ಆಸ್ತಿ ವಿವಾದ: ಮಗನಿಂದಲೇ ತಂದೆಯ ಕೊಲೆ - ಆರೋಪಿ ಬಂಧನ

Nov 10, 2025 - 09:03
 0  66
ಆಸ್ತಿ ವಿವಾದ: ಮಗನಿಂದಲೇ ತಂದೆಯ ಕೊಲೆ - ಆರೋಪಿ ಬಂಧನ

ಆಪ್ತ ನ್ಯೂಸ್‌ ಯಲ್ಲಾಪುರ:

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಬೆಳ್ಳುಂಬಿ ಬಳಿಯ ಮಾವಿನಕಟ್ಟಾ ಗ್ರಾಮದಲ್ಲಿ ಆಸ್ತಿ ಹಂಚಿಕೆಯ ವಿವಾದಕ್ಕೆ ಸಂಬಂಧಿಸಿದಂತೆ ಮಗನೇ ತನ್ನ ತಂದೆಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಭಯಾನಕ ಘಟನೆ ನಡೆದಿದೆ. ಕೊಲೆಯಾದವರನ್ನು ನಾರಾಯಣ ಪರಶು ಮರಾಠಿ (51) ಎಂದು ಗುರುತಿಸಲಾಗಿದ್ದು, ಆರೋಪಿಯಾದ ಮಗ ಹರೀಶ ನಾರಾಯಣ ಮರಾಠಿ (28) ಅನ್ನು ಯಲ್ಲಾಪುರ ಪೊಲೀಸರು ತಕ್ಷಣ ಬಂಧಿಸಿದ್ದಾರೆ.

.ನಾರಾಯಣ ಮರಾಠಿ ತಮ್ಮ ಆಸ್ತಿಯ ಒಂದು ಭಾಗವನ್ನು ಹರೀಶಗೆ ಹಂಚುವುದಕ್ಕೆ ಒಪ್ಪದೆ ಇದ್ದರು. ಅಲ್ಲದೆ ಒಂದೇ ಮನೆಯಲ್ಲಿ ಪ್ರತ್ಯೇಕವಾಗಿ ವಾಸವಿದ್ದ ತಂದೆ - ಮಗನ ನಡುವೆ ಆಗಾಗ ಜಗಳವಾಗುತಿತ್ತು ಎನ್ನಲಾಗಿದೆ.ಇಂದು ಬೆಳಗ್ಗೆ ಜಗಳ ವಿಕೋಪಕ್ಕೆ ಹೋಗಿ, ಕೋಪದಲ್ಲಿ ಹರೀಶ ಕೊಡಲಿಯಿಂದ ತಂದೆಯ ಮೇಲೆ ಹಲ್ಲೆ ನಡೆಸಿದ.  ಗಂಭೀರವಾಗಿ ಗಾಯಗೊಂಡ ನಾರಾಯಣರನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತರಾಗಿದ್ದರೆಂದು ತಿಳಿದು ಬಂದಿದೆ. ಸ್ಥಳೀಯರು ಗಲಾಟೆ ಕೇಳಿ ಓಡಿ ಬಂದು ಘಟನೆಯನ್ನು ಗಮನಿಸಿ, ಪೊಲೀಸ್‌ಗೆ ತಿಳಿಸಿದ್ದಾರೆ.


ಯಲ್ಲಾಪುರ ಪೊಲೀಸ್ ಠಾಣೆಯ ಸಿಐ ಸುನಿಲ್ ಕುಮಾರ್ ನೇತೃತ್ವದ ತಂಡವು ತಕ್ಷಣ ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿ ಕೆಲವೇ ಹೊತ್ತಿನಲ್ಲಿ ಆರೋಪಿ ಹರೀಶನ್ನು ಬಂಧಿಸಿದ್ದಾರೆ. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಮೃತನ ಪುತ್ರಿ ದೂರಿನನ್ವಯ ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0