ಬೇಡ್ತಿ-ಅಘನಾಶಿನಿ ಯೋಜನೆ ವಿರುದ್ಧದ ಸಮಾವೇಶಕ್ಕೆ ಬನ್ನಿ: ಸ್ವರ್ಣವಲ್ಲಿ ಸ್ವಾಮೀಜಿ ಕರೆ

Jan 6, 2026 - 07:37
Jan 6, 2026 - 07:41
 0  30
ಬೇಡ್ತಿ-ಅಘನಾಶಿನಿ ಯೋಜನೆ ವಿರುದ್ಧದ ಸಮಾವೇಶಕ್ಕೆ ಬನ್ನಿ: ಸ್ವರ್ಣವಲ್ಲಿ ಸ್ವಾಮೀಜಿ ಕರೆ
ಆಪ್ತ ನ್ಯೂಸ್‌ ಶಿರಸಿ:

ಪಶ್ಚಿಮ ಘಟ್ಟದ ನದೀ ಕಣಿವೆಗಳಿಗೆ ಮಾರಕವಾದ ಬೇಡ್ತಿ-ಅಘನಾಶಿನಿ ನದಿಗಳ ದಿಕ್ಕು ತಿರುಗಿಸುವ ಯೋಜನೆಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಈ ಕೂಡಲೇ ಕೈಬಿಡುವ ನಿರ್ಧಾರ ಪ್ರಕಟಿಸಬೇಕು ಎಂದು ಆಗ್ರಹಿಸಿ ಜನವರಿ ೧೧ ರಂದು ಶಿರಸಿಯಲ್ಲಿ ಬೃಹತ್ ಜನ ಸಮಾವೇಶ ಏರ್ಪಡಿಸಲಾಗಿದೆ. ಈ ಸಮಾವೇಶಕ್ಕೆ ಸಾವಿರ ಸಾವಿರ ಸಂಖ್ಯೆಯಲ್ಲಿ ಜನಸಾಮಾನ್ಯರು ಆಗಮಿಸುವಂತೆ  ಬೇಡ್ತಿಅಘನಾಶಿನಿಕೊಳ್ಳ ಸಂರಕ್ಷಣಾ ಸಮಿತಿ
ಗೌರವಾಧ್ಯಕ್ಷರು, ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಕರೆ ನೀಡಿದ್ದಾರೆ.
ಜನವರಿ ೧೧ರಂದು ಭಾನುವಾರ ಮಧ್ಯಾಹ್ನ ೨ ಘಂಟೆಗೆ ಶಿರಸಿಯ ಎಂ.ಇ.ಎಸ್ ಕಾಲೇಜು ಮೈದಾನದಲ್ಲಿ ನಡೆಯುವ ಬೇಡ್ತಿ-ಅಘನಾಶಿನಿ ಸಮಾವೇಶ ಬಹುದೊಡ್ಡ ಸಂಘಟಿತ, ಪರಿಸರ ಸಂದೇಶವನ್ನು ನಾಡಿಗೆ ನೀಡಲಿದೆ. ಪಶ್ಚಿಮ ಘಟ್ಟ ಉಳಿಸಿ, ಉ.ಕ ರಕ್ಷಿಸಿ ಎಂಬ ಘೋಷಣೆಯೊಂದಿಗೆ ಬೇಡ್ತಿ- ಅಘನಾಶಿನಿ ಕಣಿವೆಗಳ ಮಣ್ಣಿನ ಮಕ್ಕಳು ಒಗ್ಗೂಡಲಿದ್ದಾರೆ ಎಂದು ಸ್ವಾಮೀಜಿಗಳು ಹೇಳಿದರು.
ಉ.ಕ ಜಿಲ್ಲೆಯ ವಿವಿಧ ಮಠಾಧೀಶರು ನಮ್ಮ ಅಹವಾಲಿಗೆ ಧ್ವನಿಗೂಡಿಸಲು ಜನವರಿ ೧೧ ರ ಸಮಾವೇಶದಲ್ಲಿ ಸಾಂನಿಧ್ಯ ನೀಡಲಿದ್ದಾರೆ. ಸೋಂದಾ, ಶ್ರೀ ಶ್ರೀಮದ್ ಮಾಧವಾನಂದ ಭಾರತೀ ಮಹಾಸ್ವಾಮಿಗಳು  ಶ್ರೀಸಂಸ್ಥಾನ ಶ್ರೀಮನ್ನೆಲೆಮಾವು ಮಠ, ಪ.ಪೂ. ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಶ್ರೀ ಕ್ಷೇತ್ರ ಸೋದೇ ಶ್ರೀವಾದಿರಾಜ ಮಠ, ಸೋಂದಾ, ಪ.ಪೂ. ಸ್ವಸ್ತಿಶ್ರೀ ಶ್ರೀ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ಶ್ರೀ ಕ್ಷೇತ್ರ ಸ್ವಾದೀ ದಿಗಂಬರ ಜೈನ ಮಠ, ಸೋಂದಾ, ಮ.ನಿ.ಪ್ರ. ಡಾ. ಮಹಾಂತ ಮಹಾಸ್ವಾಮಿಗಳು ಶ್ರೀ ಕ್ಷೇತ್ರ ಸಂಸ್ಥಾನ ಮಠ, ಜಡೆ, ತಾ: ಸೊರಬ ಪ.ಪೂ. ಶ್ರೀ ಶ್ರೀ ಬ್ರಹ್ಮಾನಂದ ಭಾರತೀ ಮಹಾಸ್ವಾಮಿಗಳು ಶ್ರೀ ಚೈತನ್ಯ ರಾಜಾರಾಮ ಅಶ್ರಮ, ಶಿರಳಗಿ, ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಪರ್ತಗಾಳಿ ಮಠದ ಪೂಜ್ಯರು ರಾಮಚಂದ್ರಾಪುರ ಮಠದ ಶ್ರೀಗಳು, ಬಣ್ಣದ ಮಠದ ಶ್ರೀಗಳನ್ನು ಭೇಟಿ ಮಾಡಿ  ಬೆಂಬಲ ಆಶೀರ್ವಾದ ಪಡೆಯಲಾಗಿದೆ. 
ನ್ಯಾಯಮೂರ್ತಿ ಜಸ್ಟಿಸ್ ಸಂತೋಷ ಹೆಗಡೆ ಅವರು ವಿಶೇಷ ಅತಿಥಿಗಳಾಗಿ ಆಗಮಿಸಿ ಮಾರ್ಗದರ್ಶನ ನೀಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರಾದ, ಆರ್.ವಿ ದೇಶಪಾಂಡೆ,  ಶಿವರಾಮ ಹೆಬ್ಬಾರ್, ಭೀಮಣ್ಣ ನಾಯ್ಕ, ಸತೀಶ ಸೈಲ್, ದಿನಕರ ಶೆಟ್ಟಿ, ಗಣಪತಿ ಉಳ್ವೇಕರ, ಶ್ರೀ ಶಾಂತಾರಾಮ ಸಿದ್ದಿ ಅವರನ್ನು ಆಹ್ವಾನಿಸಲಾಗಿದೆ.
ಈ ಸಮಾವೇಶದಲ್ಲಿ ಸುಮಾರು ೨೦,೦೦೦ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ.  ಈಗಾಗಲೇ ಕಳೆದ ೩ ತಿಂಗಳಿಂದ ಬೇಡ್ತಿ- ಅಘನಾಶಿನಿ ಕಣಿವೆಗಳಲ್ಲಿ ರ‍್ಯಾಲಿ, ಸಭೆಗಳು, ವಿಜ್ಞಾನಿಗಳ ವಿಚಾರ ಸಂಕಿರಣ, ಬೆಂಗಳೂರಲ್ಲಿ ತಜ್ಞರು, ಗಣ್ಯರ ಬೃಹತ್ ಸಭೆ ನಡೆಸಲಾಗಿದೆ.  ರಾಜ್ಯದ ಮುಖ್ಯಮಂತ್ರಿಗಳನ್ನು ಜನಪ್ರತಿನಿಧಿಗಳ ಜೊತೆ ಹೋಗಿ ಬೇಡ್ತಿ ಸಮೀತಿ ಪ್ರಮುಖರು ಭೇಟಿ ಮಾಡಿದ್ದಾರೆ. ಕೇಂದ್ರ ಸಚಿವರಾದ ಎಚ್.ಡಿ ಕುಮಾರಸ್ವಾಮಿ, ಸೋಮಣ್ಣ ಅವರನ್ನು ಭೇಟಿ ಮಾಡಲಾಗಿದೆ.
ಇದೀಗ ಜ. ೧೧ ರ ಸಮಾವೇಶದಲ್ಲಿ ಪಶ್ಚಿಮಘಟ್ಟದ ಪರಿಸರ ಗಣ್ಯರು ಸಂಸ್ಥೆಗಳ ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಸಮಾವೇಶಕ್ಕೆ ಬೇಕಾದ ಎಲ್ಲ ವ್ಯವಸ್ಥೆ ತಯಾರಿ ಮಾಡಲಾಗುತ್ತಿದೆ.
ಶಿರಸಿ ನಗರ ಸೇರಿದಂತೆ ವಿವಿಧ ಸಮುದಾಯ ಮುಖಂಡರ ಸಭೆಗಳು ನಡೆದಿವೆ. ಸಹಕಾರಿ ಸಂಘಗಳು ಮಂದಾಗಿ ಸಭೆಗಳನ್ನು ನಡೆಸಿವೆ.  ಸಾಮಾಜಿಕ ಮಾಧ್ಯಮ, ಪತ್ರಿಕಾ ಮಾಧ್ಯಮಗಳು ವ್ಯಾಪಕ ಲೇಖನ, ವರದಿ ಪ್ರಕಟಿಸಿವೆ. ಮಹಿಳಾ ಸಂಘಸAಸ್ಥೆಗಳು ಪರಿಸರ ಭಜನೆ- ಸಂಕೀರ್ತನೆ, ಶುರುಮಾಡಿವೆ.
ಇಡೀ ಜಿಲ್ಲೆಯ ಜನತೆ ಉ.ಕ ಉಳಿಸಿ ಪಶ್ಚಿಮಘಟ್ಟ ಉಳಿಸಿ ಸಮಾವೇಶ ಬೆಂಬಲಿಸಿದ್ದಾರೆ. ಬೇಡ್ತಿ- ಅಘನಾಶಿನಿ ಜನಾಂದೋಲನವನ್ನು ೧೯೮೨ ರಿಂದ ನಡೆಸುತ್ತಿದ್ದೇವೆ. ಎಲ್ಲ ಸಂದರ್ಭಗಳಲ್ಲಿ ಯಶ ಪಡೆದಿದ್ದೇವೆ. ರಾಜಕೀಯ ಪಕ್ಷಗಳ ಮುಖಂಡರು ಎಲ್ಲರೂ ನಮ್ಮ ಆಂದೋಲನದಲ್ಲಿ ಒಗ್ಗಟ್ಟಿನಿಂದ ಪಾಲ್ಗೊಳ್ಳುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಬೇಡ್ತಿಅಘನಾಶಿನಿಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಟಿಎಂಎಸ್‌ ಅಧ್ಯಕ್ಷ ಜಿ ಟಿ ಹೆಗಡೆ ತಟ್ಟೀಸರ, ಜಿಎಂ ಹೆಗಡೆ ಮುಳಖಂಡ, ಮಠದ ಅಧ್ಯಕ್ಷ ವಿ ಎನ್‌ ಹೆಗಡೆ ಬೊಮ್ನಳ್ಳಿ ಮತ್ತಿತರರು ಇದ್ದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0