ಬೇಡ್ತಿ-ವರದಾ ನದಿ ತಿರುವು ಯೋಜನೆ: ಬೆಳವಡಿ ಮಲ್ಲಮ್ಮನ ಜನ್ಮ ಸ್ಥಳ ರಕ್ಷಿಸುವಂತೆ ದೇವೇಂದ್ರ ಫಡ್ನವಿಸ್‌ಗೆ ಪತ್ರ

Jan 18, 2026 - 10:47
 0  111
ಬೇಡ್ತಿ-ವರದಾ ನದಿ ತಿರುವು ಯೋಜನೆ: ಬೆಳವಡಿ ಮಲ್ಲಮ್ಮನ ಜನ್ಮ ಸ್ಥಳ ರಕ್ಷಿಸುವಂತೆ ದೇವೇಂದ್ರ ಫಡ್ನವಿಸ್‌ಗೆ ಪತ್ರ
ಆಪ್ತ ವಿಶೇಷ
***************************

ಬೇಡ್ತಿ–ವರದಾ ನದಿ ಸಂಪರ್ಕ ಯೋಜನೆಯಿಂದ ಅಪಾಯಕ್ಕೀಡಾಗಿರುವ ಛತ್ರಪತಿ ಶಿವಾಜಿ ಮಹಾರಾಜರ ಮಾನ್ಯ (ಅಂಗೀಕೃತ) ಸಹೋದರಿ ವೀರಾಂಗನೆ ಬೆಳವಡಿ ಮಲ್ಲಮ್ಮ ಅವರ ಜನ್ಮಸ್ಥಳದ ರಕ್ಷಣೆಗೆ ಸಂಬಂಧಿಸಿ ಕರ್ನಾಟಕ   ಮತ್ತು ಕೇಂದ್ರ ಸರ್ಕಾರ ದೊಂದಿಗೆ ಹಸ್ತಕ್ಷೇಪ ಮಾಡುವಂತೆ ಆಗ್ರಹಿಸಿ ಶಿರಸಿಯ ವೈದ್ಯರಾದ ಡಾ. ರವಿಕಿರಣ ಪಟವರ್ಧನ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ
ದೇವೇಂದ್ರ ಫಡಣವಿಸ್ ಅವರಿಗೆ ಪತ್ರ ಬರೆಯುವ ಮೂಲಕ ಆಗ್ರಹಿಸಿದ್ದಾರೆ.
ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಶಿರಸಿ–ಸೋಂದಾ ಮಹಂತಿ ಮಠವು ವೀರಾಂಗನೆ ಬೆಳವಡಿ ಮಲ್ಲಮ್ಮ ಅವರ ಜನ್ಮಸ್ಥಳವೆಂದು ಐತಿಹಾಸಿಕವಾಗಿ ಗುರುತಿಸಲ್ಪಟ್ಟಿದೆ. ಮುಘಲ್ ಹಾಗೂ ಆದಿಲಶಾಹಿ ಆಳ್ವಿಕೆಯ ವಿರುದ್ಧ ಶೌರ್ಯದಿಂದ ಹೋರಾಡಿದ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಸಹೋದರಿಯಾಗಿ ಗೌರವಿಸಲ್ಪಟ್ಟ ಈ ಮಹಾನ್ ವೀರಮಹಿಳೆಯ ಇತಿಹಾಸವು ಸಂಪೂರ್ಣ ಮಹಾರಾಷ್ಟ್ರಕ್ಕೆ ಹೆಮ್ಮೆಯ ವಿಷಯವಾಗಿದೆ.
 
ಪ್ರಸ್ತುತ ಪ್ರಸ್ತಾವಿತವಾಗಿರುವ ಬೇಡ್ತಿ–ವರದಾ ನದಿ ಸಂಪರ್ಕ ಯೋಜನೆಯಿಂದ ಈ ಪವಿತ್ರ ಹಾಗೂ ಐತಿಹಾಸಿಕ ಸ್ಥಳವು ನೀರಿನಡಿ ಮುಳುಗುವ ಗಂಭೀರ ಅಪಾಯವನ್ನು ಎದುರಿಸುತ್ತಿದೆ. ಈ ಜನ್ಮಸ್ಥಳ ನಾಶವಾದರೆ, ಕೇವಲ ಒಂದು ಭೌಗೋಳಿಕ ಪ್ರದೇಶವಷ್ಟೇ ಅಲ್ಲ, ಬದಲಾಗಿ ಇತಿಹಾಸದ, ಮಹಿಳಾ ಶೌರ್ಯದ ಮತ್ತು ರಾಷ್ಟ್ರೀಯ ಪರಂಪರೆಯ ಅಮೂಲ್ಯ ಧನವನ್ನು ನಾವು ಕಳೆದುಕೊಳ್ಳುವಂತಾಗುತ್ತದೆ.
 
ಇತಿಹಾಸದಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ವೀರಾಂಗನೆ ಬೆಳವಡಿ ಮಲ್ಲಮ್ಮರನ್ನು ಉದ್ದೇಶಿಸಿ “ನೀನು ಸಾಕ್ಷಾತ್ ಜಗದಂಬೆಯೇ” ಎಂದು ಪ್ರಶಂಸಿಸಿದ್ದರೆಂಬ ಮಾತುಗಳು ಕೇಳಿಬರುತ್ತವೆ.
 
ಮಹಾರಾಷ್ಟ್ರವು ಸದಾ ಛತ್ರಪತಿ ಶಿವಾಜಿ ಮಹಾರಾಜರ ಆದರ್ಶಗಳು, ಅವರ ಸಹಚರರು ಹಾಗೂ ಕುಟುಂಬ ಸದಸ್ಯರ ಗೌರವವನ್ನು ಕಾಪಾಡಿಕೊಂಡು ಬಂದಿದೆ. ಈ ಹಿನ್ನೆಲೆಯಲ್ಲಿಯೇ, ಮಾನ್ಯರೆ, ನಿಮ್ಮನ್ನು ವಿನಮ್ರವಾಗಿ ವಿನಂತಿಸಿಕೊಳ್ಳುವುದೇನೆಂದರೆ —
 
* ಕರ್ನಾಟಕ ಮತ್ತು ಕೇಂದ್ರ ಸರ್ಕಾರದೊಂದಿಗೆ ಅಧಿಕೃತ ಮಟ್ಟದಲ್ಲಿ ಸಂವಾದ ನಡೆಸಿ,
* ವೀರಾಂಗನೆ ಬೆಳವಡಿ ಮಲ್ಲಮ್ಮ ಅವರ ಮಾಹೇರು / ಜನ್ಮಸ್ಥಳವನ್ನು ಸಂರಕ್ಷಿತ ಹೇರಿಟೇಜ್ ಸ್ಥಳವೆಂದು ಘೋಷಿಸುವಂತೆ,
* ಯೋಜನೆ ನಿಲ್ಲಿಸಿ ಈ ಐತಿಹಾಸಿಕ ಸ್ಥಳವನ್ನು ಉಳಿಸುವಂತೆ,
•  ಈ ಯೋಜನೆಯನ್ನು ಸ್ಥಗಿತಗೊಳಿಸುವ ಕುರಿತು ಕೇಂದ್ರ ಸರ್ಕಾರದ ಮೇಲೂ ಒತ್ತಾಯ ಮಾಡುವಂತೆ
 
ನಿಮ್ಮ ಮಾನ್ಯ ನಾಯಕತ್ವ ಮುಂದಾಳತ್ವ ವಹಿಸಬೇಕೆಂದು ಕೋರುತ್ತೇವೆ.
ಇದು ಕೇವಲ ಕರ್ನಾಟಕ ರಾಜ್ಯದ ವಿಷಯವಲ್ಲ; ಇದು ಮಹಾರಾಷ್ಟ್ರದ ಅಸ್ಮಿತೆಗೆ, ಛತ್ರಪತಿ ಶಿವಾಜಿ ಮಹಾರಾಜರ ಇತಿಹಾಸಕ್ಕೆ ಹಾಗೂ ಭಾರತೀಯ ಮಹಿಳಾ ಶೌರ್ಯದ ಪರಂಪರೆಗೆ ಸಂಬಂಧಿಸಿದ ಅತ್ಯಂತ ಮಹತ್ವದ ವಿಚಾರ ಎಂಬುದು ನಮ್ಮ ದೃಢ ನಂಬಿಕೆ.
 
ಈ ವಿಷಯದತ್ತ ನೀವು ತ್ವರಿತವಾಗಿ ಗಮನ ಹರಿಸುವಿರಿ ಎಂಬ ವಿಶ್ವಾಸದೊಂದಿಗೆ ಈ ವಿನಂತಿಪತ್ರವನ್ನು ಸಲ್ಲಿಸುತ್ತಿದ್ದೇವೆ ಎಂದು ಡಾ. ರವಿಕಿರಣ ಪಟವರ್ಧನ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಈ ಮೂಲಕ ಬೇಡ್ತಿ-ವರದಾ ನದಿ ತಿರುವು ಯೋಜನೆಗೆ ಸಂಬಂಧಿಸಿದಂತೆ ಚೆಂಡು ಮಹಾರಾಷ್ಟ್ರದ ಅಂಗಳಕ್ಕೂ ಹೋಗಿ ನಿಂತಂತಾಗಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0