ಬಡತನದ ನಡುವೆಯೂ ಯೋಗದಲ್ಲಿ ವಿಶ್ವದತ್ತ ಹೆಜ್ಜೆ: ಗಣೇಶ ನಾಯ್ಕ್ ಜಿಲ್ಲೆಗೆ ಹೆಮ್ಮೆ

ಥೈಲ್ಯಾಂಡ್‌ನಲ್ಲಿ ನಡೆಯುವ ಇಂಡೋ–ಥೈಲ್ಯಾಂಡ್ ವರ್ಲ್ಡ್ ಯೋಗಾಸನ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಯುವಕನಿಗೆ ಬಿಜೆಪಿ ತಂಡದಿಂದ ಸನ್ಮಾನ, ಆರ್ಥಿಕ ನೆರವು

Sep 6, 2026 - 11:00
 0  288
ಬಡತನದ ನಡುವೆಯೂ ಯೋಗದಲ್ಲಿ ವಿಶ್ವದತ್ತ ಹೆಜ್ಜೆ: ಗಣೇಶ ನಾಯ್ಕ್ ಜಿಲ್ಲೆಗೆ ಹೆಮ್ಮೆ

ಆಪ್ತ ನ್ಯೂಸ್ ಶಿರಸಿ:

ಜೀವನ ನಿರ್ವಹಣೆಗಾಗಿ ತಂದೆಯೊಂದಿಗೆ ಸೆಂಟ್ರಿಂಗ್ ಕೆಲಸ ಮಾಡುತ್ತಲೇ ಯೋಗಾಸನದಲ್ಲಿ ರಾಷ್ಟ್ರಮಟ್ಟದ ಸಾಧನೆ ಮಾಡಿ, ಇದೀಗ ಅಂತರಾಷ್ಟ್ರೀಯ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಸಜ್ಜಾಗಿರುವ ತಾಲೂಕಿನ ಕಬ್ಬೆ (ಉಂಚಳ್ಳಿ) ಗ್ರಾಮದ ಗಣೇಶ ವಿಷ್ಣು ನಾಯ್ಕ ಅವರ ಸಾಧನೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಆರ್ಥಿಕ ಸಂಕಷ್ಟದ ನಡುವೆಯೂ ಯೋಗಾಸನದ ಮೇಲಿನ ಆಸಕ್ತಿ ಹಾಗೂ ಪರಿಶ್ರಮವನ್ನು ಕೈಬಿಡದೆ ಮುನ್ನಡೆದಿರುವ ಗಣೇಶ ನಾಯ್ಕ್, ಇತ್ತೀಚೆಗೆ ತುಮಕೂರಿನಲ್ಲಿ ನಡೆದ 8ನೇ ರಾಷ್ಟ್ರಮಟ್ಟದ ಯೋಗಾಸನ ಚಾಂಪಿಯನ್‌ಶಿಪ್‌ನಲ್ಲಿ ಪ್ರಥಮ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ. ಈ ಅದ್ಭುತ ಸಾಧನೆಯ ಫಲವಾಗಿ ಥೈಲ್ಯಾಂಡ್‌ನಲ್ಲಿ ನಡೆಯಲಿರುವ ಇಂಡೋ–ಥೈಲ್ಯಾಂಡ್ ವರ್ಲ್ಡ್ ಯೋಗಾಸನ ಚಾಂಪಿಯನ್‌ಶಿಪ್‌ಗೆ ಭಾರತವನ್ನು ಪ್ರತಿನಿಧಿಸಲು ಅವರು ಆಯ್ಕೆಯಾಗಿದ್ದಾರೆ.

ಗಣೇಶ ನಾಯ್ಕ್ ಅವರ ಸಾಧನೆಯನ್ನು ಗುರುತಿಸಿರುವ ಬನವಾಸಿ ಬಿಜೆಪಿ ಮಂಡಲ ಹಾಗೂ ಬಿಜೆಪಿ ರೈತ ಮೋರ್ಚಾ ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ನೇತೃತ್ವದ ತಂಡವು ಅವರನ್ನು ಸನ್ಮಾನಿಸಿ ಗೌರವಿಸುವುದರ ಜೊತೆಗೆ ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಲು ಆರ್ಥಿಕ ನೆರವನ್ನೂ ನೀಡಿತು.

ಈ ಸಂದರ್ಭದಲ್ಲಿ ಮಾತನಾಡಿದ ಅನಂತಮೂರ್ತಿ ಹೆಗಡೆ, “ಬಡತನದ ನಡುವೆಯೂ ಯೋಗಾಸನದಲ್ಲಿ ಸಾಧನೆ ಮಾಡಿ ಉತ್ತರ ಕನ್ನಡ ಜಿಲ್ಲೆ ಹಾಗೂ ಕರ್ನಾಟಕಕ್ಕೆ ಗಣೇಶ ಹೆಮ್ಮೆ ತಂದಿದ್ದಾರೆ. ಜೀವನ ನಿರ್ವಹಣೆಗಾಗಿ ತಂದೆಯೊಂದಿಗೆ ಪ್ರತಿದಿನ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದು, ಅದರ ನಡುವೆಯೂ ಯೋಗಾಸನದ ಅಭ್ಯಾಸವನ್ನು ಮುಂದುವರಿಸಿಕೊಂಡು ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿರುವುದು ಅವರ ಪರಿಶ್ರಮಕ್ಕೆ ಸಾಕ್ಷಿಯಾಗಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

“ಯೋಗಾಸನದ ಮೇಲಿನ ಆಸಕ್ತಿಯನ್ನು ಸಾಧನೆಯಾಗಿ ಪರಿವರ್ತಿಸಿಕೊಂಡಿರುವ ಗಣೇಶ, ಇದೀಗ ದೇಶವನ್ನು ಪ್ರತಿನಿಧಿಸುವ ಮಟ್ಟಕ್ಕೆ ಬೆಳೆದಿರುವುದು ಹೆಮ್ಮೆಯ ಸಂಗತಿ. ಇಂತಹ ಪ್ರತಿಭೆಗಳಿಗೆ ಸಮಾಜ ಹಾಗೂ ಸಂಘ-ಸಂಸ್ಥೆಗಳು ಬೆಂಬಲ ನೀಡಬೇಕು. ಪ್ರತಿಭೆ ಮತ್ತು ಪರಿಶ್ರಮಕ್ಕೆ ಬಡತನ ಎಂದಿಗೂ ಅಡ್ಡಿಯಾಗಬಾರದು ಎಂಬುದನ್ನು ಗಣೇಶ ಅವರ ಸಾಧನೆ ತೋರಿಸಿಕೊಟ್ಟಿದೆ,” ಎಂದರು.

ಪ್ರತಿ ಮನೆಯಲ್ಲೂ ಯೋಗದ ಅಭ್ಯಾಸ ಅಗತ್ಯ

ಪ್ರತಿಯೊಬ್ಬರೂ ಬೆಳಗಿನ ಸಮಯದಲ್ಲಿ ಯೋಗಾಭ್ಯಾಸ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಯೋಗವು ಕೇವಲ ದೈಹಿಕ ಆರೋಗ್ಯಕ್ಕಷ್ಟೇ ಸೀಮಿತವಾಗಿರದೆ, ಮನಸ್ಸು ಮತ್ತು ದೇಹವನ್ನು ನಿಯಂತ್ರಣದಲ್ಲಿಟ್ಟುಕೊಂಡು ಜೀವನವನ್ನು ಸರಿಯಾದ ಮಾರ್ಗದಲ್ಲಿ ಮುನ್ನಡೆಸುವ ಸಾಧನವಾಗಿದೆ ಎಂದು ಅನಂತಮೂರ್ತಿ ಹೆಗಡೆ ಹೇಳಿದರು.

ಯೋಗಕ್ಕೆ ಭಾರತದಲ್ಲಿ ಹಿಂದಿನಿಂದಲೂ ಮಹತ್ವವಿದ್ದರೂ, ಅದನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಜನಪ್ರಿಯಗೊಳಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪಾತ್ರ ಮಹತ್ವದ್ದಾಗಿದೆ. ಅವರ ಕರೆಗೆ ಸ್ಪಂದಿಸಿ ವಿಶ್ವದ ಅನೇಕ ದೇಶಗಳಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಸೇರಿದಂತೆ ವಿವಿಧ ಯೋಗ ಕಾರ್ಯಕ್ರಮಗಳು ನಡೆಯುತ್ತಿವೆ ಎಂದರು.

ವಿಶ್ವ ವೇದಿಕೆಯಲ್ಲಿ ಜಿಲ್ಲೆಯ ಪ್ರತಿಭೆ

ಬನವಾಸಿ ಬಿಜೆಪಿ ಮಂಡಲದ ಅಧ್ಯಕ್ಷ ರಮೇಶ ನಾಯ್ಕ ಕುಪ್ಪಳ್ಳಿ ಮಾತನಾಡಿ, ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಯೋಗಕ್ಕೆ ವಿಶೇಷ ಸ್ಥಾನವಿದೆ. ಆದರೆ ಯೋಗವನ್ನು ವಿಶ್ವದಾದ್ಯಂತ ಪರಿಚಯಿಸಿ ಅದರ ಮಹತ್ವವನ್ನು ಜನರಿಗೆ ತಲುಪಿಸುವ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಹೆಚ್ಚಿನ ಒತ್ತು ನೀಡಿದ್ದಾರೆ. ಇಂದು ಗಣೇಶ ವಿಷ್ಣು ನಾಯ್ಕ ಅವರಂತಹ ಗ್ರಾಮೀಣ ಪ್ರತಿಭೆಗಳು ಯೋಗದ ಮೂಲಕ ಅಂತರಾಷ್ಟ್ರೀಯ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಗ್ರಾಮೀಣ ಭಾಗದಲ್ಲಿ, ಅದರಲ್ಲೂ ಆರ್ಥಿಕವಾಗಿ ಹಿಂದುಳಿದ ಕುಟುಂಬದಿಂದ ಬಂದಿರುವ ಯುವಕನೊಬ್ಬ ತನ್ನ ಪರಿಶ್ರಮದಿಂದ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಇದೀಗ ವಿಶ್ವಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುವುದು ಇತರ ಯುವಕರಿಗೂ ಸ್ಫೂರ್ತಿದಾಯಕವಾಗಿದೆ. ಗಣೇಶ ನಾಯ್ಕ್ ಅವರ ಮುಂದಿನ ಸ್ಪರ್ಧೆಗೆ ಅಗತ್ಯವಾದ ಸಹಕಾರ ನೀಡಲು ಸಮಾಜ ಮುಂದಾಗಬೇಕು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಕೋರ್ ಕಮಿಟಿ ಸದಸ್ಯ ವಿ.ಎಂ. ಹೆಗಡೆ ಕಬ್ಬೆ, ಉಂಚಳ್ಳಿ ಶಕ್ತಿ ಕೇಂದ್ರದ ಅಧ್ಯಕ್ಷ ರಾಘವೇಂದ್ರ ಕಬ್ಬೆ, ಪ್ರಧಾನ ಕಾರ್ಯದರ್ಶಿ ಮಂಜುನಾಥ ನಾಯ್ಕ ಮರಿಗುಡ್ಡೆ, ವಾಮನ ನಾಯ್ಕ ಕಾನ್‌ಕೋಪ್ಪ, ಮಂಜುನಾಥ ನಾಯ್ಕ ಹಲಸಿನಕೊಪ್ಪ, ಹರೀಶ ನಾಯ್ಕ, ಕುಬೇರ ಗೌಡ, ಮಂಜುನಾಥ ರಾಮಗೌಡ, ಚಂದ್ರು ನಾಯ್ಕ, ಬಸವಂತ ಗಂಗೆಮತ್ತ್, ದೇವಕಿ ಅಣ್ಣಪ್ಪ ಗೌಡ ಸೇರಿದಂತೆ ಹಲವು ಮಹಿಳಾ ನಾಯಕಿಯರು ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

ಸೆಂಟ್ರಿಂಗ್ ಕೆಲಸದ ಬೆವರಿನ ನಡುವೆ ಯೋಗದ ಕನಸು ಕಂಡ ಯುವಕ ಇದೀಗ ವಿಶ್ವ ವೇದಿಕೆಯತ್ತ ಹೆಜ್ಜೆ ಇಟ್ಟಿರುವುದು ಉತ್ತರ ಕನ್ನಡದ ಗ್ರಾಮೀಣ ಪ್ರತಿಭೆಯ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ಥೈಲ್ಯಾಂಡ್‌ನಲ್ಲಿ ನಡೆಯಲಿರುವ ಸ್ಪರ್ಧೆಯಲ್ಲಿ ಗಣೇಶ ನಾಯ್ಕ್ ಭಾರತಕ್ಕೆ ಕೀರ್ತಿ ತರಲಿ ಎಂಬ ಹಾರೈಕೆಗಳು ವ್ಯಕ್ತವಾಗಿವೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0