ಅನಂತ ಕುಮಾರ ಹೆಗಡೆ ಅನುಪಸ್ಥಿತಿ: ಉತ್ತರ ಕನ್ನಡ ಬಿಜೆಪಿಯಲ್ಲಿ ನಾಯಕತ್ವದ ಶೂನ್ಯ? ರಾಜ್ಯಾಧ್ಯಕ್ಷರ ಮೊರೆ ಹೋದ ಬಿಜೆಪಿ!
ಆಪ್ತ ನ್ಯೂಸ್ ಉತ್ತರ ಕನ್ನಡ:
ಉತ್ತರ ಕನ್ನಡ ಜಿಲ್ಲೆಯ ರಾಜಕಾರಣ ಹಾಗೂ ಹಿಂದುತ್ವದ ಹೋರಾಟ ಎಂದ ತಕ್ಷಣ ಮೊದಲು ನೆನಪಿಗೆ ಬರುವ ಹೆಸರೇ ಅನಂತ ಕುಮಾರ ಹೆಗಡೆ. ಆದರೆ, ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಭಟ್ಕಳದ ಸದ್ಯದ ವಿದ್ಯಮಾನಗಳು ಜಿಲ್ಲಾ ಬಿಜೆಪಿಯಲ್ಲಿ ಹೆಗಡೆ ಅವರಂತಹ ಒಬ್ಬ ಗಟ್ಟಿ ನಾಯಕನ ಕೊರತೆ ಎಷ್ಟಿದೆ ಎಂಬುದನ್ನು ಎದ್ದು ತೋರಿಸುತ್ತಿವೆ. ಸ್ಥಳೀಯ ಮುರಿನಕಟ್ಟೆ ಧ್ವಂಸ ವಿಚಾರಕ್ಕೆ ಸಂಬಂಧಿಸಿದಂತೆ ಭಟ್ಕಳದಲ್ಲಿ ಮೇ ೨೯ರಂದು ಬೃಹತ್ ಪ್ರತಿಭಟನೆಗೆ ಬಿಜೆಪಿ ಮುಂದಾಗಿದ್ದು, ಈ ಹೋರಾಟದ ನೇತೃತ್ವ ವಹಿಸಲು ಈಗ ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಬರಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇದು ಜಿಲ್ಲೆಯ ಬಿಜೆಪಿಗರಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ.
ಹೋರಾಟದ ಮುಂಚೂಣಿಯಲ್ಲಿ ಸದಾ ಇರುತ್ತಿದ್ದ ‘ಹೆಗಡೆ’
ಭಟ್ಕಳದಲ್ಲಿ ಯಾವುದೇ ರೀತಿಯ ಹಿಂದುತ್ವದ ಹೋರಾಟ ಅಥವಾ ಸಂಘಟನೆಯ ಕಾರ್ಯಕ್ರಮಗಳು ನಡೆದರೂ ಅಲ್ಲಿ ಅನಂತಕುಮಾರ ಹೆಗಡೆ ಅವರ ಮುಂದಾಳತ್ವ ಇರುತ್ತಿತ್ತು. ಅವರು ಸಂಸದರಾಗಿದ್ದ ಅವಧಿಯಲ್ಲಂತೂ ಹಿಂದುತ್ವದ ವಿಚಾರ ಬಂದಾಗ ಮುಂಚೂಣಿಯಲ್ಲಿ ನಿಂತು, ಎಂತಹ ಕಠಿಣ ಪರಿಸ್ಥಿತಿಯಲ್ಲೂ ಎಲ್ಲರ ವಿರುದ್ಧ ತೊಡೆತಟ್ಟಿ ನಿಲ್ಲುವ ಧೈರ್ಯ ಪ್ರದರ್ಶಿಸುತ್ತಿದ್ದರು. ತಳಮಟ್ಟದ ಕಾರ್ಯಕರ್ತರ ಬೆನ್ನಿಗೆ ಬಂಡೆಯಂತೆ ನಿಲ್ಲುತ್ತಿದ್ದ ಅವರ ಗಟ್ಟಿ ನಾಯಕತ್ವದ ಶೈಲಿಯೇ ಬೇರೆಯಾಗಿತ್ತು.
ಆದರೆ, ಇತ್ತೀಚಿನ ದಿನಗಳಲ್ಲಿ ಅನಂತಕುಮಾರ ಹೆಗಡೆ ಅವರು ಜಿಲ್ಲೆಯ ರಾಜಕೀಯ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಿಂದ ಅಂತರ ಕಾಯ್ದುಕೊಂಡಿದ್ದಾರೆ. ವಿಶೇಷವಾಗಿ ಭಟ್ಕಳದ ಯಾವುದೇ ಪ್ರಮುಖ ವಿದ್ಯಮಾನಗಳಲ್ಲೂ ಅವರು ಸಕ್ರಿಯವಾಗಿ ಕಾಣಿಸಿಕೊಳ್ಳುತ್ತಿಲ್ಲ. ಈ ನಡೆ ಈಗ ಭಟ್ಕಳದ ಹೋರಾಟಗಾರರು ಹಾಗೂ ಸಾರ್ವಜನಿಕರಲ್ಲಿ ಅವರ ಕೊರತೆ ಎದ್ದು ಕಾಣುವಂತೆ ಮಾಡಿದೆ.
ಹೊರ ಜಿಲ್ಲೆಯ ನಾಯಕರ ಅನಿವಾರ್ಯತೆ: ಉತ್ತರ ಕನ್ನಡದಲ್ಲಿ ನಾಯಕತ್ವ ಶೂನ್ಯವೇ?
ಅನಂತಕುಮಾರ ಹೆಗಡೆ ಅವರು ಸಕ್ರಿಯ ರಾಜಕಾರಣದಲ್ಲಿ ಮುಂಚೂಣಿಯಲ್ಲಿದ್ದಾಗ ರಾಜ್ಯದ ಬೇರೆ ಯಾವುದೇ ನಾಯಕರು ಉತ್ತರ ಕನ್ನಡ ಜಿಲ್ಲೆಗೆ ಬಂದು ಇಲ್ಲಿನ ಸ್ಥಳೀಯ ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳುವ ಪ್ರಮೇಯವೇ ಬರುತ್ತಿರಲಿಲ್ಲ. ಹೆಗಡೆ ಅವರ ಒಂದು ಕರೆಗೆ ಇಡೀ ಜಿಲ್ಲೆಯೇ ಕದಲುತ್ತಿತ್ತು.
ಸಾರ್ವಜನಿಕರ ಪ್ರಶ್ನೆ:
"ಅನಂತಕುಮಾರ ಹೆಗಡೆ ಅವರು ತೋರುತ್ತಿದ್ದ ಆ ಗಟ್ಟಿತನ, ಹೋರಾಟದ ಕಿಚ್ಚನ್ನು ಸದ್ಯದ ಜಿಲ್ಲಾ ಬಿಜೆಪಿ ನಾಯಕರು, ಹಾಲಿ ಸಂಸದರು ಯಾವಾಗ ತೋರಿಸುತ್ತಾರೆ?" ಎಂದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶ್ನೆಗಳು ಕೇಳಿಬರುತ್ತಿವೆ.
ಆದರೆ ಈಗ ಮುರಿನಕಟ್ಟೆ ಧ್ವಂಸದಂತಹ ಸೂಕ್ಷ್ಮ ವಿಚಾರದಲ್ಲೂ ಜಿಲ್ಲೆಯ ಬಿಜೆಪಿ ನಾಯಕರಿಗೆ ಹೋರಾಟವನ್ನು ಸಮರ್ಥವಾಗಿ ಮುನ್ನಡೆಸಲು ಸಾಧ್ಯವಾಗುತ್ತಿಲ್ಲವೇ ಎಂಬ ಅನುಮಾನ ಮೂಡಿದೆ. ಜಿಲ್ಲೆಯ ನಾಯಕತ್ವದಲ್ಲಿ ಕಾಣಿಸುತ್ತಿರುವ ಈ ಶೂನ್ಯತೆಯಿಂದಾಗಿಯೇ ಈಗ ಹೊರ ಜಿಲ್ಲೆಯ ನಾಯಕರನ್ನು ಹಾಗೂ ರಾಜ್ಯಾಧ್ಯಕ್ಷರನ್ನು ಪ್ರತಿಭಟನೆಗೆ ಕರೆತರಬೇಕಾದ ಅನಿವಾರ್ಯತೆ ಎದುರಾಗಿದೆ ಎಂಬುದು ಸಾರ್ವಜನಿಕರ ಮುಕ್ತ ಅಭಿಪ್ರಾಯವಾಗಿದೆ.
ಮೇ ೨೯ರ ಭಟ್ಕಳ ಪ್ರತಿಭಟನೆ ಮತ್ತು ಮುಂದಿನ ಸವಾಲುಗಳು
ಸ್ಥಳೀಯ ಮುರಿನಕಟ್ಟೆ ಧ್ವಂಸದ ವಿರುದ್ಧ ಬಿಜೆಪಿ ಹಮ್ಮಿಕೊಂಡಿರುವ ಮೇ ೨೯ರ ಪ್ರತಿಭಟನೆ ಜಿಲ್ಲಾ ಬಿಜೆಪಿಗೆ ಅತ್ಯಂತ ನಿರ್ಣಾಯಕವಾಗಿದೆ. ರಾಜ್ಯಾಧ್ಯಕ್ಷರ ಮೊರೆ ಹೋಗಿರುವ ಉತ್ತರ ಕನ್ನಡದ ಬಿಜೆಪಿಗರು, ಈ ಹೋರಾಟದ ಮೂಲಕವಾದರೂ ಕಾರ್ಯಕರ್ತರಲ್ಲಿ ಮರುಜೀವ ತುಂಬಲು ಯತ್ನಿಸುತ್ತಿದ್ದಾರೆ.
ಆದರೆ, ಅನಂತಕುಮಾರ ಹೆಗಡೆ ಅವರ ಅನುಪಸ್ಥಿತಿಯಲ್ಲಿ ಭಟ್ಕಳದ ಹೋರಾಟಗಾರರನ್ನು ಒಂದೇ ಸೂರಿನಡಿ ತಂದು, ಹಳೆಯ ಜೋಶ್ ಕಾಯ್ದುಕೊಳ್ಳುವುದು ಸದ್ಯದ ಜಿಲ್ಲಾ ನಾಯಕರಿಗೆ ಮತ್ತು ಹೊಸ ಸಂಸದರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಹೆಗಡೆಯವರ ಅಬ್ಬರದ ಹೋರಾಟದ ಶೈಲಿಯನ್ನು ಮಿಸ್ ಮಾಡಿಕೊಳ್ಳುತ್ತಿರುವ ಕಾರ್ಯಕರ್ತರು, ಭಟ್ಕಳದ ಪ್ರತಿಭಟನೆಯ ಯಶಸ್ಸಿನತ್ತ ಕಣ್ಣಿಟ್ಟಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



