ಯಲ್ಲಾಪುರದಲ್ಲಿಉಡಗಳ ಬೇಟೆ: ಇಬ್ಬರ ಬಂಧನ

ಅರಣ್ಯ ಪ್ರದೇಶದ ಸಮೀಪದ ಮನೆಯಲ್ಲಿ ದಾಳಿ; ಎರಡು ಕತ್ತಿ, ಕೊಡಲಿ ವಶಕ್ಕೆ

Sep 28, 2026 - 21:09
 0  156
ಯಲ್ಲಾಪುರದಲ್ಲಿಉಡಗಳ ಬೇಟೆ: ಇಬ್ಬರ ಬಂಧನ

ಆಪ್ತ ನ್ಯೂಸ್ ಯಲ್ಲಾಪುರ:

ವನ್ಯಜೀವಿಗಳನ್ನು ಬೇಟೆಯಾಡಿ ಮನೆಯಲ್ಲಿ ದಾಸ್ತಾನು ಮಾಡಿದ್ದ ಆರೋಪದ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಇಬ್ಬರನ್ನು ಬಂಧಿಸಿರುವ ಘಟನೆ ಯಲ್ಲಾಪುರ ವಲಯ ವ್ಯಾಪ್ತಿಯಲ್ಲಿ ನಡೆದಿದೆ.

ಯಲ್ಲಾಪುರ ವಲಯದ ಹಳಬೈಲ್ ಶಾಖೆಯ ಅರಳಿಕೊಪ್ಪ ಗಸ್ತು ಬ್ಲಾಕ್‌ನ ಕಣ್ಣಿಗೇರಿ ಗ್ರಾಮದ ಹಳಿಯಾಳ ಕ್ರಾಸ್ ಸಮೀಪದ ಅರಣ್ಯ ಪ್ರದೇಶದಲ್ಲಿ ಈ ಕಾರ್ಯಾಚರಣೆ ನಡೆದಿದೆ.

ಅರಣ್ಯ ಇಲಾಖೆಗೆ ದೊರೆತ ಖಚಿತ ಮಾಹಿತಿ ಆಧರಿಸಿ ಅಧಿಕಾರಿಗಳು ಹಾಗೂ ಸಿಬ್ಬಂದಿ ತಂಡವು ಶಂಕಿತ ಆರೋಪಿಗಳ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ಕೈಗೊಂಡಿದೆ. ಈ ವೇಳೆ ವನ್ಯಜೀವಿ ಬೇಟೆಗೆ ಸಂಬಂಧಿಸಿದ ಹಲವು ವಸ್ತುಗಳು ಪತ್ತೆಯಾಗಿದ್ದು, Bengal Monitor Lizard (Varanus bengalensis) ಜಾತಿಗೆ ಸೇರಿದ ಮೃತಪಟ್ಟ ಎರಡು ಗಂಡು ಉಡಗಳ ಮೃತದೇಹಗಳು ಪತ್ತೆಯಾಗಿವೆ ಎಂದು ಅರಣ್ಯ ಇಲಾಖೆ ತಿಳಿಸಿದೆ.

ಬೇಟೆಗೆ ಬಳಸಿದ ಆಯುಧಗಳು ವಶ

ಮನೆಯಲ್ಲಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಬೇಟೆಗೆ ಬಳಸಿದ್ದ ಎನ್ನಲಾದ ಎರಡು ಕತ್ತಿಗಳು ಹಾಗೂ ಒಂದು ಕೊಡಲಿ ಕೂಡ ಪತ್ತೆಯಾಗಿದ್ದು, ಅರಣ್ಯ ಇಲಾಖೆ ಅವುಗಳನ್ನು ವಶಕ್ಕೆ ಪಡೆದಿದೆ.

ಈ ಸಂಬಂಧ ಇನಾಸ್ ಬಸ್ಥ್ಯಾಂವ್ ಸಿದ್ದಿ (55) ಹಾಗೂ ಪ್ರಕಾಶ್ ಇನಾಸ್ ಸಿದ್ದಿ (27) ಅವರನ್ನು ಬಂಧಿಸಲಾಗಿದೆ. ಆರೋಪಿತರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ–1972ರ ಸೆಕ್ಷನ್ 2(16), 9, 39(a) ಹಾಗೂ 50ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬಂಧಿತ ಇಬ್ಬರನ್ನೂ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಅಧಿಕಾರಿಗಳ ನೇತೃತ್ವದಲ್ಲಿ ಕಾರ್ಯಾಚರಣೆ

ಉಪ ಅರಣ್ಯ ಸಂರಕ್ಷಣಾಧಿಕಾರಿ ಅಬ್ದುಲ್ ಅಜೀಜ್ ಶೇಖ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದ್ದು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಿಮವತಿ ಭಟ್ಟ ಅವರ ನೇತೃತ್ವದಲ್ಲಿ ಹಾಗೂ ವಲಯ ಅರಣ್ಯಾಧಿಕಾರಿ ಮಂಜುನಾಥ್ ಎಚ್. ನಾಯ್ಕ ಅವರ ಮುಂದಾಳತ್ವದಲ್ಲಿ ಅರಣ್ಯ ಇಲಾಖೆ ತಂಡ ಕಾರ್ಯಾಚರಣೆ ನಡೆಸಿತು.

ಉಪ ವಲಯ ಅರಣ್ಯಾಧಿಕಾರಿಗಳಾದ ಸುಭಾಷ್ ಗಾಂವ್ಕರ್, ಶ್ರೀನಿವಾಸ್ ನಾಯ್ಕ, ಶ್ರೀಧರ್ ಸಜ್ಜನ್, ಶರಣಬಸು ದೇವರ, ಪ್ರಭಾಕರ ಬಗಲಿ, ಮಂಜುನಾಥ್ ಗರ್ಭಗುಡಿ ಹಾಗೂ ದರ್ಶನ್ ವಿ.ಎಸ್. ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಗಸ್ತು ಅರಣ್ಯ ಪಾಲಕರಾದ ಸತೀಶ ಕುಂಬಾರ, ಬಸವರೆಡ್ಡಿ, ರಾಮು ಕೊಕ್ಕರೆ, ಶಾನವಾಜ ಮುಲ್ತಾನಿ, ಗೌಡಪ್ಪ ಸುಳ್ಳದ, ರಮೇಶ್ ಬಡಿಗೇರ್, ಲಕ್ಷ್ಮಣ ಪಮ್ಮಾರ್ ಹಾಗೂ ಪ್ರಶಾಂತ್ ತಳವಾರ್ ಸೇರಿದಂತೆ ವಾಹನ ಚಾಲಕರಾದ ಮಂಜುನಾಥ್ ಮತ್ತು ಪ್ರಶಾಂತ್ ಕಾರ್ಯಾಚರಣೆಗೆ ಸಹಕರಿಸಿದರು.

ಅರಣ್ಯ ಪ್ರದೇಶಗಳಲ್ಲಿ ವನ್ಯಜೀವಿಗಳ ಬೇಟೆ ಮತ್ತು ಅಕ್ರಮ ದಾಸ್ತಾನು ತಡೆಯುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆ ಮುಂದುವರಿಸಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0