ಜಲಮೂಲ ನಾಶಪಡಿಸುವ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಬೇಡ: ದರ್ಶನ್ ಪುಟ್ಟಣ್ಣಯ್ಯ
ನೀರಿದ್ದರೆ ನಾಳೆ ಕಾರ್ಯಕ್ರಮ ರೂಪಿಸುವ ಸರ್ಕಾರಕ್ಕೆ ಪಶ್ಚಿಮಘಟ್ಟದ ಜಲಮೂಲವನ್ನೇ ನಾಶಪಡಿಸುವ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಬೇಡ ಎಂದು ಏಕೆ ಅನಿಸುತ್ತಿಲ್ಲ ಎಂದು ಶಾಸಕ ಹಾಗೂ ರೈತಪರ ಹೋರಾಟಗಾರ ದರ್ಶನ್ ಪುಟ್ಟಣ್ಣಯ್ಯ ಪ್ರಶ್ನೆ ಮಾಡಿದ್ದಾರೆ.
ಆಪ್ತ ನ್ಯೂಸ್ ಸಾಗರ:
ನೀರಿದ್ದರೆ ನಾಳೆ ಕಾರ್ಯಕ್ರಮ ರೂಪಿಸುವ ಸರ್ಕಾರಕ್ಕೆ ಪಶ್ಚಿಮಘಟ್ಟದ ಜಲಮೂಲವನ್ನೇ ನಾಶಪಡಿಸುವ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಬೇಡ ಎಂದು ಏಕೆ ಅನಿಸುತ್ತಿಲ್ಲ ಎಂದು ಶಾಸಕ ಹಾಗೂ ರೈತಪರ ಹೋರಾಟಗಾರ ದರ್ಶನ್ ಪುಟ್ಟಣ್ಣಯ್ಯ ಪ್ರಶ್ನೆ ಮಾಡಿದ್ದಾರೆ.
ಇಲ್ಲಿನ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಶಿವಮೊಗ್ಗ ಜಿಲ್ಲಾ ರೈತ ಸಂಘದ ವತಿಯಿಂದ ಶರಾವತಿ ಪಂಪ್ಡ್ ಸ್ಟೋರೇಜ್ ವಿರೋಧಿಸಿ ನಡೆಸುತ್ತಿರುವ ೧೧ನೇ ದಿನದ ಅನಿರ್ಧಿಷ್ಟಾವಧಿ ಧರಣಿಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಸರ್ಕಾರ ಪರಿಸರಪರವಾದ ಯೋಜನೆ ರೂಪಿಸಬೇಕೆ ವಿನಃ ಮುಂದಿನ ಪೀಳಿಗೆಗೆ ಮಾರಕವಾದ ಯೋಜನೆಗಳನ್ನು ಅನುಷ್ಟಾನಕ್ಕೆ ತರುವ ಚಿಂತನೆ ನಡೆಸಬಾರದು. ಹವಮಾನ ವೈಫರಿತ್ಯದಿಂದಾಗಿ ಅನೇಕ ವರ್ಷಗಳಿಂದ ರಾಜ್ಯದ ಬಹುತೇಕ ತಾಲ್ಲೂಕುಗಳು ಬರಪೀಡಿತ ಎಂದು ಘೋಷಣೆ ಮಾಡಲಾಗುತ್ತಿದೆ. ಇಂತಹ ಹೊತ್ತಿನಲ್ಲಿ ಪಶ್ಚಿಮಘಟ್ಟದ ಹೃದಯ ಭಾಗವನ್ನು ಛಿದ್ರಗೊಳಿಸುವ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಯಾವುದೇ ರೀತಿಯ ಅವಕಾಶ ನೀಡಬಾರದು ಎಂದರು.
ಪಂಪ್ಡ್ ಸ್ಟೋರೇಜ್ ಯೋಜನೆಗೆ ವನ್ಯಜೀವಿ ಮಂಡಳಿ ಅನುಮತಿ ನೀಡಿಲ್ಲ. ಯೋಜನೆಯ ವಿಸ್ತೃತ ವರದಿ ಪ್ರಕಟ ಮಾಡಿಲ್ಲ. ಸಾರ್ವಜನಿಕರ ಜೊತೆ ಯೋಜನೆ ಕುರಿತು ಚರ್ಚೆ ನಡೆಸಿಲ್ಲ. ಏಕಾಏಕಿ ೧೦ಸಾವಿರ ಕೋಟಿ ರೂ. ಯೋಜನೆ ಅನುಷ್ಟಾನಕ್ಕೆ ತರುವ ಸರ್ಕಾರದ ಕಾರ್ಯವೈಖರಿ ಖಂಡನೀಯ. ಸಾವಿರಾರು ಟನ್ ಸ್ಪೋಟಕ ಬಳಸಿ, ಅರಣ್ಯ, ವನ್ಯಜೀವಿ, ವನಸ್ಪತಿಯನ್ನು ನಾಶ ಮಾಡುವ, ಸಹಸ್ರಾರು ಮರ ಕಡಿಯುವ, ಪರಿಸರ ಸೂಕ್ಷ್ಮ ಪ್ರದೇಶವನ್ನು ನಾಶ ಪಡಿಸುವ ಪಂಪ್ಡ್ ಸ್ಟೋರೇಜ್ ಯೋಜನೆ ಯಾವುದೇ ಕಾರಣಕ್ಕೂ ಮಾಡಲು ಬಿಡಬಾರದು. ಪಂಪ್ಡ್ ಸ್ಟೋರೇಜ್ ವಿರೋಧಿ ಹೋರಾಟಕ್ಕೆ ರಾಜ್ಯದ ರೈತ ಸಂಘಗಳು ಒಗ್ಗಟ್ಟಿನ ಹೋರಾಟ ಪ್ರದರ್ಶನ ಮಾಡುವ ಜೊತೆಗೆ ಸರ್ಕಾರದ ಮೇಲೆ ಎಲ್ಲ ರೀತಿಯ ಒತ್ತಡ ಹೇರಲಾಗುತ್ತದೆ ಎಂದು ತಿಳಿಸಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ವೆ ಮಾತನಾಡಿದರು. ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ, ಪ್ರಮುಖರಾದ ಎನ್.ಡಿ.ವಸಂತಕುಮಾರ್, ರಮೇಶ್ ಕೆಳದಿ, ಭದ್ರೇಶ್ ಬಾಳಗೋಡು, ಸತೀಶ್ ಅಂಗಡಿ, ಅಖಿಲೇಶ್ ಚಿಪ್ಪಳಿ, ಪರಮೇಶ್ವರ ದೂಗೂರು, ಜಯಲಕ್ಷ್ಮಿ, ಕೆಂಪುಗೌಡ, ಕರಿಬಸಪ್ಪ ಗೌಡ, ಡಾ. ರಾಮಚಂದ್ರಪ್ಪ, ಹಿತಕರ ಜೈನ್, ಎಚ್.ಬಿ.ರಾಘವೇಂದ್ರ ಇನ್ನಿತರರು ಹಾಜರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



