ಆಪ್ತ ನ್ಯೂಸ್ ಬನವಾಸಿ:
ಬನವಾಸಿಯ ಮಧುಕೇಶ್ವರ ಸನ್ನಿಧಿಯಲ್ಲಿ ಶರನ್ನವರಾತ್ರಿ ಉತ್ಸವದ ವೇದಿಕೆಯಲ್ಲಿ ಯಕ್ಷ ಶುಭೋದಯ ಶಿರಸಿ ಇವರಿಂದ ಶರಸೇತು ಬಂಧನ ತಾಳಮದ್ದಲೆ ನಡೆಯಿತು.
ಸುಶ್ರಾವ್ಯ ಹಿಮ್ಮೇಳದಲ್ಲಿ ಎಂ.ಪಿ. ಹೆಗಡೆ ಉಲ್ಲಾಳಗದ್ದೆ, ವಿಠ್ಠಲ ಪೂಜಾರಿ ಮಂಚಿಕೇರಿ ಜೊತೆ ನೀಡಿ ಸಹಕರಿಸಿದರು. ಮುಂದೆ ಬರಲಿರುವ ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರ ವಿಜಯಕ್ಕಾಗಿ ಅರ್ಜುನನಿಗೆ ಹನುಮಂತನ ಸಹಾಯ ಒದಗಿಸಲು ಚತುರಮತಿ ಕೃಷ್ಣ ಹೂಡಿದ ಲೀಲಾ ತಂತ್ರದ ಭಾಗ ಶರಸೇತುಬಂದ.
ಅರ್ಜುನನಾಗಿ ಡಾ| ಜಿ.ಎ ಹೆಗಡೆ ಸೋಂದಾ ತರ್ಕಬದ್ಧವಾಗಿ ಮಾತನಾಡಿ, ವಿಸ್ತೃತ ಅಧ್ಯಯನದ ಹಿನ್ನೆಲೆಯಲ್ಲಿ ಪಾತ್ರದ ಘನತೆಯನ್ನು ಸಾರಿ ಆಖ್ಯಾನಕ್ಕೆ ಕಳೆಕಟ್ಟಿದರು. ಸುಲಭವಾಗಿ ಹನುಮನನ್ನು ಒಪ್ಪಿಕೊಳ್ಳದೆ ಕೇವಲ ವನಚರ, ಬಡಜುಣುಗು ಎಂಬುದನ್ನು ಬಿಂಬಿಸಿ ವಾದಕ್ಕೆ ಇಳಿದರು. ಇಂದ್ರನ ಐರಾವತವನ್ನು ದೇವಲೋಕದಿಂದ ಭೂಮಿಗೆ ಇಳಿಸಿದ ಸಂಗತಿಯನ್ನು ಸ್ವಾರಸ್ಯಕರವಾಗಿ ವರ್ಣಿಸಿ ಪ್ರೇಕ್ಷಕನ್ನು ಮೋಡಿಗೊಳಪಡಿಸಿದರು, ಬಾಣದಿಂದ ಸೇತುವೆಯನ್ನು ನಿರ್ಮಿಸುವ ಪಂಥಕ್ಕೆ ಇಳಿದರು. ಹನುಮಂತನ ಪಾತ್ರವನ್ನು ರಘುಪತಿ ನಾಯ್ಕ, ಹೆಗ್ಗರಣಿ ಭಾವಪೂರ್ಣತೆಯಿಂದ ಪಾತ್ರ ಚಿತ್ರಿಸಿ ಅರ್ಜುನನೊಡನೆ ನವಿರಾಗಿ ಸಂಭಾಷಣೆ ನಡೆಸಿದರು. ವಿಪ್ರನಾಗಿ ಗಣಪತಿ ಭಟ್ ವರ್ಗಾಸರ ಅರ್ಥಪೂರ್ಣತೆಯಿಂದ ಮಾತಾಡಿ ಆಖ್ಯಾನಕ್ಕೆ ಶೋಭೆ ತಂದರು.
ಶರನ್ನವರಾತಿ ಉತ್ಸವದ ಪದಾಧಿಕಾರಿಗಳು ಕಲಾವಿಧರಿಗೆ ಗೌರವ ಸಮ್ಮಾನ ನೀಡಿ ಕಲಾಗೌರವ ನೀಡಿದರು. ಯಕ್ಷ ಶುಭೋದಯದ ಅಧ್ಯಕ್ಷ ಡಾ|| ಜಿ.ಎ. ಹೆಗಡೆ ಅವರು ತಾಳಮದ್ದಲೆ ಕಾರ್ಯಕ್ರಮಕ್ಕೆ ಅವಕಾಶ ನೀಡಿದ ದೇವಸ್ಥಾನದ ಆಡಳಿತಾಧಿಕಾರಿಗಳ ಸಹಕಾರವನ್ನು ಸಾಂಸ್ಕೃತಿಕ ಸಮಿತಿಯ ಪದಾಧಿಕಾರಿಗಳನ್ನು ಸ್ಮರಿಸಿ ವಂದನೆ ಸಲ್ಲಿಸಿದರು.