ಹಿರಿಯ ಪತ್ರಕರ್ತ ಹಾಗೂ ಸಮಾಜಸೇವಕ ಯು.ಎಸ್.ಪಾಟೀಲ್ ವಿಧಿವಶ

Dec 28, 2025 - 14:06
 0  21
ಹಿರಿಯ ಪತ್ರಕರ್ತ ಹಾಗೂ ಸಮಾಜಸೇವಕ ಯು.ಎಸ್.ಪಾಟೀಲ್ ವಿಧಿವಶ
ಆಪ್ತ ನ್ಯೂಸ್‌ ದಾಂಡೇಲಿ:
ನಗರದ ಹಿರಿಯ ಪತ್ರಕರ್ತರು ಹಾಗೂ ಸಮಾಜಸೇವಕರಾಗಿದ್ದ ಯು.ಎಸ್.ಪಾಟೀಲ್ ಅವರು  ಭಾನುವಾರ ಬೆಳಿಗ್ಗೆ ವಿಧಿವಶರಾದರು. ಮೃತರಿಗೆ 75 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ದಿನಗಳಿಂದ ಅನಾರೋಗ್ಯಗೊಂಡು ಹುಬ್ಬಳ್ಳಿಯ ಸುಚಿರಾಯು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದರು. ಅಂತಿಮವಾಗಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.
 
ಬಂಗೂರುನಗರ ಜೂನಿಯರ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಕಾಲೇಜಿನ ಪ್ರಾಚಾರ್ಯರಾಗಿ ಅನುಪಮ ಸೇವೆಯನ್ನು ಸಲ್ಲಿಸಿ ನಿವೃತ್ತರಾಗಿದ್ದರು. ಕಳೆದ 30 ವರ್ಷಗಳಿಗಿಂತಲೂ ಹೆಚ್ಚು ವರ್ಷಗಳಿಂದ ಲಯನ್ಸ್ ಕ್ಲಬ್ಬಿನ ಸದಸ್ಯರಾಗಿ, ಅಧ್ಯಕ್ಷರಾಗಿ, ಕ್ಲಬಿನ ವಿವಿಧ ಹುದ್ದೆಗಳನ್ನು ಅಲಂಕರಿಸಿ, ದಾಂಡೇಲಿಯ ಲಯನ್ಸ್ ಕ್ಲಬ್ಬಿಗೆ ಬಹುದೊಡ್ಡ ಆದರ ಸ್ತಂಭವಾಗಿದ್ದರು. ದಾಂಡೇಲಿಯ ಲಯನ್ಸ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿಯಾಗಿ ಶಿಕ್ಷಣ ಸಂಸ್ಥೆಯ ಬೆಳವಣಿಗೆಗೆ ಮಹೋನ್ನತ ಕೊಡುಗೆಯನ್ನು ನೀಡಿದ್ದರು.
ದಾಂಡೇಲಿಯಲ್ಲಿ ಜಗಜ್ಯೋತಿ ಶ್ರೀ ಬಸವೇಶ್ವರ ಮೂರ್ತಿ ಪ್ರತಿಷ್ಠಾಪನಾ ಸಮಿತಿಯ ಅಧ್ಯಕ್ಷರಾಗಿ ಶ್ರೀ ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆಯಲ್ಲಿ ಯು.ಎಸ್.ಪಾಟೀಲ್ ಅವರ ಶ್ರಮ ಅತ್ಯಂತ ಮಹತ್ವಪೂರ್ಣವಾಗಿತ್ತು. ಪಟೇಲ್ ನಗರದ ಮೊಹರಂ ಕಮಿಟಿಯ ಅಧ್ಯಕ್ಷರಾಗಿ ಅತ್ಯುತ್ತಮವಾಗಿ ಸೇವೆ ಸಲ್ಲಿಸಿ ಸರ್ವಧರ್ಮ ಸಮನ್ವಯತೆಯನ್ನು ಸಾರಿದ ಶ್ರೇಷ್ಠ ವ್ಯಕ್ತಿತ್ವವನ್ನು ಯು.ಎಸ್ ಪಾಟೀಲ್ ಅವರು ಹೊಂದಿದ್ದರು.
ದಾಂಡೇಲಿಯ ಪತ್ರಕರ್ತರ ಸಂಘದ ಸದಸ್ಯರಾಗಿ ಅಧ್ಯಕ್ಷರಾಗಿ, ಸಂಘದ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿ ಯು ಎಸ್ ಪಾಟೀಲ್ ಅವರ ಸೇವೆ ಅನನ್ಯ ಮತ್ತು ಅಪಾರ. ದಾಂಡೇಲಿಯ ಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, ಕಳೆದ ಎರಡು ವರ್ಷಗಳಿಂದ ಅಧ್ಯಕ್ಷರಾಗಿಯೂ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ. ಆಲೂರಿನಲ್ಲಿ ನಡೆದ ದಾಂಡೇಲಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಮ್ಮೇಳನದ ಯಶಸ್ಸಿಗೆ ಕಾರಣಿಕರ್ತರಾಗಿದ್ದರು.
 
ಕಳೆದ 35 ವರ್ಷಗಳಿಂದ ಪತ್ರಕರ್ತರಾಗಿ ದಾಂಡೇಲಿಯ ಅಭಿವೃದ್ಧಿಗೆ ತನ್ನನ್ನು ತಾನು ತೊಡಗಿಸಿಕೊಳ್ಳುವ ಮೂಲಕ ಜನಸ್ನೇಹಿ ಪತ್ರಕರ್ತರಾಗಿ ಗಮನ ಸೆಳೆದಿದ್ದರು. ದಾಂಡೇಲಿಯ ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಳ್ಳುವ ಮೂಲಕ ಸಮಾಜಮುಖಿ ವ್ಯಕ್ತಿಯಾಗಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
 
ಯು.ಎಸ್ ಪಾಟೀಲ್ ಅವರಿಗೆ ಅವರ ಸಮಾಜ ಸೇವೆ, ಧಾರ್ಮಿಕ ಸೇವೆ ಹಾಗೂ ಶೈಕ್ಷಣಿಕ ಸೇವೆಯನ್ನು ಗುರುತಿಸಿ ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಅನೇಕ ಪ್ರಶಸ್ತಿ ಪುರಸ್ಕಾರ, ಸನ್ಮಾನಗಳು ಅವರನ್ನು ಅರಸಿ ಬಂದಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
 
ಮೃತರು ಪತ್ನಿ, ಇಬ್ಬರು ಸುಪುತ್ರಿಯರು ಹಾಗೂ ಅಪಾರ ಸಂಖ್ಯೆಯಲ್ಲಿ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ನಿಧನಕ್ಕೆ ಗಣ್ಯರನೇಕರು ಕಂಬನಿಯನ್ನು ಮಿಡಿದು ಸಂತಾಪವನ್ನು ಸೂಚಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0