ತಾಂಡವ ನೃತ್ಯ ಮಾಡಿ “ಈಶ್ವರ ಭಟ್ಟ”ರಾದ ಶಂಕರ ಭಟ್ಟರು -ಡಾ: ಜಿ ಎ ಹೆಗಡೆ ಸೋಂದಾ
ಆಪ್ತ ನ್ಯೂಸ್ ಶಿರಸಿ:
ಮೂರೂರಿನ ಅಲವಳ್ಳಿ ಮೂಲದ ಶಂಕರ ಭಟ್ಟ ಸಿದ್ದಾಪುರ ಅವರು ಯಕ್ಷಗಾನ ಪರಂಪರೆಯ ಹಿನ್ನಲೆಯಿಂದ ಬಂದ ಅಭಿಜಾತ ಕಲಾವಿದರು. ಕಲಾಬದ್ಧತೆಯ ಶಿಸ್ತನ್ನು ಅಳವಡಿಸಿಕೊಂಡ ಶ್ರೇಷ್ಟ ಕಲಾವಿದರು, ಎಂದು ಯಕ್ಷಶುಭೋದಯದ ಅಧ್ಯಕ್ಷ ಯಕ್ಷಗಾನ ವಿದ್ವಾಂಸ ಡಾ: ಜಿ.ಎ.ಹೆಗಡೆ ಸೋಂದಾ ನುಡಿದರು. ಅವರು ಅಂಬಾಗಿರಿಯ ಕಾಳಿಕಾಭವಾನಿ ಸಭಾಭವನದಲ್ಲಿ ನಡೆದ “ಚಕ್ರಗ್ರಹಣ” ತಾಳ ಮದ್ದೆಲೆಯಲ್ಲಿ ನಾಟ್ಯಾಚಾರ್ಯ ಶಂಕರ ಭಟ್ಟರನ್ನು ಯಕ್ಷಶುಭೋದಯದಿಂದ ಸನ್ಮಾನಿಸಿ ಅಭಿನಂದನಾ ಭಾಷಣ ನೀಡುತ್ತಿದ್ದರು.
ಭರತನಾಟ್ಯ ಕಲಿತು ಶಿಷ್ಯರಿಗೆ ಕಲಿಸುತ್ತಾ ಗುರುವಾಗಿ ನಾಟ್ಯಾಚಾರ್ಯ ಬಿರುದಿಗೆ ಪಾತ್ರರಾಗಿ, ಯಕ್ಷಗಾನ ನೃತ್ಯದಲ್ಲಿ ಭರತನಾಟ್ಯದ ಸೂಕ್ಷö್ಮತೆ ನವೀನತೆಯನ್ನು ಅಳವಡಿಸಿಕೊಂಡು ಶ್ರೇಷ್ಟ ಯಕ್ಷಗಾನ ಕಲಾವಿದರಾಗಿ ಅರಳಿದ್ದಾರೆ. ನೂರಾರು ವೇದಿಕೆಗಳಲ್ಲಿ ಈಶ್ವರನಾಗಿ ಕಾಣಿಸಿಕೊಂಡು ತಮ್ಮ ತಾಂಡವ ನೃತ್ಯದ ಮೋಡಿಯಿಂದ ಸಾವಿರಾರು ಅಭಿಮಾನಿಗಳನ್ನು ಗಳಿಸಿ “ಈಶ್ವರ ಭಟ್ಟರು” ಎಂಬ ಕೀರ್ತೀಗೆ ಭಾಜನರಾಗಿದ್ದಾರೆ ಎಂದರು. ಅಂಚೆ ಇಲಾಖೆಯಲ್ಲಿ ದುಡಿದು ನಿವೃತ್ತರಾದ ಇವರು ಪ್ರವೃತ್ತಿಯಿಂದ ಬಾಲ್ಯದಿಂದಲೂ ಕಲಾವಿದರಾಗಿ ಬೆಳೆದು ಈಗ ಉತ್ತಮ ಕಲಾವಿದರಾಗಿ, ಅರ್ಥದಾರಿಯಾಗಿ ಜನಾನುರಾಗಿಯಾಗಿದ್ದಾರೆ ಎಂದು ಶುಭಕೋರಿ ಅಭಿನಂದಿಸಿದರು.
ಸನ್ಮಾನಕ್ಕೆ ಉತ್ತರಿಸಿದ ನಾಟ್ಯಾಚಾರ್ಯ ಶಂಕರಭಟ್ಟರು ಕಲೋಪಾಸನೆಯು ಮಾನಸಿಕ ಸ್ತೆöÊರ್ಯ ಮತ್ತು ತೃಪ್ತಿಯನ್ನು ನೀಡಿ ಭಾವಕೋಶಗಳನ್ನು ಅರಳಿಸಿ ಅನ್ಯರಿಗೆ ಸಂತಸ ನೀಡಬಲ್ಲ ಶಕ್ತಿಯನ್ನು ಕಲಾ ಆರಾಧಕನಿಗೆ ನೀಡುತ್ತದೆ ಎಂದರು. ಜೀವನ ಎಂಬುದು ಆನಂದದ ಆರಾಧನೆ, ಆನಂದದ ಶೋಧನೆ. ಅದು ಯಕ್ಷಗಾನದಂತಹ ಕಲೆಯಿಂದ ಸಾಧ್ಯ ಎಂದು ಮಾರ್ಮಿಕವಾಗಿ ನುಡಿದರು ಸನ್ಮಾನವು ಅಂತರAಗದಲ್ಲಿ ಸಂತಸದ ಸಂಭ್ರಮವನ್ನು ಸೃಷ್ಟಿಸಿ, ತನ್ನ ಕಲಾಬದುಕಿನ ಸಾಧನೆಗೆ ಸಾರ್ಥಕತೆಯನ್ನು ನೀಡಿದ ಸೌಭಾಗ್ಯ ಇದಾಗಿದೆ ಎಂದರು.
ಸನ್ಮಾನ ಕಾರ್ಯಕ್ರಮದ ಜೊತೆಗೆ ಯಕ್ಷಶುಭೋದಯದಿಂದ ನಡೆದ “ಕರ್ಮಜಿಜ್ಞಾಸೆ-ಚಕ್ರಗ್ರಹಣ” ಕನ್ನಡ ರಾಜ್ಯೋತ್ಸವ ತಾಳಮದ್ದಲೆಯಲ್ಲಿ ಡಾ: ಜಿ. ಎ. ಹೆಗಡೆ ಸೋಂದಾ ಭೀಷ್ಮನಾಗಿ ಕರ್ಮಜಿಜ್ಞಾಸೆಯನ್ನು ಸೊಗಸಾಗಿ ಮಂಡಿಸಿ, ಕರ್ಮಬಂಧನದಲ್ಲಿ ಜೀವ ಜಂತುಗಳು ಮತ್ತು ದೇವರೆನಿಸಿಕೊಂಡ ಮಹಾತ್ಮರೂ ಸಹ ತೊಳಲುತ್ತಿರುವ ವಿಚಾರವನ್ನು ಚರ್ಚೆಗೆ ಗ್ರಾಸ ಒದಗಿಸಿದರು. ಕೃಷ್ಣನಾಗಿ ಶಂಕರಭಟ್ಟ ಸಿದ್ದಾಪುರ ಅವರು ಕರ್ಮವು ಜಡ, ಜೀವರು ಚೇತನಗಳು ಕರ್ಮಕ್ಕೆ ಕರ್ತೃತ್ವ ಇಲ್ಲ ಎಂದು ನವೀರಾಗಿ ಪ್ರತಿಪಾದಿಸಿದರು.
ಅರ್ಜುನನಾಗಿ ಕಲಾವಿದೆ ಸುಮಾ ಗಡಿಗೆಹೊಳೆ ಉತ್ತಮ ಸಂಭಾಷಣೆಗೆ ಒದಗಿದ ಪಾತ್ರಕ್ಕೆ ಜೀವ ತುಂಬಿದರು. ಸುಶ್ರಾವ್ಯ ಹಿಮ್ಮೇಳ ವೈಭವ ನೀಡಿದ ಹಿರಿಯ ಭಾಗವತ ಶ್ರೀಪಾದ ಹೆಗಡೆ ಬಾಳೆಗದ್ದೆ, ಶ್ರೀಪಾದ ಭಟ್ಟ ಮೂಡಗಾರ್ ಪ್ರೇಕ್ಷಕರ ಮನಸೂರೆಗೊಂಡರು. ಸಭಾಧ್ಯಕ್ಷತೆ ವಹಿಸಿದ್ದ ರಾಮಕೃಷ್ಣ ಕಾಳಿಕಾಮಠ ಅಂಬಾಗಿರಿ ಅಧ್ಯಕ್ಷ ವಿ.ಎಂ.ಹೆಗಡೆ, ಆಲ್ಮನೆ, ಯಕ್ಷಗಾನವು ನಮಗೆ ಸಾಂಸ್ಕೃತಿಕ ಶ್ರೀಮಂತಿಕೆ ನೀಡಿ ಸಮಾಜದಲ್ಲಿ ಸಜ್ಜನರಾಗಲು ಪ್ರೇರಣೆ ನೀಡುತ್ತದೆ ಎಂದು ತಿಳಿಸಿ, ಕಲಾವಿದರಿಗೆ ಶುಭಕೋರಿದರು. ಸಮಾಜ ಚಿಂತಕ ಡಿ.ಎಸ್.ಹೆಗಡೆ ಮೂರೂರು, ಕವಿ ಲಕ್ಷö್ಮಣ ಶಾನ್‌ಬಾಗ್ ಮುಖ್ಯ ಅಧ್ಯಾಪಕರಾದ ಸುರೇಶ ಹೆಗಡೆ ಸಂಕೊಳ್ಳಿ ಮುಂತಾದವರು ಸಭಾಕಾರ್ಯಕ್ರಮದಲ್ಲಿ ಸಹಕರಿಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



