ಶಿರಸಿ ಮಾರಿಕಾಂಬಾ ದೇವಿ ಜಾತ್ರೆ ಸಂಭ್ರಮ: ಭಕ್ತರಿಗಾಗಿ ಯಶವಂತಪುರ-ತಾಳಗುಪ್ಪ ವಿಶೇಷ ರೈಲು ಸಂಚಾರ
ಆಪ್ತ ನ್ಯೂಸ್ ಶಿರಸಿ:
ಪ್ರಸಿದ್ಧ ಶಿರಸಿ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಭಕ್ತಾದಿಗಳ ಸಂಚಾರದ ಒತ್ತಡವನ್ನು ಕಡಿಮೆ ಮಾಡಲು ಮತ್ತು ಸುಗಮ ಪ್ರಯಾಣಕ್ಕಾಗಿ ನೈಋತ್ಯ ರೈಲ್ವೆಯು ಬೆಂಗಳೂರಿನ ಯಶವಂತಪುರ ಮತ್ತು ಸಾಗರದ ತಾಳಗುಪ್ಪ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಓಡಿಸಲು ನಿರ್ಧರಿಸಿದೆ. ಈ ಕುರಿತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಾಹಿತಿ ನೀಡಿದ್ದಾರೆ.
ಜಾತ್ರೆಗೆ ಆಗಮಿಸುವ ಸಾವಿರಾರು ಭಕ್ತರ ಅನುಕೂಲಕ್ಕಾಗಿ ವಿಶೇಷ ರೈಲು ವ್ಯವಸ್ಥೆ ಮಾಡುವಂತೆ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಈ ಮನವಿಗೆ ತಕ್ಷಣ ಸ್ಪಂದಿಸಿದ ರೈಲ್ವೆ ಮಂಡಳಿಯು ವಿಶೇಷ ರೈಲುಗಳ ಸಂಚಾರಕ್ಕೆ ಅನುಮೋದನೆ ನೀಡಿದೆ.
ವಿಶೇಷ ರೈಲುಗಳ ವೇಳಾಪಟ್ಟಿ ಇಂತಿದೆ:
೧. ರೈಲು ಸಂಖ್ಯೆ 06587: ಫೆಬ್ರವರಿ 27ರ ಶುಕ್ರವಾರ ರಾತ್ರಿ 10:45ಕ್ಕೆ ಯಶವಂತಪುರದಿಂದ ಹೊರಟು, ಮರುದಿನ (ಫೆಬ್ರವರಿ 28) ಮುಂಜಾನೆ 05:05ಕ್ಕೆ ತಾಳಗುಪ್ಪ ತಲುಪಲಿದೆ.
೨. ರೈಲು ಸಂಖ್ಯೆ 06588: ಫೆಬ್ರವರಿ 28ರ ಶನಿವಾರ ಬೆಳಿಗ್ಗೆ 09:30ಕ್ಕೆ ತಾಳಗುಪ್ಪದಿಂದ ಹೊರಟು, ಅದೇ ದಿನ ಸಂಜೆ 05:15ಕ್ಕೆ ಯಶವಂತಪುರವನ್ನು ತಲುಪಲಿದೆ.
ನಿಯಮಿತ ರೈಲುಗಳ ವಿಸ್ತರಣೆ:
ವಿಶೇಷ ರೈಲಿನ ಜೊತೆಗೆ, ಯಶವಂತಪುರ-ಶಿವಮೊಗ್ಗ ಟೌನ್ ನಡುವೆ ಸಂಚರಿಸುವ ಟ್ರೈ-ವೀಕ್ಲಿ ಎಕ್ಸ್‌ಪ್ರೆಸ್ ರೈಲನ್ನು (16581/16582) ಸಹ ತಾತ್ಕಾಲಿಕವಾಗಿ ತಾಳಗುಪ್ಪದವರೆಗೆ ವಿಸ್ತರಿಸಲಾಗಿದೆ.
-
ಮಾರ್ಚ್ 1ರ ಭಾನುವಾರ: ರೈಲು ಸಂಖ್ಯೆ 16581 ಯಶವಂತಪುರದಿಂದ ಮಧ್ಯರಾತ್ರಿ 12:15ಕ್ಕೆ ಹೊರಟು ಬೆಳಿಗ್ಗೆ 9 ಗಂಟೆಗೆ ತಾಳಗುಪ್ಪ ತಲುಪಲಿದೆ.
-
ಅದೇ ದಿನ ರಾತ್ರಿ 10 ಗಂಟೆಗೆ ತಾಳಗುಪ್ಪದಿಂದ ಪ್ರಯಾಣ ಆರಂಭಿಸುವ ರೈಲು ಸಂಖ್ಯೆ 16582, ಮರುದಿನ ಬೆಳಿಗ್ಗೆ 4:45ಕ್ಕೆ ಯಶವಂತಪುರ ತಲುಪಲಿದೆ.
ಈ ಸೌಲಭ್ಯವು ಶಿರಸಿ ಜಾತ್ರೆಗೆ ತೆರಳುವ ಭಕ್ತರಿಗೆ ಸಾಕಷ್ಟು ಅನುಕೂಲ ಮಾಡಿಕೊಡಲಿದೆ. ಭಕ್ತರ ಬೇಡಿಕೆಗೆ ತಕ್ಷಣ ಸ್ಪಂದಿಸಿದ ಕೇಂದ್ರ ರೈಲ್ವೆ ಸಚಿವರು ಹಾಗೂ ಅಧಿಕಾರಿಗಳಿಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0











