ಶರಾವತಿ ಯೋಜನೆಗೆ ಅನುಮತಿ ನೀಡದ ಅರಣ್ಯ ಮಂತ್ರಾಲಯ : ಅನಂತ ಹೆಗಡೆ ಅಶೀಸರ

ಭಾರತ ಸರ್ಕಾರದ ಅರಣ್ಯ-ಪರಿಸರ ಮಂತ್ರಾಲಯ ವನ್ಯಜೀವಿ ತಜ್ಞರು ಉನ್ನತ ಅಧಿಕಾರಿಗಳ ತಂಡ ಶರಾವತಿ ಕಣಿವೆಗೆ ಭೇಟಿ, ಪರಿಶೀಲನೆ. ಕೆ.ಪಿ.ಸಿ ಮತ್ತು ಪರಿಸರ ಸಂಘಟನೆಗಳ ಪ್ರಮುಖರ ಜೊತೆ ಸಮಾಲೋಚನೆ. ಇನ್ನೂ ಶರಾವತಿ ಯೋಜನೆಗೆ ಅರಣ್ಯ ಮಂತ್ರಾಲಯ ಅನುಮತಿ ನೀಡಿಲ್ಲ. ಕೇಂದ್ರ ಅರಣ್ಯ ಮಂತ್ರಾಲಯ ಸ್ಪಷ್ಟನೆ.  ಪಶ್ಚಿಮ ಘಟ್ಟದಲ್ಲಿ ಫಂಪ್ ಸ್ಟೋರೇಜ್ ಬೇಡ- ಅನಂತ ಹೆಗಡೆ ಅಶೀಸರ ಪ್ರತಿಪಾದನೆ. ಭೂಕುಸಿತ ವರದಿ, ಶರಾವತಿ ಕಣಿವೆ ಅಧ್ಯಯನ ವರದಿ ಸಲ್ಲಿಸಿ ಕೆ.ಪಿ.ಸಿ ಮತ್ತು ರಾಜ್ಯ ಅರಣ್ಯ ಇಲಾಖೆಗೆ ಉನ್ನತ ಅಧಿಕಾರಿ ತಜ್ಞರ ತಂಡ ಸೂಚನೆ.

Jan 1, 2026 - 08:13
 0  40
ಶರಾವತಿ ಯೋಜನೆಗೆ ಅನುಮತಿ ನೀಡದ ಅರಣ್ಯ ಮಂತ್ರಾಲಯ : ಅನಂತ ಹೆಗಡೆ ಅಶೀಸರ
ಆಪ್ತ ನ್ಯೂಸ್‌ ಸಾಗರ:

ಭಾರತ ಸರ್ಕಾರದ ಅರಣ್ಯ-ಪರಿಸರ ಮಂತ್ರಾಲಯ ವನ್ಯಜೀವಿ ತಜ್ಞರು ಉನ್ನತ ಅಧಿಕಾರಿಗಳ ತಂಡ ಶರಾವತಿ ಕಣಿವೆಗೆ ಭೇಟಿ, ಪರಿಶೀಲನೆ ನಡೆಸಿತು. ಕೆ.ಪಿ.ಸಿ ಮತ್ತು ಪರಿಸರ ಸಂಘಟನೆಗಳ ಪ್ರಮುಖರ ಜೊತೆ ಉನ್ನತ ಅಧಿಕಾರಿಗಳು ಸಮಾಲೋಚನೆ ನಡೆಸಿದರು.
 
ರಾಷ್ಟ್ರೀಯ ವನ್ಯಜೀವಿ ಮಂಡಳಿಯ ತಜ್ಞರಾದ ಡಾ|| ಹೆಚ್.ಎಸ್.ಸಿಂಗ್, ಡಾ|| ಸುಕುಮಾರ, ರಾಷ್ಟ್ರೋಯ ಹುಲಿಸಂರಕ್ಷಣಾ ಪ್ರಾಧಿಕಾರದ (ಇನ್‌ಸ್ಪೆಕ್ಟರ್ ಜನರಲ್ ಆಫ್ ಫಾರೆಸ್ಟ್) ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶಿವಕುಮಾರ ನೇತೃತ್ವದ ತಂಡ ಸಾಗರ ಪ್ರವಾಸಿ ಮಂದಿರದಲ್ಲಿ ಉ.ಕ ಜಿಲ್ಲೆ ಹಾಗೂ ಶಿವಮೊಗ್ಗ ಜಿಲ್ಲೆ ಅರಣ್ಯ ಅಧಿಕಾರಿಗಳ ಜೊತೆ ಹಾಗೂ ಕರ್ನಾಟಕ ಪವರ್ ಕಾರ್ಪೊರೇಷನ್ ಅಧಿಕಾರಿಗಳ ಜೊತೆ ನೇರ ಮಾತುಕತೆ ನಡೆಸಿತು.
ಈ ಸಂದರ್ಭದಲ್ಲಿ ಸಾಗರದ ಶಾಸಕ ಬೇಳೂರು ಗೋಪಾಲ ಕೃಷ್ಣ, ಜೀವವೈವಿಧ್ಯ ಮಂಡಳಿ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಇದ್ದರು. ಕೆ.ಪಿ.ಸಿ ಅಧಿಕಾರಿಗಳು ಶರಾವತಿ ಪಂಪ್ ಸ್ಟೋರೇಜ್ ಯೋಜನೆ ವಿವರ ಮಂಡಿಸುತ್ತಿದ್ದಂತೆ ಅನಂತ ಹೆಗಡೆ ಅಶೀಸರ ಅವರು ಕೆ.ಪಿ.ಸಿ ಶರಾವತಿ ಕಣಿವೆ ಅಧ್ಯಯನ ವರದಿಯನ್ನು ಮುಚ್ಚಿಟ್ಟಿದೆ. ಕೇಂದ್ರ ತಂಡ ಈ ಅಧ್ಯಯನ ವರದಿ ಪರಿಶೀಲಿಸಬೇಕು. ರಾಜ್ಯ ಸರ್ಕಾರವೇ ನಡೆಸಿದ ಭೂಕುಸಿತ ಅಧ್ಯಯನ ಸಮೀತಿ ವರದಿ ಪರಿಶೀಲಿಸಬೇಕು ಎಂದು ಆಗ್ರಹಿಸಿದರು.
ಕೇಂದ್ರ ತಂಡ ಈ ವರದಿಗಳನ್ನು ಒದಗಿಸಲು ರಾಜ್ಯ ಅರಣ್ಯ ಇಲಾಖೆಗೆ ಕೆ.ಪಿ.ಸಿಗೆ ಸೂಚಿಸಿತು.
ಗೇರುಸೊಪ್ಪಾ ಪರ್ವತ ಪ್ರದೇಶದಲ್ಲಿ ರಸ್ತೆ ಅಗಲೀಕರಣ, ಅಭಿಯಾರಣ್ಯದಲ್ಲಿ ವನ್ಯಜೀವಿಗಳ ಓಡಾಟಕ್ಕೆ ಅಡ್ಡಿ ಉಂಟುಮಾಡಲಿದೆ ಎಂಬ ತಜ್ಞರ ಸಮೀತಿ ಆತಂಕಕ್ಕೆ ಕೆ.ಪಿ.ಸಿ ಉತ್ತರ ನೀಡಲಿಲ್ಲ.
ಪಂಪ್ ಸ್ಟೋರೇಜನ ವಿದ್ಯುತ್ ಉತ್ಪಾದನಾ ದಕ್ಷತೆಯ ಸರಾಸರಿ ಲೆಕ್ಕ ನೀಡುವಲ್ಲಿ ಕೆ.ಪಿ.ಸಿ ಅಧಿಕಾರಿಗಳು ಗೊಂದಲದಲ್ಲಿ ಸಿಲುಕಿದರು. ಶರಾವತಿ ಯೋಜನೆ ಜಾರಿ ಮಾಡಲು ೫ ವರ್ಷ ಬೇಕು. ಅಷ್ಟರಲ್ಲೇ ರಾಜ್ಯದ ರೈತರ ಪಂಪ್ ಸೆಟ್‌ಗಳು ಸೋಲಾರಿನಿಂದ ನಡೆಯುವ ಯೋಜನೆ ಜಾರಿ ಮಾಡಿದರೆ ಪಂಪ್ ಸ್ಟೋರೇಜ್ ಅವಶ್ಯಕತೆ ಇರುವುದಿಲ್ಲ ಎಂಬ ತಜ್ಞರ ಸಮೀತಿ ಪ್ರಶ್ನೆಗೆ ಕೆ.ಪಿ.ಸಿ ಬಳಿ ಉತ್ತರ ಇರಲಿಲ್ಲ.
ಶರಾವತಿ ಅಭಯಾರಣ್ಯ ವ್ಯಾಪ್ತಿಯನ್ನು ೩ ವರ್ಷದ ಹಿಂದೇ ೩೫,೦೦೦ ಹೆಕ್ಟೇರ್ ಹೆಚ್ಚಿಸಲಾಗಿದೆ. ವನ್ಯಜೀವಿಗಳ ಹಾವಳಿ ಇಡೀ ಶರಾವತಿ ಕಣಿವೆ ರೈತರ ಬೆಳೆಹಾನಿ ೧೦೦ ಕೋಟಿ ರೂಪಾಯಿ. ಹೀಗಿರುವಾಗ ಭಾರಿ ಕಾಮಗಾರಿ ನಡೆಸಲು ಕೆ.ಪಿ.ಸಿಗೆ ಒಪ್ಪಿಗೆ ಹೇಗೆ ನೀಡಲು ಸಾಧ್ಯ? ಈಗಾಗಲೇ ಲಿಂಗನಮಕ್ಕಿ ಯೋಜನೆಯಿಂದ ಲಕ್ಷ ಎಕರೆ ಅರಣ್ಯ ನಾಶ ಆಗಿದೆ. ವನವಾಸಿಗಳು ಮಂಗನ ಕಾಯಿಲೆಯಿಂದ ಸಾಯುತ್ತಿದ್ದಾರೆ. ಸಾರ್ವಜನಿಕರ ಅಹವಾಲು ಸಭೆಯಲ್ಲಿ ೮ ಸಾವಿರ ಜನರು ಶರಾವತಿ ಹೊಸ ಯೋಜನೆ ಬೇಡ ಎಂದು ಅಭಿಪ್ರಾಯ ನೀಡಿದ್ದಾರೆ ಎಂಬ ಮಾಹಿತಿಯನ್ನು ವೃಕ್ಷ ಆಂದೋಲನ ಪ್ರಮುಖರು ಮಂಡಿಸಿದರು.
ಶರಾವತಿ ಅಭಯಾರಣ್ಯ ಬಿಟ್ಟು ಬಯಲುಸೀಮೆಗಳಲ್ಲಿ ಪಂಪ್ ಸ್ಟೋರೇಜ್ ಯೋಜನೆ ಜಾರಿಮಾಡಿ ಎಂಬ ತಜ್ಞರ ಸಮೀತಿ ಸಲಹೆಗೆ ಕೆ.ಪಿ.ಸಿ ಉತ್ತರ ನೀಡಲಿಲ್ಲ.
ಉತ್ತರ ಕನ್ನಡ ಜಿಲ್ಲಾ ವನ್ಯಜೀವಿ ಗೌರವ ವಾರ್ಡನ್ ಆಗಿದ್ದ ಬಾಲಚಂದ್ರ ಸಾಯಿಮನೆ ಶರಾವತಿ ಅಭಯಾರಣ್ಯಕ್ಕೆ ಅಘನಾಶಿನಿ ಸಂರಕ್ಷಿತ ಸೇರ್ಪಡೆ ಆಗಿರುವ ಸಂಗತಿಯನ್ನು ಕೇಂದ್ರ ಸಮೀತಿ ಗಮನಕ್ಕೆ ತಂದರು. 

ನಂತರ ನಡೆದ ಶರಾವತಿ ಕಣಿವೆ ಉಳಿಸಿ ಹೋರಾಟಗಾರರ ಜೊತೆ ಅರಣ್ಯ ಉನ್ನತಾಧಿಕಾರಿಗಳ ಸಮೀತಿ ಸಮಾಲೋಚನೆ ನಡೆಸಿ ಅಹವಾಲು ಆಲಿಸಿತು. ಪ್ರೋ| ಬಿ.ಎಂ ಕುಮಾರಸ್ವಾಮಿ, ಕೆ.ವೆಂಕಟೇಶ್, ಶಂಕರ ಶರ್ಮಾ, ನಿರ್ಮಲ್ ಗೌಡ, ಡಾ|| ಶ್ರೀಪತಿ, ಅಖಿಲೇಶ ಚಿಪ್ಪಳಿ, ಡಾ|| ಗಿರೀಶ ಜನ್ನೆ, ಡಾ|| ವಿನಾಯಕ, ಡಾ|| ಸವಿನಯ, ಚಂದ್ರಕಾಂತ ಕೊಚರೇಕರ, ಅಜಿತ ಕುಮಾರ ಅಭಿಪ್ರಾಯ ಮಂಡಿಸಿದರು. ಹೊಸ ತಂತಿ ಮಾರ್ಗ, ರಸ್ತೆ ನಿರ್ಮಾಣ, ಉಪ್ಪುನೀರು ಹೆಚ್ಚಾಗುವುದು, ಗಣಿಗಾರಿಕೆ, ವಿನಾಶದ ಅಂಚಿನ ಸಸ್ಯಗಳು, ವಿಶಿಷ್ಟ ಪ್ರಾಣಿ, ಮೀನು ಪ್ರಭೇದಗಳ (ಹೊಸದಾಗಿ ಕಂಡುಹಿಡಿಯಲಾದವು ಸೇರಿ) ಮುಂತಾದ ಹಲವು ಸಂಗತಿಗಳನ್ನು ಪ್ರಸ್ತಾಪಿಸಿದರು ಶರಾವತಿ ಯೋಜನೆಗೆ ಅರಣ್ಯ-ವನ್ಯಜೀವಿ ಅನುಮತಿ ನೀಡಬಾರದು ಎಂದು ಲಿಖಿತ ಮನವಿ ನಲ್ಲಿಸಿದರು.

“ಹಲವು ದೂರುಗಳು ಬಂದಿದ್ದರಿಂದಲೇ ರಾಷ್ಟ್ರೀಯ ವನ್ಯಜೀವಿ ಮಂಡಳಿ ಸ್ಥಳ ಸಮೀಕ್ಷೆ ನಡೆಸುವ ನಿರ್ಧಾರ ಕೈಗೊಂಡಿದೆ. ಕೆ.ಪಿ.ಸಿಗೆ ಶರಾವತಿ ಪಂಪ್ ಸ್ಟೋರೇಜ್ ಯೋಜನೆಗೆ ಅರಣ್ಯ ಪರಿಸರ ಮಂತ್ರಾಲಯ ಅನುಮತಿ ನೀಡಿಲ್ಲ. ರಾಷ್ಟ್ರೀಯ ವನ್ಯ ಜೀವಿ ಮಂಡಳಿಗೆ ರಾಜ್ಯದಿಂದ ಪರಿಷ್ಕೃತ ಯೋಜನಾ ಪ್ರಸ್ತಾವನೆ ಬಂದಿಲ್ಲ ಎಂಬುದನ್ನು ಕೇಂದ್ರ ತನಿಖಾ ತಂಡ ಸ್ಪಷ್ಟಪಡಿಸಿತು. ತಜ್ಞರು ಸ್ಥಳಿಯರ ಅಭಿಪ್ರಾಯಗಳನ್ನು ಪರಿಗಣಿಸುತ್ತೇವೆ. ಕೇಂದ್ರ ಅರಣ್ಯ-ಪರಿಸರ ಮಂತ್ರಾಲಯಕ್ಕೆ ನಮ್ಮ ಶಿಫಾರಸು ವರದಿ ನೀಡುತ್ತೇವೆ” ಎಂದು ಡಾ|| ಸುಕುಮಾರ, ಡಾ|| ಸಿಂಗ್ ನೇತೃತ್ವದ ತಂಡ ತಿಳಿಸಿತು.
ರಾಜ್ಯ ಅರಣ್ಯ-ವನ್ಯಜೀವಿ ಪ್ರಧಾನ ಅಧಿಕಾರಿಗಳ ಗೈರುಹಾಜರಿ ಎದ್ದು ಕಾಣಿಸುತ್ತಿತ್ತು. ಶಿವಮೊಗ್ಗಾ, ಹೊನ್ನಾವರ, ಸಾಗರ, ಶಿರಸಿಯ ಅರಣ್ಯ ಅಧಿಕಾರಿಗಳು ಹಾಜರಿದ್ದರು.
 

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0