ಬೇಡ್ತಿ-ಅಘನಾಶಿನಿ ಯೋಜನೆ ನಮ್ಮ ಜಿಲ್ಲೆಗೆ ಮಾರಕ: ಹೋರಾಟಕ್ಕೆ ಸದಾ ಬದ್ಧ ಎಂದ ಸಂಸದ ಕಾಗೇರಿ
ಆಪ್ತ ನ್ಯೂಸ್ ಶಿರಸಿ:
"ನೀರನ್ನು ನಾವು ಬೆಂಕಿ ಆರಿಸಲು ಬಳಸುತ್ತೇವೆ. ಆದರೆ, ಅದೇ ನೀರು ಇದೀಗ ನಮ್ಮ ಪಾಲಿಗೆ ಬೆಂಕಿಯ ಹಾಗೆ ಕಾಡುತ್ತಿದೆ. ಜಿಲ್ಲೆಯ ಪಾಲಿಗೆ ಮಾರಕವಾಗಿರುವ ಯಾವುದೇ ಯೋಜನೆಗಳು ಬರುವುದು ಬೇಡ," ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಆಗ್ರಹಿಸಿದರು.
ನಗರದ ಎಂಇಎಸ್ ಕಾಲೇಜು ಮೈದಾನದಲ್ಲಿ ಅಘನಾಶಿನಿ-ಬೇಡ್ತಿ ನದಿ ತಿರುವು ಯೋಜನೆ ವಿರೋಧಿಸಿ ಆಯೋಜಿಸಲಾಗಿದ್ದ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಯೋಜನೆಯ ವಿರುದ್ಧದ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ ಅವರು, "೧೯೯೦ರ ದಶಕದಿಂದಲೂ ಈ ಯೋಜನೆಯ ವಿಚಾರದಲ್ಲಿ ನಾನು ಶ್ರೀಗಳ ಜೊತೆಗೆ ನಿಂತಿದ್ದೇನೆ. ಅಂದಿನಿಂದ ಇಂದಿನವರೆಗೂ ನನ್ನ ನಿಲುವಿನಲ್ಲಿ ಬದಲಾವಣೆ ಇಲ್ಲ, ನನ್ನ ಮಾತಿಗೆ ನಾನು ಬದ್ಧನಾಗಿದ್ದೇನೆ. ಯಾವ ವೇದಿಕೆಯಲ್ಲಿ, ಯಾವ ರೀತಿ ಮಾತನಾಡಬೇಕು ಎನ್ನುವ ಅರಿವು ನನಗಿದೆ. ಹೀಗಾಗಿ ನಾನು ಹಿಂದೆ ಮಾತನಾಡಿದವರ ಕುರಿತು ಟೀಕೆ ಮಾಡಲು ಹೋಗುವುದಿಲ್ಲ," ಎಂದು ಸ್ಪಷ್ಟಪಡಿಸಿದರು.
ಮುಂದಿನ ಪೀಳಿಗೆಯ ರಕ್ಷಣೆ ನಮ್ಮ ಹೊಣೆ
ಈ ಹೋರಾಟ ಕೇವಲ ಇಂದಿನ ನಮ್ಮ ರಕ್ಷಣೆಗೆ ಮಾತ್ರ ಸೀಮಿತವಾಗಿಲ್ಲ, ಇದು ನಮ್ಮ ಮುಂದಿನ ಪೀಳಿಗೆಯ ರಕ್ಷಣೆಗಾಗಿ ನಾವು ಸೇರಿರುವ ವೇದಿಕೆ. ೩೦ ವರ್ಷಗಳ ಹಿಂದೆಯೇ ಈ ಯೋಜನೆಯ ಪ್ರಸ್ತಾಪ ಶುರುವಾಗಿದ್ದು, ಇದು ಇಂದು ನಿನ್ನೆಯದಲ್ಲ. ಅಂದಿನಿಂದಲೂ ನಾವು ಇದನ್ನು ವಿರೋಧಿಸುತ್ತಲೇ ಬಂದಿದ್ದೇವೆ ಎಂದು ಕಾಗೇರಿ ಸ್ಮರಿಸಿದರು.
ಪರಿಸರ ಧಾರಣಾ ಸಾಮರ್ಥ್ಯದ ಅಧ್ಯಯನವಾಗಲಿ
ನಮ್ಮ ಜಿಲ್ಲೆಯ ಪರಿಸರ ಈಗಾಗಲೇ ಅನೇಕ ಪ್ರಕೃತಿ ವಿಕೋಪಗಳನ್ನು ಎದುರಿಸಿದೆ. ಆದ್ದರಿಂದ ಜಿಲ್ಲೆಯ 'ಪರಿಸರ ಧಾರಣಾ ಸಾಮರ್ಥ್ಯ'ದ (Carrying Capacity) ಕುರಿತು ವೈಜ್ಞಾನಿಕ ಅಧ್ಯಯನ ನಡೆಯಬೇಕು ಎಂದು ಮೊದಲು ಒತ್ತಾಯಿಸಿದವನು ನಾನು. ಮಾತನಾಡಬೇಕಾದ ಸಂದರ್ಭದಲ್ಲಿ ನಾನು ಧ್ವನಿ ಎತ್ತುತ್ತಲೇ ಇದ್ದೇನೆ ಎಂದು ಸಂಸದರು ತಿಳಿಸಿದರು.
ಶರಾವತಿ ಯೋಜನೆಯ ಹಾನಿ ಕಣ್ಣ ಮುಂದಿದೆ
ಜಿಲ್ಲೆಯ ಮಾರಕ ಯೋಜನೆಗಳ ವಿರುದ್ಧ ಡಾ. ಶಿವರಾಮ ಕಾರಂತರು ನಡೆಸಿದ ಹೋರಾಟವನ್ನು ಸ್ಮರಿಸಿದ ಕಾಗೇರಿ, ಶರಾವತಿ ಯೋಜನೆಯನ್ನು ಉದಾಹರಿಸಿದರು. "ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಸಚಿವ ಮಂಕಾಳು ವೈದ್ಯರ ಕ್ಷೇತ್ರದಲ್ಲೇ ಇದೆ. ರಾಜ್ಯ ಸರ್ಕಾರದ ಈ ಯೋಜನೆಯಿಂದ ಪರಿಸರಕ್ಕೆ ಆಗುವ ಹಾನಿ ಎಷ್ಟು ಎಂಬುದು ಎಲ್ಲರಿಗೂ ತಿಳಿದಿದೆ. ಇಂತಹ ಯೋಜನೆಗಳಿಗೆ ಯಾರ್ಯಾರು ಕಾರಣ ಎನ್ನುವುದೂ ಜನರಿಗೆ ಗೊತ್ತಿದೆ," ಎಂದು ಪರೋಕ್ಷವಾಗಿ ಟಾಂಗ್ ನೀಡಿದರು.
ಅಂತಿಮವಾಗಿ, ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಜೊತೆಗೆ ನಾವಿದ್ದೇವೆ. ಮುಂದೆ ಕೂಡ ಸಮಿತಿ ಹಾಗೂ ಶ್ರೀಗಳ ಮಾರ್ಗದರ್ಶನದಲ್ಲಿ ಒಟ್ಟಾಗಿ ಕೆಲಸ ಮಾಡೋಣ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಕರೆ ನೀಡಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



