ಗವಿನಗುಡ್ಡದಲ್ಲಿ ಕಾಲು ಮುರಿದುಕೊಂಡಿದ್ದ ಕಾಡುಕೋಣ ಇನ್ನಿಲ್ಲ

Dec 21, 2025 - 12:44
 0  208
ಗವಿನಗುಡ್ಡದಲ್ಲಿ ಕಾಲು ಮುರಿದುಕೊಂಡಿದ್ದ ಕಾಡುಕೋಣ ಇನ್ನಿಲ್ಲ
ಕಾಡುಕೋಣಕ್ಕೆ ಅರವಳಿಕೆ ಗುಂಡು ಹೊಡೆಯುತ್ತಿರುವುದು

ನಮ್ಮಲ್ಲಿ ಮಾತ್ರ

ಆಪ್ತ ನ್ಯೂಸ್‌ ಶಿರಸಿ:

ಕಳೆದ ಐದಾರು ದಿನಗಳ ಹಿಂದೆ ಸಿದ್ದಾಪುರ ತಾಲೂಕಿನ ಕಾನಸೂರು ಗ್ರಾಮ ಪಂಚಾಯತ ವ್ಯಾಪ್ತಿಯ ಗವಿನಗುಡ್ಡದ ಅಡಿಕೆ ತೋಟದಲ್ಲಿ ಕಾಲು ಮುರಿದುಕೊಂಡು ಬಿದ್ದಿದ್ದ ಕಾಡುಕೋಣ ಮೃತಪಟ್ಟಿದೆ.

ಕಳೆದ ವಾರ ಗವಿನಗುಡ್ಡದ ಅಡಿಕೆ ತೋಟದಲ್ಲಿ ಕಾಲು ಮುರಿದುಕೊಂಡು ಆಹಾರ ಸೇವನೆ ಮಾಡದೇ, ಬೇರೆಡೆಗೆ ಹೋಗಲಾಗದೇ ಬಿದ್ದುಕೊಂಡಿದ್ದ ಕಾಡುಕೋಣದ ಚಿಕಿತ್ಸೆಗೆ ಸಕಾಲದಲ್ಲಿ ಪಶುವೈದ್ಯರು ಬಂದಿರಲಿಲ್ಲ. ಕಾಡುಕೋಣದ ಮುಂದಿನ ಬಲಗಾಲು ಮುರಿದು ಹೋಗಿತ್ತು. ಕಾಡುಕೋಣದ ಚಿಕಿತ್ಸೆ ಜವಾಬ್ದಾರಿ ಹೊತ್ತುಕೊಳ್ಳಬೇಕಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಪಶುವೈದ್ಯರು ಇಂದು ಬರುತ್ತಾರೆ, ನಾಳೆ ಬರುತ್ತಾರೆ ಎಂದು ಹೇಳುವ ಮೂಲಕ ಕಾಲ ತಳ್ಳಿದ್ದರು. ಕಡೆಗೂ ಮೂರು ದಿನಗಳ ನಂತರ ಪಶುವೈದ್ಯರು ಬಂದಿದ್ದರು.

ಗವಿನಗುಡ್ಡದಲ್ಲಿ ಕಾಡೆಮ್ಮೆ ಚಿಕಿತ್ಸೆ ಸಾಧ್ಯವಿರದ ಕಾರಣ ಶಿವಮೊಗ್ಗಕ್ಕೆ ಕರೆದೊಯ್ಯಲಾಗಿತ್ತು. ಆದರೆ ʻಆಪ್ತ ನ್ಯೂಸ್‌ʼಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಗವಿನಗುಡ್ಡದಿಂದ ಶಿವಮೊಗ್ಗಕ್ಕೆ ಸಾಗಿಸುವ ಮೊದಲು ಅರವಳಿಕೆ ತಜ್ಞರನ್ನು ಬಳಸಿ ಕಾಡೆಮ್ಮೆಯ ಪ್ರಜ್ಞೆಯನ್ನು ತಪ್ಪಿಸಲಾಗಿತ್ತು. ಆದರೆ ಶಿವಮೊಗ್ಗಕ್ಕೆ ಕೊಂಡೊಯ್ದ ನಂತರವೂ ಕಾಡುಕೋಣಕ್ಕೆ ಪ್ರಜ್ಞೆ ಮರಳಲಿಲ್ಲ. ಕೊನೆಗೆ ಹಾಗೆಯೇ ಕಾಡುಕೋಣ ಮೃತಪಟ್ಟಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. 

ಫಲಿಸದ ಪ್ರಾರ್ಥನೆ:
ಕಾಡುಕೋಣ ತೋಟಕ್ಕೆ ಬಂದು, ಗದ್ದೆಗಳಿಗೆ ದಾಳಿ ಇಟ್ಟು ಬೆಳೆ ಹಾಳು ಮಾಡಿದ್ದರೂ ಕೂಡ ಕಾಲು ಮುರಿದುಕೊಂಡು ಯಾತನೆ ಪಡುತ್ತಿದ್ದ ಸಂದರ್ಭದಲ್ಲಿ ಅದನ್ನು ನೋಡಲಾಗದೇ ಸ್ಥಳೀಯರು ಹೇಗಾದರೂ ಗುಣವಾದರೆ ಸಾಕು ಎಂದು ಬೇಡಿಕೊಂಡಿದ್ದರು. ಪಾಪದ ಕಾಡುಕೋಣದ ಕಾಲು ಸರಿಯಾಗಲಿ ಎಂದು ಪ್ರಾರ್ಥಿಸಿಕೊಂಡಿದ್ದರು. ಆದರೆ ಈ ಪ್ರಾರ್ಥನೆ ಫಲ ನೀಡಲಿಲ್ಲ.

ಏನಾಯ್ತು?
ಗವಿನಗುಡ್ಡದಲ್ಲಿ ಕಾಲು ಮುರಿದುಕೊಂಡು ಬಿದ್ದಿದ್ದ ಕಾಡುಕೋಣವನ್ನು ಶಿವಮೊಗ್ಗದ ಮೃಗಾಲಯಕ್ಕೆ ರವಾನೆ ಮಾಡುವ ಸಲುವಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಮೂರು ದಿನಗಳ ನಂತರ ತಜ್ಞ ವೈದ್ಯರನ್ನು ಕರೆ ತಂದರು. ಆ ನಂತರ ಅರವಳಿಗೆ ಗುಂಡನ್ನು ಹೊಡೆಯಲಾಯಿತು. ಅರವಳಿಕೆ ಗುಂಡು ತಿಂದ ಕಾಡೆಮ್ಮೆ ಎಚ್ಚರ ತಪ್ಪಿದ ನಂತರ ವಚಾಹನದ ಮೂಲಕ ಶಿವಮೊಗ್ಗದ ಮೃಗಾಲಯಕ್ಕೆ ರವಾನೆ ಮಾಡಲಾಯಿತು.
ಸಾಮಾನ್ಯವಾಗಿ ಹೀಗೆ ಅರವಳಿಕೆ ನೀಡಿದ ಸಂದರ್ಭದಲ್ಲಿ ಕಾಡುಪ್ರಾಣಿಗಳು ಒತ್ತಡಕ್ಕೆ ಒಳಗಾಗುತ್ತವೆ. ದೇಹದ ನರಗಳು ಬಿಗಿಯಾಗುತ್ತವೆ. ಆಕ್ಸಿಜನ್‌ ಕಡಿಮೆಯಾಗಿ, ಆತಂಕ ಉಂಟಾಗುವ ಕಾರಣ ಕಾಡುಪ್ರಾಣಿಗಳು ಮೃತಪಡುವ ಸಾಧ್ಯತೆ ಜಾಸ್ತಿ ಇರುತ್ತವೆ. ಈ ಕಾಡುಕೋಣ ಕೂಡ ಹೀಗೆ ಮೃತಪಟ್ಟಿರಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಜಿಲ್ಲೆಯಲ್ಲಿಲ್ಲ ತಜ್ಞವೈದ್ಯರು
ಉತ್ತರ ಕನ್ನಡ ಜಿಲ್ಲೆ ಅರಣ್ಯದಿಂದ ಕೂಡಿದ ಜಿಲ್ಲೆ. ಇಲ್ಲಿ ಅರಣ್ಯ ಪ್ರಮಾಣ ಜಾಸ್ತಿ ಇರುವ ಕಾರಣ ಸಹಜವಾಗಿಯೇ ವನ್ಯ ಮೃಗಗಳು ಜಾಸ್ತಿ ಇರುತ್ತವೆ. ಬೇಳೆ ಹಾಗೂ ಬೇಟೆ ಹುಡುಕಿ ಜನವಸತಿ ಪ್ರದೇಶಗಳ ಕಡೆಗೆ ಪ್ರಾಣಿಗಳು ಬರುವ ಸಂದರ್ಭಗಳು ಜಿಲ್ಲೆಯಲ್ಲಿ ಜಾಸ್ತಿ ಇದೆ. ಆದರೆ ಪ್ರಾಣಿಗಳು ಜನವಸತಿ ಪ್ರದೇಶಕ್ಕೆ ಬಂದು ಗಾಯಗೊಂಡ ಸಂದರ್ಭದಲ್ಲಿ ಅವುಗಳಿಗೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಸೂಕ್ತ ತಜ್ಞ ವೈದ್ಯರು ಜಿಲ್ಲೆಯಲ್ಲಿಲ್ಲ. ಇನ್ನೂ ದುರಂತ ಎಂದರೆ ಅರಣ್ಯ ಜಿಲ್ಲೆಯ ವನ್ಯಮೃಗಗಳ ರಕ್ಷಣೆಗೆ ಪಕ್ಕದ ಶಿವಮೊಗ್ಗ ನಗರದಿಂದ ತಜ್ಞ ವೈದ್ಯರು ಬರಬೇಕು ಎನ್ನುವುದು ಇಲ್ಲಿನ ಆಡಳಿತ ವ್ಯವಸ್ಥೆಯ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 2
Wow Wow 0