾನುಸಂಧಾನ

Oct 5, 2025 - 21:42
 0  22
ಉಮ್ಮಚ್ಗಿಯಲ್ಲಿ ಸೀತಾನುಸಂಧಾನ

ಆಪ್ತ ನ್ಯೂಸ್ ಯಲ್ಲಾಪುರ:
ಮಕ್ಕಳಲ್ಲಿ ಪುರಾಣ ಕಥನಗಳನ್ನು ಮುನ್ನೆಲೆಗೆ ತರಲು ಪ್ರಯತ್ನಿಸುತ್ತಿರುವುದು ಉತ್ತಮವಾದ ಕೆಲಸ. ಪುರಾಣ,ಇತಿಹಾಸಗಳನ್ನು ಮಕ್ಕಳು ತಿಳಿದಿರಬೇಕು ಎಂದು ಉಮ್ಮಚ್ಗಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ.ಜಿ.ಭಟ್ಟ ಸಂಕದಗುಂಡಿ ಹೇಳಿದರು.

ಸೊಸೈಟಿಯ  ಸಭಾಭವನದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್, ಮಕ್ಕಳ ಪ್ರಕಾರ ಇವರು ಆಯೋಜಿಸಿದ್ದ ರಾಜ್ಯಮಟ್ಟದ ಮಕ್ಕಳ ಗೋಷ್ಠಿಯನ್ನು  ಜ್ಯೋತಿ ಬೆಳಗಿ ಉದ್ಘಾಟಿಸಿ ಮಾತನಾಡಿದರು
ಇಂದು ನಡೆಯುವ ಮಕ್ಕಳ ಗೋಷ್ಠಿ ಕೇವಲ ಮಕ್ಕಳಿಗೆ ಮಾತ್ರವಲ್ಲ ಪಾಲಕರು,ಆಯೋಜಕರು ಎಲ್ಲರೂ ಪಾಲ್ಗೊಳ್ಳುವಂತೆ ಮಾಡಿದೆ . 'ಸೀತಾನುಸಂಧಾನ'ದ ಮೂಲಕ ರಾಮಾಯಣ ಕಥನ ಓದುವ ಆಸಕ್ತಿ ರಾಜ್ಯದ ಹಲವಾರು ಜನರಲ್ಲಿ ಮೂಡಿಸಿದೆ. ಇದು ಇನ್ನೂ ಹೆಚ್ಚಿನ ಮಟ್ಟದಲ್ಲಿ ಜನರನ್ನು ತಲುಪಲಿ ಎಂದರು.
ಅ.ಭಾ.ಸಾ.ಪ.ದ ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್ಟ ಮಾತನಾಡಿ, ರಾಜ್ಯದ ಅನೇಕ ಕಡೆಯಿಂದ ಬಂದ ಮಕ್ಕಳು ಗೋಷ್ಠಿಯಲ್ಲಿ ಭಾಗವಹಿಸುವುದು ಕೇವಲ ಸಾಹಿತ್ಯ ದೃಷ್ಟಿ ಮಾತ್ರವಲ್ಲ, ಉಮ್ಮಚ್ಗಿಯಂತ ಪುಟ್ಟ ಹಳ್ಳಿಯಲ್ಲಿಯ ಪರಿಸರ ವೀಕ್ಷಣೆ ಮಕ್ಕಳು ಮಾಡಿದಾಗ ಭವಿಷ್ಯದಲ್ಲಿ ಹೊಸ ಸಂಚಲನ ಮೂಡಿಸಲಿದೆ. ಹರಿಯುವ ನದಿಯಂತೆ ಮಕ್ಕಳ ಗೋಷ್ಠಿ ಇಡೀ ರಾಜ್ಯದಲ್ಲಿ ವ್ಯಾಪಿಸಿದೆ ಎಂದು ಹೇಳಿದರು. ಉಮ್ಮಚ್ಗಿ ಸಂಸ್ಕೃತ ಪಾಠಶಾಲೆ ಅಧ್ಯಕ್ಷ ವಿ.ವಿ.ಜೋಶಿ ಉಪಸ್ಥಿತರಿದ್ದರು.
ನಂತರ ನಡೆದ 'ಸೀತಾನುಸಂಧಾನ' ಮಕ್ಕಳ ಗೋಷ್ಠಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಯ ಇಪ್ಪತ್ತು ಶಾಲೆಗಳ ಮಕ್ಕಳು ವಾಲ್ಮೀಕಿ ರಾಮಾಯಣದ ಸೀತೆಯ ಕುರಿತು ಮಾತನಾಡಿದರು.ನಂತರ ನಡೆದ ಸಮಾರೋಪದಲ್ಲಿ ಮಾತನಾಡಿದ ಅ.ಭಾ.ಸಾ.ಪ. ರಾಜ್ಯಾಧ್ಯಕ್ಷ ಎಸ್.ಜಿ.ಕೋಟಿ, ಇದೊಂದು ಸುಸಂಸ್ಕೃತ ಜನರ ಊರು. ನಿನ್ನೆಯೇ ಇಲ್ಲಿಗೆ ಬಂದು ನಾನು ಇವರ ಆದರಾಥಿತ್ಯ ಸ್ವೀಕರಿಸಿ ಸಂತಸ ಪಟ್ಟಿದ್ದೇನೆಂದು ಹೇಳಿದರು. ಅ.ಭಾ.ಸಾ.ಪ. ಕಾರ್ಯಕಾರಿಣಿ ಸದಸ್ಯ ಜಗದೀಶ ಭಂಡಾರಿ ಮಾತನಾಡಿ,  ಮುಂದಿನ ವರ್ಷವೂ ಈ ಕಾರ್ಯಕ್ರಮ ಇಲ್ಲಿಯೇ ನಡೆಯುವಂತೆ ನಾವೆಲ್ಲ ಶ್ರಮಿಸೋಣ ಎಂದು ಹೇಳಿದರು.  ಸಮಾರೋಪ ಭಾಷಣ ಮಾಡಿದ ಯಕ್ಷಗಾನ ಅರ್ಥದಾರಿ ದಿವಾಕರ ಹೆಗಡೆ ಕೆರೆಹೊಂಡ  ಮಕ್ಕಳಿಗೆ ಮೊಬೈಲ್ ನೋಡಬೇಡಿ ಎಂದರೆ ಕೇಳೋದಿಲ್ಲ. ಮೊಬೈಲ್ ನೋಡೋಣ ಬನ್ನಿ ಎಂದರೆ ಆಲಿಸುತ್ತಾರೆ. ಆದರೆ ಅಲ್ಲಿ ಏನು ನೋಡಬೇಕು ಎಂಬುದನ್ನು ನಾವು ಮಕ್ಕಳಿಗೆ ಕಲಿಸಿಕೊಡಬೇಕು. ಅನೇಕರ ರಾಮಾಯಣ ಕುರಿತ ಪ್ರವಚನಗಳು ಮೊಬೈಲ್ ನಲ್ಲಿ ಸಿಗುತ್ತವೆ. ಶತಾವಧಾನಿ ಆರ್.ಗಣೇಶರ ಅರವತ್ತಕ್ಕೂ ಹೆಚ್ಚು ರಾಮಾಯಣ ಕುರಿತ ಉನ್ಯಾಸಗಳೂ ಅಲ್ಲಿ ಸಿಗುತ್ತವೆ.  ಅನೇಕ ಕವಿಗಳ ರಾಮಾಯಣವನ್ನೂ ಮೊಬೈಲ್ ನಲ್ಲಿ ಓದಬಹುದು. ಅಂಥವನ್ನು ಮಕ್ಕಳು ನೋಡುವಂತೆ,ಕೇಳುವಂತೆ, ಓದುವಂತೆ ಪ್ರರೇಪಿಸುವುದು ಹಿರಿಯರಾದ ಎಲ್ಲರ ಹೊಣೆಗಾರಿಕೆಯಾಗಿದೆ ಎಂದು ಹೇಳಿದರು.ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವರೆ, ಕವಿ ಕೃಷ್ಣ ಪದಕಿ,ಡಾ.ರಾಮರಾಜು ಬಳ್ಳಾರಿ, ಮತ್ತಿತರರು ಉಪಸ್ಥಿತರಿದ್ದರು. ಗೋಷ್ಠಿಯ ಗೀತೆಯನ್ನು ಸಿಂಧೂರ ಗಿರಣಿಮನೆ,ಅವನಿ ಕೇಸರ್ಕರ್, ಶ್ರಾವಣೀ ಭಟ್ಟ ಹಾಡಿದರು. ಮಕ್ಕಳಾದ ಪುಷ್ಕರಾ,ಕೆ.ಎನ್.ದೀಪಿಕಾ ಭಟ್ಟ, ಆದ್ಯಾ ಹೆಗಡೆ ಮತ್ತು ಪುಷ್ಪಾ ಹೆಗಡೆ, ಸುಜಾತಾ ಭಟ್ಟ ಕಾರ್ಯಕ್ರಮ ನಿರೂಪಿಸಿದರು. ರಾಜೇಶ ಶಾಸ್ತ್ರಿ ಉಮ್ಮಚ್ಗಿ ವಂದನಾರ್ಪಣೆ ಗೈದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0