ವಿರೋಧದ ನಡುವೆ ಬೇಡ್ತಿ-ವರದಾ ಜೋಡಣೆ ಯೋಜನೆ ಜಾರಿಗೆ ಮುಂದಾದ ಸರ್ಕಾರ: ಹೋರಾಟಕ್ಕೆ ಬನ್ನಿ ಎಂದ ಅಶೀಸರ

Jan 2, 2026 - 22:21
 0  51
ವಿರೋಧದ ನಡುವೆ ಬೇಡ್ತಿ-ವರದಾ ಜೋಡಣೆ ಯೋಜನೆ ಜಾರಿಗೆ ಮುಂದಾದ ಸರ್ಕಾರ: ಹೋರಾಟಕ್ಕೆ ಬನ್ನಿ ಎಂದ ಅಶೀಸರ

ಆಪ್ತ ನ್ಯೂಸ್‌ ಯಲ್ಲಾಪುರ:

ನದಿತಿರುವು ಸಂಗತಿ ಗಂಭೀರವಾಗುತ್ತಿದ್ದು ಸರಕಾರ ಯೋಜನೆ ಜಾರಿಗೆ ಮುನ್ನುಗ್ಗುತ್ತಿದೆ. ಪಶ್ಚಿಮ ಘಟ್ಟದ ನದಿಗಳ ಜೋಡಣೆ ಯೋಜನೆಯನ್ನು ಸ್ಥಗಿತಗೊಳಿಸಲು ಸ್ವರ್ಣವಲ್ಲೀ ಶ್ರೀಗಳ ನೇತೃತ್ವದಲ್ಲಿ ಆಂದೋಲನ ನಡೆಯುತ್ತಿದೆ ಎಂದು ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಹೇಳಿದರು.
 ಶಿರಸಿಯಲ್ಲಿ ಜ.11 ರಂದು ನಡೆಯುವ ಬ್ರಹತ್ ಜನ ಸಮಾವೇಶದ ಕುರಿತು ಪಟ್ಟಣದ ಟಿಎಸ್ಎಸ್ ಶಾಖೆಯ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.‌
    ಯೋಜನೆಯ ಡಿಪಿಆರ್ ಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಅದರ ಪ್ರಕ್ರಿಯೆಗಳು ಮುಗಿದು, ಅನುಷ್ಠಾನದ ಹಂತಕ್ಕೆ ಬರಲು ಕೆಲವು ಸಮಯ ಬೇಕು. ಆ ಹೊತ್ತಿನೊಳಗೇ ಹೋರಾಟವನ್ನು ತೀವ್ರಗೊಳಿಸಬೇಕು.ಯಲ್ಲಾಪುರ ತಾಲೂಕಿನಿಂದ ಐದು ಸಾವಿರದಷ್ಟು ಜನ ಶಿರಸಿ ಜನಸಮಾವೇಶಕ್ಕೆ ಬರಬೆರಕು ಎಂದು ವಿನಂತಿಸಿದರು.
   ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಯೋಜನೆಯ ವಿಷಯದಲ್ಲಿ ಜಿಲ್ಲೆಯ ಜವಾಬ್ದಾರಿಯುತ ಜನಪ್ರತಿನಿಧಿಗಳ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಬೇಕು ಮತ್ತು  ಇಲ್ಲಿನ ಸ್ಥಿತಿಯನ್ನು ಸರ್ಕಾರದ ಮಟ್ಟದಲ್ಲಿ ಗಂಭೀರವಾಗಿ ಗಮನ ಸೆಳೆಯಬೇಕು. ಬೇರೆ ಬೇರೆ ರೀತಿಯಲ್ಲಿ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನಗಳೂ ನಡೆಯುವ ಸಾಧ್ಯತೆಯ ಬಗ್ಗೆ ಎಚ್ಚರಿಕೆ ಅಗತ್ಯ ಎಂದರು. 
   ಅಧ್ಯಕ್ಷತೆ ವಹಿಸಿದ್ದ ಟಿಎಸ್ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮಾತನಾಡಿ,  ನಾವು ಯೋಜನೆಯನ್ನು ವಿರೋಧಿಸುತ್ತಿರುವುದು ಯಾಕೆ, ಈ ಯೋಜನೆ ಹೇಗೆ ಅವೈಜ್ಞಾನಿಕವಾದದ್ದು ಎಂಬ ಕುರಿತು ಜನರಿಗೆ ಮನವರಿಕೆ ಮಾಡಿಕೊಡಬೇಕು.ಉಪಮುಖ್ಯಮಂತ್ರಿಗಳು ಈ ಯೋಜನೆ ಅನುಷ್ಠಾನಕ್ಕೆ ಬಂದೇ ಬರುತ್ತದೆ ಎಂದು ಹೇಳಿದ್ದಾರೆ. ಸಮರ್ಪಕ ಮಾಹಿತಿ ಇಲ್ಲದೇ ಅಥವಾ ಯಾವದೋ ಹಿನ್ನೆಲೆಯ ಮಾತು ಕೇಳಿ ಅವರು ಹೀಗೆ ಹೇಳಿದರೋ ಎಂದು ಪ್ರಶ್ನಿಸಿದ ಅವರು ಶ್ರೀಗಳ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದೆ. ಯೋಜನೆ  ತಡೆಯುವ ನಿಟ್ಟಿನಲ್ಲಿ ಹೋರಾಟ ಇಷ್ಟಕ್ಕೇ ನಿಲ್ಲದು ಎಂದು ಹೇಳಿದರು.
    ವಿವಿಧ ಸಂಘ-ಸಂಸ್ಥೆಗಳ ಪ್ರಮುಖರರಾದ ಡಿ.ಶಂಕರ ಭಟ್ಟ, ಎಸ್.ಎಂ.ಭಟ್ಟ, ಎಂ.ಕೆ.ಭಟ್ಟ ಯಡಳ್ಳಿ,ಎಂ.ಆರ್.ಹೆಗಡೆ, ಮಾತನಾಡಿದರು.ಸಮಿತಿಯ ಸಂಚಾಲಕ ನರಸಿಂಹ ಸಾತೊಡ್ಡಿ ಜನಸಂಪರ್ಕ ಅಭಿಯಾನ ಹೇಗೆ ನಡೆಯುತ್ತಿದೆ ಎಂಬ ಬಗ್ಗೆ ಸಭೆಗೆ ಮಾಹಿತಿ ನೀಡಿದರು.
 ಆನಗೋಡ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ,ಕಳಚೆ ಸಹ್ಯಾದ್ರಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಉಮೇಶ ಭಾಗ್ವತ, ಮಾವಿಮನೆ ಸಹಕಾರಿ ಸಂಘದ ಅಧ್ಯಕ್ಷ ಸುಬ್ಬಣ್ಣ ಬೋಳ್ಮನೆ, ಯಲ್ಲಾಪುರ ಸೀಮಾ ಪರಿಷತ್ ಅಧ್ಯಕ್ಷ ನಾಗೇಶ ಹೆಗಡೆ ಪಣತಗೇರಿ, ನಗರ ಸೀಮಾ ಪರಿಷತ್ ಅಧ್ಯಕ್ಷ ಸುಬ್ರಹ್ಮಣ್ಯ ಹೆಗಡೆ, ಟಿಎಸ್ಎಸ್ ನಿರ್ದೇಶಕ ಕೃಷ್ಣ ಹೆಗಡೆ ಜೂಜಿನಬೈಲ, ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಸಂಚಾಲಕ ಟಿ.ಆರ್.ಹೆಗಡೆ, ಇತರರಿದ್ದರು. ಟಿಎಸ್ಎಸ್ ಸಲಹಾ ಸಮಿತಿ ಸದಸ್ಯ ಗಣಪತಿ ಭಟ್ಟ ಸ್ವಾಗತಿಸಿ ನಿರ್ವಹಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0