ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವ ಸಿದ್ಧತಾ ಸಭೆ

Nov 2, 2025 - 13:05
 0  19
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವ ಸಿದ್ಧತಾ ಸಭೆ

ಆಪ್ತ ನ್ಯೂಸ್ ದಾಂಡೇಲಿ:

ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಡಿಸೆಂಬರ್ ತಿಂಗಳ ಎರಡನೇ ವಾರದಲ್ಲಿ ದಾಂಡೇಲಿಯಲ್ಲಿ ನಡೆಯಲಿರುವ ಉತ್ತರ ಕನ್ನಡ ಜಿಲ್ಲಾ 25ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕುರಿತಂತೆ ನಗರದ ಅಂಬೇವಾಡಿಯಲ್ಲಿರುವ ತಾಲೂಕು ಆಡಳಿತ ಸೌಧದ ಸಭಾಭವನದಲ್ಲಿ ಶಾಸಕ ಆರ್.ವಿ. ದೇಶಪಾಂಡೆ ಅಧ್ಯಕ್ಷತೆಯಲ್ಲಿ ಪೂರ್ವ ಸಿದ್ಧತಾ ಸಭೆಯು ಜರುಗಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಆರ್.ವಿ.ದೇಶಪಾಂಡೆ ದಾಂಡೇಲಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಅತ್ಯಂತ ಸಂತಸದ ವಿಚಾರ. ನಾವೆಲ್ಲರೂ ಶ್ರದ್ಧಾಪೂರ್ವಕವಾಗಿ ಈ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅದ್ದೂರಿಯಾಗಿ ವಿಜೃಂಭಣೆಯಿಂದ ನಡೆಯಲು ಕಾರಣಿಕರ್ತರಾಗಬೇಕು. ಅಕ್ಷರ ಜಾತ್ರೆ ನಮ್ಮ ನಿಮ್ಮೆಲ್ಲರ ಮನೆ ಮತ್ತು ಮನಸ್ಸಿನ ಹಬ್ಬವಾಗಬೇಕು. ಊರಿನ ಜಾತ್ರೆಯಾಗಬೇಕು. ಸಂಭ್ರಮದ ವಾತಾವರಣ ಸೃಷ್ಟಿಯಾಗಬೇಕು. ಈ ನಿಟ್ಟಿನಲ್ಲಿ ನಾವು ನೀವೆಲ್ಲರೂ ಸೇರಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅಭೂತಪೂರ್ವವಾಗಿ ಆಯೋಜಿಸಲು ಪ್ರಾಮಾಣಿಕವಾಗಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು. ಈ ಸಮ್ಮೇಳನದ ಯಶಸ್ವಿಗೆ ತಾನು ಕ್ಷೇತ್ರದ ಶಾಸಕನಾಗಿ ಅದರಲ್ಲಿಯೂ ಮುಖ್ಯವಾಗಿ ಒಬ್ಬ ಕನ್ನಡಿಗನಾಗಿ ಅತ್ಯಂತ ಬದ್ಧತೆಯಿಂದ ನನ್ನನ್ನು ನಾನು ತೊಡಗಿಸಿಕೊಳ್ಳುತ್ತೇನೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಬಿ.ಎನ್.ವಾಸರೆಯವರು ಕನ್ನಡ ಸಾಹಿತ್ಯ ಸಮ್ಮೇಳನದ ತಯಾರಿ ಹಾಗೂ ರೂಪುರೇಷೆಗಳ ಬಗ್ಗೆ ಮಾತನಾಡಿದರು.

ಸಭೆಯಲ್ಲಿ ಸಮ್ಮೇಳನದ ಸ್ಥಳ, ವ್ಯವಸ್ಥೆ, ಅತಿಥಿಗಳ ಆತಿಥ್ಯ, ವಸತಿ-ಭೋಜನ ವ್ಯವಸ್ಥೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ, ಸಾಹಿತ್ಯ ಚಟುವಟಿಕೆಗಳ ವೇಳಾಪಟ್ಟಿ ಹಾಗೂ ಸಾಹಿತ್ಯ ವೇದಿಕೆಗಳ ಕುರಿತು ಚರ್ಚಿಸಲಾಯಿತು. ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ಸಮ್ಮೇಳನವನ್ನು ಜನಪರ ಹಬ್ಬದ ವಾತಾವರಣದಲ್ಲಿ ನಡೆಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಅಷ್ಪಾಕ್ ಶೇಖ, ತಹಶೀಲ್ದಾರ್ ಶೈಲೇಶ ಪರಮಾನಂದ, ಪೌರಾಯುಕ್ತ‌ ವಿವೇಕ ಬನ್ನೆ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಟಿ.ಸಿ.ಹಾದಿಮನಿ,
ದಾಂಡೇಲಿ ಹಾಗೂ ಹಳಿಯಾಳ ತಾಲೂಕುಗಳ ಎಲ್ಲ ಇಲಾಖಾ ಅಧಿಕಾರಿಗಳು, ಜನಪ್ರತಿನಿಧಿಗಳು, ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರು,ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ವಿವಿಧ ಸಂಘ–ಸಂಸ್ಥೆಗಳ ಪ್ರಮುಖರು, ಹಿರಿ–ಕಿರಿಯ ಸಾಹಿತಿಗಳು, ಶಿಕ್ಷಕರು ಹಾಗೂ ನಾಗರಿಕ ಪ್ರಮುಖರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0