ಸಿದ್ದಾಪುರ ತಾಲೂಕಿನ ಗವಿನಗುಡ್ಡ ಗ್ರಾಮದ ರೈತರ ತೋಟದಲ್ಲಿ ಕಾಡುಕೋಣವೊಂದು ಕಾಲು ಮುರಿದು ಅಸಹಾಯ ಸ್ಥಿತಿಯಲ್ಲಿ ಬಿದ್ದಿರುವ ಘಟನೆ ಸ್ಥಳೀಯರಲ್ಲಿ ತೀವ್ರ ಕಳವಳ ಹುಟ್ಟಿಸಿದೆ. ಕಾಲು ಮುರಿದು ಚಲಿಸಲಾರದೆ ಯಾತನೆ ಅನುಭವಿಸುತ್ತಿರುವ ಕಾಡುಕೋಣನ ಸ್ಥಿತಿಯನ್ನು ಕಂಡು ಸ್ಥಳೀಯರು ಮರುಗುತ್ತಿದ್ದಾರೆ.
ಈ ವಿಷಯವನ್ನು ತಕ್ಷಣವೇ ಅರಣ್ಯ ಇಲಾಖೆಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿದ ಬಳಿಕ, ನಾಳೆ (ಬುಧವಾರ) ವೈದ್ಯರು ಬರುತ್ತಾರೆ ಎಂದು ಹೇಳಿ ಸ್ಥಳದಿಂದ ತೆರಳಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಕಾಡುಕೋಣನಿಗೆ ತಕ್ಷಣ ಚಿಕಿತ್ಸೆ ಅಗತ್ಯವಿದ್ದರೂ, ಸ್ಥಳದಲ್ಲಿ ಯಾವುದೇ ಇಲಾಖೆ ಸಿಬ್ಬಂದಿ ಉಳಿಯದೇ ಹೋಗಿರುವುದು ನಿರ್ಲಕ್ಷ್ಯದ ಆರೋಪಕ್ಕೆ ಕಾರಣವಾಗಿದೆ.
ಇಂತಹ ಪರಿಸ್ಥಿತಿಯಲ್ಲಿ, ಕಾಡುಕೋಣನಿಗೆ ಏನಾದರೂ ಹೆಚ್ಚು ಕಡಿಮೆಯಾದರೆ ಹೊಣೆ ಯಾರು?
ತೋಟದ ಮಾಲಿಕರೇ?
ಅಥವಾ ಅರಣ್ಯ ಇಲಾಖೆಯ ಅಧಿಕಾರಿಗಳೇ? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ಕಾಡಿನ ಪ್ರಾಣಿಯಾದ ಕಾಡುಕೋಣ ಮೌನವಾಗಿ ನೋವು ಅನುಭವಿಸುತ್ತಿರುವ ದೃಶ್ಯಗಳು ಮಾನವೀಯತೆ ಬಗ್ಗೆ ಪ್ರಶ್ನೆ ಎತ್ತಿವೆ. “ಮೂಕ ಪ್ರಾಣಿಯ ನೋವು ಬೇಗ ಅಂತ್ಯವಾಗಲಿ, ಅಧಿಕಾರಿಗಳು ಕೂಡಲೇ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಿ” ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಅರಣ್ಯ ಇಲಾಖೆಯ ತ್ವರಿತ ಸ್ಪಂದನೆ ಮತ್ತು ವೈದ್ಯಕೀಯ ನೆರವು ದೊರೆತರೆ ಮಾತ್ರ ಈ ಪ್ರಾಣಿಯ ಜೀವ ಉಳಿಯಲಿದೆ ಎಂಬ ಅಭಿಪ್ರಾಯ ಜನರಲ್ಲಿ ವ್ಯಾಪಕವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ, ಕಾಡುಕೋಣನ ಚಿಕಿತ್ಸೆಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂಬುದು ಸ್ಥಳೀಯರ ಒತ್ತಾಯವಾಗಿದೆ.
(ಕಾಡುಕೋಣ ಒದ್ದಾಡುತ್ತಿರುವ ವೀಡಿಯೋ ಇಲ್ಲಿದೆ ನೋಡಿ)
https://youtube.com/shorts/WO576U3_IT8?feature=share