ಲೇಖನ: ಕೃಷ್ಣ ಭಟ್
***
ಅರಟ್ಟೈ ಆಪ್ ಅನ್ನು ವಾಟ್ಸಾಪ್ ಬದಲಿಗೆ ದೇಶೀಯ ಆಯ್ಕೆ ಆಗುತ್ತಿದೆ.
ಆದರೆ, ಕೆಲವೊಂದು ಸಂಗತಿಗಳನ್ನು ನಾವು ಇಲ್ಲಿ ಗಮನಿಸಬೇಕು. ಈ ಆಪ್ ಕಳೆದ 4 ವರ್ಷದಿಂದಲೂ ಮಾರುಕಟ್ಟೆಯಲ್ಲಿದೆ. ನಿನ್ನೆ ಮೊನ್ನೆ
ಹುಟ್ಟಿಕೊಂಡಿದ್ದಲ್ಲ. ಝೊಹೊ ಶುರುವಾಗಿದ್ದೇ, ವಾಟ್ಸಾಪ್ ಬಗ್ಗೆ ಗೌಪ್ಯತೆ ವಿಷಯದಲ್ಲಿ ಜನರಿಗೆ ಕಳವಳ ಶುರುವಾಗಿದ್ದಾಗ. ಆಗ ಸಿಗ್ನಲ್ ಕೂಡ ಚಾಲ್ತಿಗೆ ಬಂದಿತ್ತು. ಆಮೇಲೆ, ವಾಟ್ಸಾಪ್ ಬಳಸುವುದನ್ನೇ ಜನರು ಮುಂದುವರಿಸಿದರು.
ಈಗ ಅಮೆರಿಕ ನಮ್ಮ ಮೇಲೆ ಸುಂಕ ವಿಧಿಸಿದ ನಂತರ ಅಮೆರಿಕದ ಉತ್ಪನ್ನ/ಸೇವೆಗಳ ಬದಲಿಗೆ ದೇಶೀಯ ಉತ್ಪನ್ನ/ಸೇವೆಗಳನ್ನೇ ಬಳಸುವ ಉತ್ಸಾಹದಲ್ಲಿ ಜನರು ಅರಟ್ಟೈ ಡೌನ್‌ಲೋಡ್ ಮಾಡಿಕೊಳ್ಳುತ್ತಿದ್ದಾರೆ.
ದೇಶೀಯ ಸಾಫ್ಟ್‌ವೇರ್ ಸರ್ವೀಸ್ ಬಗ್ಗೆ ಮೋದಿ ಮಾತನಾಡಿದ ನಂತರ, ಐಟಿ ಸಚಿವ ಅಶ್ವಿನಿ ವೈಷ್ಣವ್ ಮೊದಲು ಝೋಹೋ ಅಪ್ಲಿಕೇಶನ್‌ಗಳಿಗೆ ನಾನು ಶಿಫ್ಟ್ ಆಗಿದ್ದೇನೆ ಎಂದು ಟ್ವಿಟರ್‌ನಲ್ಲಿ ಪ್ರಕಟಿಸಿದ ನಂತರ ವಾಟ್ಸಾಪ್‌ಗೆ ಒಂದು ಪರ್ಯಾಯ ಬೇಕು ಎಂದು ಜನರು ಮಾತನಾಡಲು ಶುರು ಮಾಡಿದರು. ಆಗ ಝೋಹೋ ತನ್ನದೇ ಅರಟ್ಟೈ ಎಂಬ ಆಪ್ ಅಭಿವೃದ್ಧಿಪಡಿಸಿದೆ ಎಂದು ಜನರಿಗೆ ಗೊತ್ತಾಯಿತು. ಸಚಿವ ಧರ್ಮೇಂದ್ರ ಪ್ರಧಾನ್ ಕೂಡ ಇದನ್ನು ಬಳಸುತ್ತಿದ್ದೇನೆ ಎಂದು ಟ್ವೀಟ್ ಮಾಡಿದರು. ಆಗ ಇದ್ದಕ್ಕಿದ್ದಂತೆ ಎಲ್ಲರೂ ಡೌನ್‌ಲೋಡ್ ಮಾಡಿಕೊಳ್ಳಲು ಶುರು ಮಾಡಿದ್ದಾರೆ.
ಆದರೆ, ಈ ಆಪ್ ಇನ್ನೂ ಸಂಪೂರ್ಣ ಪ್ರಮಾಣದಲ್ಲಿ ಡೆವಲಪ್ ಆಗಿಲ್ಲ. ಇದರ ಸಾಮರ್ಥ್ಯ ವೃದ್ಧಿ ಇನ್ನೂ ನಡೆಯುತ್ತಿದೆ ಎಂದು ಝೋಹೊ ಸಂಸ್ಥಾಪಕ ಶ್ರೀಧರ ವೆಂಬು ಟ್ವಿಟರ್‌ನಲ್ಲಿ ಹೇಳುತ್ತಿದ್ದಾರೆ. ಅವರ ಗುರಿ ಇದ್ದಿದ್ದು ನವೆಂಬರ್ 2025. ಮುಂದಿನ ತಿಂಗಳು ಇದನ್ನು ಸಂಪೂರ್ಣ ಪ್ರಮಾಣದಲ್ಲಿ ಡೆವಲಪ್ ಮಾಡಿ, ಜಾಹೀರಾತುಗಳನ್ನು ನೀಡಿ ಈ ಆಪ್ ಪ್ರಚಾರ ಮಾಡಬೇಕು ಎಂಬ ಗುರಿಯನ್ನು ಝೊಹೊ ಹಾಕಿಕೊಂಡಿತ್ತು. ಅದಕ್ಕೂ ಮೊದಲೇ ಜನರು ಭಾರಿ ಪ್ರಮಾಣದಲ್ಲಿ ಡೌನ್‌ಲೋಡ್ ಮಾಡಿಕೊಳ್ಳುತ್ತಿದ್ದಾರೆ.
ಆದರೆ, ಎಷ್ಟು ಜನ ಸಕ್ರಿಯವಾಗಿ ಅದನ್ನು ಬಳಸುತ್ತಿದ್ದಾರೆ ಎಂಬುದು ಅನುಮಾನವೇ...
ಈ ಹಿಂದೆ ಟ್ವಿಟರ್‌ಗೆ ಪರ್ಯಾಯವಾಗಿ ಕೂ ಆಪ್ ಬಂದಿತ್ತು. ಆದರೆ, ಟ್ವಿಟರ್ ಅನ್ನು ಎಲಾನ್ ಮಸ್ಕ್ ಖರೀದಿ ಮಾಡಿದ ಮೇಲೆ ನಾವು ಯಾವ ಉದ್ದೇಶಕ್ಕೆ ಟ್ವಿಟರ್ ಬಿಡಲು ಯೋಚನೆ ಮಾಡಿದ್ದೆವೋ ಅದು ನಿವಾರಣೆ ಆಗಿತ್ತು. ಇದರಲ್ಲೂ ಹೀಗೆಯೇ ಆಗಬಹುದು. ವಾಟ್ಸಾಪ್ ಬಗ್ಗೆ ನಮಗೆ ಈಗಿರುವ ಬೇಸರ ಏನೆಂದರೆ, ಅದು ಅಮೆರಿಕದ್ದು ಮತ್ತು ಅಮೆರಿಕದ ನಮ್ಮ ಮೇಲೆ ಸುಂಕ ಹೇರಿದೆ. ಒಂದು ವೇಳೆ ಅಮೆರಿಕ ಹೇರಿದ್ದ ಸುಂಕ ವಾಪಸ್ ತೆಗೆದುಕೊಂಡರೆ ನಮಗೆ ವಾಟ್ಸಾಪ್ ಮೇಲಿದ್ದ ಬೇಸರ ಹೊರಟು ಹೋಗುತ್ತದೆ. ಅಲ್ಲಿಗೆ ನಾವು ವಾಟ್ಸಾಪ್ ಬಳಸದೇ ಇರುವುದಕ್ಕೆ ಕಾರಣ ಇಲ್ಲ.
ಹೀಗಾಗಿ, ಇಂಥ ಮಕ್ಕಿಕಾಮಕ್ಕಿ ಪರ್ಯಾಯಗಳು ಯಶಸ್ವಿಯಾದ ಉದಾಹರಣೆಗಳು ಕಡಿಮೆಯೇ... ವಾಟ್ಸಾಪ್ ಹುಟ್ಟಿಕೊಂಡಿದ್ದೂ ಒಂದು ಪರ್ಯಾಯವಾಗಿಯೇ. ಅಂದರೆ, ವಾಟ್ಸಾಪ್ ಬರುವುದಕ್ಕೂ ಮೊದಲು ನಾವು ಎಸ್‌ಎಂಎಸ್ ಕಳುಹಿಸುತ್ತಿದ್ದೆವು. ಅದರಲ್ಲಿ ಇಷ್ಟೇ ಅಕ್ಷರ ಕಳುಹಿಸಬೇಕಿತ್ತು. ಆದರೆ, ವಾಟ್ಸಾಪ್ ಅದರ ಬದಲಿಗೆ ಡೇಟಾ ಮೂಲಕ ಎಷ್ಟು ಬೇಕಾದರೂ ಮೆಸೇಜ್ ಅನ್ನು ಕಳುಹಿಸುವ ಅವಕಾಶ ಒದಗಿಸಿತು. ಅದು ಪರ್ಯಾಯವಾದರೂ ಈಗಾಗಲೇ ನಾವು ಬಳಸುತ್ತಿದ್ದುದಕ್ಕಿಂತ ಉತ್ತಮ ಎಕ್ಸ್‌ಪೀರಿಯನ್ಸ್ ನಮಗೆ ವಾಟ್ಸಾಪ್‌ನಲ್ಲಿ ಸಿಗುತ್ತಿತ್ತು. ಹೀಗಾಗಿ, ನಾವು ಎಸ್‌ಎಂಎಸ್ ಕಳುಹಿಸುವುದನ್ನು ಬಿಟ್ಟು ವಾಟ್ಸಾಪ್ ಬಳಸಲು ಶುರು ಮಾಡಿದೆವು. ಈಗ ನಾವು ಎಸ್‌ಎಂಎಸ್ ನೋಡುವುದು ಬರಿ ಒಟಿಪಿ ಬಂದಾಗ ಮಾತ್ರ.
ಕೋವಿಡ್ ಸಮಯದಲ್ಲಿ ಕ್ಲಬ್‌ಹೌಸ್ ಪ್ರಚಾರಕ್ಕೆ ಬಂದಿದ್ದೂ ಹೀಗೆ. ಆಗ ನಮ್ಮ ಬಳಿ ಸಾಕಷ್ಟು ಸಮಯವಿತ್ತು. ಕಚೇರಿಗೆ ಹೋಗಿ ಬರುವ ಗಂಟೆಗಟ್ಟಲೆ ಸಮಯ ಉಳಿತಾಯವಾಗಿದ್ದರಿಂದ ಜನರಿಗೆ ಆ ಸಮಯ ಕಳೆಯುವುದಕ್ಕೆ ಒಂದು ಸಾಧನ ಬೇಕಿತ್ತು. ಡೊಲ್ಗೊನಾ ಕಾಫಿ ಮಾಡಿದರು. ಕ್ಲಬ್‌ಹೌಸ್‌ನಲ್ಲಿ ತಾಸುಗಟ್ಟಲೆ ಮಾತನಾಡಿದರು. ಅದೇ ತಾಸುಗಟ್ಟಲೆ ಸಮಯ ಈಗಲೂ ಜನರ ಬಳಿ ಇದೆ. ಆದರೆ, ಕ್ಲಬ್‌ಹೌಸ್‌ಗೆ ಹೋಗಿ ಅಲ್ಲಿ ಬೇಕಾದ ಚಾನೆಲ್ ಹುಡುಕಿ ಕಥೆ ಕೇಳುವ ಆಸಕ್ತಿ ಇಲ್ಲ. ಬದಲಿಗೆ ತಾವೇ ಗಾಡಿ ಓಡಿಸುತ್ತಿರುವವರು, ಟ್ರಾಫಿಕ್‌ನಲ್ಲಿ ಸಿಕ್ಕಿಕೊಂಡಿದ್ದಾಗ ಸ್ನೇಹಿತರಿಗೋ, ಆತ್ಮೀಯರಿಗೋ ಕರೆ ಮಾಡಿ ತಲೆ ತಿನ್ನುತ್ತಾರೆ. ಕಾರು, ಕ್ಯಾಬ್‌ನಲ್ಲಿ ಕುಳಿತವರು ಟ್ವಿಟರ್, ಪೇಸ್‌ಬುಕ್, ಇನ್‌ಸ್ಟಾಗ್ರಾಮ್‌ನಲ್ಲಿ ಕುಳಿತು ಹೊತ್ತು ಕಳೆಯುತ್ತಿದ್ದಾರೆ.
ಇನ್ನು, ಚೀನಾದಲ್ಲಿ ಪರ್ಯಾಯಗಳು ಯಶಸ್ವಿಯಾಗಿವೆ. ಅಲ್ಲಿ ವಾಟ್ಸಾಪ್ ನಿಷೇಧಿಸಲಾಗಿದೆ. ಅದಕ್ಕೆ, ಅವರು ಪರ್ಯಾಯವನ್ನು ಹುಡುಕಿಕೊಂಡಿದ್ದಾರೆ. ಅಥವಾ ವಾಟ್ಸಾಪ್ ನಿಷೇಧ ಮಾಡುವ ಮೂಲಕ ಅಲ್ಲಿನದ್ದೇ ಪರ್ಯಾಯ ಅವರಿಗೆ ಅನಿವಾರ್ಯವಾಗಿದೆ. ಅಲ್ಲಿ ವಿಚಾಟ್ ಇದೆ. ವಾಟ್ಸಾಪ್‌ಗೆ ಹೋಲಿಸಿದರೆ ವಿಚಾಟ್ ಒಂದು ಸೂಪರ್ ಆಪ್ ರೀತಿ ಕೆಲಸ ಮಾಡುತ್ತದೆ. ಪೇಮೆಂಟ್‌ನಿಂದ ಬ್ಯುಸಿನೆಸ್ ಲಿಸ್ಟಿಂಗ್‌ವರೆಗೆ ಎಲ್ಲವೂ ಅಲ್ಲಿದೆ. ವಿಚಾಟ್‌ನ ಮಿನಿ ಪ್ರೋಗ್ರಾಮ್‌ನಲ್ಲಿ ಸಣ್ಣ ಪುಟ್ಟ ಬ್ಯುಸಿನೆಸ್ ಮಾಡುವವರೂ ಕೂಡ ಸುಲಭದಲ್ಲಿ ತಮ್ಮದೇ ಸಣ್ಣ ಆಪ್ ಮಾಡಿಕೊಳ್ಳಬಹುದು. ಅದನ್ನು ವಿಚಾಟ್‌ನಲ್ಲೇ ಲಿಸ್ಟ್ ಮಾಡಿಕೊಂಡು ತಮ್ಮ ಪ್ರಾಡಕ್ಟ್‌ಗಳನ್ನು ಮಾರಾಟ ಮಾಡಬಹುದು. ವಾಟ್ಸಾಪ್ ಬ್ಯುಸಿನೆಸ್‌ನಲ್ಲೂ ಬ್ಯುಸಿನೆಸ್ ಲಿಸ್ಟಿಂಗ್ ಸೌಲಭ್ಯ ಇದೆಯಾದರೂ ಅದು ಅಷ್ಟೇನೂ ಜನಪ್ರಿಯವಾಗಲಿಲ್ಲ.
ಇನ್ನು ಇಂಥ ಎಲ್ಲ ಅವಕಾಶಗಳನ್ನೂ ಭಾರತೀಯ ಬ್ಯುಸಿನೆಸ್‌ಗಳು ಸರಿಯಾಗಿ ಬಳಸಿಕೊಂಡಿಲ್ಲ. ಉದಾಹರಣೆಗೆ, ಟಿಕ್‌ಟಾಕ್ ಬ್ಯಾನ್ ಆದಾಗ ದೇಶೀಯ ಅಲೆ ಹುಟ್ಟಿಕೊಳ್ಳಲಿಲ್ಲ. ಟಿಕ್‌ಟಾಕ್‌ಗೆ ಪರ್ಯಾಯವಾಗಿ ಯಾವ ದೇಶೀಯ ಕಂಪನಿಗಳೂ ಟಿಕ್‌ಟಾಕ್ ರೀತಿಯದ್ದೇ ಭಾರತೀಯ ಆಪ್ ರೂಪಿಸಲಿಲ್ಲ. ಜನ ಟಿಕ್‌ಟಾಕ್ ಇಲ್ಲದ ದಿನಗಳನ್ನು ಆರಾಮವಾಗೇ ಕಳೆದರು. ಈಗ ಟಿಕ್‌ಟಾಕ್‌ಗೆ ಪರ್ಯಾಯವಾಗಿ ಮೆಟಾದ ಇನ್‌ಸ್ಟಾಗ್ರಾಮ್ ಇದೆ.
ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ, ಇದೇ ಸನ್ನಿವೇಶ ಮುಂದುವರಿದರೆ, ಅರಟ್ಟೈ ಉತ್ಸಾಹ ತುಂಬ ದಿನಗಳವರೆಗೆ ಇರುವಂತೆ ಕಾಣಿಸುವುದಿಲ್ಲ.
ವಾಟ್ಸಾಪ್‌ಗೆ ಪರ್ಯಾಯವಾಗಿ ಗಟ್ಟಿಯಾಗಿ ನಿಲ್ಲಬೇಕು ಎಂದಾದರೆ, ವಾಟ್ಸಾಪ್‌ನಲ್ಲಿ ಇಲ್ಲದ ಮತ್ತು ವಾಟ್ಸಾಪ್‌ಗಿಂತ ಹೆಚ್ಚು ಅನುಕೂಲ ಒದಗಿಸುವ ಸೌಲಭ್ಯಗಳು ಅರಟ್ಟೈನಲ್ಲಿ ಸಿಗುವಂತಾಗಬೇಕು. ಉದಾಹರಣೆಗೆ, ವಿಚಾಟ್ ರೀತಿ ಅರಟ್ಟೈ ಒಂದು ಸೂಪರ್ ಆಪ್ ಆಗಬೇಕು. ಅಲ್ಲಿ ಬ್ಯುಸಿನೆಸ್ ಮಾಡುವುದು, ಪೇಮೆಂಟ್ ಮಾಡುವುದು, ದಿನಗಟ್ಟಲೆ ಅಲ್ಲೇ ಇರುವುದಕ್ಕೆ ಗೇಮ್‌ಗಳನ್ನು ಲಿಸ್ಟ್ ಮಾಡುವುದು ಸೇರಿದಂತೆ ಹಲವು ಸೌಕರ್ಯಗಳು ಬೇಕು. ಆಗ ನಾವು ಅದಕ್ಕೆ ಅಂಟಿಕೊಳ್ಳುತ್ತೇವೆ.
ಅದೂ ಇಲ್ಲದಿದ್ದರೆ, ವಾಟ್ಸಾಪ್ ಅನ್ನೇ ನಮ್ಮ ಸರ್ಕಾರ ನಿಷೇಧಿಸಬೇಕು. ಆಗ ವಾಟ್ಸಾಪ್‌ಗಿಂತ ಕಡಿಮೆ ಅನುಕೂಲವಿದ್ದರೂ ಸರಿ ಅರಟ್ಟೈಯನ್ನೇ ಜನರು ಬಳಸುವಂತಾಗುತ್ತದೆ.