ಪಂಚಲಿಂಗ ಕಾರ್ತಿಕಕ್ಕೆ ‘ರತ್ನ ಮಾಂಗಲ್ಯ’ ಸಾಮಾಜಿಕ ನಾಟಕ ಪ್ರದರ್ಶನ
ಆಪ್ತ ನ್ಯೂಸ್ ಶಿರಸಿ:
ಶಿರಸಿ ತಾಲೂಕ ಶಿವಳ್ಳಿ ಸೀಮೆಯ ಪಂಚಲಿಂಗದಲ್ಲಿ ನವಂಬರ 4, 2025 ಮಂಗಳವಾರದಂದು ಲಕ್ಷ್ಮಿನಾರಾಯಣ ಶ್ರೀ ಪಂಚಲಿಂಗೇಶ್ವರ ದೇವರ ದೀಪೋತ್ಸವದ ನಿಮಿತ್ತ ರಾತ್ರಿ ೧೧.೦೦ ಘಂಟೆಗೆ ಸ್ಥಳೀಯ ಕಲಾವಿದರಿಂದ ‘ರತ್ನ ಮಾಂಗಲ್ಯ’ ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ.
ಶ್ರೀಕ್ಷೇತ್ರ ಪಂಚಲಿಂಗದಲ್ಲಿ ವರ್ಷಕ್ಕೊಮ್ಮೆ ನಡೆಯುವ ಕಾರ್ತಿಕೋತ್ಸವ ಬಂತೆಂದರೆ ಏನೋ ಸಂಭ್ರ‍್ರಮ. ಇದೊಂದು ಕುಟುಂಬದ ಸದಸ್ಯರ ಜೊತೆ ಮನೆ ಹೆಣ್ಮಕ್ಕಳು, ಅಳಿಯಂದಿರು, ಮೊಮ್ಮಕ್ಕಳು ಹೀಗೆ ನೆಂಟರಿಷ್ಟರೊಂದಾಗಿ ಆಚರಿಸುವ ಊರ ಹಬ್ಬ. ಮಕ್ಕಳು ಬಂದು ಸೇರುವ ಖುಷಿ ಒಂದೆಡೆಯಾದರೆ ರಾತ್ರಿ ನಡೆಯುವ ನಾಟಕದ ಮನರಂಜನೆಯ ಸೊಬಗೇ ಮತ್ತೊಂದೆಡೆ. ಪಂಚಲಿಂಗ ಕಾರ್ತಿಕಕ್ಕೆ ಯಾವಾಗಲೂ ಬರುವ ಜನ ಜಾಸ್ತಿ ಅದರಲ್ಲೂ ನಾಟಕ ಇದ್ದ ವರ್ಷ ಮತ್ತೂ ಜಾಸ್ತಿ ಎಂಬ ಮಾತಿದೆ.
ಇತಿಹಾಸ:
ನಾಟಕ ಮುಗಿದು ತಿಂಗಳುಗಳಾದರೂ ಅದೇ ಗುಂಗಲ್ಲಿ ನಾಲ್ಕು ಜನ ಸೇರಿದಾಗ, ಕಟ್ಟೆ ಪಂಚಾಯ್ತಿಯಲ್ಲಿ ಚರ್ಚಿಸಿ ವಿಮರ್ಶಿಸುವ ದೊಡ್ಡ ಕಲಾಭಿಮಾನಿಗಳ ಬಳಗವೇ ಇದೆ ಈ ಊರಿನಲ್ಲಿ. ೯೦ರ ದಶಕದಲ್ಲಿ ನಡೆದ ‘ತಾಳಿ ಕಟ್ಟಿದರೂ ಗಂಡನಲ್ಲ’ ‘ ಸಿಂಧೂರ ತಂದ ಸೌಭಾಗ್ಯ’ ‘ವಜ್ರ ಕಿರೀಟ’ ‘ತಾಯಿಗೆ ತಕ್ಕ ಮಗ’ ಮುಂತಾದ ಪ್ರಯೋಗಗಳು ಹಾಗೂ ಅದರಲ್ಲಿನ ಕೆಲವು ಪಾತ್ರಗಳು ಇಂದಿಗೂ ಇವರ ಕಥೆಯಲ್ಲಿ ಜೀವಂತವಾಗಿದೆ.
ಮುನ್ನಲೆ:
ಐವತ್ತು ವರ್ಷಕ್ಕಿಂತಲೂ ದೀರ್ಘ ಇತಿಹಾಸ ಹೊಂದಿರುವ ಪಂಚಲಿಂಗ ನಾಟಕ ಕೊಡೆಮನೆ ಆರ್. ವಿ ಹೆಗಡೆಯವರ ನಿಧನದ ನಂತರ ಹೆಚ್ಚಿನ ರಂಗ ಪ್ರಯೋಗ ನಡೆದಿರಲಿಲ್ಲ. ಈಗ ಮತ್ತೆ ‘ಪಂಚಲಿಂಗ ನಾಟಕ’ವನ್ನು ಮುನ್ನಲೆಗೆ ತಂದ ಶ್ರೇಯ ಇವರ ಶಿಷ್ಯರಾದ ಆರ್. ಟಿ ಹೆಗಡೆ ತೀರ್ಥಗಾನ ಹಾಗೂ ಊರವರಿಗೆ ಸಲ್ಲಲೇಬೇಕು.
‘ರತ್ನ ಮಾಂಗಲ್ಯ’ ನಾಟಕದ ವಿಶೇಷ :
೧೯೮೬ರಲ್ಲಿ ತೆರೆಯ ಮೇಲೆ ಯಶಸ್ವಿಯಾಗಿ ಮೆರೆದು ಮರೆತ ನಾಟಕವನ್ನು ಅದೇ ರಂಗದ ಮೇಲೆ ಕಲಾಭಿಮಾನಿಗಳ ಪ್ರೋತ್ಸಾಹದ ನಿರೀಕ್ಷೆಯ ಮೇಲೆ ಮತ್ತೆ ತರಲಾಗುತ್ತಿದೆ. ಇದೇ ಮೊದಲ ಬಾರಿಗೆ ಸ್ತ್ರೀ ಪಾತ್ರಗಳನ್ನು ಸ್ಥಳೀಯ ಮಹಿಳೆಯರೇ ನಿರ್ವಹಿಸುತ್ತಿರುವುದು ವಿಶೇಷತೆಯ ಜೊತೆಗೆ ಊರಲ್ಲೆಲ್ಲಾ ಅದೇ ಸುದ್ದಿಯಾಗಿದೆ.
ಮೂರು ತಲೆಮಾರಿನ ಹಿರಿಕಿರಿಯ ಹವ್ಯಾಸಿ ಕಲಾವಿದರು ಸೇರಿ ರಂಜಿಸಲು ಸಿದ್ಧತೆನಡೆಸಿದ ಕಲಾ ಕುಸುಮ ಯಶಸ್ವಿಯಾಗಲಿ ಎನ್ನುವುದು ಆಪ್ತ ನ್ಯೂಸ್ ಆಶಯ.
___________________________________________
What's Your Reaction?
Like
1
Dislike
0
Love
0
Funny
0
Angry
0
Sad
0
Wow
0



