ಮಣಿಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿರಸಿಯ ಅಗ್ನಿವೀರ ಗಿರೀಶ ನಾಯ್ಕ ನಿಧನ!
ಆರೋಗ್ಯ ಸಮಸ್ಯೆಯಿಂದ 23 ವರ್ಷದ ಯೋಧ ಸಾವು; ಸ್ವಗ್ರಾಮದಲ್ಲಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ
ಆಪ್ತ ನ್ಯೂಸ್ ಶಿರಸಿ:
ದೇಶದ ರಕ್ಷಣಾ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಶಿರಸಿ ತಾಲೂಕಿನ ಯುವ ಅಗ್ನಿವೀರನೊಬ್ಬರು ಮಣಿಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಆರೋಗ್ಯ ಸಮಸ್ಯೆಯಿಂದ ಮೃತಪಟ್ಟಿರುವ ದುರ್ಘಟನೆ ಸಂಭವಿಸಿದೆ.
ತಾಲೂಕಿನ ಇಸಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಲಿನ ಗಣಗೇರಿ ಗ್ರಾಮದ ಗಿರೀಶ ಭಾಸ್ಕರ ನಾಯ್ಕ (23) ಮೃತಪಟ್ಟ ಅಗ್ನಿವೀರ. 2023ರ ಅಗ್ನಿವೀರ ನೇಮಕಾತಿ ತಂಡದಲ್ಲಿ ಸೇರ್ಪಡೆಗೊಂಡಿದ್ದ ಅವರು, ಮಣಿಪುರದ ಸಿಗ್ನಲ್ ರೆಜಿಮೆಂಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ಅವರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಗಿರೀಶ ಅವರ ತಂದೆ ಭಾಸ್ಕರ ನಾಯ್ಕ ಹಾಗೂ ತಾಯಿ ರೇವತಿ ನಾಯ್ಕ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಕಷ್ಟಪಟ್ಟು ಮಗನನ್ನು ದೇಶಸೇವೆಗೆ ಕಳುಹಿಸಿದ್ದ ಬಡ ಕುಟುಂಬಕ್ಕೆ ಯುವಕನ ಅಕಾಲಿಕ ನಿಧನ ಬರಸಿಡಿಲಿನಂತೆ ಎರಗಿದೆ. ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಮೃತ ಗಿರೀಶ ನಾಯ್ಕ ಅವರ ಪಾರ್ಥಿವ ಶರೀರವನ್ನು ಶನಿವಾರ ಸ್ವಗ್ರಾಮಕ್ಕೆ ತರಲಾಗುತ್ತಿದ್ದು, ಗ್ರಾಮದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ದೇಶಸೇವೆಯ ಕನಸು ಹೊತ್ತು ಸೇನೆಗೆ ಸೇರಿದ್ದ ಯುವಕನ ಅಗಲಿಕೆಯಿಂದ ಮೇಲಿನ ಗಣಗೇರಿ ಗ್ರಾಮದಲ್ಲಿ ಶೋಕದ ವಾತಾವರಣ ಆವರಿಸಿದೆ.
What's Your Reaction?
Like
0
Dislike
0
Love
0
Funny
0
Angry
0
Sad
1
Wow
0