ಡ್ರಂಕ್ ಡ್ರೈವ್ ಪ್ರಕರಣದಲ್ಲಿ ಭಟ್ಕಳ ಗ್ರಾಮೀಣ ಠಾಣೆಯ ಸಿಪಿಐ ಅಮಾನತು
ಭ್ರಷ್ಟಾಚಾರ ಆರೋಪ: ಹೆಡ್ ಕಾನ್ಸ್ಟೆಬಲ್ ಮೇಲೂ ಕಠಿಣ ಕ್ರಮ
ಆಪ್ತ ನ್ಯೂಸ್ ಭಟ್ಕಳ:
ಡ್ರಂಕ್ ಅಂಡ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಭೀರ ಶಿಸ್ತುಲೋಪ ಮತ್ತು ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಸಿಪಿಐ ಮಂಜುನಾಥ್ ಲಿಂಗಾರೆಡ್ಡಿ ಅವರನ್ನು ಅಮಾನತು ಮಾಡಲಾಗಿದೆ. ಇದೇ ಪ್ರಕರಣದಲ್ಲಿ ಅವರಿಗೆ ಸಾಥ್ ನೀಡಿ ಅಕ್ರಮದಲ್ಲಿ ಭಾಗಿಯಾಗಿದ್ದ ಭಟ್ಕಳ ಮಂಕಿ ಮೂಲದ ಹೆಡ್ ಕಾನ್ಸ್ಟೆಬಲ್ ಅಶೋಕ್ ನಾಯ್ಕ್ ಅವರನ್ನೂ ಅಮಾನತು ಮಾಡಿ ಇಲಾಖೆ ಕಠಿಣ ಸಂದೇಶ ರವಾನಿಸಿದೆ.
ಪ್ರಾಥಮಿಕ ತನಿಖೆಯಲ್ಲಿ ಆರೋಪಗಳು ಸಾಬೀತಾದ ಹಿನ್ನೆಲೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಆದೇಶದಂತೆ ಈ ಕ್ರಮ ಕೈಗೊಳ್ಳಲಾಗಿದೆ. ಕೆಲ ದಿನಗಳ ಹಿಂದೆ ಸಿಪಿಐ ಮಂಜುನಾಥ್ ವಿರುದ್ಧ ಡ್ರಂಕ್ ಡ್ರೈವ್ ಪ್ರಕರಣ ದಾಖಲಾಗಿದ್ದು, ಈ ವೇಳೆ ಸಾರ್ವಜನಿಕರಿಂದ ರೂ.15,000 ದಂಡವನ್ನು ವಸೂಲಿ ಮಾಡಲಾಗಿತ್ತು.
ಆದರೆ, ವಸೂಲಿ ಮಾಡಿದ ದಂಡವನ್ನು ನಿಯಮಾನುಸಾರ ಕೋರ್ಟ್‌ಗೆ ಪಾವತಿಸದೇ ನಿರ್ಲಕ್ಷ್ಯ ವಹಿಸಲಾಗಿದ್ದು, ಈ ಗಂಭೀರ ಅಂಶ ತನಿಖೆಯಲ್ಲಿ ಬಹಿರಂಗವಾಗಿದೆ. ಡ್ರಂಕ್ ಅಂಡ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿ ಜುಲೈ ತಿಂಗಳಲ್ಲಿ ಸಿಪಿಐ ವಿರುದ್ಧ ಅಧಿಕೃತ ದೂರು ದಾಖಲಾಗಿತ್ತು.
ದೂರು ಆಧರಿಸಿ ಮೇಲಾಧಿಕಾರಿಗಳು ತನಿಖೆಗೆ ಸೂಚನೆ ನೀಡಿದ್ದು, ಪ್ರಾಥಮಿಕ ತನಿಖೆಯಲ್ಲಿ ಸಿಪಿಐ ಮಂಜುನಾಥ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ತನಿಖೆಯಲ್ಲಿ ಶಿಸ್ತುಲೋಪ ಸ್ಪಷ್ಟವಾಗಿ ಕಂಡುಬಂದ ಹಿನ್ನೆಲೆ ಅವರನ್ನು ಅಮಾನತು ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ.
ಇದೇ ಪ್ರಕರಣದಲ್ಲಿ ಸಿಪಿಐಗೆ ಸಾಥ್ ನೀಡಿದ್ದ ಮತ್ತೊಬ್ಬ ಪೊಲೀಸ್ ಸಿಬ್ಬಂದಿಯಾಗಿರುವ ಹೆಡ್ ಕಾನ್ಸ್ಟೆಬಲ್ ಅಶೋಕ್ ನಾಯ್ಕ್, ದೂರು ದಾಖಲಿಸದಂತೆ ದೂರುದಾರರನ್ನು ಬೆದರಿಸಿದ್ದ ಆರೋಪವೂ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಮೇಲೂ ಶಿಸ್ತು ಕ್ರಮವಾಗಿ ಅಮಾನತು ವಿಧಿಸಲಾಗಿದೆ.
ಡ್ರಂಕ್ ಡ್ರೈವ್ ಪ್ರಕರಣದಲ್ಲಿ ಸಾರ್ವಜನಿಕರನ್ನು ಬೆದರಿಸಿ ಹಣ ವಸೂಲಿ ಮಾಡಿರುವುದು, ಅದನ್ನು ಕೋರ್ಟ್‌ಗೆ ಜಮಾ ಮಾಡದೇ ಇರುವುದು ಮತ್ತು ದೂರು ತಡೆಯಲು ಯತ್ನಿಸಿರುವುದು ಅತ್ಯಂತ ಗಂಭೀರ ಶಿಸ್ತುಲೋಪ ಎಂದು ಪರಿಗಣಿಸಿ ಇಬ್ಬರು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಈ ಘಟನೆ ಪೊಲೀಸ್ ಇಲಾಖೆಯೊಳಗೆ ಭಾರೀ ಚರ್ಚೆಗೆ ಕಾರಣವಾಗಿದ್ದು, ಭ್ರಷ್ಟಾಚಾರ ಮತ್ತು ಅಕ್ರಮಗಳಿಗೆ ಯಾವ ಮಟ್ಟದ ಸಹಿಷ್ಣುತೆ ಇಲ್ಲ ಎಂಬುದನ್ನು ಇಲಾಖೆ ಸ್ಪಷ್ಟಪಡಿಸಿದೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



