ಆಪ್ತ ನ್ಯೂಸ್ ಶಿರಸಿ:
ಬೇಡ್ತಿ-ಅಘನಾಶಿನಿ ಕಣಿವೆ ಉಳಿಸಿ ಬೃಹತ್ ಜನ ಸಮಾವೇಶದ ನಂತರ ೨೦-೦೧-೨೦೨೬ ರಂದು ಶ್ರೀ ಸ್ವರ್ಣವಲ್ಲೀ ಮಠದಲ್ಲಿ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮೀತಿ ಪದಾಧಿಕಾರಿಗಳ ಸಭೆ ಪೂಜ್ಯ ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮಿಗಳ ದಿವ್ಯ ಸಾಂನಿಧ್ಯದಲ್ಲಿ ನಡೆಯಿತು.
ಶಿರಸಿಯ ಬೃಹತ್ ಸಮಾವೇಶಕ್ಕೆ ಉ.ಕ ಜಿಲ್ಲೆಯ ಜನತೆ ನೀಡಿದ ಅಭೂತಪೂರ್ವ ಬೆಂಬಲಕ್ಕೆ ಸಭೆ ಕೃತಜ್ಞತೆ ಸಲ್ಲಿಸಿತು. ಇಡೀ ನಾಡಿನ ಗಮನ ಸೆಳೆದ ಸಮ್ಮೇಳನ ಪಶ್ಚಿಮಘಟ್ಟ ಸಂರಕ್ಷಣಾ ಆಂದೋಲನಕ್ಕೆ ಬಲ ನೀಡಿದೆ ಎಂದು ಅಭಿಪ್ರಾಯ ಪಟ್ಟಿದೆ.
ಈ ಸಂದರ್ಭದಲ್ಲಿ ಸಮೀತಿಯ ಗೌರವಾಧ್ಯಕ್ಷರಾದ ಸ್ವರ್ಣವಲ್ಲೀ ಸ್ವಾಮೀಜಿಯವರು “ಬೇಡ್ತಿ- ಅಘನಾಶಿನಿ ಕಣಿವೆ ರಕ್ಷಣಾ ಆಂದೋಲನವು ಸಕಾರಾತ್ಮಕ, ಅಹಿಂಸಾತ್ಮಕ, ಪ್ರಬಲವಾಗಿ ಮುಂದುವರೆಯಲಿದೆ. ಎಲ್ಲ ಸಮುದಾಯಗಳ ಒಗ್ಗೂಡುವಿಕೆ, ದೀರ್ಘವಾದ ಛಳುವಳಿಯಾಗಿ ಮುಂದುವರೆಯಲಿದೆ. ವಿವಿಧ ಮುಖಗಳಲ್ಲಿ ಹೋರಾಟ ನಡೆಸಲಿದ್ದೇವೆ”. ಎಂದು ಘೋಷಿಸಿದರು.
ಗಂಗಾಷ್ಟಮಿ, ಶಿವರಾತ್ರಿ ಮುಂತಾದ ವಿಶೇಷ ಸಂದರ್ಭಗಳಲ್ಲಿ ನದೀ ಪೂಜೆ ನಡೆಸಲು ಪೂಜ್ಯ ಸ್ವಾಮೀಜಿ ಕರೆ ನೀಡಿದರು. “ಸಹ್ಯಾದ್ರಿ ಉಳಿವಿಗೆ ಘಟ್ಟಪ್ರದೇಶದ ಜನಪ್ರತಿನಿಧಿಗಳು ಒಗ್ಗಟ್ಟಾಗಲೇಬೇಕು” ಎಂದು ಅವರು ಅಭಿಪ್ರಾಯಪಟ್ಟರು.
ಕಾನೂನು ತಜ್ಞರ ತಂಡ, ಸಾಮಾಜಿಕ ಮಾದ್ಯಮ ಸೇರಿದಂತೆ ವಿವಿಧ ಕಾರ್ಯತಂಡ ರಚಿಸಲಾಯಿತು. ನದೀ ತಿರುವು ವಿಷಯ ರಾಜಕೀಕರಣಗೊಳಿಸಬಾರದು ಎಂದು ಸಭೆ ಒಕ್ಕೊರಲ ಆಗ್ರಹ ಮಾಡಿತು.
ಶ್ರೀಮನ್ನೆಲೆಮಾವು ಮಠದಲ್ಲಿ ಜನವರಿ ೨೭ ರಂದು ಮಧ್ಯಾಹ್ನ ೩ ಘಂಟೆಗೆ ಅಘನಾಶಿನಿ ಪ್ರದೇಶದ ಕಾರ್ಯಕರ್ತರ ಸಭೆ ಏರ್ಪಡಿಸುತ್ತೇವೆ ಎಂದು ನೆಲೆಮಾವು ಮಠದ ಅಧ್ಯಕ್ಷ ಜಿ.ಎಂ. ಹೆಗಡೆ ಹೆಗ್ನೂರು ತಿಳಿಸಿದರು.
ರಾಘವೇಂದ್ರ ಭಟ್ ಹಾಸಣಗಿ ಅವರು ಸದ್ಯದಲ್ಲೇ ಯಲ್ಲಾಪುರ ಅರಣ್ಯ ಅಧಿಕಾರಿಗಳಿಗೆ ನದೀ ತಿರುವು ಸರ್ವೇಗೆ ಅವಕಾಶ ನೀಡದಂತೆ ಹಕ್ಕೊತ್ತಾಯ ಮಾಡಲಿದ್ದೇವೆ ಎಂದು ತಿಳಿಸಿದರು.
ಸಹಸ್ರಲಿಂಗದಲ್ಲಿ ಶಿವರಾತ್ರಿಯಂದು ಶಾಲ್ಮಲಾಉಳಿಸಿ ಕಾರ್ಯಕರ್ತರು ನದೀ ಪೂಜೆ ನಡೆಸಲಿದ್ದಾರೆ ಎಂದು ಶಾಲ್ಮಲಾ ಉಪಸಮೀತಿ ಗೌರವ ಸಂಚಾಲಕ ಆರ್,ಎಸ್.ಹೆಗಡೆ ಭೈರುಂಬೆ ತಿಳಿಸಿದರು. ಪಂಚಾಯತಿ ಸದಸ್ಯ ಕಿರಣ್ ಭಟ್ ವೈಜ್ಞಾನಿಕ ಮಾಹಿತಿ ಉಳ್ಳ ವೀಡಿಯೋ ಪ್ರಕಟಿಸಿದರು.
ಬಾಲಚಂದ್ರ ಸಾಯಿಮನೆ, ನರಸಿಂಹ ವಾನಳ್ಳಿ, ಶ್ರೀಪಾದ್ ಶಿರನಾಲಾ, ಶೀಗೆಹಳ್ಳಿ ವಿಶ್ವನಾಥ, ಮಹೇಶ ಮುಕ್ರಮನೆ, ಬಾಲು ಹುಡ್ಲಮನೆ, ಶ್ರೀಧರ ಹಿರೇಹದ್ದ, ಡಾ| ಕೇಶವ ಕೊರ್ಸೆ, ನಾರಾಯಣ ಭಟ್ರಕೇರಿ, ಅನಂತಮೂರ್ತಿ ಹೆಗಡೆ ಇನ್ನಿತರರು ಅಭಿಪ್ರಾಯ ಮಂಡಿಸಿದರು.
ವಿ.ಎನ್ ಹೆಗಡೆ ಬೊಮ್ಮನಳ್ಳಿ ಸ್ವಾಗತಿಸಿದರು, ಅನಂತ ಹೆಗಡೆ ಅಶೀಸರ ಮುಂದಿನ ಹೊರಾಟದ ಸ್ವರೂಪ ಮಂಡಿಸಿದರು. ಸಂಚಾಲಕ ಅನಂತ ಹುಳಗೋಳ ನಿರ್ಣಯ ಮಂಡಿಸಿದರು, ಗಣಪತಿ ಬಿಸಲಕೊಪ್ಪ ಸಮಾವೇಶದ ಲೆಕ್ಕಪತ್ರ ಮಂಡಿಸಿದರು. ಸಂಚಾಲಕ ಲೋಕೇಶ ಹೆಗಡೆ ವಂದನೆ ಹೇಳಿದರು.
ಕೈಗೊಂಡ ಮುಖ್ಯ ನಿರ್ಣಯಗಳು ಈ ಕೆಳಗೆ ಇವೆ.
೧) ಶಿರಸಿಯ ಪಶ್ಚಿಮ ಘಟ್ಟ ಉಳಿಸಿ ಸಮಾವೇಶ ಸಂಘಟಿಸಲು ನಿರಂತರ ೨ ತಿಂಗಳು ಶ್ರಮವಹಿಸಿರುವ ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮೀತಿಯ ಎಲ್ಲ ಪ್ರಮುಖರು, ೪೦೦ ಕ್ಕೂ ಹೆಚ್ಚು ಕಾರ್ಯಕರ್ತರಿಗೆ, ಮಾತೆಯರಿಗೆ, ದಾನಿಗಳಿಗೆ, ಸಹಕಾರೀ ಸಂಘಗಳಿಗೆ, ಮಾಧ್ಯಮ ಮಿತ್ರರಿಗೆ ಅನಂತ ಕೃತಜ್ಞತೆಗಳನ್ನು ಸಲ್ಲಿಸುವ ನಿರ್ಣಯ ಕೈಗೊಳ್ಳಲಾಗಿದೆ.
೨) ಅದೇ ರೀತಿ ೨೪ ಸಾವಿರ ಜನತೆ ಉ.ಕ ಜಿಲ್ಲೆ ಹಾಗೂ ಸುತ್ತಲಿನ ಜಿಲ್ಲೆಗಳಿಂದ ಬಂದು ಬೇಡ್ತಿ-ಅಘನಾಶಿನಿ ಶರಾವತಿ ಕಣಿವೆ ರಕ್ಷಣೆಗೆ ಬೆಂಬಲ ನೀಡಿದ್ದಕ್ಕೆ ಧನ್ಯವಾದಗಳನ್ನು ನೀಡುವ ನಿರ್ಣಯ ಕೈಗೊಳ್ಳಲಾಗಿದೆ. ಪರಮಪೂಜ್ಯ ಮಠಾಧೀಶರು, ಜನಪ್ರತಿನಿಧಿಗಳು, ವಿವಿಧ ಸಮುದಾಯಗಳ ಪ್ರಮುಖರು, ಸಂಘ-ಸAಸ್ಥೆಗಳ ಬೆಂಬಲ ಪಾಲ್ಗೊಳ್ಳುವಿಕೆ ಅನನ್ಯವಾಗಿತ್ತು. ಎಂದು ಬೇಡ್ತಿ ಸಮೀತಿ ಶ್ಲಾಘಿಸಿದೆ.
೩) ಇದೀಗ ಬೇಡ್ತಿ ಅಘನಾಶಿನಿ, ಶರಾವತಿ ಕಣಿವೆ ರಕ್ಷಣೆಯ ಜವಾಬ್ದಾರಿ ನೇರವಾಗಿ ಉ.ಕ ಜಿಲ್ಲೆ ಹಾಗೂ ಪಶ್ಚಿಮ ಘಟ್ಟದ ಜನ ಪ್ರತಿನಿಧಿಗಳ ಮೇಲಿದೆ. ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಏಕಧ್ವನಿಯಿಂದ ಬೇಡ್ತಿ- ಅಘನಾಶಿನಿ ನದೀ ತಿರುವು ಯೋಜನೆಗಳನ್ನು ಸರ್ಕಾರ ಕೈಬಿಡುವಂತೆ ಕಾರ್ಯತತ್ಪರರಾಗಬೇಕು.
೪) ನದಿ ತಿರುವು ಯೋಜನೆ ವಿರೋಧದ ಸಂದರ್ಭದಲ್ಲಿ ಯಾವುದೇ ರಾಜಕೀಯ ಹೇಳಿಕೆ, ಪ್ರತಿಹೇಳಿಕೆಗೆ ಆಸ್ಪದ ನೀಡಬಾರದು. ಇದರಿಂದ ಯಾರಿಗೂ ಲಾಭವಿಲ್ಲ. ವಾಸ್ತವವಾಗಿ ಭಾರತ ಸರ್ಕಾರ ಹಾಗೂ ಕರ್ನಾಟಕ ಸರ್ಕಾರ ಇವುಗಳ ಜಂಟಿ ಜವಬ್ದಾರಿಯಲ್ಲೇ ಬೇಡ್ತಿ-ಅಘನಾಶಿನಿ ನದೀ ತಿರುವು ಯೋಜನೆಗಳು ಇವೆ ಎಂಬುದನ್ನು ರಾಜಕೀಯ ಮುಖಂಡರು ಮನಗಾಣಬೇಕು. ಜಿಲ್ಲೆಯ ಎಲ್ಲ ಜನ ಪ್ರತಿನಿಧಿಗಳು ಒಗ್ಗಟ್ಟಾದರೆ ಈ ಸಮಸ್ಯೆಯು ಪರಿಹಾರವಾಗಲು ಕಷ್ಟವಿಲ್ಲ.
ಈಗ ಉ.ಕ ಜಿಲ್ಲೆಯ ಸಚಿವರು ಸಂಸದರು, ಶಾಸಕರು ಎಲ್ಲರೂ ಒಟ್ಟಾಗಿ ದೆಹಲಿ & ಬೆಂಗಳೂರಲ್ಲಿ ನಮ್ಮ ಬೇಡಿಕೆ ಈಡೇರಿಕೆಗೆ ಕಾರ್ಯತತ್ಪರರಾಗಬೇಕು ಎಂದು ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮೀತಿಯ ವಿಶೇಷ ಸಭೆ ಆಗ್ರಹದ ಮನವಿ ಮಾಡಿದೆ.
೫) ಬೇಡ್ತಿ (ಗಂಗಾವಳಿ) ಅಘನಾಶಿನಿ ನದಿಗಳ ಕರಾವಳೀ ತೀರಗಳಲ್ಲಿ ಜಾಗೃತಿ ನಡೆಸಲು ನಿರ್ಧರಿಸಲಾಗಿದೆ. ವಿವಿಧ ಮುಖಗಳಲ್ಲಿ ಜನಾಂದೋಲನ ಚುರುಕುಗೊಳಿಸಲು ಸ್ಥಾನಿಕವಾಗಿ ಹಾಗೂ ಜಿಲ್ಲಾ- ರಾಜ್ಯಮಟ್ಟದಲ್ಲಿ ಇನ್ನಷ್ಟು ಜಾಗೃತಿ ನಡೆಸಲು ಕಾರ್ಯಕ್ರಮಗಳನ್ನು ರೂಪಿಸಲು ಸಮೀತಿ ನಿರ್ಧರಿಸಿದೆ.