🖊️ ಕೃಷ್ಣ ಭಟ್
ಭಾಗ-೧
**************
ಬೇಡ್ತಿ-ವರದಾ ನದಿ ಜೋಡಣೆ ಯೋಜನೆಗೆ ಈ ಹಿಂದೆ ಒಮ್ಮೆ ಡಿಪಿಆರ್ ಮಾಡಲಾಗಿತ್ತು. 2017 ರಲ್ಲಿ ತಯಾರಿಸಿದ FSR ಅಂದರೆ ಫೀಸಿಬಿಲಿಟಿ ರಿಪೋರ್ಟ್ ಆಧರಿಸಿ, 2021 ರಲ್ಲಿ ಡಿಪಿಆರ್ ಸಿದ್ಧಪಡಿಸಲಾಗಿತ್ತು. ಆ ಡಿಪಿಆರ್ ಗಮನಿಸಿದರೆ ಈ ಇಡೀ ಯೋಜನೆಯನ್ನು ಎಷ್ಟು ಅವೈಜ್ಞಾನಿಕವಾಗಿ ಯೋಜಿಸಲಾಗಿದೆ ಎಂದು ತಿಳಿಯುತ್ತದೆ. ಒಂದು ಡಿಪಿಆರ್ ಹೇಗೆ ಇರಬಾರದು ಎಂಬುದಕ್ಕೆ ಎಲ್ಲ ಉದಾಹರಣೆಗಳೂ ಇದರಲ್ಲಿ ಸಿಗುತ್ತವೆ.
ನನಗೆ ಕಂಡ ಕೆಲವು ಅಂಶಗಳನ್ನು ಇಲ್ಲಿ ವಿವರಿಸಿದ್ದೇನೆ. ಇನ್ನೂ ಕೂಲಂಕಷವಾಗಿ ಗಮನಿಸಿದರೆ ಇನ್ನಷ್ಟು ಲೋಪಗಳು ಸಿಗಬಹುದು.
ಇಡೀ ಡಿಪಿಆರ್‌ನಲ್ಲಿ ಡೇಟಾ ಕುರಿತಂತೆ ಹಲವು ಸಮಸ್ಯೆಗಳಿವೆ. 1ನೇ ಚಾಪ್ಟರ್‌ನಲ್ಲಿ ಲಿಂಕ್ 2 (ಲಿಂಕ್ 1 ಮತ್ತು ಲಿಂಕ್ 2 ಯಾವುದು ಎಂದು ನೋಡಲು ಈ ಹಿಂದೆ ಇದೇ ವಿಷಯದ ಲೇಖನವನ್ನು ನೋಡಬಹುದು) ಯೋಜನೆಯಲ್ಲಿ ನೀರನ್ನು 185 ಮೀ. ಮೇಲಕ್ಕೆ ಕೊಂಡೊಯ್ಯಬೇಕು ಎಂದಿದ್ದರೆ, ಚಾಪ್ಟರ್ 2 ಕ್ಕೆ ಬರುವಾಗ ಅದರ ಎತ್ತರ 220.76 ಮೀ. ಆಗುತ್ತದೆ. ಅದೇ ರೀತಿ, ಅಂದರೆ ಎಷ್ಟು ಉದ್ದದ ಪೈಪ್‌ಗಳನ್ನು ಹಾಕಬೇಕು ಎಂಬ ವಿಷಯದಲ್ಲೂ ಒಂದು ಕಡೆ 26.88 ಕಿ.ಮೀ ಎಂದಿದ್ದರೆ, ಇನ್ನೊಂದು ಕಡೆ 24.01 ಕಿ.ಮೀ ಆಗುತ್ತದೆ. ಎಷ್ಟು ಉದ್ದಕ್ಕೆ ಪೈಪ್ ಹಾಕಬೇಕು ಮತ್ತು ಎಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು ಎಂಬುದಲ್ಲ ಬದಲಾಗುವ ಸಂಗತಿಯೇ ಅಲ್ಲ. ಬ್ಯಾರೇಜ್‌ನ ಜಾಗ ಗುರುತಿಸಿದ ನಂತರ ಮತ್ತು ಅದನ್ನು ನದಿಗೆ ತೆರೆಯುವ ಸ್ಥಳವನ್ನು ಗುರುತಿಸಿದ ನಂತರ ಈ ದೂರ ಲೆಕ್ಕ ಹಾಕಿದರೆ ಅದರಲ್ಲಿ ಬದಲಾವಣೆ ಆಗಲು ಸಾಧ್ಯವೇ ಇಲ್ಲ. ಆದರೆ, ಈ ಡಿಪಿಆರ್‌ನಲ್ಲಿ ಬಹುಮುಖ್ಯ ಅಂಕಿಯೇ ಬದಲಾಗುತ್ತದೆ!
ಇದೇ ರೀತಿ ಬೇಡ್ತಿ ನದಿಯಲ್ಲಿ ಲಭ್ಯವಿರುವ ನೀರಿನ ಪ್ರಮಾಣದಲ್ಲೂ ಒಂದೊಂದು ಕಡೆ ಒಂದೊಂದು ಡೇಟಾ ಇದೆ. ಒಂದು 5877 ಮಿ.ಕ್ಯೂಬಿಕ್ ಮೀಟರ್ ಇದ್ದರೆ, ಇನ್ನೊಂದು ಕಡೆ 4927 ರಿಂದ 5213 MCM ಎಂದು ಬರೆದಿದ್ದಾರೆ.
ಇನ್ನೊಂದು ತಮಾಷೆಯ ಸಂಗತಿಯೆಂದರೆ, ನೀರಿನ ಬಳಕೆಯ ಪ್ರಮಾಣದಲ್ಲೇ ಫೀಸಿಬಿಲಿಟಿ ರಿಪೋರ್ಟ್‌ಗೂ ಡಿಪಿಆರ್‌ಗೂ ವ್ಯತ್ಯಾಸವಾಗಿದೆ. ಪಿಎಫ್‌ಆರ್‌ನಲ್ಲಿ ಲಿಂಕ್ 1 ರಿಂದ 242 ಎಂಸಿಎಂ ನೀರನ್ನು ಬಳಕೆ ಮಾಡುವ ಪ್ರಸ್ತಾಪವಿದ್ದರೆ, ಡಿಪಿಆರ್‌ನಲ್ಲಿ ಇದನ್ನು 302 ಎಂಸಿಎಂಗೆ ಏರಿಕೆ ಮಾಡಿದ್ದಾರೆ. ಆದರೆ, ಲಿಂಕ್ 2 ದಲ್ಲಿ 551 ಎಂಸಿಎಂ ಇಂದ 222 ಎಂಸಿಎಂಗೆ ಇಳಿಕೆ ಮಾಡಿದ್ದಾರೆ. ಇದಕ್ಕೆ ಡಿಪಿಆರ್‌ನಲ್ಲಿ ಯಾವ ಸರಿಯಾದ ಕಾರಣವನ್ನೂ ಕೊಟ್ಟಿಲ್ಲ.
ಇಡೀ ಪ್ರಾಜೆಕ್ಟ್‌ನಲ್ಲಿರುವ ಅತಿ ದೊಡ್ಡ ಯೋಜನಾ ಲೋಪ ಎಂದರೆ, ಫೀಲ್ಡ್ ಡೇಟಾ ಇಲ್ಲದೇ ಇರೋದು! ಅಂದರೆ, ಕ್ಷೇತ್ರಕ್ಕೆ ಹೋಗಿ ಅಲ್ಲಿನ ಭೌತಿಕವಾಗಿ ಏನನ್ನೂ ಅಳತೆ ಮಾಡದೇ, ಡಿಜಿಟಲ್ ಮ್ಯಾಪ್ ಇಟ್ಟುಕೊಂಡು ಇಡೀ ಪ್ರಾಜೆಕ್ಟ್ ತಯಾರಿಸಿದ್ದಾರೆ. ಭೂಮಿಯ ಬಗ್ಗೆ ಕಾರ್ಟೋಸ್ಯಾಟ್‌ನಂತಹ ಸ್ಯಾಟಲೈಟ್ ಕೊಟ್ಟ 3ಡಿ ಡೇಟಾ ಇಟ್ಟುಕೊಂಡು ಎಲ್ಲಿ ಬ್ಯಾರೇಜ್ ಕಟ್ಟಬೇಕು, ಎಲ್ಲಿಂದ ಎಲ್ಲಿಗೆ ಪೈಪ್ ಹಾಕಬೇಕು ಎಂದು ಗುರುತು ಮಾಡಿದ್ದಾರೆಯೇ ಹೊರತು, ಯಾವ ಸಮೀಕ್ಷೆಯನ್ನೂ ಈ ಭಾಗಕ್ಕೆ ಹೋಗಿ ಮಾಡಲಿಲ್ಲ. ಇದಕ್ಕೆ ಫೀಸಿಬಿಲಿಟಿ ರಿಪೋರ್ಟ್ ಹಾಗೂ ಡಿಪಿಆರ್‌ನಲ್ಲಿ ಕೊಟ್ಟ ಕಾರಣ “ಸ್ಥಳೀಯರ ಪ್ರತಿರೋಧ”! ಹೀಗೆ ಸ್ಥಳಕ್ಕೆ ಹೋಗಿ ಸಮೀಕ್ಷೆ ಮಾಡದೇ ಸ್ಯಾಟಲೈಟ್ ಮ್ಯಾಪ್ ಬಳಸಿದರೆ ಅದು ಕನಿಷ್ಠ 5 ಮೀಟರುಗಳವರೆಗೆ ವ್ಯತ್ಯಾಸ ಬರುತ್ತದೆ. ಡಿಪಿಆರ್‌ನಲ್ಲೇ ಒಂದು ಬ್ಯಾರೇಜ್ ಕಟ್ಟುವುದಕ್ಕೆ ಮಾಡಿದ ಯೋಜನೆಯಲ್ಲಿ 5 ಮೀಟರುಗಳಷ್ಟು ವ್ಯತ್ಯಾಸ ಉಂಟಾದರೆ, ಇಡೀ ಯೋಜನೆಯ ಹಣಕಾಸಿನ ವೆಚ್ಚದ ಮೇಲೆ ಭಾರಿ ಪರಿಣಾಮ ಬೀರುತ್ತೆ.
ಇನ್ನೊಂದು ಭಾರಿ ತಮಾಷೆಯ ಸಂಗತಿಯೆಂದರೆ, ನೀರಿನ ಗುಣಮಟ್ಟ ಅಳೆಯುವುದಕ್ಕೆ ಬಳಸಿದ ನೀರಿನ ಮಾದರಿ ಈ ನದಿಗಳದ್ದಲ್ಲವೇ ಅಲ್ಲ! ಬದಲಿಗೆ, ಕೆಲವು ಕಿಲೋಮೀಟರುಗಳಷ್ಟು ದೂರದಲ್ಲಿ, ಪಕ್ಕದ ಕುಮಟಾ ತಾಲೂಕಿನ ಸಂತೇಗುಳಿಯಲ್ಲಿ ಅಘನಾಶಿನಿ ನದಿಯಲ್ಲಿ ಅಳವಡಿಸಿರುವ ನೀರು ತಪಾಸಣಾ ಕೇಂದ್ರದಲ್ಲಿ ನೀರಿನ ಗುಣಮಟ್ಟ ತಪಾಸಣೆ ಮಾಡಲಾಗಿದೆ. ಅದೂ ಅಲ್ಲದೇ, ಈ ಬೇಡ್ತಿ ನದಿಯಲ್ಲಿ ನೀರಿನ ಗುಣಮಟ್ಟ ತಪಾಸಣೆಗಾಗಲೀ ನೀರಿನ ಹರಿವಿನ ಪ್ರಮಾಣವನ್ನು ಅಳೆಯುವುದಕ್ಕಾಗಲೀ ಯಾವ ಮಾಪನವೂ ಇಲ್ಲ. ಈ ಯೋಜನೆಯ ಪ್ರಸ್ತಾಪ 80 ರ ದಶಕದಿಂದ ಇದ್ದರೂ, ಇಲ್ಲಿ ಒಂದು ನೀರಿನ ಹರಿವಿನ ಪ್ರಮಾಣ ಅಳೆಯುವ ಮಾಪನವನ್ನು ಅಳವಡಿಸುವುದಕ್ಕೆ ಸರ್ಕಾರ ಇಷ್ಟು ನಿರ್ಲಕ್ಷ್ಯ ಮಾಡಿದ್ದು ಯಾಕೆ ಎಂದು ಯಾರಿಗೂ ಗೊತ್ತಿಲ್ಲ. ಈ ಇಡೀ ಡಿಪಿಆರ್ ಅನ್ನು ಮಳೆ ಮಾಪನದ ಡೇಟಾ ತೆಗೆದುಕೊಂಡು, ನದಿ ಪಾತ್ರದಲ್ಲಿ ಮಳೆ ಬೀಳುವ ಪ್ರಮಾಣದ ಆಧಾರದಲ್ಲಿ ನದಿಯಲ್ಲಿ ಇಷ್ಟು ನೀರು ಹರಿಯುತ್ತದೆ ಎಂದು ಅಂದಾಜು ಮಾಡಲಾಗಿದೆಯೇ ಹೊರತು, ಅಸಲಿ ನದಿಯಲ್ಲಿ ಎಷ್ಟು ನೀರು ಹರಿಯುತ್ತಿದೆ ಎಂದು ಯಾವುದೇ ಮಾಪನವನ್ನೂ ಮಾಡಲೇ ಇಲ್ಲ!
ಇದರ ಜೊತೆಗೆ, ಡಿಪಿಆರ್‌ಗೂ ಮೊದಲು ಮಾಡಬೇಕಾದ ಕೆಲವು ಮಹತ್ವದ ಸಮೀಕ್ಷೆಗಳನ್ನು ಮಾಡಲೇ ಇಲ್ಲ. ಬದಲಿಗೆ, ಯೋಜನೆ ಜಾರಿ ಮಾಡುವುದಕ್ಕೂ ಮೊದಲು ಇದನ್ನು ಮಾಡಿಕೊಳ್ಳತಕ್ಕದ್ದು ಎಂದು ಒಂದು ಒಕ್ಕಣೆ ಬರೆದು ಕೈತೊಳೆದುಕೊಳ್ಳಲಾಗಿದೆ. ಉದಾಹರಣೆಗೆ, ಮಣ್ಣಿನ ತಪಾಸಣೆ, ಭೂತಾಂತ್ರಿಕ ತನಿಖೆಗಳು, ಖನಿಜದ ಸಮೀಕ್ಷೆ, ಪುರಾತತ್ವ ಸಮೀಕ್ಷೆ.... ಇವೆಲ್ಲ ಒಂದು ಡಿಪಿಆರ್ ಮಾಡುವುದಕ್ಕೂ ಮೊದಲು ಮಾಡಲೇಬೇಕಾದ ಸಮೀಕ್ಷೆಗಳಾಗಿದ್ದರೂ, ಇದನ್ನು ನಿರ್ಲಕ್ಷಿಸಲಾಗಿದೆ.