ಶಿರಸಿ ಅಸ್ಪತ್ರೆ ವಿಚಾರ, ಭೀಮಣ್ಣರಿಂದ ಜನತೆಗೆ ದ್ರೋಹ, 26 ಕೋಟಿ ರೂ. ಪ್ರಸ್ತಾವನೆ ಮಾಯ, ತಾಕತ್ತಿದ್ದರೆ ಉತ್ತರಿಸಿ; ಅನಂತಮೂರ್ತಿ ಸವಾಲು

Jun 3, 2026 - 20:03
 0  104
ಶಿರಸಿ ಅಸ್ಪತ್ರೆ ವಿಚಾರ, ಭೀಮಣ್ಣರಿಂದ ಜನತೆಗೆ ದ್ರೋಹ, 26 ಕೋಟಿ ರೂ. ಪ್ರಸ್ತಾವನೆ ಮಾಯ, ತಾಕತ್ತಿದ್ದರೆ ಉತ್ತರಿಸಿ; ಅನಂತಮೂರ್ತಿ ಸವಾಲು

ಆಪ್ತ ನ್ಯೂಸ್ ಶಿರಸಿ:

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂದಿನ ಶಾಸಕರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಶಿರಸಿಯ ಜನರಿಗಾಗಿ ತಂದಿದ್ದ ₹142 ಕೋಟಿ ವೆಚ್ಚದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮೂಲ ಸ್ವರೂಪವನ್ನು ಹಾಳುಗೆಡವಲಾಗಿದೆ ಎಂದು ಬಿಜೆಪಿ ರೈತಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಅವರು ಸುದ್ದಿಗೋಷ್ಠಿಯಲ್ಲಿ ತೀವ್ರವಾಗಿ ಆರೋಪಿಸಿದ್ದಾರೆ.

ಬುಧವಾರ ಶಿರಸಿಯ ದೀನದಯಾಳ ಭವನದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಆಸ್ಪತ್ರೆಯ ಕ್ರೆಡಿಟ್ ಬಿಜೆಪಿ ಸರ್ಕಾರಕ್ಕೆ ಹೋಗಬಾರದು ಎಂಬ ರಾಜಕೀಯ ದ್ವೇಷದಿಂದ ಪ್ರಸ್ತುತ ಕಾಂಗ್ರೆಸ್ ಶಾಸಕ ಭೀಮಣ್ಣ ನಾಯ್ಕ ಅವರು ಶಿರಸಿ ಜನತೆಗೆ ದ್ರೋಹ ಎಸಗಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿ, ಈ ಆಸ್ಪತ್ರೆಯ ವೈಫಲ್ಯಗಳನ್ನು ಖಂಡಿಸಿ ತಾವು ಈಗಾಗಲೇ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ (High Court) ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಿರುವುದಾಗಿ ಅವರು ತಿಳಿಸಿದ್ದಾರೆ.

13-11-2020 ರಂದು ಕಾರ್ಡಿಯೋಲಾಜಿ, ನ್ಯೂರೋಲಾಜಿ, ನೆಫ್ರೋಲಾಜಿ ಸೇರಿದಂತೆ ಹಲವು ಸೂಪರ್ ಸ್ಪೆಷಾಲಿಟಿ ವಿಭಾಗಗಳನ್ನು ಹೊಂದಿರುವ ಆಸ್ಪತ್ರೆಗೆ ಅನುಮೋದನೆ ಸಿಕ್ಕಿತ್ತು. ₹112 ಕೋಟಿ ಕಟ್ಟಡಕ್ಕೆ ಹಾಗೂ ₹30 ಕೋಟಿ ಸಲಕರಣೆಗಳಿಗೆ ಮೀಸಲಿಡಲಾಗಿತ್ತು. ಕಟ್ಟಡದ ಕೆಲಸ 80% ಮುಗಿದ ತಕ್ಷಣ ವೈದ್ಯರ ನೇಮಕಾತಿ ಮತ್ತು ಯಂತ್ರೋಪಕರಣಗಳಿಗೆ ಟೆಂಡರ್ ಕರೆಯಬೇಕೆಂಬ ಆದೇಶವಿದ್ದರೂ, ಒಂದು ವರ್ಷ ಕಳೆದರೂ ಇನ್ನು ಏಕೆ ಟೆಂಡರ್ ಕರೆದಿಲ್ಲ ಮತ್ತು ವೈದ್ಯರ ನೇಮಕಾತಿ ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಬೇಕಾದ ₹26 ಕೋಟಿ ಮೌಲ್ಯದ ಸಲಕರಣೆಗಳ ಪ್ರಸ್ತಾವನೆ ಕಳಿಸಿದ್ದರೂ, ಕೇವಲ ₹5.20 ಕೋಟಿ ರೂಪಾಯಿ ಮಾತ್ರ ಮಾಡಲಾಗಿದೆ. ಬಡವರಿಗಾಗಿ ಉಚಿತವಾಗಿ ಸಿಗಬೇಕಿದ್ದ ₹15 ಕೋಟಿ ಮೌಲ್ಯದ MRI ಮತ್ತು ₹2 ಕೋಟಿ ಮೌಲ್ಯದ CT ಸ್ಕ್ಯಾನ್ ಮಷಿನ್ ಸೇರಿದಂತೆ ಹಲವು ಉಪಕರಣಗಳನ್ನು ಮಾಯ ಮಾಡಿರುವುದಕ್ಕೆ ತಾವು ದಾಖಲೆ ಬಿಡುಗಡೆ ಮಾಡಿದ್ದರೂ ಶಾಸಕರು ಮೌನ ವಹಿಸಿದ್ದಾರೆ ಎಂದು ಅವರು ದೂರಿದ್ದಾರೆ.

​ಆಸ್ಪತ್ರೆಯ ಸಿಬ್ಬಂದಿ ಕೊರತೆಯ ಬಗ್ಗೆ ಮಾಹಿತಿ ನೀಡಿದ ಅವರು, 100 ಹಾಸಿಗೆಯಿಂದ 250 ಹಾಸಿಗೆಗೆ ಮೇಲ್ದರ್ಜೆಗೇರಿಸಿದ ಆಸ್ಪತ್ರೆಗೆ ಒಟ್ಟು 197 ಸಿಬ್ಬಂದಿ ಬೇಕಾಗಿದ್ದು, ಪ್ರಸ್ತುತ ಕೇವಲ 90 ಜನ ಇದ್ದಾರೆ. ಹೆಚ್ಚುವರಿಯಾಗಿ ಬೇಕಾದ 107 ಸಿಬ್ಬಂದಿಗಳಲ್ಲಿ ಕೇವಲ 37 ಜನರನ್ನು ಮಾತ್ರ ನೇಮಕ ಮಾಡಲಾಗಿದೆ. ಆಸ್ಪತ್ರೆಯಲ್ಲಿ ಸದ್ಯಕ್ಕೆ ಹಾರ್ಟ್ ಸ್ಪೆಷಲಿಸ್ಟ್, ನ್ಯೂರೋಲಾಜಿಸ್ಟ್ ಅಥವಾ ನೆಫ್ರೋಲಾಜಿಸ್ಟ್ ಯಾರು ಇಲ್ಲ. ಪ್ರಸ್ತುತ ಮಾಡಿರುವ ನೇಮಕಾತಿಗಳು ಕೇವಲ ತಾಲೂಕು ಮಟ್ಟದ ಜನರಲ್ ಸರ್ಜನ್, ಫಿಸಿಷಿಯನ್ ಮತ್ತು ಅರವಳಿಕೆ ತಜ್ಞರದ್ದಾಗಿದ್ದು, ಇದು ತಾಲೂಕು ಆಸ್ಪತ್ರೆಯ ನಿಯಮಗಳಿಗೆ ಸರಿಹೊಂದುತ್ತದೆಯೇ ಹೊರತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಲ್ಲ. ಕಾಂಗ್ರೆಸ್ ಸರ್ಕಾರದ ಆರೋಗ್ಯ ಮಂತ್ರಿಗಳು ಎರಡು ಬಾರಿ ಶಿರಸಿಗೆ ಬಂದು ಆಸ್ಪತ್ರೆಯನ್ನು ಜಿಲ್ಲಾ ಆಸ್ಪತ್ರೆಯನ್ನಾಗಿ ಮಾಡುವುದಾಗಿ ಭರವಸೆ ನೀಡಿದ್ದರು, ಆದರೆ ಅದಕ್ಕೆ ಸಂಬಂಧಿಸಿದ ಯಾವುದೇ ಅಧಿಕೃತ ಪ್ರಕ್ರಿಯೆಗಳು ನಡೆದಿಲ್ಲ ಮತ್ತು ಯಾವುದೇ ದಾಖಲೆಗಳೂ ಇಲ್ಲ. ಇದು ಕೇವಲ ಜನರಿಗೆ ಟೋಪಿ ಹಾಕುವ ಕೆಲಸ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


​ವಾಹನ ಅಪಘಾತವಾಗಿ ತಲೆಗೆ ಪೆಟ್ಟು ಬಿದ್ದರೆ ರಕ್ತಸ್ರಾವ ತಡೆಯುವ ಮತ್ತು ಜೀವ ಉಳಿಸುವ 'ನ್ಯೂರೋಲಾಜಿ ವಿಭಾಗ' ಅಥವಾ 'ಟ್ರಾಮಾ ಸೆಂಟರ್' ಸ್ಥಾಪಿಸುವ ಅವಕಾಶವನ್ನು ಹಾಗೂ ಹೃದಯಾಘಾತವಾದಾಗ ಬಡವರ ಜೀವ ಉಳಿಸುವ ಉಚಿತ 'ಕ್ಯಾಥ್ ಲ್ಯಾಬ್' ಸೌಲಭ್ಯವನ್ನು ಹಾಳುಮಾಡಲಾಗಿದೆ ಎಂದು ಅನಂತ ಮೂರ್ತಿ ಹೆಗಡೆ ಆರೋಪಿಸಿದ್ದಾರೆ. ಇದರಿಂದಾಗಿ ನೂರಾರು ಡಯಾಲಿಸಿಸ್ ರೋಗಿಗಳು ಮಂಗಳೂರು, ಹುಬ್ಬಳ್ಳಿ, ಶಿವಮೊಗ್ಗದಂತಹ ದೂರದ ನಗರಗಳಿಗೆ ಅಲೆಯುವಂತಾಗಿದೆ. ಕೇವಲ ಆಸ್ಪತ್ರೆಯ ಕಟ್ಟಡ ಮಾತ್ರ ಮೇಲ್ದರ್ಜೆಗೇರಿದರೆ ಸಾಲದು, ಅಲ್ಲಿ ಸಿಗುವ ವೈದ್ಯಕೀಯ ಸೇವೆಯೂ ಮೇಲ್ದರ್ಜೆಗೇರಬೇಕು. ಇಲ್ಲದಿದ್ದರೆ ಇದು ಕೇವಲ ಕಾಗದದ ಮೇಲಿನ ಯೋಜನೆಯಾಗಿ ಉಳಿಯಲಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಾವ ಸ್ವರೂಪದಲ್ಲಿ ಆಸ್ಪತ್ರೆ ಘೋಷಣೆಯಾಗಿತ್ತೋ, ಅದೇ ರೀತಿಯಲ್ಲಿ ಆಸ್ಪತ್ರೆ ಪ್ರಾರಂಭವಾಗುವವರೆಗೆ ತಾವು ಸರ್ಕಾರದ ವಿರುದ್ಧ ನಿರಂತರ ಹೋರಾಟ ಮಾಡುವುದಾಗಿ ಹಾಗೂ ಸ್ಥಳೀಯ ಶಾಸಕರು ಪಕ್ಷಾತೀತವಾಗಿ ಸರ್ಕಾರದ ಮೇಲೆ ಒತ್ತಡ ಹೇರಿ ಆಸ್ಪತ್ರೆಯನ್ನು ಮೂಲ ಮಂಜೂರಾತಿಯಂತೆ ಅಭಿವೃದ್ಧಿಪಡಿಸುವ ಸ್ಪಷ್ಟ ಕಾರ್ಯಯೋಜನೆಯನ್ನು ಪ್ರಕಟಿಸಬೇಕೆಂದು ಅವರು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಬಿಜೆಪಿ ನಗರ ಅಧ್ಯಕ್ಷರಾದ ಆನಂದ ಸಾಲೇರ್, ಶಿರಸಿ ಗ್ರಾಮೀಣ ಮಂಡಲ ಅಧ್ಯಕ್ಷರಾದ ಉಷಾ ಹೆಗಡೆ, ಬನವಾಸಿ ಮಂಡಲ ಅಧ್ಯಕ್ಷರಾದ ರಮೇಶ್ ನಾಯ್ಕ್, ಬಿಜೆಪಿ ಪ್ರಮುಖರಾದ ನಾಗರಾಜ ನಾಯ್ಕ್, ರವಿ ಗಾವಂಕರ್ ಶಿರಸಿ, ರಾಘವೇಂದ್ರ ನಾಯ್ಕ, ಶಿವಕುಮಾರ ನಾಯ್ಕ್ ಕೊಂಡ್ಲಿ, ಶ್ರೀರಾಮ್ ನಾಯ್ಕ್, ರವಿ ಶೆಟ್ಟಿ ಶಿರಸಿ ಮುಂತಾದವರು ಉಪಸ್ಥಿತರಿದ್ದರು.

ಶಾಸಕ ಭೀಮಣ್ಣನವರೇ ತಾಕತ್ತಿದ್ದರೆ ಉತ್ತರಿಸಿ; ಅನಂತಮೂರ್ತಿ ಸವಾಲು

1) ನ.13, 2020 ರಂದು ಕಾರ್ಡಿಯೋಲಾಜಿ, ನ್ಯೂರೊಲೊಜಿ, ನೆಪ್ರೋಲೋಜಿ ಸೇರಿದಂತೆ ಹಲವಾರು ಸೂಪರ್ ಸ್ಪೆಷಾಲಿಟಿ ಹೊಂದಿರುವ ಆಸ್ಪತ್ರೆ ಅನುಮೋದನೆಯಾಗಿದ್ದು, ರೂ.112 ಕೋಟಿ ಕಟ್ಟಡಕ್ಕೆ, ರೂ.30 ಕೋಟಿ ಸಾಮಗ್ರಿಗಳಿಗೆ ಮೀಸಲಿಡಲಾಗಿತ್ತು, ಕಟ್ಟಡ ಕೆಲಸ 80% ಮುಗಿದ ಕೂಡಲೇ ವೈದ್ಯರ, ಸಿಬ್ಬಂದಿ ನೇಮಕಾತಿ ಮತ್ತು ಯತ್ರೋಪಕರಣಗಳಿಗೆ ಟೆಂಡರ್ ಕರೆಯಬೇಕು ಎಂದು ಆದೇಶದಲ್ಲಿದೆ, 80 % ಕೆಲಸ ಮುಗಿದು ಒಂದು ವರ್ಷವಾದರೂ ಇನ್ನೂ ಯಾಕೆ ಟೆಂಡರ್ ಕರೆದಿಲ್ಲ ? ವೈದ್ಯರ ನೇಮಕಾತಿ ಆಗಿಲ್ಲ ? ಹಿಂದಿನ ಉದ್ದೇಶವೇನು ?

2) ಮೇಲ್ದರ್ಜೆಗೇರಿರುವ ಸೂಪರ್ ಸ್ಪೆಷಾಲಿಟಿಗೆ ಸಮವಾದ ಆಸ್ಪತ್ರೆಗೆ ರೂ. 26 ಕೋಟಿ ಪ್ರಸ್ತಾವನೆಯ ಸಲಕರಣೆ ಬದಲಿಗೆ 5.20 ಕೋಟಿ ರೂಪಾಯಿಗೆ ಇಳಿಸಿದ್ದೀರಿ ಇದಕ್ಕೆ ಕಾರಣವೇನು ?

3) ಬಡವರಿಗಾಗಿ ಉಚಿತವಾಗಿ ಸಿಗುತ್ತಿದ್ದ 15 ಕೋಟಿ ರೂಪಾಯಿಯ MRI ಮತ್ತು 2 ಕೋಟಿ ಮೌಲ್ಯದ CITI ಸ್ಕ್ಯಾನ್ ಮಷಿನ್ ಸಹಿತ ಹಲವಾರು ಪರಿಕರಗಳನ್ನು ಯಾಕೆ ಮಾಯ ಮಾಡಿದ್ದೀರಿ ?

4) ಹಿಂದಿದ್ದ 100 ಹಾಸಿಗೆಯಿಂದ 250 ಹಾಸಿಗೆ ಆಸ್ಪತ್ರೆಗೆ ಬೇಕಾಗಿದ್ದ ಸಿಬ್ಬಂದಿ 197, ಈಗಿರುವ ಸಿಬ್ಬಂದಿ 90, ಹೆಚ್ಚುವರಿಯಾಗಿ ಬೇಕಾಗಿದ್ದು 107, ಈಗ ಹಾಕಿಸಿದ್ದು 37, ಅದರಲ್ಲಿ ಹಾರ್ಟ್ ಸ್ಪೆಷಲಿಸ್ಟ್ ಇಲ್ಲ, ನ್ಯೂರೊಲೊಜಿ, ನೆಪ್ರೋಲೋಜಿ ಇಲ್ಲ, ಆ ವಿಭಾಗಕ್ಕೆ ಬೇಕಾದ ಸಿಬ್ಬಂದಿ ಕೂಡ ಇಲ್ಲ, ಇದಕ್ಕೆ ನಿಮ್ಮ ಉತ್ತರವೇನು ?

5)ಪ್ರಸ್ತಾವನೆ ಸಲ್ಲಿಸಿ 2 ವರ್ಷದ ನಂತರ ಈಗ ನೇಮಕಾತಿ ಆಗಿರುವುದು ಜೆನರಲ್ ಸರ್ಜನ್, ಫಿಜಿಷಿಯನ್, ಅರವಳಿಕೆ ತಜ್ಞರು, ಕೀಲು ಮತ್ತು ಮೂಳೆ ತಜ್ಞರು ಇದು ಬೇಸಿಕ್ ಆಗಿರುತ್ತದೆ, ಅಂದರೆ ತಾಲೂಕು ಆಸ್ಪತ್ರೆಗೆ ನೇಮಕ ಮಾಡುವಷ್ಟು ಮಾಡಿದ್ದಾರೆ ಹೊರತು ಜಿಲ್ಲಾಸ್ಪತ್ರೆಗೆಯೋ ಅಥವಾ ಮೇಲ್ದರ್ಜ್ಗೆರಿದ ಆಸ್ಪತ್ರೆಗೆ ಅಲ್ಲ, ಅಲ್ಲಿಗೆ ಟ್ರಾಮಾ ಸೆಂಟರ್, ಕ್ಯಾತ್ ಲ್ಯಾಬ್, ನೆಪ್ರೋಲೋಜಿ ಇಲ್ಲದೇ, ತಾಲೂಕು ಮಟ್ಟದ ಆಸ್ಪತ್ರೆ ಮಾಡುವುದಾದರೆ 142 ಕೋಟಿಯ ಕಟ್ಟಡ ಬೇಕಾಗಿತ್ತಾ ?

6) ಅರೋಗ್ಯ ಮಂತ್ರಿಯವರು ಎರಡು ಬಾರಿ ನಮ್ಮ ಜಿಲ್ಲೆಗೆ ಬಂದು ಶಿರಸಿ ಆಸ್ಪತ್ರೆಯನ್ನು ಜಿಲ್ಲಾ ಆಸ್ಪತ್ರೆ ಮಾಡುತ್ತೇನೆ ಎಂದು ಹೇಳಿದ್ದಾರೆ, ಜನರಿಗೆ ಟೋಪಿ ಹಾಕುವ ಕೆಲಸವನ್ನೇ ಮಾಡುತ್ತಿದ್ದಾರೆ ವಿನಃ ಜಿಲ್ಲಾ ಆಸ್ಪತ್ರೆ ಮಾಡುವ ಯಾವುದೇ ಪ್ರಕ್ರಿಯೆ ಇಲ್ಲ, ಜಿಲ್ಲಾ ಆಸ್ಪತ್ರೆ ಮಾಡುವ ಡಾಕ್ಯುಮೆಂಟ್ ಎಲ್ಲಿ ? ಎಷ್ಟು ದಿನ ಸುಳ್ಳು ಹೇಳುತ್ತೀರೀ ?

7) ನೀವು ಈ ಮೂಲಕ ಒಬ್ಬ ವ್ಯಕ್ತಿಗೆ ವಾಹನ ಅಪಘಾತವಾಗಿ ತಲೆಗೆ ಪೆಟ್ಟು ಬಿದ್ದರೆ ರಕ್ತಸ್ರಾವ ತಡೆಯುವ, ಜೀವ ಉಳಿಸುವ ನ್ಯೂರೋಲಾಜಿ ವಿಭಾಗ ಅಥವಾ ಟ್ರಾಮಾ ಸೆಂಟರ್ ಮಾಡುವ ಅವಕಾಶ ಹಾಳು ಮಾಡಿದ್ದೀರಿ, ಈ ಕ್ಷೇತ್ರದ ಜನ ನಿಮ್ಮನ್ನ ಕ್ಷಮಿಸುತ್ತಾರೆಯೇ ?

8) ಬಡವರಿಗೆ ಹಾರ್ಟ್ ಅಟ್ಯಾಕ್ ಆದರೆ ಉಚಿತವಾಗಿ ಶಸ್ತ್ರ ಚಿಕಿತ್ಸೆ ಮಾಡಿಸಿ ಜೀವ ಉಳಿಸ ಬಹುದಾದ "ಕ್ಯಾತ್ ಲ್ಯಾಬ್" ಮಾಡುವ ಅವಕಾಶ ಹಾಳು ಮಾಡಿದ್ದೀರಿ. ನಮ್ಮಲ್ಲಿ ನೂರಾರು ಜನ ಡಯಾಲಿಸಿಸ್ ಮಾಡಿಸಿಕೊಳ್ಳುವ ಬಡ ರೋಗಿಗಳಿದ್ದಾರೆ, ನೆಪ್ರೂಲಜಿಗೆ ನೇಮಕ ಮಾಡದೆ ತೆಗೆದು ಹಾಕಿದರೆ ಅವರ ಕಣ್ಣೀರು ಸುಮ್ಮನೆ ಬಿಡುತ್ತದೆಯೇ? ನಮ್ಮ ಭಾಗದಿಂದ ದಿನಕ್ಕೆ ಸಾವಿರಾರು ಜನ ದೂರದ ಮಂಗಳೂರಿಗೆ, ಹುಬ್ಬಳ್ಳಿ ಶಿವಮೊಗ್ಗಕ್ಕೆ ಆಸ್ಪತ್ರೆಗಾಗಿ ಹೋಗುತ್ತಾರೆ, ನಿಮ್ಮ ಹತ್ತಿರ ಹಣ ತರಲು ತಾಕತ್ತಿಲ್ಲ ಎಂದರೆ ಬಿಡಿ, ಹಿಂದೆ ನಾವು ಮೀಸಲಾಗಿ ಇಟ್ಟ 30 ಕೋಟಿ ಹಣವನ್ನು ತಿಂದು ಹಾಕುವ ಕೆಲಸ ಯಾಕೆ ಮಾಡುತ್ತೀರಿ ?

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 1
Sad Sad 0
Wow Wow 0