ರಣಜಿ ಪಂದ್ಯ: ಮೊದಲ ದಿನದಾಂತ್ಯಕ್ಕೆ ಗೋವಾ ವಿರುದ್ಧ ಕರ್ನಾಟಕ 5 ವಿಕೆಟ್ ನಷ್ಟಕ್ಕೆ 222 ರನ್

Oct 25, 2025 - 22:54
Oct 25, 2025 - 22:56
 0  7
ರಣಜಿ ಪಂದ್ಯ: ಮೊದಲ ದಿನದಾಂತ್ಯಕ್ಕೆ ಗೋವಾ ವಿರುದ್ಧ ಕರ್ನಾಟಕ 5 ವಿಕೆಟ್ ನಷ್ಟಕ್ಕೆ 222 ರನ್

ಆಪ್ತ ನ್ಯೂಸ್ ಶಿವಮೊಗ್ಗ:

ಇಲ್ಲಿನ ನವಲೆಯ ಕೆ.ಎಸ್​.ಸಿ.ಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆತಿಥೇಯ ಕರ್ನಾಟಕ ತಂಡವು, ಗೋವಾ ತಂಡದ ವಿರುದ್ದ ಮೊದಲ ದಿನದ ಅಂತ್ಯಕ್ಕೆ 5 ವಿಕೆಟ್​ ಕಳೆದುಕೊಂಡು 222 ರನ್​ ಗಳಿಸಿದೆ.

ಟಾಸ್ ಗೆದ್ದ ಗೋವಾ ತಂಡ ಮೊದಲು ಬೌಲಿಂಗ್ ಆಯ್ದುಕೊಂಡಿತು. ಮಳೆಯಿಂದ ಒದ್ದೆಯಾದ ಪಿಚ್​​ನ ಲಾಭ ಪಡೆದ ಗೋವಾ ಬೌಲರ್​ಗಳು ಕರ್ನಾಟಕದ ಬ್ಯಾಟರ್​ಗಳನ್ನು ಕಾಡಿದರು. 65 ರನ್​​ಗಳಿಗೆ 4 ಕಳೆದುಕೊಂಡ ಕರ್ನಾಟಕ ಬ್ಯಾಟಿಂಗ್​ ವೈಫಲ್ಯ ಅನುಭವಿಸಿತು.

ಆರಂಭಿಕರಾದ ನಿಖಿನ್ ಜೋಸೆ ಹಾಗೂ ನಾಯಕ ಮಾಯಂಕ್ ಅರ್ಗವಾಲ್ ನಿಧಾನಗತಿಯಲ್ಲಿ ಬರುತ್ತಿದ್ದ ಚೆಂಡನ್ನು ಎದುರಿಸಲು ಪರದಾಡಿದರು. ಕ್ರಿಕೆಟ್​ ದೇವರು ಸಚಿನ್ ತೆಂಡೂಲ್ಕರ್​ ಪುತ್ರ ಅರ್ಜುನ್ ತೆಂಡೂಲ್ಕರ್​ 3 ವಿಕೆಟ್​ ಪಡೆದು ವಿಜೃಂಭಿಸಿದರು. ನಿಖಿನ್​ (3), ಕೃಷ್ಣನ್​ ಶ್ರೀಜಿತ್​ (0), ಉತ್ತಮವಾಗಿ ಆಡುತ್ತಿದ್ದ ಅಭಿನವ್​ ಮನೋಹರ್​ ಅವರನ್ನು ಪೆವಿಲಿಯನ್​ಗೆ ಕಳುಹಿಸಿದರು.

ಒಂದೆಡೆ ವಿಕೆಟ್​ ಉರುಳುತ್ತಿದ್ದರೂ, ನೆಲಕಚ್ಚಿ ಆಡಿದ ನಾಯಕ ಮಾಯಾಂಕ್ ಅರ್ಗವಾಲ್ 69 ಎಸೆತಗಳಲ್ಲಿ 28 ರನ್ ಗಳಿಸಿದ್ದಾಗ ವಾಸುಕಿ ಕೌಶಿಕ್​ ಅವರಿಗೆ ವಿಕೆಟ್ ಒಪ್ಪಿಸಿದರು. ಐದನೇ ಕ್ರಮಾಂಕದಲ್ಲಿ ಆಡಲು ಬಂದ ಸ್ಮರನ್ ರವಿಚಂದ್ರನ್​ 3 ರನ್ ಗಳಿಸುವಷ್ಟರಲ್ಲಿ ಸುಸ್ತಾದರು.

ಶತಕದತ್ತ ಕರುಣ್​ ನಾಯರ್: ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ವೈಫಲ್ಯ ಕಂಡು ಹೊರಬಿದ್ದಿರುವ ಕರುಣ್ ನಾಯರ್ ದೇಶೀ ಟೂರ್ನಿಗಳಲ್ಲಿ ತಮ್ಮ ಅದ್ಭುತ ಪ್ರದರ್ಶನವನ್ನು ಮುಂದುವರಿಸಿದರು. 138 ಎಸೆತಗಳಲ್ಲಿ 86 ರನ್ ಗಳಿಸಿದ್ದಾರೆ. ಶ್ರೇಯಸ್ ಗೋಪಾಲ್ 48 ರನ್​ ಗಳಿಸಿದ್ದು, ಇಬ್ಬರೂ ನಾಳೆಗೆ ಕ್ರೀಸ್​ ಕಾಯ್ದುಕೊಂಡಿದ್ದಾರೆ.

ಶ್ರೇಯಸ್ ಗೋಪಾಲ್ ಹಾಗೂ ಕರುಣ್ ನಾಯರ್ 94 ರನ್​​ಗಳ ಜೊತೆಯಾಟದಿಂದ ತಂಡವು ದಿಢೀರ್ ಕುಸಿತದಿಂದ ಚೇತರಿಸಿಕೊಂಡು, ದಿನದಾಂತ್ಯಕ್ಕೆ 222 ರನ್ ಗಳಿಸಿತು. ಗೋವಾ ಪರವಾಗಿ ಅರ್ಜುನ್ ತೆಂಡೊಲ್ಕರ್ 17 ಓವರ್​ ಎಸೆದು 3 ವಿಕೆಟ್ ಪಡೆದರೆ, ಕೌಶಿಕ್ 18 ಓವರ್​ಗಳಲ್ಲಿ 24 ರನ್ ನೀಡಿ 2 ವಿಕೆಟ್ ಪಡೆದರು.

ರಾತ್ರಿ ಮಳೆ ಬೀಳದೇ ಹೋದರೆ ನಾಳೆ ಕರ್ನಾಟಕ ತಂಡವು ರನ್ ಗಳಿಸಲು ಉತ್ತಮವಾದ ಅವಕಾಶ ಸಿಗುವ ಸಾಧ್ಯತೆಗಳಿವೆ. ಮೊದಲ ದಿನದಲ್ಲಿ 69 ಓವರ್​ಗಳು ಮಾತ್ರ ಎಸೆಯಲು ಸಾಧ್ಯವಾಯಿತು. ಮಳೆಯಿಂದಾಗಿ ಪಂದ್ಯವು ನಿಗದಿತ ಅವಧಿಗಿಂತ ತಡವಾಗಿ ಆರಂಭವಾಯಿತು.

Videos
https://youtu.be/O0yhpn8o4XA

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0