‘ಡೇರಿಕಟ್ಟೆ ಪಂಚಾಯ್ತಿ ’– ಜನಮನದ ಮುಕ್ತ ಸಂಸತ್ತು. ಭಾಗ 1

Apr 6, 2026 - 10:35
 0  79
‘ಡೇರಿಕಟ್ಟೆ ಪಂಚಾಯ್ತಿ ’– ಜನಮನದ ಮುಕ್ತ ಸಂಸತ್ತು. ಭಾಗ 1

ಡಾ ರವಿಕಿರಣ ಪಟವರ್ಧನ

**************

ಮಲೆನಾಡಿನ ಮುಂಜಾನೆ ಅಂದರೆ ಒಂದು ವಿಶಿಷ್ಟ ಅನುಭವ. ಮಂಜಿನ ಮಡಿಲಲ್ಲಿ ಮಲಗಿರುವ ಹಳ್ಳಿ, ಹಕ್ಕಿಗಳ ಕೂಗು, ದೂರದಲ್ಲಿ ಕೇಳಿಬರುವ ಗೋವುಗಳ ಗಂಟೆಗಳ ನಾದ… ಆ ಸನ್ನಿವೇಶದಲ್ಲಿ ಕಂಬಳಿ ಹೊದ್ದ ರೈತರು ಸೈಕಲ್ ಅಥವಾ ಬೈಕ್ ಮೇಲೆ ಹಾಲಿನ ಕ್ಯಾನ್ ಕಟ್ಟಿಕೊಂಡು ಡೇರಿಯ ಕಡೆ ಹೊರಟಿರುತ್ತಾರೆ.
ಡೇರಿಗೆ ತಲುಪಿದ ಮೇಲೆ, ಹಾಲು ಅಳೆಯುವ ಸಾಲಿನಲ್ಲಿ ನಿಂತಾಗಲೇ ಶುರುವಾಗುತ್ತದೆ ಮತ್ತೊಂದು ಪ್ರಪಂಚ — “ಡೇರಿ ಕಟ್ಟೆ”.
☕ ಡೇರಿಕಟ್ಟೆ ಎಂದರೆ ಏನು?
ಡೇರಿ ಕಟ್ಟೆ ಎಂದರೆ:
ಹಾಲು ಸಂಗ್ರಹಿಸುವ  ಸ್ಥಳ ಮಾತ್ರವಲ್ಲ ಹಳ್ಳಿಯ ಜನಾಭಿಪ್ರಾಯ ಕೇಂದ್ರ
ಗ್ರಾಮೀಣ ಭಾರತದ ಅನೌಪಚಾರಿಕ ಸಂಸತ್ತು
ಹಾಲು ಕೊಟ್ಟ ಮೇಲೆ 10-15 ನಿಮಿಷ ಕಟ್ಟೆ ಮೇಲೆ ಕೂತು ಮಾತಾಡುವುದು, ಹರಟೆ — ಇದನ್ನೇ ಜನ ಜಗತ್ಪ್ರಸಿದ್ಧ “ಡೇರಿಕಟ್ಟೆ ಪಂಚಾಯ್ತಿ ” ಅಂತ ಕರೀತಾರೆ.
🗣️ ಯಾವ ವಿಷಯಗಳ ಮಾತುಕತೆ?
ಡೇರಿ ಕಟ್ಟೆಯಲ್ಲಿ ಚರ್ಚೆಯಾಗದ ವಿಷಯವೇ ಇಲ್ಲ:
💍 ಹಳ್ಳಿಯ ಮದುವೆಗಳು, ಪೇಟೆ ಮದುವೆ,ಕುಟುಂಬಗಳಲ್ಲಿಯ ಎಲ್ಲರ ಮನೆ ದೋಸೇ ತೂತೇ ಸುದ್ದಿ,
🏥 ಆಸ್ಪತ್ರೆ, ವೈದ್ಯರ ಬಗ್ಗೆಯ ಸಿಹಿ ಕಹಿ ಅನುಭವಗಳು, ಈ ಊರಿನಲ್ಲಿ ಈ ವೈದ್ಯರ ಹತ್ತಿರ ಹೋಗಿ ತೋರಿಸು ಆ ವೈದ್ಯರಹತ್ರ ಹೋಗಿ ತೋರಿಸು ಈ  ಆಸ್ಪತ್ರೆಗೆ ಹೋಗು ಎಂದು ಹೇಳುವ ಉಚಿತ ಸಲಹಾ ಸಮಿತಿ ಇದ್ದಂತೆ. ಜೊತೆಗೆ ತೀಕ್ಷ್ಣ ಟೀಕೆ 
🏢 ಟಿಎಸ್ಎಸ್, ಟಿಎಂಎಸ್, ಇತರ ಸಹಕಾರ ಸಂಸ್ಥೆಗಳ ರಾಜಕೀಯ, ಹಾಲು ಸೊಸೈಟಿಗಳ ವಿಚಾರಗಳು
🏛️ ತಾಲೂಕು ಮತ್ತು ಜಿಲ್ಲಾ ರಾಜಕೀಯ
🌏 ರಾಜ್ಯ ಮತ್ತು ದೇಶದ ರಾಜಕೀಯ ಬೆಳವಣಿಗೆಗಳು
ಅಲ್ಲಿ ಕೇಳಿಬರುವ ಹೆಸರುಗಳು:
ಸಿದ್ದರಾಮಯ್ಯ,
ನರೇಂದ್ರ ಮೋದಿ,
ಸೋನಿಯಾ ಗಾಂಧಿ,
ರಾಹುಲ್ ಗಾಂಧಿ,  ವಿಶ್ವೇಶ್ವರ ಹೆಗಡೆ ಕಾಗೇರಿ ಭೀಮಣ್ಣ ನಾಯ್ಕ,
ಇವರಿಂದ ಹಿಡಿದು ಮಧ್ಯ ಪ್ರಾಚ್ಯ ಯುದ್ಧ ,ಅಮೇರಿಕಾದ  ಟ್ರಂಪಣ್ಣನ ತನಕ—ಎಲ್ಲರ ಬಗ್ಗೆ ಚರ್ಚೆ ನಡೆಯುತ್ತದೆ! ಸಂಸತ್ತಿನಲ್ಲಿರುವಂತೆ ಎಲ್ಲರನ್ನು ನಿಯಂತ್ರಿಸಲು ಲೋಕಸಭಾಧ್ಯಕ್ಷರು ಒಂದೇ ಇಲ್ಲಿ ಇರುವುದಿಲ್ಲ
🌊 ಬೇಡ್ತಿ ಯೋಜನೆ – ಕಟ್ಟೆಯ ಕಿಡಿ
ಇತ್ತೀಚಿನ ದಿನಗಳಲ್ಲಿ, ಶಿರಸಿ–ಯಲ್ಲಾಪುರ ಭಾಗದಲ್ಲಿ ಡೇರಿ ಯಕಟ್ಟೆಯ ಮುಖ್ಯ ಚರ್ಚೆ ಒಂದು —
ಬೇಡ್ತಿ ನದಿ ಮೇಲೆ proposed ಆಗಿರುವ ಯೋಜನೆ.
ಈ ಯೋಜನೆ ಏನು ಹೇಳುತ್ತದೆ?
ಬೇಡ್ತಿ ನದಿಗೆ ಆಣೆಕಟ್ಟು ಕಟ್ಟುವುದು
ನೀರನ್ನು ಬೇರೆ ಭಾಗಕ್ಕೆ ತಿರುಗಿಸುವುದು
ಆದರೆ ಕಟ್ಟೆಯ ಚರ್ಚೆಯಲ್ಲಿ ಕೇಳಿಬರುವ ಪ್ರಶ್ನೆಗಳು ಬೇರೆ:
“ನಮ್ಮ ನದಿಯೇ ಉಳಿಯುತ್ತದಾ?”
“ಅರಣ್ಯಕ್ಕೆ ಏನಾಗುತ್ತೆ?”
“ನಮ್ಮ ಕೃಷಿ, ಜಲಚಕ್ರ ಬದಲಾಗುತ್ತದಾ?”
🌱 ಪರಿಸರ ಮತ್ತು ಅಸ್ಮಿತೆಯ ಪ್ರಶ್ನೆ
ಮಲೆನಾಡಿಗರಿಗೆ ನದಿ ಅಂದರೆ ಕೇವಲ ನೀರಲ್ಲ:
ಅದು ಅವರ ಜೀವನ
ಕೃಷಿಯ ಆಧಾರ
ಸಂಸ್ಕೃತಿ ಮತ್ತು ಅಸ್ತಿತ್ವ
ಹೀಗಾಗಿ ಬೇಡ್ತಿ ಯೋಜನೆ ಬಗ್ಗೆ:
ಆತಂಕ,
ವಿರೋಧ,
ಚರ್ಚೆ,
ಇವು ಕಟ್ಟೆಯಲ್ಲೇ ಮೊದಲು ಹೊತ್ತಿ ಎದ್ದವು.
🧠 ಡೇರಿಕಟ್ಟೆ – ಜನಾಭಿಪ್ರಾಯದ ಕೇಂದ್ರ
ಡೇರಿ ಕಟ್ಟೆ:
ಗ್ರಾಮೀಣ ಜನರ ಸೋಷಿಯಲ್ ಮೀಡಿಯಾ
ಅಭಿಪ್ರಾಯ ಸಂಗ್ರಹಣೆ ಕೇಂದ್ರ
ಸುದ್ದಿ ಹರಡುವ ವೇದಿಕೆ
ಇಲ್ಲಿ ಹುಟ್ಟಿದ ಮಾತು: ➡️ ಮನೆಗೆ ಹೋಗುತ್ತದೆ
➡️ ಹಳ್ಳಿಗೆ ಹರಡುತ್ತದೆ
➡️ ಕೆಲವೊಮ್ಮೆ ಹೋರಾಟವಾಗುತ್ತದೆ


ಡೇರಿ ಕಟ್ಟೆ ಅಂದ್ರೆ ಕೇವಲ ಒಂದು ಕಟ್ಟೆ ಅಲ್ಲ—
ಅದು:
ಮಲೆನಾಡಿನ ಜನಮನ
ಹಳ್ಳಿಯ ಚಿಂತನೆ
ಜನತಂತ್ರದ ಮೂಲ ರೂಪ
ಬೇಡ್ತಿ ಹೋರಾಟದ ಕಿಡಿ ಕೂಡ ಅಲ್ಲಿ ಹೊತ್ತಿ ಎದ್ದದ್ದು ಅಚ್ಚರಿ ಅಲ್ಲ…
ಯಾಕಂದ್ರೆ ಅಲ್ಲಿ ಮಾತನಾಡುವುದು ಜನರ ಬದುಕಿನ ನಿಜ.

ಆದರೆ ಹಳ್ಳಿಯಲ್ಲಿ ಹೈನುಗಾರಿಕೆನೇ ಕಡಿಮೆಯಾಗುತ್ತಿರುವ ಕಾರಣ ಮುಂದೊಂದು ದಿನ ಈ ಡೇರಿ ಕಟ್ಟೆಯ ಮುಕ್ತ ಸಂಸತ್ತು ಇಲ್ಲವಾಗಬಹುದು ?

ಇಂತಹ ಒಂದು ಹಳ್ಳಿಯ ಸಂಸತ್ತಿನಲ್ಲಿ ಬೇಡ್ತಿ ವರದಾ ಅಘನಾಶಿನಿ ಯೋಜನೆ ಪರ, ವಿರೋಧದ ಚರ್ಚೆಗಳ ಒಂದು ಬೃಹತ್ ಅನಾವರಣದ ಸರಣಿ ಇದಾಗಿರುತ್ತದೆ.

****************

ಸಿರ್ಸಿ ತಾಲೂಕಿನ ಹೊರವಲಯದ ಒಂದು ಹಳ್ಳಿ. ಇನ್ನೂ ಕತ್ತಲು ಕರಗಿಲ್ಲ. ಆದರೆ ಡೇರಿ ಕಟ್ಟೆಯ ಮುಂದೆ ಮಾತ್ರ ಬೆಳಕು . ಒಬ್ಬೊಬ್ಬರಾಗಿ ರೈತರು ಹಾಲಿನ ಕ್ಯಾನ್ ಹಿಡಿದು ಬರುತ್ತಿದ್ದಾರೆ. ತೋಟದ ಕೆಲಸ ಮುಗಿಸಿ ಬಂದವರು, ದನ ಕರೆದು ಬಂದವರು, ಇನ್ನೂ ಕಣ್ಣು ತಿಕ್ಕಿಕೊಳ್ಳುತ್ತಲೇ ಬಂದವರು — ಎಲ್ಲರೂ ಒಂದೇ ಕಡೆ ಜಮಾಯಿಸುತ್ತಾರೆ. ಮರದ ಕೆಳಗೆ ಇರುವ ಡೇರಿ .   ಡೇರಿಕಟ್ಟೆ ಮತ್ತೆ ಜೀವ ತುಂಬಿಕೊಳ್ಳಲು ಶುರುವಾಗಿದೆ.
ಹಾಲು ಹಾಕಿದ ನಂತರ ಯಾರೂ ತಕ್ಷಣ ಮನೆಗೆ ಹೋಗುವುದಿಲ್ಲ. ಅದೇ ಕಟ್ಟೆಯ ಮೇಲೆ, ಅದೇ ಮರದ ನೆರಳಿನಲ್ಲಿ ಕುಳಿತು ಮಾತು ಶುರುವಾಗುತ್ತದೆ.
 ಮಾತಿನ ವಿಷಯ ಒಂದೇ — ಬೇಡ್ತಿ ವರದಾ, ಅಘನಾಶಿನಿ ನದಿ ತಿರುವು ಯೋಜನೆ. 

 
ಚಹಾ ಅಂಗಡಿಯ ರಾಮಣ್ಣ ಪಾತ್ರೆಗೆ ಹಾಲು ಹಾಕಿ ಕುದಿಸುತ್ತಿದ್ದರು. ಹತ್ತಿರದಲ್ಲೇ ಹಸುವಿನ ಗಂಟೆಯ ಶಬ್ದ, ದೂರದಲ್ಲಿ ಕೋಳಿ ಕೂಗು – ಹಳ್ಳಿಯ ನಿತ್ಯ ಜೀವನ ಶುರುವಾಗುತ್ತಿದೆ.
“ಏನಪ್ಪಾ ರಾಮಣ್ಣಾ, ಇವತ್ತು ಸುದ್ದೇನು?” – ಎಂದು ಗಪ್ಪಣ್ಣ ಕುರ್ಚಿ ಎಳೆದುಕೊಂಡು ಕುಳಿತುಕೊಂಡ.
ರಾಮಣ್ಣ ಚಹಾ ಹಾಕುತ್ತಾ ಹೇಳಿದ –
“ಸುದ್ದಿ ಅಂತೀರಾ? ಎಲ್ಲೆಲ್ಲೂ ಅದೇ ಮಾತು – ಬೇಡ್ತಿ ವರದಾ, ಅಘನಾಶಿನಿ ಯೋಜನೆ!”
ಅಷ್ಟರಲ್ಲಿ ಮಾಬ್ಲಣ್ಣ, ಕೃಷ್ಣಣ್ಣ, ರಾಘವೇಂದ್ರ ಮಾಸ್ಟರ್, ಎಲ್ಲರೂ ಸೇರಿದರು.
ಮಾಸ್ಟರ್ ಮಾತನಾಡಲು ಶುರು ಮಾಡಿದರು –
“ಈ ಯೋಜನೆ ಸರಿಯಾಗಿ ಮಾಡಿದ್ರೆ ಬಯಲುಸಿಮೆ ಭಾಗಕ್ಕೆ ಕುಡಿಯುವ ನೀರಿನ ಕೊರತೆ ನೀಗಬಹುದು. ಆದರೆ ಅರಣ್ಯಕ್ಕೆ ಏನು ಆಗುತ್ತೆ ಅನ್ನೋದು ದೊಡ್ಡ ಪ್ರಶ್ನೆ.”
ಮಲ್ಲಯ್ಯ ಅಜ್ಜ ತಲೆ ಆಡಿಸಿದರು –
“ನಾವು ನೋಡಿದ ಕಾಡು, ನಾವು ಕುಡಿದ ನೀರು... ಇವು ಹೋಗ್ಬಿಟ್ಟರೆ ನಾವು ಏನು ಉಳ್ಕೊಳ್ತೀವಿ?”
ಗಪ್ಪಣ್ಣ ಕೂಡ ಮಾತಿಗೆ ಸೇರಿಕೊಂಡ –
“ನೀರು ಬೇಕು ಸರಿ, ಆದ್ರೆ ನಮ್ಮ ಮಣ್ಣು, ಕಾಡು ಕಳೆದುಕೊಂಡು ಬಂದ ನೀರು ಏನು ಉಪಯೋಗ?”
ಮಾಬ್ಲಣ್ಣ ಸ್ವಲ್ಪ ತಾಳ್ಮೆಯಿಂದ ಹೇಳಿದ –
“ಅದು ಸರಿ ಗಪ್ಪಣ್ಣಾ… ಆದ್ರೆ ರೈತನಿಗೆ ನೀರಿಲ್ಲದಿದ್ದರೆ ಬೆಳೆ ಏನು ಮಾಡ್ತೀವಿ? ಸರ್ಕಾರ ಹೇಳೋದು ಒಳ್ಳೇದಕ್ಕೇ ಇರಬಹುದು ಅಲ್ವಾ?”
ಚರ್ಚೆ ಹೀಗೆ ನಿಧಾನವಾಗಿ ಗಂಭೀರವಾಗಿ ತಿರುಗಿತು.
ಡೇರಿ ಕಟ್ಟೆಯ ಮಾತುಗಳು ಈಗ  — ಹಳ್ಳಿಯ ಭವಿಷ್ಯದ ಪ್ರಶ್ನೆಯಾಗಿ ರೂಪುಗೊಂಡವು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0