ಜೋಯಿಡಾದ ಮೊದಲ ಜಾತ್ರೆ (ಖಾಪ್ರಿ) ಕಂಬಳಿ ಜಾತ್ರೆ

Oct 27, 2025 - 09:03
 0  56
ಜೋಯಿಡಾದ ಮೊದಲ ಜಾತ್ರೆ (ಖಾಪ್ರಿ) ಕಂಬಳಿ ಜಾತ್ರೆ

ಆಪ್ತ ನ್ಯೂಸ್ ಜೋಯಿಡಾ:

ತಾಲೂಕು ಕೇಂದ್ರ ಗಾವಡೇವಾಡಾದಲ್ಲಿ ಬುಡಕಟ್ಟು ಕುಣಬಿ ಜನಾಂಗದ ಜಾನಪದ ಸೊಗಡಿನ ಖಾಪ್ರಿ ದೇವರ ವಾರ್ಷಿಕ ಜಾತ್ರೆ ನವೆಂಬರ್ 3 ಸೋಮವಾರದಂದು ನಡೆಯಲಿದೆ. 
ಕಾರ್ತಿಕ ಮಾಸದ ಏಕಾದಶಿ  ರವಿವಾರ ರಾತ್ರಿ ಕುಣಬಿ ಬುಡಕಟ್ಟು ಸಂಪ್ರದಾಯದಂತೆ ಗ್ರಾಮದ ಬುಧವಂತನ ಮನೆ ಅಂಗಳದಲ್ಲಿ ರಾತ್ರಿ ತುಳಸಿ ವಿವಾಹ ನೆರವೇರಿಸಿ ನಂತರ ರಾತ್ರಿ ಪೂರ್ತಿ ಜಾಗರಣೆ ಮಾಡಲಾಗುತ್ತದೆ. 
ಸೋಮವಾರ ಬೆಳಿಗ್ಗೆ ತುಳಸಿ ಕಟ್ಟೆಯ ಸುತ್ತ ದೇವರ ಹಾಡುಗಳನ್ನು ಹೇಳುತ್ತಾ ಕುಣಿತ ಪ್ರಾರಂಭ ವಾಗುತ್ತದೆ ಬೆಳಿಗ್ಗೆ 11ರ ಸುಮಾರು ಕಂಬಳಿ ವೇಷಧಾರಿ ಖಾಪ್ರಿದೇವರು ಮುಖ್ಯ ವೇದಿಕೆಯಲ್ಲಿ ಅಂದರೆ ತುಳಸಿ ಅಂಗಳದಲ್ಲಿ ಬರಲು ಸಿದ್ದತೆ ಮಾಡಿದ ನಂತರ ಖಾಪ್ರಿ ದೇವರ ಆವ್ಹಾನದ ಹಾಡುಗಳನ್ನು ಹಾಡಲಾಗುತ್ತದೆ. 
ಖಾಪ್ರಿದೇವರು ಅಂದರೆ ಹಿರಿಯರ ಎರಡು ಆತ್ಮಗಳಾಗಿವೆ  ಒಂದು ವಾರದಿಂದ ದೇವರ ಹೆಸರಿನಲ್ಲಿ ಉಪವಾಸ ಇದ್ದ ಇಬ್ಬರ ಮೈ ಮೇಲೆ ಆತ್ಮ ಬರುವ ನಂಬಿಕೆ ಇದೆ. ಕುಟುಂಬ ಅಂತ ಇಬ್ಬರಿಗೆ ಕಂಬಳಿಯನ್ನು ಪೂರ್ತಿಯಾಗಿ ದೇಹಕ್ಕೆ ಸುತ್ತಿ, ಚಂಡು ಹೂವಿನಿಂದ ಅಲಂಕಾರ ಮಾಡಿದ ವೇಷಧಾರಿ ದೇವರ ಮನೆಯ ಹೊರಗಡೆಯಿಂದ ಬಂದರೆ ಇನ್ನೊಂದು ಖಾಪ್ರಿ ವೇಷಧಾರಿ ದೇವರ ಮನೆಯಿಂದ ಅಂಗಳಕ್ಕೆ ಬಂದು ತುಳಸಿ ಕಟ್ಟೆಯ ಸುತ್ತ ಹಾಡಿನ ತಾಳಕ್ಕೆ ಹೆಜ್ಜೆ ಹಾಕಿ ಕೈಯಲ್ಲಿ ಒನಕೆ ಹಿಡಿದು ಕುಣಿದು ಸಾವಿರಾರು ಸಂಖ್ಯೆಯಲ್ಲಿ ಸೇರಿದ ಭಕ್ತರಿಗೆ ಆಶಿರ್ವಾದ ನೀಡುತ್ತಾರೆ.
ಜಾತ್ರೆಯ ಮೊದಲ ರಾತ್ರಿ ಯಾರು ಕೂಡ ಗ್ರಾಮದ ಸೀಮೆ ಬಿಟ್ಟು ಹೊರಗೆ ಹೋಗುವಂತಿಲ್ಲ. ರಾತ್ರಿ ಭತ್ತದ ಬೆಳೆ ಕಾಯಲು ಯಾರು ಹೋಗುವುದಿಲ್ಲ. ಅಂದು ಕಾಡು ಪ್ರಾಣಿಗಳಿಂದ ಬೆಳೆ ಹಾನಿಯಾದ ಉದಾಹರಣೆಯೇ ಇಲ್ಲವೆಂದು ಹೇಳಲಾಗುತ್ತದೆ ರಾತ್ರಿ ಜಾಗರಣೆ ನಾಟಕ ಮಾಡಲಾಗುತ್ತದೆ. 
ನವೆಂಬರ್ 3ರಂದು ಖಾಪ್ರಿ ದೇವರ ಪ್ರಮುಖ ಜಾತ್ರಾ ಮಹೋತ್ಸವ ಬೆಳಿಗ್ಗೆ 10ರಿಂದ ಆರಂಭವಾಗಿ ಮದ್ಯಾಹ್ನದವರೆಗೂ ನಡೆಯುತ್ತದೆ. ಹರಕೆಗೆ ಕಂಬಳಿ ಶ್ರೇಷ್ಠ. ಈ ಜಾತ್ರೆಯಲ್ಲಿ ಭಕ್ತರು ಹರಕೆಯ ರೂಪದಲ್ಲಿ ಕಂಬಳಿಯನ್ನು ಅರ್ಪಿಸುತ್ತಾರೆ, ಹಣ್ಣು ಕಾಯಿಯ ಜೊತೆಗೆ ಹರಕೆ ಹೊತ್ತವರು ಕಂಬಳಿ ಅರ್ಪಿಸಿ ಕೃತಾರ್ಥರಾಗುವದರಿಂದ ಈ ಜಾತ್ರೆಗೆ ಕಂಬಳಿ ಜಾತ್ರೆ ಎಂದೂ ಕರೆಯುತ್ತಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0