ಆಪ್ತ ನ್ಯೂಸ್ ಯಲ್ಲಾಪುರ:
ಸಮಾಜದಲ್ಲಿಂದು ನಗುವನ್ನು ಕಾಣುವುದೇ ಕಷ್ಟ. ಇಲ್ಲಿ ಸೇರಿದ ಪ್ರತಿಯೊಬ್ಬರ ಮುಖದಲ್ಲಿಯೂ ನಗುವಿನ ಭಾವನೆಯು ಕಾರ್ಯಕ್ರಮಕ್ಕೆ ಮೆರಗು ನೀಡಿದೆ. ಇಂತಹ ಸಾಧಕರಿಗೆ ಇಷ್ಟೊಂದು ಜನ ಸೇರಿ ಮಾತೃಮಂಡಳಿಯವರು ನೀಡಿದ ಸನ್ಮಾನ ನಿಜವಾಗಿಯೂ ಸ್ತುತ್ಯಾರ್ಹ ಎಂದು ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು.
ಅವರು ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಯಲ್ಲಾಪುರ ನಗರಭಾಗಿ ಮಾತೃಮಂಡಳಿಯವರು ಶ್ರೀ ಬಾಲಾ ತ್ರಿಪುರ ಸುಂದರಿ ಶಾರದಾಂಬಾ ದೇವಸ್ಥಾನದ ಸಹಯೋಗದಲ್ಲಿ ವಿಶ್ವದರ್ಶನ ಮುಖ್ಯಾಧ್ಯಾಪಕಿ ಮುಕ್ತಾ ಶಂಕರ ಅವರಿಗೆ ನೀಡಿದ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡುತ್ತಿದ್ದರು.
ಉತ್ತಮ ಗೃಹಿಣಿಯಾಗಿ, ಶಿಕ್ಷಕಿಯಗಿ, ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಮಾತೆಯರಿಗೆ ಮಾರ್ಗದರ್ಶನ ನೀಡುವ ಸಾಮರ್ಥ್ಯ ಪಡೆದು ಸಾವಿರಾರು ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣ ನೀಡಿದ ಇವರ ಸನ್ಮಾನ ಅತ್ಯಂತ ಸಂತಸ ತಂದಿದೆ ಎಂದರು.
ನಿವೃತ್ತ ಉಪನ್ಯಾಸಕಿ ವಿಶಾಲಾಕ್ಷಿ ಭಟ್ಟ ಮಾತನಾಡಿ, ಭಕ್ತಿ ಭಾವನೆಗೆ ಪ್ರಧಾನವಾದುದು. ಅದು ನಾವು ನಮ್ಮ ಅಂತರಂಗದ ಭಾವನೆಗಳನ್ನು ದೇವರಲ್ಲಿ ನಿವೇದಿಸಿಕೊಂಡಾಗ ಅದು ಫಲಿಸುತ್ತದೆ. ಆ ದೃಷ್ಟಿಯಿಂದ ಮಾತೃಮಂಡಳಿಯವರು ಮಾತೆಯರಿಗೆ ಮತ್ತು ಮಕ್ಕಳಿಗೆ ಸನ್ಮಾರ್ಗದತ್ತ ಸಾಗುವ ಮತ್ತು ಭಗವಂತನ ಉಪಾಸನೆಗೆ ಪ್ರೇರಣೆ ನೀಡುವ ಇಂದಿನ ಈ ಸ್ಪರ್ಧಾ ಕಾರ್ಯಕ್ರಮಗಳು ಅತ್ಯಂತ ಸುಂದರವಾಗಿ ಮೂಡಿಬಂದಿದೆ. ಇದರಲ್ಲಿ ಎಲ್ಲ ಮಾತೆಯರು ಹೆಚ್ಚಿನ ರೀತಿಯಲ್ಲಿ ಭಾಗವಹಿಸುವುದು ಮಹತ್ವದ್ದಾಗಿದೆ. ಆ ದೃಷ್ಟಿಯಿಂದ ಮುಕ್ತಾ ಮೇಡಂ ಅವರಿಗೆ ನೀಡಿದ ಸನ್ಮಾನ ಆದರ್ಶಪ್ರಾಯವಾಗಿದೆ ಎಂದರು.
ಸನ್ಮಾನ ಸ್ವೀಕರಿಸಿದ ಮುಕ್ತಾ ಶಂಕರ ಮಾತನಾಡಿ, ಗೀತೆಯಲ್ಲಿ ಹೇಳಿದಂತೆ ಕರ್ತವ್ಯ ನಮ್ಮದಿರಬೇಕು. ಫಲ ಭಗವಂತನದು. ಆ ನೆಲೆಯಲ್ಲಿ ನಾನು ೩೧ ವರ್ಷಗಳ ಕಾಲ ವಿಶ್ವದರ್ಶನದಲ್ಲಿ ಮುಖ್ಯಾಧ್ಯಾಪಕಿಯಾಗಿ ಸೇವೆ ಸಲ್ಲಿಸುವ ಭಾಗ್ಯ ನನ್ನದು. ಅದಕ್ಕೆ ಸಂಸ್ಥೆ ಕಟ್ಟಿ ಬೆಳೆಸಿದ ದಿ.ಉಮೇಶ ಭಟ್ಟರನ್ನೂ ಮತ್ತು ಇಂದು ನಮ್ಮ ಸಂಸ್ಥೆಯ ಕರ್ಣಧಾರತ್ವ ವಹಿಸಿದ ಹರಿಪ್ರಕಾಶ ಕೋಣೆಮನೆ ತಂಡದವರಿಗೂ ನಾನು ಋಣಿ ಎಂದರು.
ಪ್ರಮೋದ ಹೆಗಡೆಯವರು ಸಂಕಲ್ಪದ ಮೂಲಕ ನನ್ನಂತಹ ಅನೇಕರಿಗೆ ವೇದಿಕೆ ಕಲ್ಪಿಸಿದ್ದಾರೆ. ಇಂತಹ ವೇದಿಕೆಗಳು ವ್ಯಕ್ತಿತ್ವ ವಿಕಸನಕ್ಕೆ ಕಾರಣವಾಗಿದೆ. ನಾನು ನನ್ನ ಶಿಕ್ಷಕ ವೃತ್ತಿಯ ಜೊತೆಗೆ ಸಮಾಜದ ಕಾರ್ಯಗಳನ್ನು ಮಾಡುತ್ತಿರುವುನೆಂಬ ತೃಪ್ತಿ ನನಗಿದೆ. ಅಂತೆಯೆ ಸಾಹಿತ್ಯ ಕೃಷಿಯಲ್ಲಿ ಇನ್ನೂ ಬೆಳೆಯಬೇಕಿದೆ. ಪೂಜ್ಯ ಶ್ರೀಗಳ ಅನುಗ್ರಹದಿಂದ ನಾವು ಮಾತೃಮಂಡಳಿಯ ಕಲ್ಪನೆಯ ಚಿಂತನೆಯನ್ನು ನಮ್ಮ ಮುಂದಿನ ಜನಾಂಗಕ್ಕಾಗಿ ಉತ್ತಮ ಸಂಸ್ಕಾರ ನೀಡುವ ಉದ್ದೇಶದಿಂದ ಇನ್ನೂ ಗಟ್ಟಿಯಾಗಿ ಬೆಳೆಸಬೇಕು. ನಮ್ಮ ಎಲ್ಲ ಮಾತೆಯರನ್ನು ನಾನು ಅಭಿಮಾನದಿಂದ ಸ್ಮರಿಸುತ್ತೇನೆ ಎಂದರು.
ನಗರಭಾಗಿ ಮಾತೃಮಂಡಳಿ ಅಧ್ಯಕ್ಷೆ ರಮಾ ದೀಕ್ಷಿತ ಸ್ವಾಗತಿಸಿದರು. ಸಂಧ್ಯಾ ಕೊಂಡದಕುಳಿ ಸನ್ಮಾನ ಪತ್ರ ವಾಚಿಸಿದರು. ಆಶಾ ಬಗನಗದ್ದೆ ನಿರ್ವಹಿಸಿದರು. ಸರೋಜಾ ಹೆಗಡೆ ವಂದಿಸಿದರು. ಇದಕ್ಕೂ ಮೊದಲು ಮಾತೆಯರ ಮತ್ತು ಮಕ್ಕಳ ವಿವಿಧ ಕಾರ್ಯಕ್ರಮಗಳು ನಡೆದವು.