ಹೊಲದಲ್ಲಿ ಬಸವಳಿದು ಬಿದ್ದಿದ್ದ ನಾಗರ ಹಾವಿನ ರಕ್ಷಣೆ

ಆಪ್ತ ನ್ಯೂಸ್ ಯಲ್ಲಾಪುರ:
ಯಲ್ಲಾಪುರದ ಭರತನಹಳ್ಳಿಯಲ್ಲಿ ರೈತೊಬ್ಬರ ಹೊಲದ ಬಳಿ ಬಸವಳಿದು ಬಿದ್ದಿದ್ದ ನಾಗರ ಹಾವೊಂದನ್ನು ಕಂಡು ಉರಗ ರಕ್ಷಕ ಮಂಜು, ಉಮ್ಮಚ್ಗಿ ಪಶು ಆಸ್ಪತ್ರೆಗೆ ತಂದಿದ್ದರು. ಪಶುವೈದ್ಯ ಡಾ. ರಾಜೇಶ್ ಅವರು ಹಾವಿಗೆ ಡ್ರಿಪ್ ನೀಡಿ ಉಪಚಾರ ಮಾಡಿದರು.
ಸುಮಾರು ನಾಲ್ಕರಿಂದ ಐದು ವರ್ಷ ಪ್ರಾಯದ ಹೆಣ್ಣು ನಾಗರವಾಗಿದ್ದು, ರೈತರು ಹೊಲಕ್ಕೆ ಔಷಧ ಸಿಂಪರಣೆ ಮಾಡಿದ ಕಾರಣ, ಅಲ್ಲಿ ಸಿಕ್ಕ ಯಾವುದೋ ಆಹಾರವನ್ನು ತಿಂದು ಅಸ್ವಸ್ಥಗೊಂಡಿರಬಹುದೆಂದು ತಿಳಿಸಿದರು.
ಇದಕ್ಕೆ ಇನ್ನೂ ಎರಡು ದಿವಸ ಔಷದೋಪಚಾರ ಮಾಡಬೇಕಿದೆ ಎಂದೂ ಹೇಳಿದರು. ಇಲ್ಲಿಯ ವರೆಗೆ ಊರಿಗೆ ಬಂದ ಸುಮಾರು ಎರಡು ಸಾವಿರ ಹಾವುಗಳನ್ನು ರಕ್ಷಿಸಿ ಕಾಡಿಗೆ ಕಳುಹಿಸಿದ ಅನುಭವ ಹೊಂದಿರುವ ಉರಗ ರಕ್ಷಕ ಮಂಜು ಅವರು, ಇನ್ನೆರಡು ದಿನ ಈ ಹಾವನ್ನು ತಮ್ಮ ಬಳಿಯೇ ಉಳಿಸಿಕೊಂಡು, ಆರೋಗ್ಯವಂತವಾದ ಮೇಲೆ ಕಾಡಿಗೆ ಬಿಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಪಶು ಆಸ್ಪತ್ರೆಯ ಸಿಬ್ಬಂದಿಗಳಾದ ಕೃಷ್ಣ, ಮಣಿಕಂಠ, ವಿಜಯ ವೈದ್ಯರಿಗೆ ನೆರವು ನೀಡಿದರು. ಗಮನಿಸಿದ ಉಮ್ಮಚ್ಗಿ ಗ್ರಾ.ಪಂ.ಅಧ್ಯಕ್ಷ ಕುಪ್ಪಯ್ಯ ಪೂಜಾರಿ ಹಾಗೂ ಸದಸ್ಯ ಗ.ರಾ.ಭಟ್ಟ ಉರಗ ರಕ್ಷಕ ಮತ್ತು ಪಶು ವೈಧ್ಯರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು
What's Your Reaction?






