ಸಮಾಜವನ್ನು ಒಡೆಯುವುದಲ್ಲ, ಹೊಲಿಯುವ ಕೆಲಸವಾಗಲಿ; ಜಾತಿ ಭಾವನೆ ಮೀರಿ ನಾವೆಲ್ಲರೂ ಒಂದಾಗೋಣ: ಬ್ರಹ್ಮಾನಂದ ಭಾರತೀ ಸ್ವಾಮೀಜಿ

ಕುಚಗುಂಡಿಯಲ್ಲಿ ಉಚಿತ ಹೊಲಿಗೆ ತರಬೇತಿ ಶಿಬಿರದ ಸಮಾರೋಪ | ಮಹಿಳೆಯರ ಸ್ವಾವಲಂಬನೆಗೆ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್‌ನಿಂದ ನೆರವು

Oct 27, 2026 - 21:30
 0  40
ಸಮಾಜವನ್ನು ಒಡೆಯುವುದಲ್ಲ, ಹೊಲಿಯುವ ಕೆಲಸವಾಗಲಿ; ಜಾತಿ ಭಾವನೆ ಮೀರಿ ನಾವೆಲ್ಲರೂ ಒಂದಾಗೋಣ: ಬ್ರಹ್ಮಾನಂದ ಭಾರತೀ ಸ್ವಾಮೀಜಿ

ಆಪ್ತ ನ್ಯೂಸ್ ಸಿದ್ದಾಪುರ:

ಸಮಾಜವನ್ನು ಜಾತಿಯ ಹೆಸರಿನಲ್ಲಿ ಒಡೆಯುವ ಕೆಲಸ ನಡೆಯುತ್ತಿದೆ. ಆದರೆ ಇಂದು ಸಮಾಜವನ್ನು ಕತ್ತರಿಸುವವರಿಗಿಂತ ಹೊಲಿಯುವವರ ಅಗತ್ಯ ಹೆಚ್ಚಿದೆ. ಜಾತಿ, ಭೇದಭಾವಗಳನ್ನು ಮೀರಿ ನಾವೆಲ್ಲರೂ ಒಂದು, ನಾವೆಲ್ಲರೂ ಬಂಧು, ನಾವೆಲ್ಲರೂ ಹಿಂದೂ ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಮೂಡಬೇಕು ಎಂದು ಚೈತನ್ಯ ರಾಜಾರಾಮ ಕ್ಷೇತ್ರ ಶಿರಳಗಿಯ ಬ್ರಹ್ಮಾನಂದ ಭಾರತೀ ಸ್ವಾಮೀಜಿ ಕರೆ ನೀಡಿದರು.

ತಾಲೂಕಿನ ಹಸರಗೋಡ ಪಂಚಾಯತ ವ್ಯಾಪ್ತಿಯ ಕುಚಗುಂಡಿಯಲ್ಲಿ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ 30 ದಿನಗಳ ಕಾಲ ಆಯೋಜಿಸಲಾಗಿದ್ದ ಉಚಿತ ಹೊಲಿಗೆ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಬಟ್ಟೆಯ ತುಂಡುಗಳನ್ನು ಹೊಲಿದು ಸುಂದರ ಉಡುಪನ್ನಾಗಿಸುವ ಹೊಲಿಗೆ ವಿದ್ಯೆಯಂತೆಯೇ, ಸಮಾಜದಲ್ಲಿನ ಭಿನ್ನಾಭಿಪ್ರಾಯಗಳನ್ನು ದೂರ ಮಾಡಿ ಜನರನ್ನು ಬೆಸೆಯುವ ಕಾರ್ಯವೂ ನಡೆಯಬೇಕು. ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಸಹಬಾಳ್ವೆಯಿಂದ ಸಮಾಜವನ್ನು ಕಟ್ಟುವ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂಬ ಆಶಯವನ್ನು ಸ್ವಾಮೀಜಿ ವ್ಯಕ್ತಪಡಿಸಿದರು.

ಪರೋಪಕಾರವೇ ಬದುಕಿನ ಸಾರ್ಥಕತೆ

ಇನ್ನೊಬ್ಬರಿಗೆ ಒಳ್ಳೆಯದನ್ನು ಮಾಡಬೇಕು ಎಂಬ ಯೋಚನೆ ಬರುವುದೇ ಪೂರ್ವಜನ್ಮದ ಪುಣ್ಯ. ಮತ್ತೊಬ್ಬರ ಯಶಸ್ಸನ್ನು ಕಂಡು ಸಂತೋಷಪಡುವವರು ವಿರಳ. ಕೆಲವರು ಇತರರ ಏಳಿಗೆಗೆ ಅಡ್ಡಗಾಲು ಹಾಕಲು ಪ್ರಯತ್ನಿಸುತ್ತಾರೆ. ಆದರೆ ಅದು ಧರ್ಮವಲ್ಲ. ಮತ್ತೊಬ್ಬರಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದರೂ ಅದನ್ನು ಭಗವಂತನ ಪೂಜೆಯೆಂದೇ ಪರಿಗಣಿಸುತ್ತಾನೆ. ಮನುಷ್ಯನ ಶರೀರ ಇರುವುದು ಪರೋಪಕಾರಕ್ಕಾಗಿ ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕು ಎಂದರು.

ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ಅನಂತಮೂರ್ತಿ ಹೆಗಡೆ ಅವರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಇಂತಹ ಕಾರ್ಯಗಳು ಇತರರಿಗೂ ಪ್ರೇರಣೆಯಾಗಬೇಕು. ಸಮಾಜದ ಒಳಿತಿನ ಮೂಲಕ ದೇಶ ಕಟ್ಟುವ ಕಾರ್ಯದಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಹೇಳಿದರು.

ಕುಟುಂಬವನ್ನು ಬೆಸೆಯುವ ಶಕ್ತಿ ಮಹಿಳೆಯರಲ್ಲಿದೆ

ಕುಟುಂಬದಲ್ಲಿ ಆತ್ಮೀಯತೆ ಮತ್ತು ಒಗ್ಗಟ್ಟು ಉಳಿಯುವಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. ಗೃಹಿಣಿಯರು ಮನೆಯ ಲವಲವಿಕೆ ಹಾಗೂ ನೆಮ್ಮದಿಯ ಕೇಂದ್ರವಾಗಿರುತ್ತಾರೆ. ಕುಟುಂಬವನ್ನು ಒಟ್ಟಾಗಿ ಕೊಂಡೊಯ್ಯುವ ಶಕ್ತಿ ಮಹಿಳೆಯರಲ್ಲಿದೆ. ಆದ್ದರಿಂದ ಮಹಿಳೆಯರು ಬಟ್ಟೆಗಳನ್ನು ಮಾತ್ರ ಹೊಲಿಯುವುದಕ್ಕೆ ಸೀಮಿತವಾಗದೆ, ಕುಟುಂಬದ ಸದಸ್ಯರ ನಡುವಿನ ಸಂಬಂಧಗಳನ್ನೂ ಬೆಸೆಯುವ ಕೆಲಸ ಮಾಡಬೇಕು ಎಂದು ಸ್ವಾಮೀಜಿ ಹೇಳಿದರು.

ಕುಟುಂಬದಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಆತ್ಮೀಯತೆ ಇದ್ದರೆ ಸಂಕಷ್ಟದ ಸಂದರ್ಭದಲ್ಲಿ ಮತ್ತೊಬ್ಬರ ಮುಂದೆ ಕೈಚಾಚುವ ಪರಿಸ್ಥಿತಿಯೂ ಕಡಿಮೆಯಾಗುತ್ತದೆ. ಸಮಾಜದಲ್ಲಿ ಮಾನಸಿಕ ಸ್ವಾಸ್ಥ್ಯ ಕುಸಿಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಕುಟುಂಬ ಹಾಗೂ ಸಾಮಾಜಿಕ ಸಂಬಂಧಗಳನ್ನು ಗಟ್ಟಿಗೊಳಿಸುವ ಮೂಲಕ ಇದನ್ನು ತಡೆಯಬೇಕು ಎಂದರು.

ಭಾರತೀಯ ಸಂಸ್ಕೃತಿಯನ್ನು ಒಡೆಯುವ ಪ್ರಯತ್ನಗಳಿಗೆ ಅವಕಾಶ ನೀಡಬಾರದು. ನಾವೆಲ್ಲರೂ ಒಂದೇ ಎಂಬ ಭಾವನೆ ಬೆಳೆಸಿಕೊಳ್ಳಬೇಕು. ಈ ಸಾಮರಸ್ಯದ ಭಾವನೆಗೆ ಊರಿನ ದೇವಸ್ಥಾನವೂ ಕೇಂದ್ರವಾಗಬಹುದು. ದೇವಸ್ಥಾನ ಸುಂದರವಾಗಿದ್ದರೆ ಊರಿನ ಸೌಂದರ್ಯವೂ ಹೆಚ್ಚುತ್ತದೆ. ಅಲ್ಲಿ ನಡೆಯುವ ಪೂಜೆ, ಧ್ಯಾನ ಹಾಗೂ ಧಾರ್ಮಿಕ ಚಟುವಟಿಕೆಗಳು ಜನರಲ್ಲಿ ನೆಮ್ಮದಿ ಮತ್ತು ಒಗ್ಗಟ್ಟನ್ನು ಬೆಳೆಸುತ್ತವೆ. ನಮ್ಮೂರಿನ ದೇವಸ್ಥಾನ ನಮ್ಮ ಸ್ವಾಭಿಮಾನ ಎಂಬ ಅಭಿಮಾನ ಎಲ್ಲರಲ್ಲೂ ಮೂಡಬೇಕು ಎಂದು ಆಶಿಸಿದರು.

ಹಳ್ಳಿಗಳು ಜೀವಂತವಾಗಿದ್ದರೆ ಪರಿಸರವೂ ಉಳಿಯುತ್ತದೆ

ಪತ್ರಕರ್ತ ಪ್ರವೀಣ ಹೆಗಡೆ ಕರ್ಜಗಿ ಮಾತನಾಡಿ, ಇಂದಿನ ಸಮಾಜಕ್ಕೆ ಅನಂತಮೂರ್ತಿ ಹೆಗಡೆ ಅವರಂತಹ ಸಮಾಜಮುಖಿ ಚಿಂತನೆಯುಳ್ಳ ವ್ಯಕ್ತಿಗಳ ಅಗತ್ಯವಿದೆ. ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮ ಸಂಸ್ಕಾರ ನೀಡಬೇಕು. ಹಳ್ಳಿಗಳಲ್ಲಿ ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿರುವುದರಿಂದ ಗ್ರಾಮೀಣ ಬದುಕು ಹಲವು ಸವಾಲುಗಳನ್ನು ಎದುರಿಸುತ್ತಿದೆ. ಕೃಷಿ ಮಾಡುವುದು ಕಷ್ಟವಾಗುತ್ತಿರುವ ಇಂದಿನ ಸಂದರ್ಭದಲ್ಲಿ ಹಳ್ಳಿಗಳನ್ನು ಉಳಿಸುವುದು ಅತ್ಯಗತ್ಯ ಎಂದರು.

ಹಳ್ಳಿಗಳು ಜೀವಂತವಾಗಿದ್ದರೆ ಮಾತ್ರ ಜಿಲ್ಲೆಯ ಪರಿಸರ ಮತ್ತು ನೈಸರ್ಗಿಕ ಸಂಪತ್ತು ಉಳಿಯಲು ಸಾಧ್ಯ. ಕೃಷಿಯನ್ನು ಉಳಿಸುವುದರ ಜತೆಗೆ ಗ್ರಾಮೀಣ ಭಾಗದಲ್ಲಿಯೇ ಉದ್ಯೋಗಾವಕಾಶಗಳನ್ನು ಸೃಷ್ಟಿಸಬೇಕು. ಬೆಂಗಳೂರಿಗೆ ತೆರಳಿಯೇ ದುಡಿಯಬೇಕೆಂದಿಲ್ಲ; ಸೂಕ್ತ ಕೌಶಲ್ಯ ಮತ್ತು ಅವಕಾಶಗಳಿದ್ದರೆ ಊರಿನಲ್ಲಿಯೇ ಉತ್ತಮ ಆದಾಯ ಗಳಿಸಬಹುದು ಎಂದು ಹೇಳಿದರು.

ಹೊಲಿಗೆ ತರಬೇತಿಯಂತಹ ಕೌಶಲ್ಯಾಧಾರಿತ ಕಾರ್ಯಕ್ರಮಗಳು ಮಹಿಳೆಯರು ಹಾಗೂ ಯುವಜನರಿಗೆ ಸ್ವಂತ ಉದ್ಯೋಗ ಆರಂಭಿಸಲು ನೆರವಾಗುತ್ತವೆ. ಇದರಿಂದ ಗ್ರಾಮೀಣ ಪ್ರದೇಶದಲ್ಲಿಯೇ ನೆಲೆಸಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ತರಬೇತಿ ಪಡೆದ ಮಹಿಳೆಯರು ಮುಂದಿನ ದಿನಗಳಲ್ಲಿ ಸ್ವಂತ ಉದ್ಯೋಗ ಆರಂಭಿಸಿ ಇತರರಿಗೂ ಮಾದರಿಯಾಗಬೇಕು. ಜೀವನದಲ್ಲಿ ಚಟಗಳಿಂದ ದೂರವಿದ್ದು ಆರೋಗ್ಯಕರ ಬದುಕು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮಹಿಳಾ ಸಬಲೀಕರಣಕ್ಕೆ ಮಹತ್ವದ ಕೊಡುಗೆ

ಹಸ್ರಗೋಡ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಪ್ರದೀಪ ಹೆಗಡೆ ಕರ್ಜಗಿ ಮಾತನಾಡಿ, ಸಮಾಜದ ಉನ್ನತಿ ಹಾಗೂ ಮಹಿಳೆಯರ ಸಬಲೀಕರಣಕ್ಕೆ ಅನಂತಮೂರ್ತಿ ಹೆಗಡೆ ಅವರ ಕೊಡುಗೆ ಅಪಾರವಾಗಿದೆ. ಉಚಿತ ಹೊಲಿಗೆ ತರಬೇತಿ ಶಿಬಿರದ ಮೂಲಕ ಮಹಿಳೆಯರು ಆರ್ಥಿಕವಾಗಿ ಸದೃಢರಾಗಲು ಮತ್ತು ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ಅವರು ಅವಕಾಶ ಕಲ್ಪಿಸಿದ್ದಾರೆ ಎಂದರು.

ಬಡತನದ ಸಂಕಷ್ಟದಿಂದ ಹೊರಬರಲು ಸ್ವಾವಲಂಬನೆ ಮುಖ್ಯ

ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಕುಚಗುಂಡಿ ಗ್ರಾಮದ ಜನರು ತಮ್ಮ ಮೇಲೆ ತೋರಿಸುತ್ತಿರುವ ಆತ್ಮೀಯತೆ ಮತ್ತು ಸಹಕಾರವನ್ನು ಸ್ಮರಿಸಿದರು. ಈ ಹಿಂದೆ ಇದೇ ಗ್ರಾಮದಲ್ಲಿ ವನಮಹೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದೀಗ ಮಹಿಳೆಯರ ಬದುಕಿಗೆ ನೆರವಾಗುವ ಉದ್ದೇಶದಿಂದ ಉಚಿತ ಹೊಲಿಗೆ ತರಬೇತಿ ಶಿಬಿರ ನಡೆಸಲಾಗಿದೆ ಎಂದು ತಿಳಿಸಿದರು.

ಅಡುಗೆ ಮತ್ತು ಹೊಲಿಗೆ ಎರಡೂ ಬದುಕಿನಲ್ಲಿ ಉಪಯುಕ್ತವಾದ ಕೌಶಲ್ಯಗಳು. ಇವುಗಳನ್ನು ಕಲಿತರೆ ಮಹಿಳೆಯರು ಸ್ವಾವಲಂಬಿಯಾಗಿ ಬದುಕಲು ನೆರವಾಗುತ್ತದೆ. ಅನಾರೋಗ್ಯ ಬಂದಾಗ ಚಿಕಿತ್ಸೆ ಪಡೆಯಬಹುದು. ಆದರೆ ಬಡತನದ ಸಂಕಷ್ಟವನ್ನು ಅನುಭವಿಸುವುದು ಅತ್ಯಂತ ಕಷ್ಟ. ಆರ್ಥಿಕ ಸಂಕಷ್ಟ ಎದುರಾದಾಗ ಅನೇಕ ಸಂಬಂಧಗಳು ದೂರವಾಗುವ ಪರಿಸ್ಥಿತಿಯೂ ನಿರ್ಮಾಣವಾಗುತ್ತದೆ. ಹೀಗಾಗಿ ಮಹಿಳೆಯರು ಸ್ವಂತ ಉದ್ಯೋಗ ಆರಂಭಿಸಿ ಕುಟುಂಬದ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಬೇಕು ಎಂದು ಹೇಳಿದರು.

ಹೊಲಿಗೆ ತರಬೇತಿ ಶಿಬಿರವು ಯಾವುದೇ ಭೇದಭಾವ ಅಥವಾ ತಾರತಮ್ಯವಿಲ್ಲದೆ ನಡೆದಿದ್ದು, ವಿವಿಧ ಸಮುದಾಯಗಳ ಜನರ ನಡುವೆ ಸಾಮರಸ್ಯ ಬೆಳೆಸಲು ಸಹಕಾರಿಯಾಗಿದೆ. ಸಮಾಜವನ್ನು ಒಡೆಯುವ ಬದಲು ಎಲ್ಲರನ್ನೂ ಬೆಸೆಯುವ ಕೆಲಸವಾಗಬೇಕು. ನಾವೆಲ್ಲ ಹಿಂದೂ, ನಾವೆಲ್ಲ ಒಂದು, ನಾವೆಲ್ಲ ಬಂಧು ಎಂಬ ಧ್ಯೇಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಪೂಜೆ, ಧ್ಯಾನ ಮತ್ತು ಚಿಂತಕರ ಹಿತನುಡಿಗಳು ಮಾನಸಿಕ ನೆಮ್ಮದಿಗೆ ದಾರಿಯಾಗುತ್ತವೆ. ಶಿಬಿರದ ಸಮಾರೋಪದ ಹಿನ್ನೆಲೆಯಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ನೆರವೇರಿಸಲಾಗಿದೆ. ತರಬೇತಿ ಪಡೆದ ಮಹಿಳೆಯರು ಮುಂದಿನ ದಿನಗಳಲ್ಲಿಯೂ ಹೊಲಿಗೆ ವೃತ್ತಿಯನ್ನು ಮುಂದುವರಿಸಲು ಆಸಕ್ತಿ ತೋರಬೇಕು. ಈ ನಿಟ್ಟಿನಲ್ಲಿ ಟ್ರಸ್ಟ್ ವತಿಯಿಂದ ಸಾಧ್ಯವಾದಷ್ಟು ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಶಿಬಿರ ಯಶಸ್ವಿಯಾಗಲು ಸಹಕರಿಸಿದ ಗ್ರಾಮಸ್ಥರಿಗೆ ಕೃತಜ್ಞತೆ ಸಲ್ಲಿಸಿದ ಅವರು, ಕುಚಗುಂಡಿಯ ಕಲ್ಯಾಣೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೂ ಎಲ್ಲರೂ ಕೈಜೋಡಿಸಿ ದೇವಸ್ಥಾನದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಮನವಿ ಮಾಡಿದರು.

ಶ್ರೀಗಳ ಆಶಯ: ಹಳ್ಳಿಯ ಹೃದಯ ಸಂಪತ್ತು ಅಪಾರ

ಹಳ್ಳಿಯ ಜನರಲ್ಲಿ ಆರ್ಥಿಕ ಸಂಪತ್ತು ಕಡಿಮೆಯಿದ್ದರೂ ಹೃದಯದ ಸಂಪತ್ತು ಅಪಾರವಾಗಿದೆ. ಇದೇ ಕಾರಣಕ್ಕೆ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಸಮಾಜಮುಖಿ ಕಾರ್ಯಗಳಿಗೆ ಜನರ ಸಹಕಾರ ದೊರೆತು ಅವು ಯಶಸ್ವಿಯಾಗುತ್ತವೆ. ಅನಂತಮೂರ್ತಿ ಹೆಗಡೆ ಅವರಿಂದ ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಸಮಾಜಸೇವಾ ಕಾರ್ಯಗಳು ನಡೆಯುವಂತಾಗಲಿ ಎಂದು ಬ್ರಹ್ಮಾನಂದ ಭಾರತೀ ಸ್ವಾಮೀಜಿ ಆಶಿಸಿದರು.

ಶ್ರದ್ಧಾಭಕ್ತಿಯಿಂದ ಸತ್ಯನಾರಾಯಣ ಪೂಜೆ; ಶಿಬಿರಾರ್ಥಿಗಳಿಗೆ ಸನ್ಮಾನ

30 ದಿನಗಳ ಕಾಲ ನಡೆದ ಉಚಿತ ಹೊಲಿಗೆ ತರಬೇತಿ ಶಿಬಿರದ ಸಮಾರೋಪದ ಅಂಗವಾಗಿ ಸಾಮೂಹಿಕ ಸತ್ಯನಾರಾಯಣ ಪೂಜೆಯನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು. ಶಿಬಿರದಲ್ಲಿ ಪಾಲ್ಗೊಂಡ ಮಹಿಳೆಯರಿಗೆ ಶ್ರೀಗಳ ಸಮ್ಮುಖದಲ್ಲಿ ಟ್ರಸ್ಟ್ ವತಿಯಿಂದ ಸೀರೆ, ಬಾಗಿನ ಹಾಗೂ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಬಳಿಕ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮುನ್ನೂರಕ್ಕೂ ಅಧಿಕ ಜನರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಶಿಬಿರದಲ್ಲಿ ಪಾಲ್ಗೊಂಡ ಮಹಿಳೆಯರು ತರಬೇತಿಯಿಂದ ದೊರೆತ ಪ್ರಯೋಜನವನ್ನು ಹಂಚಿಕೊಂಡರು. ಹೊಲಿಗೆ ಯಂತ್ರ ಖರೀದಿಸುವ ಆರ್ಥಿಕ ಸಾಮರ್ಥ್ಯವಿಲ್ಲದಿದ್ದರೂ, ಹೊಲಿಗೆ ಕಲಿಯಲು ಸಾವಿರಾರು ರೂಪಾಯಿ ವೆಚ್ಚ ಮಾಡುವ ಅನಿವಾರ್ಯತೆಯಿಲ್ಲದೆ ತಮ್ಮದೇ ಊರಿನಲ್ಲಿ ಉಚಿತವಾಗಿ ತರಬೇತಿ ಪಡೆಯಲು ಅವಕಾಶ ದೊರೆತಿರುವುದು ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಹೊಲಿಗೆ ವೃತ್ತಿಯನ್ನು ಮುಂದುವರಿಸಿ ಕುಟುಂಬಕ್ಕೆ ಆರ್ಥಿಕವಾಗಿ ನೆರವಾಗಲು ಈ ತರಬೇತಿ ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಬಿಜೆಪಿ ಮಹಾಶಕ್ತಿ ಕೇಂದ್ರದ ಪ್ರಮುಖ ಅಣ್ಣಪ್ಪ ಗೌಡ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕೆರಿಯಾ ಗೌಡ, ದೇವಸ್ಥಾನದ ಅಧ್ಯಕ್ಷ ಸುಬ್ರಾಯ ಹೆಗಡೆ, ನಾರಾಯಣ ಹೆಗಡೆ ಚಾರೇಕೊಣೆ, ಹೊಲಿಗೆ ಶಿಕ್ಷಕಿ ಆಶಾ ಶಿರಸಿ ಸೇರಿದಂತೆ ಯಲುಗಾರ, ದಂಟಕಲ್ ಹಾಗೂ ಕುಚಗುಂಡಿ ಗ್ರಾಮಗಳ ಪ್ರಮುಖರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

ನೇತ್ರಾವತಿ ಹೆಗಡೆ ಸ್ವಾಗತಿಸಿದರು. ಗುರುನಾಥ ಹುಕ್ಲಕೈ ನಿರೂಪಿಸಿದರು. ವಿನಯ ದಂಟಕಲ್ ವಂದಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0