ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಉತ್ಸವದ ಸಂಕಲ್ಪ

ಆಪ್ತ ನ್ಯೂಸ್ ಯಲ್ಲಾಪುರ:
ಸಂಕಲ್ಪ ಸೇವಾ ಸಂಸ್ಥೆಯ 39 ನೇಯ ವರ್ಷದ ಸಂಕಲ್ಪ ಉತ್ಸವ ಅ 31 ರಿಂದ ನ 4 ವರೆಗೆ ಅದ್ದೂರಿಯಾಗಿ ಯಕ್ಷಗಾನ ಸೇರಿದಂತೆ ವಿವಿಧ ಸಾಂಸ್ಕೃತಿಕ ವೈಭವದೊಂದಿಗೆ ಪಟ್ಟಣದ ಗಾಂಧಿ ಕುಟೀರದಲ್ಲಿ ನಡೆಯಲಿದೆ ಎಂದು ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು.
ಅವರು ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಪತ್ರಕರ್ತರಿಗೆ ಮಾಹಿತಿ ನೀಡಿದರು. ರಾಜ್ಯದಲ್ಲಿಯೇ ನಿರಂತರವಾಗಿ ಸಾಂಸ್ಕೃತಿಕ ಉತ್ಸವ ನಡೆಸುತ್ತಿರುವ ಸಂಸ್ಥೆಗಳಲ್ಲಿ ಸಂಕಲ್ಪವೂ ಒಂದು.
ಕನ್ನಡ ನಾಡಿನ ನೂರಾರು ಕಲಾವಿದರನ್ನು ಬೆಳೆಸಿದ ಹೆಗ್ಗಳಿಕೆ ಹೊಂದಿದೆ.ಅ.31 ರಂದು ಸಂಜೆ 5.30 ಕ್ಕೆ ಸೋಂದಾ ಸ್ವರ್ಣವಲ್ಲೀ ಶ್ರೀಗಳು ಹಾಗೂ ಎಡನೀರು ಶ್ರೀಗಳು ಜಂಟಿಯಾಗಿ ಉತ್ಸವವನ್ನು ಉದ್ಘಾಟಿಸಲಿದ್ದಾರೆ. ಈ 5 ದಿನಗಳ ಉತ್ಸವದಲ್ಲಿ ಶಿರಳಗಿ ಬ್ರಹ್ಮಾನಂದ ಭಾರತಿ ಶ್ರೀಗಳು, ಬಾರ್ಕೂರು ಶ್ರೀಗಳು, ನೆಲೆಮಾವು ಶ್ರೀಗಳು, ರಾಘವೇಶ್ವರ ಭಾರತೀ ಸ್ವಾಮಿಗಳು ಭಾಗವಹಿಸಲಿದ್ದಾರೆ.
ಪ್ರತಿ ದಿನ ಸಭಾ ಕಾರ್ಯಕ್ರಮದಲ್ಲಿ ಗಣ್ಯರು ಭಾಗವಹಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯಕ್ಷಗಾನ, ತಾಳಮದ್ದಲೆ, ಭರತನಾಟ್ಯ, ಕೀರ್ತನೆ, ಸಂಗೀತ, ನಾಟಕ, ಗಮಕ ವಾಚನ, ಭಜನೆ ನಡೆಯಲಿದೆ. ಪುಸ್ತಕ ಬಿಡುಗಡೆ, ರಾಷ್ಟ್ರಭಕ್ತಿ ಕಾರ್ಯಕ್ರಮ, ನಿವೃತ್ತ ಸೈನಿಕರಿಗೆ, ಸಾಧಕರಿಗೆ ಸನ್ಮಾನ, ಪುರಾಣ ಲಹರಿ ಕಾರ್ಯಕ್ರಮ ನಡೆಯಲಿದೆ. ಗೋ ಉತ್ಪನ್ನ ಮಳಿಗೆ, ಆಯುರ್ವೇದ ತಪಾಸಣಾ ಶಿಬಿರವನ್ನೂ ಆಯೋಜಿಸಲಾಗಿದೆ ಎಂದು ವಿವರಿಸಿದರು.
ಸಂಸ್ಥೆಯ ಸಂಚಾಲಕ ಪ್ರಸಾದ ಪ್ರಮೋದ ಹೆಗಡೆ ಮಾತನಾಡಿ, ಈ ಬಾರಿ ವಿವಿಧ ಕ್ಷೇತ್ರಗಳ ಸಾಧಕರಾದ ಬಿ.ಎನ್.ವಾಸರೆ, ರಾಮನಾಥ ಭಟ್ಟ, ಯಮುನಾ ನಾಯ್ಕ, ಕಲ್ಲಪ್ಪ ನಾಯ್ಕ, ನರಸಿಂಹ ಸಾತೊಡ್ಡಿ, ಸುಬ್ರಾಯ ಬಿದ್ರೆಮನೆ, ಚಿದಾನಂದ ಹರಿಜನ, ಡಾ.ನಾರಾಯಣ ಹುಳ್ಸೆ, ಅವರಿಗೆ" ಸಂಕಲ್ಪ ಪ್ರಶಸ್ತಿ" ನೀಡಿ ಗೌರವಿಸಲಾಗುವುದು ಎಂದರು.
ಉತ್ಸವದ ಸಭಾ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ಟ, ಹರಿಪ್ರಕಾಶ ಕೋಣೆಮನೆ, ಶಾಸಕ ಶಿವರಾಮ ಹೆಬ್ವಾರ್, ಆರ್.ವಿ.ದೇಶಪಾಂಡೆ, ಸುನೀಲಕುಮಾರ್ ಕಾರ್ಕಳ, ದಿನಕರ ಶೆಟ್ಟಿ, ಶಾಂತಾರಾಮ ಸಿದ್ದಿ, ಸಂಸದ ಕಾಗೇರಿ, ಸೇರಿದಂತೆ ವಿವಿಧ ಸ್ಥರದ ಜನಪ್ರತಿನಿಧಿಗಳು ಸಹಕಾರಿಗಳು ಸಾಮಾಜಿಕ ಮುಂಧಾಳುಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಸಂಸ್ಥೆಯ ಸದಸ್ಯ ಸಿ.ಜಿ.ಹೆಗಡೆ ಮಾತನಾಡಿ, ಪ್ರತಿ ದಿನ ಸುಬ್ರಹ್ಮಣ್ಯ ಚಿಟ್ಟಾಣಿ ಅವರ ನೇತೃತ್ವದಲ್ಲಿ ಪ್ರಸಿದ್ದ ಕಲಾವಿದರಿಂದ ಬಬ್ರುವಾಹನ, ಗದಾಯುದ್ಧ, ಕಾಳಿದಾಸ, ದ್ರೌಪದಿ ಪ್ರತಾಪ, ಪಾಂಚಜನ್ಯ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದರು. ಸಂಸ್ಥೆಯ ಸದಸ್ಯ ಬಾಬು ಬಾಂದೇಕರ್, ನಿಲೇಶ ಇದ್ದರು.
What's Your Reaction?






