ನದಿ ತಿರುವು ಪ್ರಕೃತಿಯ ಮೇಲಿನ ಹಿಂಸಾಚಾರ; ನಮ್ಮ ಮಕ್ಕಳ ಬದುಕಿಗಾಗಿ ಹೋರಾಟ ಅನಿವಾರ್ಯ: ನೆಲೆಮಾವು ಶ್ರೀ
ಆಪ್ತ ನ್ಯೂಸ್ ಶಿರಸಿ:
"ನದಿ ತಿರುವು ಎನ್ನುವುದು ಪ್ರಕೃತಿಯ ಮೇಲಿನ ಹಿಂಸಾಚಾರವಿದ್ದಂತೆ. ಪಶ್ಚಿಮ ಘಟ್ಟಕ್ಕೆ ಗಾಯವಾದರೆ ಅದರ ನೋವನ್ನು ಇಡೀ ದೇಶವೇ ಅನುಭವಿಸಬೇಕಾಗುತ್ತದೆ. ಆದ್ದರಿಂದ ನಮ್ಮ ಮುಂದಿನ ಭವಿಷ್ಯಕ್ಕಾಗಿ ಮತ್ತು ಮಕ್ಕಳ ಬದುಕಿಗಾಗಿ ಈ ಯೋಜನೆಯನ್ನು ವಿರೋಧಿಸುವುದು ಅನಿವಾರ್ಯ," ಎಂದು ನೆಲೆಮಾವು ಮಠದ ಶ್ರೀ ಮಾಧವಾನಂದ ಭಾರತಿ ಸ್ವಾಮೀಜಿಗಳು ಎಚ್ಚರಿಸಿದ್ದಾರೆ.
ನದಿ ತಿರುವು ಯೋಜನೆಯ ಕುರಿತು ತಮ್ಮ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಮಾತನಾಡಿರುವ ಅವರು, ಅಭಿವೃದ್ಧಿ ಮತ್ತು ಪ್ರಗತಿಯ ವ್ಯಾಖ್ಯಾನವನ್ನು ಮರುಪರಿಶೀಲಿಸುವಂತೆ ಸಲಹೆ ನೀಡಿದ್ದಾರೆ. "ಒಳ್ಳೆಯ ಉದ್ದೇಶವನ್ನಿಟ್ಟುಕೊಂಡು, ಇನ್ನೊಬ್ಬರ ಬದುಕಿಗೆ ಹಾನಿ ಉಂಟುಮಾಡದಂತೆ ಕಾರ್ಯನಿರ್ವಹಿಸುವುದೇ ನಿಜವಾದ ಪ್ರಗತಿ. ಜನರ ಬದುಕನ್ನು ಕಸಿದುಕೊಳ್ಳುವುದು ಅಥವಾ ಅವರ ಜೀವನಕ್ಕೆ ತೊಂದರೆ ಉಂಟುಮಾಡುವುದು ಖಂಡಿತವಾಗಿಯೂ ಪ್ರಗತಿಯಲ್ಲ," ಎಂದು ಶ್ರೀಗಳು ಸ್ಪಷ್ಟಪಡಿಸಿದರು.
ಪ್ರಕೃತಿ ವಿಕೋಪದ ಎಚ್ಚರಿಕೆ:
ಪ್ರಸ್ತುತ ಸನ್ನಿವೇಶದ ಬಗ್ಗೆ ಕಳವಳ ವ್ಯಕ್ತಪಡಿಸಿದ ಶ್ರೀಗಳು, "ನಾವು ಈಗಾಗಲೇ ಹಲವು ಪ್ರಕೃತಿ ವಿಕೋಪಗಳನ್ನು ಕಣ್ಣಾರೆ ಕಾಣುತ್ತಿದ್ದೇವೆ. ಇಂತಹ ಸೂಕ್ಷ್ಮ ಸಂದರ್ಭದಲ್ಲಿ ನದಿ ತಿರುವು ಯೋಜನೆಗಳನ್ನು ಜಾರಿಗೊಳಿಸಿದರೆ ಇನ್ನೆಷ್ಟು ದೊಡ್ಡ ಅನಾಹುತಗಳು ಸಂಭವಿಸಬಹುದು ಎಂಬುದನ್ನು ಪ್ರತಿಯೊಬ್ಬರೂ ಯೋಚಿಸಬೇಕು," ಎಂದು ಎಚ್ಚರಿಕೆ ನೀಡಿದರು.
ಸ್ಥಳೀಯರೊಂದಿಗೆ ಚರ್ಚೆ ಅಗತ್ಯ:
ಯಾವುದೇ ಯೋಜನೆಯನ್ನು ಜಾರಿಗೊಳಿಸುವ ಮುನ್ನ ಸ್ಥಳೀಯರೊಂದಿಗೆ ವಿಚಾರ ವಿನಿಮಯ ಮಾಡುವುದು ಅತ್ಯಗತ್ಯ. ಸಾಧಕ-ಬಾಧಕಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕು. ಜನರಿಗೆ ಒಳ್ಳೆಯದಾಗುತ್ತದೆ ಎಂದಾದರೆ, ಅವರಿಗೆ ಅಗತ್ಯವಿರುವುದನ್ನು ಮಾತ್ರ ಕೊಡಬೇಕು ಎಂದು ಅವರು ಪ್ರತಿಪಾದಿಸಿದರು.
ಪುಣ್ಯಭೂಮಿ ರಕ್ಷಣೆಗೆ ಕರೆ:
"ಈ ಪುಣ್ಯಭೂಮಿಯನ್ನು ಮುಳುಗಿಸಿ, ಇನ್ನೊಂದು ನಾಡಿಗೆ ಒಳ್ಳೆಯದನ್ನು ಮಾಡುತ್ತೇವೆ ಎನ್ನುವ ವಾದ ಪ್ರಕೃತಿ ನಿಯಮಕ್ಕೆ ವಿರುದ್ಧವಾದುದು. ನಮ್ಮ ಹುಟ್ಟೂರನ್ನು ಉಳಿಸಿಕೊಳ್ಳಲು ಹೋರಾಟ ಮಾಡುವುದು ಇಂದಿನ ಪರಿಸ್ಥಿತಿಯಲ್ಲಿ ಅನಿವಾರ್ಯವಾಗಿದೆ," ಎಂದು ನೆಲೆಮಾವು ಶ್ರೀಗಳು ಕರೆ ನೀಡಿದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0



