ಮಂಗಳೂರಿನ ತಂತ್ರಜ್ಞಾನ ಸಮಾವೇಶದಲ್ಲಿ ಶಿರಸಿಯ ಪ್ರೊಭಾರತ್ ಸಂಸ್ಥೆಗೆ ವಿಶೇಷ ಗೌರವ

Sep 27, 2026 - 18:47
 0  88
ಮಂಗಳೂರಿನ ತಂತ್ರಜ್ಞಾನ ಸಮಾವೇಶದಲ್ಲಿ ಶಿರಸಿಯ ಪ್ರೊಭಾರತ್ ಸಂಸ್ಥೆಗೆ ವಿಶೇಷ ಗೌರವ

ಆಪ್ತ ನ್ಯೂಸ್ ಶಿರಸಿ:

ಕರ್ನಾಟಕ ಸರ್ಕಾರದ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಹಾಗೂ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಸಹಯೋಗದಲ್ಲಿ ಮಂಗಳೂರಿನಲ್ಲಿ ಆಯೋಜಿಸಲಾಗಿದ್ದ ‘ಮಂಗಳೂರು ಟೆಕ್ನೋವಾನ್ಜಾ–೨೦೨೬’ ಸಮಾವೇಶದಲ್ಲಿ ಶಿರಸಿ ಮೂಲದ ‘ಪ್ರೊಭಾರತ್ ಟೆಕ್ನಾಲಜೀಸ್’ ಸಂಸ್ಥೆಗೆ ವಿಶೇಷ ಗೌರವ ಸಂದಿದೆ.

ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ‘ಎಲಿವೇಟ್’ ಯೋಜನೆಯ ವಿಜೇತ ಸಂಸ್ಥೆಯಾಗಿರುವ ಪ್ರೊಭಾರತ್ ಟೆಕ್ನಾಲಜೀಸ್‌ನ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹುಳಗೋಳದ ಪ್ರವರ್ ಹೆಗಡೆ ಅವರನ್ನು ಸಮಾವೇಶದ ಮುಖ್ಯ ವೇದಿಕೆಯಲ್ಲಿ ಕೆಡಿಇಎಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಂಜೀವ್ ಕುಮಾರ್ ಗುಪ್ತಾ ಅವರು ಸನ್ಮಾನಿಸಿ ಗೌರವಿಸಿದರು.

ಸಂಸ್ಥೆಯು ಅಭಿವೃದ್ಧಿಪಡಿಸಿರುವ ಸ್ವದೇಶಿ ತ್ರಿಡಿ ಮುದ್ರಕ ಯಂತ್ರವನ್ನು ಸಮಾವೇಶದಲ್ಲಿ ಪ್ರದರ್ಶಿಸಲಾಯಿತು. ಈ ಸಾಧನವು ಕೇವಲ ತ್ರಿಡಿ ಮಾದರಿಗಳ ಮುದ್ರಣಕ್ಕೆ ಮಾತ್ರ ಸೀಮಿತವಾಗಿರದೆ, ಮುದ್ರಿತ ವಿದ್ಯುನ್ಮಂಡಲಗಳ (ಸರ್ಕ್ಯೂಟ್ ಬೋರ್ಡ್) ಪ್ರಾಯೋಗಿಕ ಮಾದರಿ ನಿರ್ಮಾಣ ಹಾಗೂ ಉತ್ಪಾದನೆಯಂತಹ ತಾಂತ್ರಿಕ ಕಾರ್ಯಗಳನ್ನು ಒಂದೇ ಯಂತ್ರದಲ್ಲಿ ನಿರ್ವಹಿಸುವ ಸಾಮರ್ಥ್ಯವನ್ನು ಒಳಗೊಂಡಿದೆ.

ಇದರೊಂದಿಗೆ ತ್ರಿಡಿ ಮುದ್ರಣ, ತ್ರಿಡಿ ಸ್ಕ್ಯಾನಿಂಗ್, ಗಣಕೀಕೃತ ರೇಖಾಚಿತ್ರ ವಿನ್ಯಾಸಕಾರರು, ಮುದ್ರಕ ಮಾಲೀಕರು, ಸೇವಾದಾತರು ಹಾಗೂ ಗ್ರಾಹಕರನ್ನು ಒಂದೇ ಡಿಜಿಟಲ್ ಮಾರುಕಟ್ಟೆ ವೇದಿಕೆಯಲ್ಲಿ ಸಂಪರ್ಕಿಸುವ ಜಾಲವನ್ನು ಸಂಸ್ಥೆ ರೂಪಿಸುತ್ತಿದೆ. ಭವಿಷ್ಯದಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ವಿನ್ಯಾಸ ನೆರವು ಹಾಗೂ ಸ್ವಯಂಚಾಲಿತ ಉತ್ಪಾದನಾ ವ್ಯವಸ್ಥೆಯನ್ನು ಈ ಜಾಲದಲ್ಲಿ ಅಳವಡಿಸುವ ಯೋಜನೆ ಹೊಂದಿದೆ.

"ಶಿರಸಿಯಂತಹ ಗ್ರಾಮೀಣ ಭಾಗದಿಂದ ಜಾಗತಿಕ ಗುಣಮಟ್ಟದ ಸ್ವದೇಶಿ ತಂತ್ರಜ್ಞಾನ ರೂಪಿಸುವ ನಮ್ಮ ಪ್ರಯತ್ನಕ್ಕೆ ಸರ್ಕಾರದ ‘ಎಲಿವೇಟ್’ ಯೋಜನೆ ಹಾಗೂ ‘ಬಿಯಾಂಡ್ ಬೆಂಗಳೂರು’ ವೇದಿಕೆ ದೊಡ್ಡ ಉತ್ತೇಜನ ನೀಡಿದೆ. ಭಾರತೀಯ ಉತ್ಪಾದನಾ ರಂಗಕ್ಕೆ ಅಗತ್ಯವಿರುವ ಸಂಪೂರ್ಣ ಡಿಜಿಟಲ್ ಉತ್ಪಾದನಾ ವ್ಯವಸ್ಥೆಯನ್ನು ಸ್ಥಳೀಯವಾಗಿಯೇ ಸ್ವದೇಶಿಯಾಗಿ ರೂಪಿಸುವುದು ನಮ್ಮ ಧ್ಯೇಯ," ಎಂದು ಪ್ರವರ್ ಹೆಗಡೆ ತಿಳಿಸಿದ್ದಾರೆ.

ಕಾರ್ಯಕ್ರಮ ಹಾಗೂ ಪ್ರದರ್ಶನದಲ್ಲಿ ಸಂಸ್ಥೆಯ ಪ್ರಮುಖರಾದ ವಿಶ್ವ ಹೆಗಡೆ, ರಿತೇಶ್‌ರಾಜ್ ಹಿರಾಸ್ಕರ್ ಹಾಗೂ ನಿತಿನ್ ನಾಯ್ಕ ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0