ಕಲ್ಲು ಹೊಡೆಯದೇ, ಗಲಾಟೆ ಮಾಡದೆ ಪ್ರತಿಭಟನೆ ಮಾಡಿದ್ದೇವೆ, ನಮ್ಮ ಕೂಗು ಕೇಳಿಸಿಕೊಳ್ಳಿ!
✍🏻ರಾಜೀವ ಹೆಗಡೆ
****
ಇಂದು ಜಿರಳೆಗಳು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿಭಟನೆ ಮಾಡಿದ್ದಾರೆ. ಕರ್ನಾಟಕದ ರಾಜಧಾನಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಾವು ಉತ್ತರ ಕನ್ನಡಿಗರು ಸೇರಿ ಬೇಡ್ತಿ-ಅಘನಾಶಿನಿ ನದಿ ಉಳಿವಿಗಾಗಿ ಶಾಂತಿಯುತ ಪ್ರತಿಭಟನೆ ಮಾಡಿದೆವು. ನಮ್ಮೂರಿನ ಅಸ್ತಿತ್ವಕ್ಕೆ ಧಕ್ಕೆ ತರುವ ಈ ಯೋಜನೆಯನ್ನು ನಿಲ್ಲಿಸಿಯೆಂದು ಹೇಳಲು ನಾವು ಪೊಲೀಸರ ಕೊರಳಿಗೆ ಕೈ ಹಾಕಲಿಲ್ಲ. ನಿಂತ ಪೊಲೀಸ್ ಬಸ್ಗೆ ಕೈ ಅಡ್ಡ ಹಾಕಿ ಪೋಸ್ ಕೊಡುವ ಕೆಲಸ ಮಾಡಲಿಲ್ಲ. ಕಾರ್ಯಕ್ರಮಕ್ಕೆ ಬರದೇ ಬೇಜವಾಬ್ದಾರಿ ತೋರಿದ ಜಿಲ್ಲೆಯ ಹಲವು ಅಯೋಗ್ಯ ಜನಪ್ರತಿನಿಧಿಗಳಿಗೆ ಕೆಟ್ಟ ಶಬ್ದಗಳಿಂದ ಬೈಯುವ ಕೆಲಸವನ್ನೂ ಮಾಡಲಿಲ್ಲ. ಆದರೆ ನಮ್ಮ ಕೂಗು ಏನು ಎನ್ನುವುದನ್ನು ಶಾಂತಿಯುತವಾಗಿ ಹೇಳುವ ಪ್ರಯತ್ನ ಮಾಡಿದೆವು.
ಆದರೆ ನಾವು ಇಷ್ಟೊಂದು ಸಭ್ಯವಾಗಿ ಹೇಳಿದರೆ ಕೇಳಿಸಿಕೊಳ್ಳುವ ಸೂಕ್ಷ್ಮತೆಯನ್ನು ಈಗಿನ ಸರ್ಕಾರಗಳು ಕಳೆದುಕೊಳ್ಳುತ್ತಿವೆ. ಜೆನ್-ಝಿಗಳ ಹೆಸರಲ್ಲಿ ಜಿರಳೆಗಳ ರೀತಿ ಅಸಭ್ಯವಾಗಿ ವರ್ತಿಸಿದರೆ ಮಾತ್ರ ಬೆಲೆ ಕೊಡುವ ವ್ಯವಸ್ಥೆಯು ಬೆಂಗಳೂರಿನವರೆಗೆ ಬಂದಿಲ್ಲ ಎನ್ನುವ ಸಣ್ಣ ಆಶಾ ಭಾವನೆಯ ಕಾರಣದಿಂದ ಇಂದು ನಾವು ಇಂತಹದೊಂದು ಪ್ರತಿಭಟನೆ ನಡೆಸಿದ್ದೇವೆ.
ಅಂದ್ಹಾಗೆ ಪ್ರತಿಭಟನೆ ಸಭೆ ಶುರುವಾಗುವ ಹಂತದಲ್ಲಿ ಜನಕ್ಕಿಂತ ಹೆಚ್ಚು ಪೊಲೀಸರಿದ್ದರು. ನಾವು ಎಂಟ್ರಿ ಕೊಡುವಾಗ ಪೊಲೀಸರ ಸಂಖ್ಯೆ ನೋಡಿ ಭಯಪಟ್ಟಿದ್ದೆವು. ಆದರೆ ಹತ್ತೇ ನಿಮಿಷದಲ್ಲಿ ಬೆರಳೆಣಿಕೆಯ ಪೊಲೀಸರು ಆ ಪ್ರತಿಭಟನಾ ಸ್ಥಳದಲ್ಲಿದ್ದರು. ಇದು ನಮ್ಮ ಜಿಲ್ಲೆಯ ಶಿಸ್ತು ಹಾಗೂ ಸಂಯಮದ ವರ್ತನೆಯ ಪ್ರತೀಕ. ನಾವು ಪ್ರತಿಭಟನೆಯಲ್ಲೂ ಎಲ್ಲೆ ಮೀರುವುದಿಲ್ಲ.
ಬೆಂಗಳೂರಿನಲ್ಲಿ ನೆಲೆಸಿರುವ ಸಹಸ್ರಾರು ಜನರು ಇಂದು ಭಾಗಿಯಾಗಿದ್ದರು. ಎಲ್ಲರ ಒಕ್ಕೋರಲಿನ ಕೂಗು ಒಂದೇ ಆಗಿತ್ತು. ನಮ್ಮ ಬೇಡ್ತ-ಅಘನಾಶಿನಿ ನದಿಯ ತಿರುವಿಗೆ ಅವಕಾಶ ಕೊಡುವುದಿಲ್ಲ ಎನ್ನುವ ಸ್ಪಷ್ಟತೆಯು ಅಲ್ಲಿದ್ದವರಿಗೆ ಇತ್ತು. ಹಾಗೆಯೇ ಈ ರೀತಿ ಅತಿಯಾದ ಶಾಂತಿಯುತವಾಗಿರುವರ ತಾಳ್ಮೆ ಪರೀಕ್ಷೆ ಮಾಡಲು ಹೊರಟರೆ, ಅದರಿಂದ ಹೊತ್ತಿಕೊಳ್ಳುವ ಕಿಚ್ಚನ್ನು ಯಾರಿಂದಲೂ ನಂದಿಸಲಾಗದು ಎನ್ನುವ ಎಚ್ಚರಿಕೆಯನ್ನು ಕೂಡ ಇದೇ ಸಭೆ ಕಳುಹಿಸಿಕೊಟ್ಟಿದೆ. ಎಲ್ಲರ ರೀತಿ ಬೆಂಕಿ ಹಚ್ಚಿ, ಪೊಲೀಸರಿಗೆ ಕಾಟ ಕೊಟ್ಟು ಪ್ರತಿಭಟನೆ ಮಾಡಿಲ್ಲವೆಂದಾಕ್ಷಣ, ಸರ್ಕಾರದ ದೌರ್ಜನ್ಯಗಳನ್ನೆಲ್ಲ ಸಹಿಸಿಕೊಂಡು ಕೂರುತ್ತೇವೆ ಎಂದಲ್ಲ. ನಮ್ಮ ಕೂಗನ್ನು ಗೌರವಯುತವಾಗಿ ಕೇಳಿಸಿಕೊಂಡು ಸ್ಪಂದಿಸಲಿ ಎನ್ನುವ ಕಾಳಜಿಯಷ್ಟೆ.
ನನ್ನಪ್ಪನ ಕಾಲದಲ್ಲಿನ ಪ್ರತಿಭಟನೆಯಿಂದ ಬೇಡ್ತಿ-ಅಘನಾಶಿನಿಯ ಹೋರಾಟಕ್ಕೆ ತಾತ್ಕಾಲಿಕ ಯಶಸ್ಸು ಸಿಕ್ಕಿತ್ತು. ಈಗ ನಾವು ಇಲ್ಲಿ ಭಾಗಿಯಾಗದಿದ್ದರೆ ತಪ್ಪಾಗುತ್ತಿತ್ತು. ಇಂದು ನಮ್ಮ ಕಾಲದ ಆ ಹೋರಾಟಕ್ಕೆ ಆರಂಭ ದೊರೆತಿದೆ. ಸರ್ಕಾರ ಎಚ್ಚೆತ್ತುಕೊಂಡರೆ ಎಲ್ಲರಿಗೂ ಒಳಿತು.
ಕೊನೆಯದಾಗಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಆರು ಶಾಸಕರು ಹಾಗೂ ಓರ್ವ ಸಂಸದರಿದ್ದಾರೆ. ಆದರೆ ಇಂದಿನ ಪ್ರತಿಭಟನಾ ಸಭೆಗೆ ಶಿರಸಿ-ಸಿದ್ದಾಪುರದ ಶಾಸಕ ಭೀಮಣ್ಣ ನಾಯ್ಕ್ ಹೊರತುಪಡಿಸಿ ಇನ್ಯಾರೂ ಕಾಣಿಸಿಕೊಳ್ಳಲಿಲ್ಲ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಿಶ್ವಸಂಸ್ಥೆಯ ಕಾರ್ಯಕ್ರಮವೊಂದಕ್ಕಾಗಿ ಅಮೆರಿಕಕ್ಕೆ ಹೋಗಿದ್ದಾರೆ. ಆದರೆ ಉಳಿದ ಐದು ಶಾಸಕರಿಗೆ ಬೆಂಗಳೂರಿಗೆ ಬಂದು ಜನರ ಕೂಗಿಗೆ ಧ್ವನಿಯಾಗಲು ಪುರುಸೊತ್ತು ಇಲ್ಲ ಎನಿಸುತ್ತದೆ. ನಿಮ್ಮ ವರ್ತನೆಯು ಇದೇ ರೀತಿ ಮುಂದುವರಿದರೆ, ಈ ಜಿಲ್ಲೆಯಲ್ಲಿ ಶಾಸಕ, ಸಂಸದರಾಗಿ ಮುಂದುವರಿಯುವುದು ಅಷ್ಟು ಸುಲಭವಲ್ಲ ಎನ್ನುವುದು ತಿಳಿದಿರಲಿ. ನಾವು ಉತ್ತರ ಕನ್ನಡಿಗರು ಸಂಪೂರ್ಣವಾಗಿ ಹಣಕ್ಕೆ ಮತವನ್ನು ಮಾರಿಕೊಳ್ಳುವ ಜನರಲ್ಲ, ಹುಷಾರಾಗಿರಿ. ಅದರಲ್ಲೂ ಪಕ್ಕದ ಜಿಲ್ಲೆಯ ಲೂಟಿಕೋರರೊಂದಿಗೆ ಜಂಟಿ ʼಸಕ್ಕರೆʼ ವ್ಯವಹಾರ ಮಾಡಲು, ನಮ್ಮ ಜಿಲ್ಲೆಯ ಜನರ ಕಣ್ಣೀರು ಹಾಕಿಸಲು ಹೊರಟ ಜನಪ್ರತಿನಿಧಿಗಳು ಇನ್ನಷ್ಟು ಎಚ್ಚರಿಕೆ ವಹಿಸಬೇಕಾಗುತ್ತದೆ. ಇಲ್ಲವಾದಲ್ಲಿ ನಿಮ್ಮ ಹಣ ಬಲಕ್ಕೆ ಜನರ ತೋಳ್ಬಲ ಉತ್ತರ ನೀಡಲಿದೆ.
What's Your Reaction?
Like
2
Dislike
0
Love
0
Funny
0
Angry
0
Sad
0
Wow
0