ಮಾರಿಗದ್ದೆ ಬಳಿ ಹುಲಿ ಬಂತು ಹುಲಿ
ಚಿತ್ರ: ಸಾಂದರ್ಭಿಕ

ಆಪ್ತ ನ್ಯೂಸ್ ಶಿರಸಿ:
ಸಿದ್ದಾಪುರ ತಾಲೂಕಿನ ಕಾನಸೂರು ಹಾಗೂ ಹಸರಗೋಡ್ ಪಂಚಾಯತ ಮಧ್ಯದ ಮಾರಿಗದ್ದೆ ಬ್ರಿಜ್ ಬಳಿ ಹುಲಿ ಕಾಣಿಸಿಕೊಂಡಿದೆ ಎನ್ನುವ ಸುದ್ದಿ ಹರಿದಾಡುತ್ತಿದ್ದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಮುತ್ಮುರ್ಡ್ ಹಾಗೂ ಹಿತ್ತಲಕೈ ನಡುವೆ ಶಿರಸಿಗೆ ಕುಡಿಯುವ ನೀರು ಸರಬರಾಜು ಮಾಡುವ ಮಾರಿಗದ್ದೆ ಜಾಕ್ ವೆಲ್ ಇದೆ. ಇಲ್ಲಿಯೇ ಅಘನಾಶಿನಿ ನದಿಗೆ ಸೇತುವೆ ಕೂಡ ಇದೆ. ಆದರೆ ಕಳೆದ ಕೆಲವು ದಿನಗಳ ಹಿಂದೆ ಈ ಸೇತುವೆಯ ಬಳಿ ಹುಲಿ ಕಾಣಿಸಿಕೊಂಡಿದೆ ಎನ್ನುವ ಮಾತುಗಳು ಕೇಳಿ ಬಂದಿದೆ. ಈ ಭಾಗದಲ್ಲಿ ಹುಲಿ ಓಡಾಟ ಮಾಡುತ್ತಿದ್ದು, ಈ ಭಾಗದ ಜನರು ಎಚ್ಚರಿಕೆಯಿಂದ ಇರಬೇಕು ಎನ್ನುವ ಮಾತುಗಳು ಕೇಳಿಬಂದಿದೆ.
ಸಿಂಹ ಬಂದಿತ್ತೆ?
ತಿಂಗಳುಗಳ ಹಿಂದೆ ಈ ಭಾಗದಲ್ಲಿ ಹೆಣ್ಣು ಸಿಂಹ ಓಡಾಡಿತ್ತು. ಸಿಂಹವನ್ನು ನೋಡಿದವರಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಈ ಕುರಿತಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಮಾಹಿತಿ ವಿನಿಮಯವೂ ನಡೆದಿತ್ತು. ಆ ನಂತರ ಸಿಂಹ ಕಾಣಿಸಿಕೊಂಡಿತ್ತು ಎನ್ನಲಾದ ಅಡ್ಕಳ್ಳಿ ಭಾಗಕ್ಕೆ ಆಗಮಿಸಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಈ ಭಾಗಕ್ಕೆ ಬಂದು ಸಿಂಹದ ಕುರಿತು ಸಾಮಾಜಿಕ ಜಾಲ ತಾಣಗಳಲ್ಲಿ ಮಾಹಿತಿ ಹರಿಬಿಟ್ಟವರು ಯಾರು ಎಂದು ವಿಚಾರಿಸಿದ್ದರು ಎನ್ನಲಾಗಿದೆ. ಕೊನೆಗೆ ಸಿಂಹ ಇರುವಂತಹ ಭೌಗೋಲಿಕ ವಾತಾವರಣ ಇಲ್ಲಿಲ್ಲ ಹಾಗಾಗಿ ಸಿಂಹ ಬಂದಿದ್ದು ಸುಳ್ಳು, ಬದಲಾಗಿ ಇನ್ಯಾವುದೋ ಪ್ರಾಣಿಯನ್ನು ನೋಡಿ ಸಿಂಹ ಎಂದು ತಪ್ಪಾಗಿ ಭಾವಿಸಿದ್ದಾರೆ ಎಂದು ತಿಪ್ಪೆ ಸರಿಸಲಾಗಿತ್ತು.
ಇದೀಗ ಹುಲಿ ಓಡಾಡಿದ ಕುರಿತು ಮಾಹಿತಿ ಹರಿದಾಡುತ್ತಿದೆ. ಈ ಸಾರಿ ಅರಣ್ಯ ಇಲಾಖೆ ಅಧಿಕಾರಿಗಳು ಹುಲಿ ಕುರಿತು ಜನ ಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾರೋ ಅಥವಾ ಸಾಮಾಜಿಕ ಜಾಲ ತಾಣಗಳಲ್ಲಿ ಮಾಹಿತಿ ಹಂಚಿಕೊಂಡವರ ಕುರಿತು ವಿಚಾರಿಸುತ್ತಾರೋ ಎನ್ನುವುದನ್ನು ಕಾದು ನೋಡಬೇಕಿದೆ.
ಈ ಭಾಗದಲ್ಲಿ ಹಿಂದೆ ಚಳಿಗಾಲದ ಸಂದರ್ಭದಲ್ಲಿ ಒಂದೆರಡು ಸರಿ ಹುಲಿ ಓಡಾಡಿದ ನಿದರ್ಶನಗಳಿವೆ. ಉಳಿದ ಸಂದರ್ಭದಲ್ಲಿ ಚಿರತೆಯಂತಹ ಪ್ರಾಣಿಗಳು ಅಡ್ಡಾಡಿದ್ದು, ಅವು ಪದೇ ಪದೇ ಮನುಷ್ಯರ ಕಣ್ಣಿಗೆ ಬಿದ್ದಿದ್ದೂ ಇದೆ. ಈ ಭಾಗದಲ್ಲಿ ಕಾಡು ಪ್ರಾಣಿಗಳ ಓಡಾಟ ಜಾಸ್ತಿ ಇರುವ ಕಾರಣ ಅರಾನಿಯ ಇಲಾಖೆ ಅಧಿಕಾರಿಗಳು ಗಂಭೀರವಾಗಿ ಕ್ರಮ ಕೈಗೊಂಡು, ಜನಸಾಮಾನ್ಯರಿಗೆ ಕಾದು ಪ್ರಾಣಿಗಳಿಂದ ತೊಂದರೆ ಆಗದಂತೆ ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ.
What's Your Reaction?






