ನಿಮ್ಮ ಕ್ಷೇತ್ರದ ಹೊಂಡಗಳ ಬಗ್ಗೆ ಮೊದಲು ಗಮನ ಕೊಡಿ: ಭೀಮಣ್ಣಗೆ ಕೌಂಟರ್ ಕೊಟ್ಟ ಅನಂತಮೂರ್ತಿ ಹೆಗಡೆ

ಆಪ್ತ ನ್ಯೂಸ್ ಶಿರಸಿ:
ಕಾರ್ಕಳ ಶಾಸಕ ಸುನೀಲ ಕುಮಾರ್ ಅವರು ತೋರಿಸಿದ 5 ಸಾವಿರ ರಸ್ತೆ ಹೊಂಡದ ಬಗ್ಗೆ ಶಾಸಕ ಭೀಮಣ್ಣ ನಾಯ್ಕ ಅವರು ಲೇವಡಿ ಮಾಡುತ್ತಿದ್ದಾರೆ. ಅವರ ಕ್ಷೇತ್ರದ ಲೋಕೋಪಯೋಗಿ ಇಲಾಖೆ ರಸ್ತೆ ಮತ್ತು ಗ್ರಾಮೀಣ ರಸ್ತೆಗಳಲ್ಲಿ 50 ಸಾವಿರ ಹೊಂಡಗಳು ಬಿದ್ದಿದ್ದು, ಅವುಗಳ ಬಗ್ಗೆ ಏಕೆ ಮೌನ ವಹಿಸಿದ್ದಾರೆ ಎಂದು ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಪ್ರಶ್ನಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಸುನೀಲಕುಮಾರ ಅವರು ಹೇಳಿಕೆ ನೀಡಿದ ಒಂದೇ ದಿನದೊಳಗಾಗಿ ಭೀಮಣ್ಣ ನಾಯ್ಕ ಅವರು ಸುದ್ದಿಗೋಷ್ಠಿ ನಡೆಸಿ ಪ್ರತಿಕ್ರಿಯೆ ನೀಡಿರುವುದು ಮಾಧ್ಯಮಗಳ ಮೂಲಕ ತಿಳಿದಿದೆ. ಆದರೆ, ತಮ್ಮ ಕ್ಷೇತ್ರದ ಹೊಂಡದ ಬಗ್ಗೆ ತಿಳಿದುಕೊಳ್ಳಲು ಭೀಮಣ್ಣ ನಾಯ್ಕರು ಇಷ್ಟು ವೇಗದಿಂದ ಕಾರ್ಯ ಮಾಡಿಲ್ಲ. ಶಿರಸಿ-ಸಿದ್ದಾಪುರ ನಗರ, ಗ್ರಾಮೀಣ ಪ್ರದೇಶದ ರಸ್ತೆಗಳು, ಲೋಕೋಪಯೋಗಿ ಇಲಾಖೆಗೆ , ಜಿ.ಪಂ. ಗೆ ಸೇರಿದ ರಸ್ತೆಗಳು ಇಂದು ಸಂಚರಿಸಲು ಸಾಧ್ಯವಾಗದ ಸ್ಥಿತಿ ಇದೆ. ತಾಲೂಕಿನಲ್ಲಿ ಯಾವ ವಾಹನ ನೋಡಿದರೂ ರಸ್ತೆ ಹೊಂಡಗಳ ಮಣ್ಣು ಮೆತ್ತಿಕೊಂಡಿವೆ, ವಾಹನಗಳು ಧಡಲ್ ಭಡಲ್ ಎನ್ನುತ್ತಲೇ ಸಾಗುತ್ತಿವೆ. ರಸ್ತೆ ಹೊಂಡ ಮುಚ್ಚದಿರುವ ಬಗ್ಗೆ ಸಾರ್ವಜನಿಕರು ಸದಾ ಆಕ್ಷೇಪಿಸುತ್ತಲೇ ಬಂದಿದ್ದಾರೆ. ನಾವೂ ಸಹ ಮಾರಿಕಾಂಬಾ ದೇವಾಲಯದಿಂದ ಪಾದಯಾತ್ರೆ ಮೂಲಕ ಮೆರವಣಿಗೆ ನಡೆಸಿ ರಸ್ತೆ ಹೊಂಡ ತುಂಬಲು ಆಗ್ರಹಿಸಿದ್ದರೂ ಯಾವುದೇ ಸ್ಪಂದನೆ ತೋರದಿರುವ ಭೀಮಣ್ಣ ಅವರು, ಈಗ ಉಡುಪಿಯಿಂದ ಶಿರಸಿಯವರೆಗೆ ರಾಷ್ಟ್ರೀಯ ಹೆದ್ದಾರಿ ಎನ್ನುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ಹೊಂಡ ತುಂಬುವ ಕಾರ್ಯವನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಈಗಾಗಲೇ ಆರಂಭಿಸಿದ್ದಾರೆ. ನೀಲೇಕಣಿಯಲ್ಲಿ ರಸ್ತೆ ನಿರ್ಮಾಣವಾಗುತ್ತಿದ್ದರೆ, ಅತ್ತ ಶಿರಸಿ ಹಾವೇರಿ ರಸ್ತೆ ಕಾಮಗಾರಿ ಸಹ ಆರಂಭವಾಗಿದೆ. ಆದರೆ, ಇದುವರೆಗೂ ತಮ್ಮ ವಿಧಾನಸಭಾ ಕ್ಷೇತ್ರದ, ತಮ್ಮ ವ್ಯಾಪ್ತಿಯ ರಸ್ತೆಗಳ ನಿರ್ವಹಣೆ, ಹೊಂಡ ತುಂಬುವ ಕಾರ್ಯ ಮಾತ್ರ ಆರಂಭವಾಗಿಲ್ಲ. ಸುನೀಲಕುಮಾರ ಅವರ ಹೇಳಿಕೆಗೆ ತಿರುಗೇಟು ನೀಡುವ ತಮ್ಮ ವೇಗ ತಮ್ಮ ಕ್ಷೇತ್ರದ 50 ಸಾವಿರ ರಸ್ತೆ ಹೊಂಡ ತುಂಬುವ ಬಗೆಗೂ ಇರಲಿ ಎಂದಿದ್ದಾರೆ.
What's Your Reaction?






