ಹೆಗ್ಗಾರ ಶಾಲೆಯ ಬೆನ್ನಲ್ಲೇ ಕೋನಾಳ ಅಂಗನವಾಡಿಯಲ್ಲಿ ಕಳ್ಳತನ; ಅಕ್ಕಿ, ಪಾತ್ರೆಗಳಿಗೂ ಕನ್ನ!

Oct 3, 2026 - 12:17
Oct 3, 2026 - 12:18
 0  130
ಹೆಗ್ಗಾರ ಶಾಲೆಯ ಬೆನ್ನಲ್ಲೇ ಕೋನಾಳ ಅಂಗನವಾಡಿಯಲ್ಲಿ ಕಳ್ಳತನ; ಅಕ್ಕಿ, ಪಾತ್ರೆಗಳಿಗೂ ಕನ್ನ!

ಆಪ್ತ ನ್ಯೂಸ್ ಅಂಕೋಲಾ:

ಶಾಲೆ, ಅಂಗನವಾಡಿಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿರುವ ಕಳ್ಳರ ಹಾವಳಿ ಮುಂದುವರಿದಿದ್ದು, ನಿನ್ನೆಯಷ್ಟೇ ಹೆಗ್ಗಾರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದ್ದ ಕಳ್ಳತನದ ಬೆನ್ನಲ್ಲೇ, ಇದೀಗ ಸಮೀಪದ ಕೋನಾಳ ಅಂಗನವಾಡಿ ಕೇಂದ್ರದಲ್ಲೂ ಕಳ್ಳತನ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.

ಅಂಕೋಲಾ ತಾಲೂಕಿನ ಡೋಂಗ್ರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೆಗ್ಗಾರ್‌ ಸಮೀಪದ ಕೋನಾಳದಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಕಳ್ಳರು ನುಗ್ಗಿದ್ದು, ಅಲ್ಲಿದ್ದ ಅಕ್ಕಿ ಹಾಗೂ ಅಡುಗೆ ಪಾತ್ರೆಗಳನ್ನು ಕದ್ದೊಯ್ದಿದ್ದಾರೆ ಎನ್ನಲಾಗಿದೆ.

ಶಾಲೆಯ ಬೆನ್ನಲ್ಲೇ ಅಂಗನವಾಡಿಗೂ ಕನ್ನ!

ಹೆಗ್ಗಾರ ಹಿರಿಯ ಪ್ರಾಥಮಿಕ ಶಾಲೆಯಿಂದ ಕೆಲವೇ ಕಿಲೋಮೀಟರ್‌ ದೂರದಲ್ಲಿರುವ ಕೋನಾಳ ಅಂಗನವಾಡಿ ಕೇಂದ್ರದಲ್ಲಿ ಕಳ್ಳತನ ನಡೆದಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ನಿನ್ನೆಯಷ್ಟೇ ಹೆಗ್ಗಾರ ಶಾಲೆಯ ಕಿಟಕಿ ಸರಳುಗಳನ್ನು ಮುರಿದು ಕಳ್ಳರು ಒಳನುಗ್ಗಿದ್ದರು. ಇದೀಗ ಅದೇ ಭಾಗದ ಅಂಗನವಾಡಿ ಕೇಂದ್ರದಲ್ಲೂ ಕಳ್ಳತನ ನಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಕಳೆದ ಹಲವು ದಿನಗಳಿಂದ ಈ ಭಾಗದಲ್ಲಿ ಪದೇ ಪದೆ ಕಳ್ಳತನ ಪ್ರಕರಣಗಳು ವರದಿಯಾಗುತ್ತಿದೆ. ಶಾಲೆ, ಅಂಗನವಾಡಿ, ಸೊಸೈಟಿ, ಅಂಗಡಿಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ನಡೆಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ನಾರಾಯಣ ಸಿದ್ದಿ ಕೈವಾಡದ ಬಗ್ಗೆ ಅನುಮಾನ!

ಈ ಹಿಂದೆ ಇದೇ ಭಾಗದಲ್ಲಿ ಕಳ್ಳತನ ಪ್ರಕರಣಗಳಲ್ಲಿ ಹೆಸರು ಕೇಳಿಬಂದಿದ್ದ ಕುಖ್ಯಾತ ಕಳ್ಳ ನಾರಾಯಣ ಸಿದ್ದಿಯ ಕೈಚಳಕವೇ ಈ ಕೃತ್ಯಗಳ ಹಿಂದಿರಬಹುದೆಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ, ಕಳ್ಳತನದ ಹಿಂದೆ ಯಾರಿದ್ದಾರೆ ಎಂಬುದು ಪೊಲೀಸ್ ತನಿಖೆಯಿಂದಷ್ಟೇ ತಿಳಿದುಬರಬೇಕಿದೆ.

ಸ್ಥಳಕ್ಕೆ ಪೊಲೀಸರ ಭೇಟಿ, ಪರಿಶೀಲನೆ

ಕಳ್ಳತನದ ಕುರಿತು ಪೊಲೀಸರಿಗೆ ಮಾಹಿತಿ ರವಾನಿಸಲಾಗಿದ್ದು, ನಿನ್ನೆ ಹೆಗ್ಗಾರ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಪೊಲೀಸರು ಇಂದು ಕೋನಾಳ ಅಂಗನವಾಡಿ ಕೇಂದ್ರಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪದೇ ಪದೆ ಕಳ್ಳತನ; ಜನರಿಗೆ ನಿದ್ದೆಯಿಲ್ಲ!

ಗ್ರಾಮೀಣ ಭಾಗದ ಶಾಲೆ ಹಾಗೂ ಅಂಗನವಾಡಿಗಳಲ್ಲಿ ನಡೆಯುತ್ತಿರುವ ಸರಣಿ ಕಳ್ಳತನಗಳಿಂದ ಸ್ಥಳೀಯರು ಬೇಸತ್ತಿದ್ದಾರೆ. ಮಕ್ಕಳಿಗೆ ಆಹಾರ ಸಿದ್ಧಪಡಿಸಲು ಬಳಸುವ ಅಕ್ಕಿ, ಪಾತ್ರೆಗಳನ್ನೂ ಬಿಡದೆ ಕದ್ದೊಯ್ಯುತ್ತಿರುವ ಕಳ್ಳರ ಕೃತ್ಯಕ್ಕೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸರಣಿ ಕಳ್ಳತನಗಳಿಗೆ ಕಡಿವಾಣ ಹಾಕಿ, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು. ಪದೇ ಪದೆ ಕಳ್ಳತನ ನಡೆಸುತ್ತಿರುವ ಆರೋಪಿಯನ್ನು ಶೀಘ್ರ ಪತ್ತೆಹಚ್ಚಿ ಹೆಡೆಮುರಿ ಕಟ್ಟಬೇಕು ಎಂದು ಸ್ಥಳೀಯರು ಪೊಲೀಸರಿಗೆ ಮನವಿ ಮಾಡಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0