ತಾಳಗುಪ್ಪ–ಸಿದ್ದಾಪುರ–ಶಿರಸಿ–ಹುಬ್ಬಳ್ಳಿ ರೈಲು ಮಾರ್ಗ: ಉತ್ತರ ಕನ್ನಡದ ಅಭಿವೃದ್ಧಿಯ ಹೆಬ್ಬಾಗಿಲು

Jun 18, 2026 - 19:44
Jun 19, 2026 - 08:25
 0  189
ತಾಳಗುಪ್ಪ–ಸಿದ್ದಾಪುರ–ಶಿರಸಿ–ಹುಬ್ಬಳ್ಳಿ ರೈಲು ಮಾರ್ಗ: ಉತ್ತರ ಕನ್ನಡದ ಅಭಿವೃದ್ಧಿಯ ಹೆಬ್ಬಾಗಿಲು

ಡಾ. ರವಿಕಿರಣ ಪಟವರ್ಧನ,

****

ಉತ್ತರ ಕನ್ನಡ ಜಿಲ್ಲೆಯ ಜನರ ದಶಕಗಳ ಕನಸಾಗಿರುವ ತಾಳಗುಪ್ಪ–ಸಿದ್ದಾಪುರ–ಶಿರಸಿ–ಹುಬ್ಬಳ್ಳಿ ರೈಲು ಮಾರ್ಗ ಇದೀಗ ನಿರ್ಣಾಯಕ ಹಂತ ತಲುಪಿದೆ. ಸಮೀಕ್ಷೆಗಳ ಹಂತವನ್ನು ದಾಟಿ ಯೋಜನೆ ಅನುಷ್ಠಾನದ ದಿಕ್ಕಿನಲ್ಲಿ ಸಾಗುತ್ತಿರುವ ಈ ಸಂದರ್ಭದಲ್ಲಿ, ಅದರ ಮೂಲ ಸ್ವರೂಪವನ್ನು ಉಳಿಸಿಕೊಂಡು ಶೀಘ್ರವಾಗಿ ಕಾರ್ಯರೂಪಕ್ಕೆ ತರುವುದು ಅತ್ಯಗತ್ಯವಾಗಿದೆ.

ಇದು ಕೇವಲ ಒಂದು ಹೊಸ ರೈಲು ಮಾರ್ಗದ ಯೋಜನೆಯಲ್ಲ. ಉತ್ತರ ಕನ್ನಡ, ಮಲೆನಾಡು ಹಾಗೂ ಉತ್ತರ ಕರ್ನಾಟಕದ ನಡುವೆ ಹೊಸ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಪರ್ಕ ಸೇತುವೆ ನಿರ್ಮಿಸುವ ಐತಿಹಾಸಿಕ ಅವಕಾಶವಾಗಿದೆ
 ತಾಳಗುಪ್ಪ–ಶಿರಸಿ–ಹುಬ್ಬಳ್ಳಿ ನೂತನ ರೈಲು ಮಾರ್ಗದ ಪ್ರಾಥಮಿಕ ಎಂಜಿನಿಯರಿಂಗ್ ಕಮ್ ಟ್ರಾಫಿಕ್ (PET) ಸಮೀಕ್ಷೆಗೆ ಅನುಮೋದನೆ ದೊರೆಯಿತು. 

2023ರ ಮಾರ್ಚ್‌ನಲ್ಲಿ ನೈಋತ್ಯ ರೈಲ್ವೆ ವಲಯ ಪ್ರಾಥಮಿಕ ಸಮೀಕ್ಷಾ ವರದಿಯನ್ನು ರೈಲ್ವೆ ಸಚಿವಾಲಯಕ್ಕೆ ಸಲ್ಲಿಸಿತು. ನಂತರ 2025ರಲ್ಲಿ ಅಂತಿಮ ಸ್ಥಳ ಸಮೀಕ್ಷೆ (Final Location Survey) ಕೈಗೊಳ್ಳಲು ಗುತ್ತಿಗೆ ನೀಡಲಾಯಿತು. ಸುಮಾರು 167 ಕಿಲೋಮೀಟರ್ ಉದ್ದದ ಈ ಮಾರ್ಗ ಕವಚೂರು, ಸಿದ್ದಾಪುರ, ಮಂಡಿಕೊಪ್ಪ, ಬಿದ್ರಳ್ಳಿ, ಶಿರಸಿ,  ಮುಂಡಗೋಡ ಹಾಗೂ ತಡಸ ಮೂಲಕ ಹುಬ್ಬಳ್ಳಿ ತಲುಪುವಂತೆ ಪ್ರಸ್ತಾಪಿಸಲಾಗಿದೆ.

ಇದು ಕಾಗದದಲ್ಲಿನ ಒಂದು ರೇಖೆ ಮಾತ್ರವಲ್ಲ; ಉತ್ತರ ಕನ್ನಡದ ಅಭಿವೃದ್ಧಿಯ ಹೊಸ ದಿಕ್ಕಾಗಿದೆ.

ಏಕೆ ಈ ಮಾರ್ಗ ಮಹತ್ವದ್ದಾಗಿದೆ?

ಇಂದು ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಭಾಗಗಳು ರೈಲ್ವೆ ಸಂಪರ್ಕದಿಂದ ವಂಚಿತವಾಗಿವೆ. ಕರಾವಳಿ ಭಾಗಕ್ಕೆ ಕೊಂಕಣ ರೈಲು ಇದ್ದರೂ, ಜಿಲ್ಲೆಯ ಒಳನಾಡು ಪ್ರದೇಶಗಳಾದ ಶಿರಸಿ, ಸಿದ್ದಾಪುರ, ಯಲ್ಲಾಪುರ ಹಾಗೂ ಮುಂಡಗೋಡಗಳಿಗೆ ರೈಲು ಸೌಲಭ್ಯವಿಲ್ಲ.

ಶಿವಮೊಗ್ಗ ಅಥವಾ ತಾಳಗುಪ್ಪ ಭಾಗದ ಜನರು ಹುಬ್ಬಳ್ಳಿಗೆ ತೆರಳಲು ದೀರ್ಘ ಸುತ್ತು ಬಳಸಬೇಕಾಗಿದೆ. ಹೊಸ ಮಾರ್ಗ ನಿರ್ಮಾಣವಾದರೆ ಪ್ರಯಾಣದ ಸಮಯ ಕಡಿಮೆಯಾಗುವುದರ ಜೊತೆಗೆ ಸರಕು ಸಾಗಣೆಯ ವೆಚ್ಚವೂ ಗಣನೀಯವಾಗಿ ಇಳಿಯಲಿದೆ.

ಶಿರಸಿ ಭಾರತದ ಅತಿದೊಡ್ಡ ಅಡಿಕೆ ವ್ಯಾಪಾರ ಕೇಂದ್ರಗಳಲ್ಲಿ ಒಂದಾಗಿದೆ. ಸಿದ್ದಾಪುರ, ಯಲ್ಲಾಪುರ, ಮುಂಡಗೋಡ ಭಾಗಗಳಲ್ಲಿ ಅಡಿಕೆ, ಕಾಳುಮೆಣಸು, ಶುಂಠಿ ಹಾಗೂ ಇತರೆ ತೋಟಗಾರಿಕಾ ಬೆಳೆಗಳು ವ್ಯಾಪಕವಾಗಿ ಬೆಳೆಯುತ್ತವೆ. ರೈಲು ಸಂಪರ್ಕ ಬಂದರೆ ಕೃಷಿ ಉತ್ಪನ್ನಗಳು ದೇಶದ ವಿವಿಧ ಮಾರುಕಟ್ಟೆಗಳಿಗೆ ವೇಗವಾಗಿ ಹಾಗೂ ಕಡಿಮೆ ವೆಚ್ಚದಲ್ಲಿ ತಲುಪಲಿವೆ.

ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ

ಈ ರೈಲು ಮಾರ್ಗ ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳ ಪ್ರವಾಸೋದ್ಯಮಕ್ಕೂ ಮಹತ್ತರ ಕೊಡುಗೆ ನೀಡಲಿದೆ.

ಜೋಗ ಜಲಪಾತ, ಸಿರಿಮನೆ ಜಲಪಾತ, ಸಹ್ಯಾದ್ರಿ ಅರಣ್ಯ ಪ್ರದೇಶ, ಯಾಣ, ಬನವಾಸಿ, ಉಂಚಳ್ಳಿ ಜಲಪಾತ,  ಹಾಗೂ ಅನೇಕ ಪ್ರಕೃತಿ ತಾಣಗಳು ದೇಶದ ವಿವಿಧ ಭಾಗಗಳ ಪ್ರವಾಸಿಗರಿಗೆ ಸುಲಭವಾಗಿ ತಲುಪುವಂತಾಗುತ್ತವೆ.

ಇದರ ಪರಿಣಾಮವಾಗಿ ಹೋಟೆಲ್, ಸಾರಿಗೆ, ಪ್ರವಾಸ ಮಾರ್ಗದರ್ಶಕ ಸೇವೆ, ಸಣ್ಣ ವ್ಯಾಪಾರ ಸೇರಿದಂತೆ ಸಾವಿರಾರು ಜನರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಬಹುದು.

ಮೂಲ ಯೋಜನೆಗೆ ಧಕ್ಕೆಯಾಗಬಾರದು

ಇತ್ತೀಚೆಗೆ ಕೆಲ ವಲಯಗಳಲ್ಲಿ ಸೊರಬ ಮೂಲಕ ಹಾವೇರಿ ಕಡೆಗೆ ರೈಲು ಮಾರ್ಗ ಕೊಂಡೊಯ್ಯುವ ಪ್ರಸ್ತಾಪಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಸೊರಬ ತಾಲ್ಲೂಕಿಗೂ ರೈಲು ಸಂಪರ್ಕ ದೊರಕಬೇಕು ಎಂಬ ಬೇಡಿಕೆ ನ್ಯಾಯಸಮ್ಮತವಾಗಿದೆ. ಆದರೆ ಅದಕ್ಕಾಗಿ ಈಗಾಗಲೇ ಸಮೀಕ್ಷೆ ಪೂರ್ಣಗೊಂಡಿರುವ ತಾಳಗುಪ್ಪ–ಶಿರಸಿ–ಹುಬ್ಬಳ್ಳಿ ಮಾರ್ಗವನ್ನು ಬದಲಾಯಿಸುವುದು ಸಮಂಜಸವಲ್ಲ.

ಒಂದು ಪ್ರದೇಶದ ಅಭಿವೃದ್ಧಿಗಾಗಿ ಮತ್ತೊಂದು ಪ್ರದೇಶದ ಹಕ್ಕನ್ನು ಕಸಿದುಕೊಳ್ಳುವುದು ಪರಿಹಾರವಲ್ಲ. ಬದಲಾಗಿ ಎರಡೂ ಪ್ರದೇಶಗಳ ಅಗತ್ಯಗಳನ್ನು ಪೂರೈಸುವ ದೂರದೃಷ್ಟಿಯ ಯೋಜನೆ ರೂಪಿಸಬೇಕು.

ಶಿರಸಿ – ಭವಿಷ್ಯದ ರೈಲ್ವೆ ಜಂಕ್ಷನ್

ಈ ಹಿನ್ನೆಲೆಯಲ್ಲಿ ಒಂದು ಮಹತ್ವದ ಪ್ರಸ್ತಾಪವನ್ನು ಪರಿಗಣಿಸಬಹುದು.

ಮೊದಲ ಹಂತ

ತಾಳಗುಪ್ಪ–ಸಿದ್ದಾಪುರ–ಶಿರಸಿ–ಮುಂಡಗೋಡ–ತಡಸ–ಹುಬ್ಬಳ್ಳಿ ರೈಲು ಮಾರ್ಗ

ಈ ಮಾರ್ಗಕ್ಕೆ ಈಗಾಗಲೇ ಸಮೀಕ್ಷೆ ನಡೆದಿದ್ದು, ತ್ವರಿತವಾಗಿ ಅನುಮೋದನೆ ನೀಡಿ ಕಾಮಗಾರಿ ಆರಂಭಿಸಬೇಕು.

ಎರಡನೇ ಹಂತ

ಶಿವಮೊಗ್ಗ–ಶಿಕಾರಿಪುರ–ಸೊರಬ–ಶಿರಸಿ–ಹಾವೇರಿ  ರೈಲು ಮಾರ್ಗ

ಈ ಮಾರ್ಗವು ಸೊರಬ ಹಾಗೂ ಮಧ್ಯ ಮಲೆನಾಡು ಪ್ರದೇಶಗಳಿಗೆ ರೈಲು ಸಂಪರ್ಕ ಒದಗಿಸಲಿದೆ.

ಈ ಎರಡೂ ಮಾರ್ಗಗಳು ಶಿರಸಿಯಲ್ಲಿ ಸಂಧಿಸಿದರೆ, ಶಿರಸಿ ಉತ್ತರ ಕರ್ನಾಟಕದ ಪ್ರಮುಖ ರೈಲ್ವೆ ಜಂಕ್ಷನ್ ಆಗಿ ಬೆಳೆಯುವ ಸಾಧ್ಯತೆ ಇದೆ.

ಒಂದು ದಿಕ್ಕಿನಲ್ಲಿ ಬೆಂಗಳೂರು–ಶಿವಮೊಗ್ಗ ಸಂಪರ್ಕ, ಮತ್ತೊಂದು ದಿಕ್ಕಿನಲ್ಲಿ ಹುಬ್ಬಳ್ಳಿ–ಮುಂಬೈ ಸಂಪರ್ಕ ಹಾಗೂ ಇನ್ನೊಂದು ದಿಕ್ಕಿನಲ್ಲಿ ತಾಳಗುಪ್ಪ–ಜೋಗ ಪ್ರದೇಶಗಳ ಸಂಪರ್ಕ ದೊರೆಯಲಿದೆ. ಮುಂದಿನ ದಿನಗಳಲ್ಲಿ ಯಲ್ಲಾಪುರ, ಕುಮಟ, ಅಂಕೋಲ ಹಾಗೂ ಕಾರವಾರ ಭಾಗಗಳಿಗೂ ರೈಲು ಜಾಲ ವಿಸ್ತರಿಸಲು ಅವಕಾಶ ಸೃಷ್ಟಿಯಾಗಬಹುದು.

ಸರ್ಕಾರ ಮತ್ತು ಜನಪ್ರತಿನಿಧಿಗಳ ಜವಾಬ್ದಾರಿ

ಅಂತಿಮ ಸ್ಥಳ ಸಮೀಕ್ಷೆ ಪೂರ್ಣಗೊಂಡ ಕೂಡಲೇ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ದೊರೆಯಬೇಕು. ಭೂಸ್ವಾಧೀನ ಪ್ರಕ್ರಿಯೆಯನ್ನು ವಿಳಂಬವಿಲ್ಲದೆ ಆರಂಭಿಸಬೇಕು.

ರಾಜ್ಯ ಸರ್ಕಾರವೂ ಈ ಯೋಜನೆಯಲ್ಲಿ ಹಣಕಾಸಿನ ಪಾಲುದಾರಿಕೆ ವಹಿಸಿ ಕೇಂದ್ರ ಸರ್ಕಾರದೊಂದಿಗೆ ಜಂಟಿಯಾಗಿ ಮುಂದುವರಿಯಬೇಕು.

ಅತ್ಯಂತ ಮುಖ್ಯವಾಗಿ, ಉತ್ತರ ಕನ್ನಡ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಒಗ್ಗಟ್ಟಿನಿಂದ ನಿಂತು ಮೂಲ ಯೋಜನೆಯ ರಕ್ಷಣೆಗೆ ಧ್ವನಿ ಎತ್ತಬೇಕು.

ಜನಾಂದೋಲನದ ಅಗತ್ಯ

ಇತಿಹಾಸ ಹೇಳುವುದೇನೆಂದರೆ, ಜನರು ನಿರಂತರವಾಗಿ ಒತ್ತಾಯಿಸಿದ ಯೋಜನೆಗಳೇ ಕೊನೆಗೆ ಸಾಕಾರವಾಗಿವೆ.

ಇಂದು ಈ ಯೋಜನೆ ಕೇವಲ ರೈಲ್ವೆ ಇಲಾಖೆಯ ಕಡತಗಳಲ್ಲಿ ಉಳಿಯಬಾರದು. ವ್ಯಾಪಾರಿಗಳು, ರೈತರು, ವಿದ್ಯಾರ್ಥಿಗಳು, ಉದ್ಯಮಿಗಳು, ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರು ಒಗ್ಗಟ್ಟಿನಿಂದ ಯೋಜನೆಗೆ ಬೆಂಬಲ ವ್ಯಕ್ತಪಡಿಸಬೇಕು.

ಅಗತ್ಯವಿದ್ದರೆ ಸಹಿ ಸಂಗ್ರಹ ಅಭಿಯಾನ, ಜನಜಾಗೃತಿ ಕಾರ್ಯಕ್ರಮಗಳು ಹಾಗೂ ಜನಪ್ರತಿನಿಧಿಗಳ ಮೇಲೆ ಸಕಾರಾತ್ಮಕ ಒತ್ತಡ ತರುವ ಕಾರ್ಯಗಳೂ ನಡೆಯಬೇಕು.


ತಡಸ–ಕುಮಟ ರಾಷ್ಟ್ರೀಯ ಹೆದ್ದಾರಿ ಯೋಜನೆಯನ್ನು ಉತ್ತರ ಕನ್ನಡದ  ಸಂಸದರ ಪ್ರಯತ್ನದಿಂದ ತರಲಾಗಿತ್ತು. ಆದರೆ ನಂತರ ಬೇರೆ ಜಿಲ್ಲೆಯ ಶಾಸಕರ ಪ್ರಭಾವದಿಂದ ಅದನ್ನು ಹಾವೇರಿ–ಶಿರಸಿ–ಕುಮಟ ರಸ್ತೆಯಾಗಿ ಪರಿವರ್ತಿಸಿ ಉತ್ತರ ಕನ್ನಡದ ಜನರ ಬೇಡಿಕೆಯನ್ನು ದುರ್ಬಲಗೊಳಿಸಲಾಗಿತ್ತು. ರೈಲು ಯೋಜನೆಯಲ್ಲೂ ಅದೇ ಪ್ರವೃತ್ತಿ ಮರುಕಳಿಸುತ್ತಿದೆ ಎಂಬ ಅನುಮಾನ ದಟ್ಟವಾಗಿದೆ.


ತಾಳಗುಪ್ಪ–ಸಿದ್ದಾಪುರ–ಶಿರಸಿ–ಹುಬ್ಬಳ್ಳಿ ರೈಲು ಮಾರ್ಗವು ಉತ್ತರ ಕನ್ನಡ ಜಿಲ್ಲೆಯ ಭವಿಷ್ಯವನ್ನು ಬದಲಾಯಿಸಬಲ್ಲ ಅಭಿವೃದ್ಧಿಯ ಮಹಾಯೋಜನೆ. ಇದು ಕೇವಲ ಪ್ರಯಾಣಿಕರ ಅನುಕೂಲಕ್ಕಾಗಿ ನಿರ್ಮಿಸುವ ರೈಲು ಹಳಿಯಲ್ಲ; ಕೃಷಿ, ವ್ಯಾಪಾರ, ಪ್ರವಾಸೋದ್ಯಮ, ಶಿಕ್ಷಣ ಹಾಗೂ ಕೈಗಾರಿಕಾ ಬೆಳವಣಿಗೆಯ ಹೊಸ ಅಧ್ಯಾಯವಾಗಿದೆ.

ಸೊರಬ ಮತ್ತು ಮಧ್ಯ ಮಲೆನಾಡು ಪ್ರದೇಶಗಳಿಗೆ ಪ್ರತ್ಯೇಕ ರೈಲು ಯೋಜನೆ ರೂಪಿಸುವುದು ಸ್ವಾಗತಾರ್ಹ. ಆದರೆ ಅದು ಈಗಾಗಲೇ ಮುನ್ನಡೆಯಲ್ಲಿರುವ ತಾಳಗುಪ್ಪ–ಶಿರಸಿ–ಹುಬ್ಬಳ್ಳಿ ಮಾರ್ಗಕ್ಕೆ ಪರ್ಯಾಯವಾಗಬಾರದು.

ಉತ್ತರ ಕನ್ನಡ, ಮಲೆನಾಡು ಮತ್ತು ಉತ್ತರ ಕರ್ನಾಟಕವನ್ನು ಜೋಡಿಸುವ ಈ ಐತಿಹಾಸಿಕ ಅವಕಾಶವನ್ನು ಕಳೆದುಕೊಳ್ಳದಂತೆ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕಾದ ಸಮಯ ಬಂದಿದೆ. ಇಂದು ತೆಗೆದುಕೊಳ್ಳುವ ನಿರ್ಧಾರಗಳು ಮುಂದಿನ ನೂರು ವರ್ಷಗಳ ಅಭಿವೃದ್ಧಿಯ ದಿಕ್ಕನ್ನು ನಿರ್ಧರಿಸಲಿವೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0