ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಮತ್ತು ಸಿಸ್ಟರ್ ನಿವೇದಿತಾ: ಭಾರತೀಯ ವಿಜ್ಞಾನ ಜಗತ್ತಿಗೆ ಮಹತ್ತರ ಕೊಡುಗೆ

Oct 28, 2025 - 10:17
 0  18
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಮತ್ತು ಸಿಸ್ಟರ್ ನಿವೇದಿತಾ: ಭಾರತೀಯ ವಿಜ್ಞಾನ ಜಗತ್ತಿಗೆ ಮಹತ್ತರ ಕೊಡುಗೆ
✍️... ವಿಂಗ್ ಕಮಾಂಡರ್ ಸುದರ್ಶನ


ಸಹೋದರಿ ನಿವೇದಿತಾ
28 ಅಕ್ಟೋಬರ್..ಇವರ ಜನ್ಮದಿನೋತ್ಸವ


ಇತ್ತೀಚೆಗೆ ಅಮೆರಿಕಾದ ಸ್ಟಾನ್ಸ್ಫೋರ್ಡ್ ವಿಶ್ವವಿದ್ಯಾಲಯದಿಂದ ಬಿಡುಗಡೆಯಾದ ಒಂದು ವರದಿಯ ಪ್ರಕಾರ ಪ್ರಪಂಚದ ಪ್ರತಿಭಾವಂತ ವಿಜ್ಞಾನಿಗಳ ಪಟ್ಟಿಯಲ್ಲಿ 124 ಮಂದಿ ಕರ್ನಾಟಕದವರಂತೆ. ಬಹುತೇಕರು ಬೆಂಗಳೂರಿನ ಟಾಟಾ ಇನ್ಸ್ಟಿಟ್ಯೂಟಿನವರು. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಎಂಬ ಹೆಸರಿನ ಈ ಸಂಸ್ಥೆ ಪ್ರಾರಂಭವಾದದ್ದೇ ಒಂದು ರೋಚಕ ಹಿನ್ನಲೆಯಲ್ಲಿ.
1893 ರಲ್ಲಿ ಸ್ವಾಮಿ ವಿವೇಕಾನಂದರು ಜಪಾನಿನಿಂದ ಚಿಕಾಗೋಕ್ಕೆ ವಿಶ್ವ ಧರ್ಮ ಸಮ್ಮೇಳನದಲ್ಲಿ ಭಾಗವಹಿಸಲು ಹೋಗುತ್ತಿದ್ದರು. ಅದೇ ಹಡಗಿನಲ್ಲಿ ಜೆಮ್ಸೆಟ್ಜಿ ಟಾಟಾ ಸಹಾ ಪ್ರಯಾಣಿಸುತ್ತಿದ್ದರು. ಅಮೆರಿಕದಲ್ಲಿ ನಡೆಯುತ್ತಿದ್ದ ಉಕ್ಕು ಮತ್ತು ಕಬ್ಬಿಣದ ಕಾರ್ಖಾನೆಗಳ ಬಗ್ಗೆ ಅಧ್ಯಯನ ನಡೆಸಿ ಭಾರತದಲ್ಲಿ ಉಕ್ಕಿನ ಕಾರ್ಖಾನೆಗಳನ್ನು ಸ್ಥಾಪಿಸುವ ಉದ್ದೇಶದಿಂದ ಜಮ್ಸೆಟ್ಜಿ ಟಾಟಾರವರು ಅಮೆರಿಕಕ್ಕೆ ಹೋಗುತ್ತಿದ್ದರು. ಒಬ್ಬ ಸನಾತನ ಧರ್ಮದ ಹರಿಕಾರ ಮತ್ತೊಬ್ಬ ವಾಣಿಜ್ಯ ಕ್ಷೇತ್ರದ ದಾರ್ಶನಿಕ. ಹಲವಾರು ದಿನಗಳವರೆಗೆ ಇಬ್ಬರಲ್ಲೂ ಭಾರತದ ಅಭಿವೃದ್ಧಿ ಯ ಬಗ್ಗೆ ನಿರಂತರವಾಗಿ ಮಾತುಕತೆ ನಡೆಸಿದರು. ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಸನಾತನ ಮೌಲ್ಯಗಳ ಜೊತೆಗೆ ಆಧುನಿಕ ಸಂಶೋಧನೆಗಳನ್ನೂ ಮೈಗೂಡಿಸಿಕೊಂಡು ನಡೆಯುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸ್ಥಾಪಿಸುವ ಬಗ್ಗೆ ತಮ್ಮ ತಮ್ಮ ಕನಸುಗಳನ್ನು ಹಂಚಿಕೊಂಡರು.
ಟಾಟಾರವರಿಗೆ ಆಶ್ಚರ್ಯವಾದ ವಿಷಯವೇನೆಂದರೆ ಈ ಪ್ರಯಾಣ ಮುಗಿದ ಕೆಲವೇ ತಿಂಗಳುಗಳಲ್ಲಿ ಅಮೆರಿಕವೂ ಸೇರಿದಂತೆ ವಿಶ್ವದೆಲ್ಲೆಡೆ ಮನೆಮಾತಾದ ಸ್ವಾಮಿ ವಿವೇಕಾನಂದರ ಪ್ರಖರ ಭಾಷಣಗಳ ಪ್ರಭಾವ. ಜನಸಾಮಾನ್ಯರೇ ಅಲ್ಲದೆ ಹಾವರ್ಡ್ ವಿಶ್ವವಿದ್ಯಾಲಯದ ಪ್ರೊಫೆಸರುಗಳು ಇವರ ಬಗ್ಗೆ ಹಲವಾರು ಲೇಖನಗಳನ್ನು ಬರೆಯಲು ಪ್ರಾರಂಭಿಸಿದರು. ಇದರಿಂದ ಪ್ರಭಾವಿತರಾದ ಟಾಟಾರವರು ಸ್ವಾಮಿ ವಿವೇಕಾನಂದರಿಗೆ ಒಂದು ಪತ್ರ ಬರೆಯುತ್ತಾರೆ. ಆ ಪತ್ರದ ವಿಷಯವೇನೆಂದರೆ…
'ನಾನು ಒಂದು ಉನ್ನತ ವೈಜ್ಞಾನಿಕಾ ಸಂಶೋಧನಾ ಸಂಸ್ಥೆಯೊಂದನ್ನು ಸ್ಥಾಪಿಸುವ ಯೋಜನೆಯೊಂದನ್ನು ಹಾಕಿಕೊಂಡಿದ್ದೇನೆ, ಅದಕ್ಕೆ ನಿಮ್ಮ ಸಹಾಯ ಕೋರುತ್ತಿದ್ದೇನೆ'.
ಪತ್ರವೇನೋ ಸರಳವಾಗಿ ಕಂಡರೂ ಅದರ ಹಿನ್ನಲೆ ಸ್ವಲ್ಪ ಗಂಭೀರವಾಗಿತ್ತು. ಟಾಟಾರವರ ಈ ಪ್ರಸ್ತಾವನೆಯನ್ನು ಬ್ರಿಟಿಷ್ ಸರ್ಕಾರ ಆಗಲೇ ತಳ್ಳಿಹಾಕಿತ್ತು. ಅಂದಿನ ಬ್ರಿಟಿಷ್ ವೈಸರಾಯ್ ಲಾರ್ಡ್ ಕರ್ಜ಼ನ್ ಭಾರತೀಯರು ಸಂಶೋಧನಾ ಮನೋಭಾವದವರಲ್ಲಾ ಎಂದು ಹೀಯಾಳಿಸಿದ್ದರು. ಹಾಗಾಗಿ ಟಾಟಾರವರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶ್ವವಿದ್ಯಾಲಯಗಳ ಬೆಂಬಲ ಬೇಕಿತ್ತು. ಆಗ ಸ್ವಾಮಿ ವಿವೇಕಾನಂದರು ಲಂಡನ್ನಲ್ಲಿದ್ದ ಸಿಸ್ಟರ್ ನಿವೇದಿತಾರವರಿಗೆ ಈ ಕಾರ್ಯವನ್ನು ನಿರ್ವಹಿಸಲು ಕೇಳಿಕೊಂಡರು.

ಯಾರು ಸಿಸ್ಟರ್ ನಿವೇದಿತಾ?
ಮಾರ್ಗರೆಟ್ ಎಲಿಜಬತ್ ನೋಬಲ್ ಅವರು ಹುಟ್ಟಿದ್ದು 28 ಅಕ್ಟೋಬರ್ 1867 ರಂದು ಐರ್ಲೆಂಡಿನ ಒಂದು ಪುಟ್ಟ ನಗರದಲ್ಲಿ. ಇವರ ತಂದೆ ಒಬ್ಬ ಕ್ರಿಶ್ಚಿಯನ್ ಪಾದ್ರಿಯಾಗಿದ್ದರು. ಮಾರ್ಗರೇಟ್ ಧಾರ್ಮಿಕ ಹಿನ್ನೆಲೆಯಲ್ಲಿ ಬೆಳದಿದ್ದರಿಂದ ಬಾಲ್ಯದಿಂದಲೇ ಕ್ರಿಶ್ಚಿಯನ್ ಧಾರ್ಮಿಕ ಸಿದ್ಧಾಂತಗಳನ್ನು ಕಲಿತಿದ್ದಳು, ಎಲ್ಲಾ ಧಾರ್ಮಿಕ ಉಪದೇಶಗಳನ್ನು ಗೌರವಿಸಲು ಕಲಿತಿದ್ದರು. ಯೇಸುಕ್ರಿಸ್ತನು ಅವಳ ಆರಾಧ್ಯ ದೈವವಾಗಿದ್ದನು. ಆದಾಗ್ಯೂ, ಮಹಿಳಾವಸ್ಥೆಗೆ ಪಾದಾರ್ಪಣೆ ಮಾಡಿದಂತೆ, ಕ್ರಿಶ್ಚಿಯನ್ ಸಿದ್ಧಾಂತಗಳ ಬಗ್ಗೆ ಅನುಮಾನಗಳು ಅವಳಲ್ಲಿ ಮೂಡಿದವು. ಆ ಉಪದೇಶಗಳು ಸತ್ಯದೊಂದಿಗೆ ಹೊಂದಿಕೆಯಾಗುವುದಿಲ್ಲವೆಂದು ಆಕೆಗೆ ತೋರಿ ಬಂದಿತು. ಈ ಅನುಮಾನಗಳು ಹೆಚ್ಚು ಹೆಚ್ಚು ಬಲವತ್ತಾಗುತ್ತಿದ್ದಂತೆ, ಕ್ರಿಶ್ಚಿಯಾನಿಟಿಯ ಮೇಲಿನ ಅವಳ ನಂಬಿಕೆ ಕುಸಿಯಿತು. ಏಳು ದೀರ್ಘ ವರ್ಷಗಳ ಕಾಲ, ಮಾರ್ಗರೇಟ್ ತನ್ನ ಮನಸ್ಸನ್ನು ಶಾಂತಗೊಳಿಸಲಾಗಲಿಲ್ಲ, ಇದರಿಂದ ಅವಳಿಗೆ ಅಸಮಾಧಾನ ಉಂಟಾಯಿತು. ಆಕೆ ಚರ್ಚ್ ಸೇವೆಯಲ್ಲಿ ತೊಡಗಿಸಿಕೊಳ್ಳಲು ಪ್ರಯತ್ನಿಸಿದರೂ, ಆಕೆಯ ವ್ಯಾಕುಲಿತ ಆತ್ಮಕ್ಕೆ ತೃಪ್ತಿ ದೊರೆಯಲಿಲ್ಲ ಮತ್ತು ಆಕೆ ಸತ್ಯಕ್ಕಾಗಿ ತವಕಿಸಿತು.
ಈ ಗೊಂದಲದ ಮನಸ್ಥಿತಿಯಲ್ಲಿದ್ದಾಗ ನವೆಂಬರ್ 1895ರಲ್ಲಿ, ಮಾರ್ಗರೇಟ್ ಮೊದಲ ಬಾರಿಗೆ ಸ್ವಾಮಿ ವಿವೇಕಾನಂದರನ್ನು ಭೇಟಿ ಮಾಡಿದರು. ಅವರು ಅಮೇರಿಕೆಯಿಂದ ಲಂಡನ್ ಗೆ ಭೇಟಿ ನೀಡಲು ಬಂದಿದ್ದರು ಮತ್ತು ಅಲ್ಲಿ ಮೂರು ತಿಂಗಳು ತಂಗಿದ್ದರು. ಶೀತಲ ಮಧ್ಯಾಹ್ನವೊಂದು, ಲಂಡನ್‌ನ 63 ಸ್ಟ್ರೀಟ್ ಜಾರ್ಜ್ ರಸ್ತೆ ನಿವಾಸದಲ್ಲಿ, ಸ್ವಾಮಿ ವಿವೇಕಾನಂದರು ಒಂದು ಗೌರವಾನ್ವಿತ ಕುಟುಂಬದ ಮನೆಯಲ್ಲಿ ವೇದಾಂತ ತತ್ತ್ವಶಾಸ್ತ್ರವನ್ನು ವಿವರಿಸುತ್ತಿದ್ದರು. ಆ ಸಂಜೆ ತನ್ನ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ ಎಂಬುದು ಮಾರ್ಗರೇಟ್ ಅವರಿಗೆ ಗೊತ್ತಿರಲಿಲ್ಲ. ಆ ಸಂದರ್ಭದ ತಮ್ಮ ಅನುಭವವನ್ನು ಮಾರ್ಗರೇಟ್ ಹೀಗೆ ವರ್ಣಿಸಿದ್ದಾರೆ:
"ಒಬ್ಬ ಆಕರ್ಷಕ ವ್ಯಕ್ತಿ, ಕೇಸರಿ ವಸ್ತ್ರವನ್ನು ಧರಿಸಿ, ಕೆಂಪು ಕಚ್ಚೆಯನ್ನು ಕಟ್ಟಿಕೊಂಡು, ಅಲ್ಲಿ ನೆಲದ ಮೇಲೆ ಕೂತು ಕುಳಿತಿದ್ದರು. ಅವರು ಸಂದರ್ಶಕರಿಗೆ ಮಾತನಾಡುತ್ತಾ, ತಮ್ಮ ಆಳವಾದ, ಗಂಭೀರ ಧ್ವನಿಯಲ್ಲಿ ಸಂಸ್ಕೃತ ಶ್ಲೋಕಗಳನ್ನು ಪಠಿಸಿದರು."
ಅವರು ಸ್ವಾಮಿ ವಿವೇಕಾನಂದರ ಹಲವಾರು ಉಪನ್ಯಾಸಗಳಲ್ಲಿ ಹಾಜರಾದರು. ಅವರು ಸ್ವಾಮಿಗಳಿಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳಿದರು ಮತ್ತು ಅವರ ಉತ್ತರಗಳು ಮಾರ್ಗರೇಟ್ ಅವರ ಅನುಮಾನಗಳನ್ನು ದೂರಮಾಡಿ ಗೊಂದಲದಲ್ಲಿದ್ದ ಮನಸ್ಸನ್ನು ಪ್ರಶಾಂತಗೊಳಿಸಿತು. ಮುಂದೆ ಸ್ವಾಮಿ ವಿವೇಕಾನಂದರೇ ಅವರಿಗೆ ನಿವೇದಿತಾ…ಅಂದರೆ ಸನಾತನ ಧರ್ಮಕ್ಕೆ ನಿನ್ನನ್ನು ನೈವೇದ್ಯ ಕೊಡುತ್ತಿದ್ದೇನೆ ಎಂದು ನಾಮಕರಣ ಮಾಡಿದರು.
ಬೆಂಗಳೂರಿನ ವಿಜ್ಞಾನ ಸಂಶೋಧನಾ ಸಂಸ್ಥೆ: ನಿವೇದಿತಾರವರ ಪಾತ್ರ
ಟಾಟಾರವರ ಪತ್ರದ ಸಂದೇಶ ಲಂಡನ್ನಿನಲ್ಲಿದ್ದ ಸಹೋದರಿ ನಿವೇದಿತಾರವರಿಗೆ ತಲುಪಿದ ಕೂಡಲೇ ಕಾರ್ಯೋನ್ಮುಖರಾದ ನಿವೇದಿತಾ ವಿವೇಕಾನಂದರ ಭಕ್ತರಾದ ಹಾವರ್ಡ್ ವಿಶ್ವವಿದ್ಯಾಲಯದ ವಿಲಿಯಂ ಜೇಮ್ಸ್ ಮತ್ತು ಸ್ಕಾಟ್ಲೆಂಡಿನ ಪ್ಯಾಟ್ರಿಕ್ ಗೆಡ್ಸ್ ಎನ್ನುವ ಪ್ರಭಾವೀ ವ್ಯಕ್ತಿಗಳ ಸಹಾಯದಿಂದ ಒಂದು ಆಂದೋಲನವನ್ನೇ ಪ್ರಾರಂಭಿಸಿದರು. ಅನಿರೀಕ್ಷಿತವಾಗಿ ಬಂದ ಈ ಅಂತರಾಷ್ಟ್ರೀಯ ಮಟ್ಟದ ಒತ್ತಡಕ್ಕೆ ಬ್ರಿಟಿಷ್ ಸರ್ಕಾರ ಮಣಿಯಲೇ ಬೇಕಾಯಿತು. ಅಂತೂ ಕೊನೆಗೆ ಸರ್ ವಿಲಿಯಂ ರಾಮ್ಸೆಯವರ ನೇತೃತ್ವದ ಸಮಿತಿಯನ್ನು ರಚಿಸಿ ಟಾಟಾರವರಿಗೆ ಒಪ್ಪಿಗೆ ಕೊಟ್ಟರು.
ಟಾಟಾರವರಿಗೆ ಮುಂಬೈನಲ್ಲಿ ಈ ಸಂಸ್ಥೆಯನ್ನು ನಿರ್ಮಾಣ ಮಾಡುವ ಉದ್ದೇಶವಿತ್ತು, ಆದರೆ ಮೂಲನಿವೇಶಧನದ ಕೊರತೆ ಇತ್ತು. ಅಂದಿನ ಶ್ರೀಮಂತ ರಾಜ್ಯವೆನಿಸಿಕೊಂಡಿದ್ದ ಮೈಸೂರು ಸಂಸ್ಥಾನದ ಸಹಾಯಕೋರಿ ದಿವಾನ್ ಶೇಷಾದ್ರಿ ಅಯ್ಯರ್ ಅವರ ಜೊತೆ ಮಾತುಕತೆ ನಡೆಸಿದರು. ಆಗ ನಾಲ್ಮಡಿ ಕೃಷ್ಣರಾಜ ಒಡೆಯರ್ ಅವರು ಇನ್ನೂ ಚಿಕ್ಕವರು, ಅವರ ತಾಯಿ ಮಹಾರಾಣಿ ಕೆಂಪುನಂಜಮ್ಮಣ್ಣಿಯವರು ರಾಜ್ಯಭಾರ ನಡೆಸುತ್ತಿದ್ದರು. ಟಾಟಾರವರ ಉದ್ದೇಶವನ್ನು ದಿವಾನರು ಮಹಾರಾಣಿಯವರಿಗೆ ತಿಳಿಸಿದಾಗ ಒಂದು ಷರತ್ತಿನ ಮೇಲೆ ಸಹಾಯ ಮಾಡಲು ಒಪ್ಪಿಕೊಂಡರು, ಅದೇನಪ್ಪಾ ಅಂದರೆ ಈ ಸಂಸ್ಥೆಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಬೇಕು ಅದಕ್ಕೆ ಬೇಕಾದ ಭೂಮಿ ಮತ್ತು ಹಣದ ಸಹಾಯವನ್ನು ಮಾಡುತ್ತೇವೆ ಎಂದು. ಸರಿ ಎಂದು ಒಪ್ಪಿಕೊಂಡು ಟಾಟಾರವರು ಈ ಸಂತೋಷದ ವಿಷಯವನ್ನು ಸ್ವಾಮಿ ವಿವೇಕಾನಂದ ಮತ್ತು ಸಿಸ್ಟರ್ ನಿವೇದಿತಾರಿಗೆ ವಿಷಯ ತಿಳಿಸಿದರು. ಬೆಂಗಳೂರಿನ ಹೊರವಲಯದಲ್ಲಿ 371 ಎಕರೆ ಭೂಮಿ ಮತ್ತು ಐದು ಲಕ್ಷ ರೂಪಾಯಿಗಳ ಮೂಲನಿವೇಶಧನದ ಸಹಾಯ ಮತ್ತು ವಾರ್ಷಿಕ ಐವತ್ತು ಸಾವಿರ ರೂಪಾಯಿಗಳ ಧನಸಹಾಯದಿಂದ ಪ್ರಾರಂಭವಾಯಿತು ಬೆಂಗಳೂರಿನ ಟಾಟಾ ಇನ್ಸ್ಟಿಟ್ಯೂಟ್. ಈ ದುರದೃಷ್ಟವಶಾತ್
27 ಮೇ 1909 ಯಂದು ಈ ಸಂಸ್ಥೆ ಪ್ರಾರಂಭವಾದಾಗ, ಇಂಥಹದೊಂದು ಸಂಸ್ಥೆಯನ್ನು ಸ್ಥಾಪಿಸುವ ಕನಸು ಕಂಡಿದ್ದ ಸ್ವಾಮಿ ವಿವೇಕಾನಂದರು ಮತ್ತು ಜಮ್ಸೆಟ್ಜಿ ಟಾಟಾ ಇಬ್ಬರೂ ಪರಲೋಕ ಯಾತ್ರೆಯನ್ನು ಕೈಗೊಂಡುಬಿಟ್ಟಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0